ಸೌತ್ ಆಫ್ರಿಕಾ ದಾಂಡಿಗರ ಆರ್ಭಟ: ವಿಶ್ವಕಪ್‌ನಲ್ಲಿ ವಿಶ್ವ ದಾಖಲೆ
South Africa vs Canada: ಕೆನಾಡಾ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು 20 ಓವರ್‌ಗಳಲ್ಲಿ ಬರೋಬ್ಬರಿ 213 ರನ್ ಪೇರಿಸಿದ್ದರು. ಈ ಕಠಿಣ ಗುರಿ ಬೆನ್ನತ್ತಿದ ಕೆನಡಾ ತಂಡವು 20 ಓವರ್‌ಗಳಲ್ಲಿ ಕಲೆಹಾಕಿದ್ದು 156 ರನ್ಸ್ ಮಾತ್ರ. ಈ ಮೂಲಕ ಸೌತ್ ಆಫ್ರಿಕಾ ತಂಡ 57 ರನ್ ಗಳ ಭರ್ಜರಿ ಜಯ ಸಾಧಿಸಿದೆ.
Updated on: Feb 10, 2026 | 7:32 AM

ಟಿ20 ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲೇ ಸೌತ್ ಆಫ್ರಿಕಾ ತಂಡ ಭರ್ಜರಿ ದಾಖಲೆ ಬರೆದಿದೆ. ಅದು ಸಹ 213 ರನ್ ಗಳನ್ನು ಚಚ್ಚುವ ಮೂಲಕ. ಅಹಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಟಿ೨೦ ವಿಶ್ವಕಪ್‌ನ 9ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ಮತ್ತು ಕೆನಡಾ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆನಡಾ ತಂಡದ ನಾಯಕ ದಿಲ್ ಪ್ರೀತ್ ಬಜ್ವಾ ಸೌತ್ ಆಫ್ರಿಕಾ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡಕ್ಕೆ ಕ್ವಿಂಟನ್ ಡಿಕಾಕ್ ಹಾಗೂ ಐಡೆನ್ ಮಾರ್ಕ್ರಾಮ್ ಭರ್ಜರಿ ಆರಂಭ ಒದಗಿಸಿದ್ದರು.

ಬಿರುಸಿನ ಬ್ಯಾಟಿಂಗ್ ನೊಂದಿಗೆ ಕೆನಡಾ ಬೌಲರ್‌ಗಳನ್ನು ದಂಡಿಸಿದ ಮಾರ್ಕ್ರಾಮ್ ಕೇವಲ 32 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 10 ಫೋರ್ ಗಳೊಂದಿಗೆ 59 ರನ್ ಚಚ್ಚಿದರು. ಹಾಗೆಯೇ ರಯಾನ್ ರಿಕೆಲ್ಟನ್ 33 ರನ್ ಬಾರಿಸಿದರೆ, ಡೇವಿಸ್ ಮಿಲ್ಲರ್ 39 ರನ್ ಗಳಿಸಿದರು.

ಇನ್ನು ಅಂತಿಮ ಹಂತದಲ್ಲಿ ಟ್ರಿಸ್ಟನ್ ಸ್ಟಬ್ಸ್ ಕೇವಲ 19 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 2 ಫೋರ್ ಗಳೊಂದಿಗೆ ಅಜೇಯ 34 ರನ್ ಬಾರಿಸಿದರು. ಈ ಮೂಲಕ ಸೌತ್ ಆಫ್ರಿಕಾ ತಂಡವು 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 213 ರನ್ ಕಲೆಹಾಕಿತು.

ಈ 213 ರನ್ ಗಳೊಂದಿಗೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ 200+ ಸ್ಕೋರ್ ಗಳಿಸಿದ ತಂಡವೆಂಬ ವಿಶ್ವ ದಾಖಲೆಯನ್ನು ಸೌತ್ ಆಫ್ರಿಕಾ ತನ್ನದಾಗಿಸಿಕೊಂಡಿತು. ಅಷ್ಟೇ ಅಲ್ಲದೆ ಟಿ20 ವಿಶ್ವಕಪ್‌ನಲ್ಲಿ 6 ಬಾರಿ 200+ ಸ್ಕೋರ್ ಗಳಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೂ ಪಾತ್ರವಾಯಿತು.

ಅಚ್ಚರಿ ವಿಷಯ ಎಂದರೆ ಸೌತ್ ಆಫ್ರಿಕಾ ತಂಡವನ್ನು ಹೊರತುಪಡಿಸಿ ಯಾವುದೇ ತಂಡ ವಿಶ್ವಕಪ್‌ನಲ್ಲಿ ಐದಕ್ಕಿಂತ ಹೆಚ್ಚು ಬಾರಿ 200+ ಸ್ಕೋರ್ ಗಳಿಸಿಲ್ಲ. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ದ್ವಿತೀಯ ಸ್ಥಾನದಲ್ಲಿದ್ದು, ಮೂರು ಬಾರಿ 200+ ಸ್ಕೋರ್ ಗಳಿಸಿದೆ. ಇದೀಗ ಆರನೇ ಬಾರಿ ಇನ್ನೂರಕ್ಕಿಂತ ಅಧಿಕ ಮೊತ್ತ ಕಲೆಹಾಕುವ ಮೂಲಕ ಸೌತ್ ಆಫ್ರಿಕಾ ವಿಶ್ವಕಪ್‌ನಲ್ಲಿ ಇನ್ನೂರು ರನ್ ಗಳ ತನ್ನ ವಿಶ್ವ ದಾಖಲೆಯನ್ನು ಮುಂದುವರೆಸಿದೆ.
