ICC New Rule: ಬಹುಮಾನ ತಾರತಮ್ಯಕ್ಕೆ ತೆರೆ ಎಳೆದ ಐಸಿಸಿ; ಸ್ಲೋ ಓವರ್ ರೇಟ್ ದಂಡದಲ್ಲೂ ಭಾರಿ ಬದಲಾವಣೆ..!
ICC New Rule: ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ತರಲು ಐಸಿಸಿ ಮುಂದಾಗಿದೆ. ಇದರಿಂದ ಆಟಗಾರರ ಜೇಬು ಭರ್ತಿಯಾಗಲಿದೆ.
ಎರಡು ಆವೃತ್ತಿಗಳ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ICC World Test Championship) ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇದೀಗ ಮೂರನೇ ಆವೃತ್ತಿ ಕೂಡ ಆರಂಭವಾಗಿದೆ. ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ (Australia vs England) ನಡುವಿನ ಆಶಸ್ (Ashes) ಸರಣಿಯೊಂದಿಗೆ ಮೂರನೇ ಆವೃತ್ತಿಯ ಟೆಸ್ಟ್ ಚಾಂಪಿಯನ್‌ಶಿಪ್ ಆರಂಭವಾಗಿದ್ದು, ಇದರ ಭಾಗವಾಗಿ ಭಾರತ-ವೆಸ್ಟ್ ಇಂಡೀಸ್ (India vs West Indies) ನಡುವೆ ಟೆಸ್ಟ್ ಸರಣಿಯೂ ನಡೆಯುತ್ತಿದೆ. ಮೊದಲೆರಡು ಆವೃತ್ತಿಗಳ ಟೆಸ್ಟ್ ಚಾಂಪಿಯನ್ಶಿಪ್ನ ಅಮೋಘ ಯಶಸ್ಸಿನ ಬಳಿಕ ಮಹತ್ವದ ನಿರ್ಧಾರ ಕೈಗೊಂಡಿರುವ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮಹತ್ವದದ ನಿರ್ಧಾರಗಳನ್ನು ಕೈಗೊಂಡಿದೆ. ಅಂದರೆ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ತರಲು ಐಸಿಸಿ ಮುಂದಾಗಿದೆ. ಇದರಿಂದ ಆಟಗಾರರ ಜೇಬು ಭರ್ತಿಯಾಗಲಿದೆ.
ಕಳೆದ ಕೆಲವು ದಿನಗಳಿಂದ ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ಐಸಿಸಿಯ ವಾರ್ಷಿಕ ಸಮ್ಮೇಳನ ನಡೆಯುತ್ತಿದ್ದು, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದಾರೆ. ಈ ಸಮ್ಮೇಳನದಲ್ಲಿಯೇ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಸ್ಲೋ ಓವರ್ ರೇಟ್ಗೆ ಸಂಬಂಧಿಸಿದಂತೆ ವಿಧಿಸುತ್ತಿದ್ದ ಶಿಕ್ಷೆಯನ್ನು ಬದಲಾಯಿಸುವ ನಿರ್ಧಾರಕ್ಕೆ ಐಸಿಸಿ ಬಂದಿದೆ.
Ajit Agarkar: ನಾಯಕ, ಭವಿಷ್ಯದ ತಂಡ, ಐಸಿಸಿ ಈವೆಂಟ್ಸ್; ಅಗರ್ಕರ್ ಮುಂದಿವೆ ಸಾಲು ಸಾಲು ಸವಾಲುಗಳು..!
ದಂಡ ಕಡಿತಗೊಳಿಸಿದ ಐಸಿಸಿ
ಜುಲೈ 13, ಗುರುವಾರ ನಡೆದ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಐಸಿಸಿ ಮಾಹಿತಿ ನೀಡಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಲೋ ಓವರ್ ರೇಟ್ಗೆ ವಿಧಿಸುತ್ತಿದ್ದ ಶಿಕ್ಷೆಯಲ್ಲಿ ಬದಲಾವಣೆ ತಂದಿರುವುದನ್ನು ಐಸಿಸಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ. ಇದರಲ್ಲಿ ನಿಧಾನಗತಿಯ ಓವರ್ ರೇಟ್ ವಿಚಾರದಲ್ಲಿ ತಂಡಗಳ ಖಾತೆಯಿಂದ ಕಡಿತವಾಗುವ ಅಂಕಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂಬುದನ್ನು ಐಸಿಸಿ ಸ್ಪಷ್ಟಪಡಿಸಿದೆ. ಆದರೆ ಆಟಗಾರರ ಶುಲ್ಕವನ್ನು ಕಡಿತಗೊಳಿಸುವ ನಿಯಮವನ್ನು ಕೊಂಚ ಮಾರ್ಪಡಿಸಲಾಗಿದೆ.
ಹೊಸ ನಿಯಮದ ಪ್ರಕಾರ, ಸ್ಲೋ ಓವರ್ ರೇಟ್ಗೆ ವಿಧಿಸುವ ದಂಡದಲ್ಲಿ ಪ್ರತಿ ಆಟಗಾರನ ಪಂದ್ಯ ಶುಲ್ಕದಲ್ಲಿ ಶೇಕಡ 5ರಷ್ಟು ಕಡಿತಗೊಳಿಸಲಾಗುತ್ತದೆ. ಅಂದರೆ, ಒಂದು ವೇಳೆ ತಂಡವೊಂದು ಸ್ಲೋ ಓವರ್ ರೇಟ್ಗೆ ದಂಡ ತೆರಬೇಕಾಗಿ ಬಂದರೆ, ಆಗ ತಂಡದ ಆಟಗಾರರು ತಮ್ಮ ಪಂದ್ಯ ಶುಲ್ಕದ ಶೇಕಡ 5 ರಷ್ಟು ಹಣವನ್ನು ದಂಡವಾಗಿ ಪಾವತಿಸಬೇಕು. ಈ ಹಿಂದೆ ಸ್ಲೋ ಓವರ್ ರೇಟ್ ದಂಡದ ವಿಚಾರದಲ್ಲಿ ಪ್ರತಿಯೊಬ್ಬ ಆಟಗಾರನ ಪಂದ್ಯ ಶುಲ್ಕದಿಂದ ಶೇಕಡ 10 ರಷ್ಟು ಹಣವನ್ನು ದಂಡವಾಗಿ ತೆಗೆದುಕೊಳ್ಳಲಾಗುತ್ತಿತ್ತು. ಈ ನಿಯಮದಿಂದಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಟೀಂ ಇಂಡಿಯಾದ ಆಟಗಾರರ ಸಂಪೂರ್ಣ ಪಂದ್ಯ ಶುಲ್ಕವನ್ನು ಕಡಿತಗೊಳಿಸಲಾಗಿತ್ತು. ಇದೀಗ ಹೊಸ ನಿಯಮದ ಪ್ರಕಾರ ಆಟಗಾರರ ಶುಲ್ಕವನ್ನು ಶೇಕಡ 50ರಷ್ಟು ಮಾತ್ರ ಕಡಿತಗೊಳಿಸಲಾಗುತ್ತದೆ.
ಸಮಾನ ಬಹುಮಾನದ ಮೊತ್ತ
ಇದಲ್ಲದೇ ಇನ್ನೊಂದು ಕ್ರಾಂತಿಕಾರಕ ನಿರ್ಧಾರ ಕೈಗೊಂಡಿರುವ ಐಸಿಸಿ, ಪುರುಷರ ಮತ್ತು ಮಹಿಳಾ ಕ್ರಿಕೆಟ್‌ನಲ್ಲಿ ತನ್ನ ಅಂತರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ನೀಡುತ್ತಿದ್ದ ಬಹುಮಾನದ ತಾರತಮ್ಯವನ್ನು ಕೊನೆಗೊಳಿಸಲು ಮುಂದಾಗಿದೆ. ಅಂದರೆ, ಪುರುಷರ ಟಿ20 ವಿಶ್ವಕಪ್ ಅಥವಾ ಏಕದಿನ ವಿಶ್ವಕಪ್‌ನಲ್ಲಿ ವಿಜೇತರು, ರನ್ನರ್ ಅಪ್ ಅಥವಾ ಇತರ ತಂಡಗಳು ಪಡೆಯುವ ಬಹುಮಾನದ ಮೊತ್ತವನ್ನು ಮಹಿಳಾ ಪಂದ್ಯಾವಳಿಯಲ್ಲಿಯ ತಂಡಗಳಿಗೂ ನೀಡಲು ನಿರ್ಧರಿಸಲಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:38 am, Fri, 14 July 23