Olympics: ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆ ಸಾಧ್ಯತೆ: ನಾವು ರೆಡಿ ಎಂದ ಟೀಮ್ ಇಂಡಿಯಾ
Cricket - Olympics: 1900ರ ಒಲಿಂಪಿಕ್ಸ್ ಆವೃತ್ತಿಯಲ್ಲಿ ಕ್ರಿಕೆಟ್ ಆಡಲಾಗಿತ್ತು. ಈ ವೇಳೆ ಗ್ರೇಟ್ ಬ್ರಿಟನ್ ತಂಡವು ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು.
2028ರಲ್ಲಿ ನಡೆಯಲಿರುವ ಲಾಸ್ ಏಂಜಲೀಸ್ ಒಲಿಂಪಿಕ್ಸ್ (Olympics) ನಲ್ಲಿ ಕ್ರಿಕೆಟ್ ಅನ್ನು ಸೇರ್ಪಡೆಗೊಳಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮುಂದಾಗಿದೆ. ಅದರ ಮೊದಲ ಹೆಜ್ಜೆ ಎಂಬಂತೆ ಒಲಿಂಪಿಕ್ಸ್ ಬಿಡ್ಗಾಗಿ ವಿಶೇಷ ಸಮಿತಿಯನ್ನು ರಚಿಸಿದೆ. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಅನ್ನು ಕೂಡ ಸೇರ್ಪಡೆಗೊಳಿಸಲು ಐಸಿಸಿ ಸಿದ್ಧತೆಯನ್ನು ಆರಂಭಿಸಿದೆ. 1900ರ ಒಲಿಂಪಿಕ್ಸ್ ಆವೃತ್ತಿಯಲ್ಲಿ ಕ್ರಿಕೆಟ್ ಆಡಲಾಗಿತ್ತು. ಈ ವೇಳೆ ಗ್ರೇಟ್ ಬ್ರಿಟನ್ ತಂಡವು ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು. ಆ ಬಳಿಕ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಕ್ರಿಕೆಟ್ ಅನ್ನು ಹೊರಗಿಡಲಾಯಿತು. ಇದೀಗ ಮತ್ತೊಮ್ಮೆ ಕ್ರೀಡಾ ಮಹಾ ಸಮರವಾದ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಅನ್ನು ಸೇರ್ಪಡೆಗೊಳಿಸಲು ಬೇಕಾದ ತಯಾರಿಗಳನ್ನು ಮಾಡುತ್ತಿರುವುದಾಗಿ ಐಸಿಸಿ ತಿಳಿಸಿದೆ.
ಇದಕ್ಕಾಗಿ ವಿಶೇಷ ಸಮಿತಿಯನ್ನು ರಚಿಸಿದ್ದು, ಈ ತಂಡವು 2028 ಲಾಸ್ ಏಂಜಲೀಸ್ ಒಲಿಂಪಿಕ್ಸ್, 2032ರ ಬ್ರಿಸ್ಬೇನ್ ಒಲಿಂಪಿಕ್ಸ್ ಮತ್ತು ಅದರಾಚೆಗಿನ ಕ್ರೀಡಾಕೂಟದಲ್ಲಿ ಕ್ರಿಕೆಟ್ ಅನ್ನು ಸೇರ್ಪಡೆಗೊಳಿಸಲು ಬೇಕಾದ ಸಿದ್ಧತೆಗಳನ್ನು ಆರಂಭಿಸಿದೆ. ಇನ್ನು ಐಸಿಸಿಯ ಈ ನಡೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ಬೆಂಬಲಿಸಿದ್ದು, ಒಲಿಂಪಿಕ್ಸ್‌ನಲ್ಲಿ ಟೀಮ್ ಇಂಡಿಯಾ ಪಾಲ್ಗೊಳಲಿದೆ ಎಂದು ತಿಳಿಸಿದೆ.
ಈ ಹಿಂದೆ ವಿವಿಧ ಕಾರಣಗಳಿಗಾಗಿ ಕ್ರಿಕೆಟ್ ಆಟವನ್ನು ಇತರ ಕ್ರೀಡೆಗಳಲ್ಲಿ ಸೇರಿಸುವುದನ್ನು ಭಾರತೀಯ ಕ್ರಿಕೆಟ್ ಬೋರ್ಡ್ ವಿರೋಧಿಸಿತ್ತು. ಆದಾಗ್ಯೂ, ಜಯ್ ಶಾ ಬಿಸಿಸಿಐ ಕಾರ್ಯದರ್ಶಿಯಾದ ಬಳಿಕ ಒಲಿಂಪಿಕ್ಸ್ನಲ್ಲೂ ಕ್ರಿಕೆಟ್ಗೆ ಅವಕಾಶ ನೀಡುವಂತೆ ಮಾಡಿದ ಮನವಿಗೆ ಬೆಂಬಲ ವ್ಯಕ್ತಪಡಿಸಿದ್ದರು.
ಇದೀಗ ಐಸಿಸಿ ಹೊಸ ಸಮಿತಿಯನ್ನು ರಚಿಸಿದ್ದು, ಐಸಿಸಿ ಒಲಿಂಪಿಕ್ ವರ್ಕಿಂಗ್ ಗ್ರೂಪ್ ಅಧ್ಯಕ್ಷತೆಯನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ (ಇಸಿಬಿ) ಮುಖ್ಯಸ್ಥ ಇಯಾನ್ ವಾಟ್ಮೋರ್ ವಹಿಸಿಕೊಂಡಿದ್ದಾರೆ. ಹಾಗೆಯೇ ಐಸಿಸಿ ಸ್ವತಂತ್ರ ನಿರ್ದೇಶಕ ಇಂದ್ರ ನೂಯಿ, ಜಿಂಬಾಬ್ವೆ ಕ್ರಿಕೆಟ್ ಮುಖ್ಯಸ್ಥ ತಾವೇಂಗ್ವಾ ಮುಕುಹ್ಲಾನಿ, ಐಸಿಸಿ ಅಸೋಸಿಯೇಟ್ ಸದಸ್ಯ ನಿರ್ದೇಶಕ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಉಪಾಧ್ಯಕ್ಷ ಮಹಿಂದಾ ವಲ್ಲಿಪುರಂ ಮತ್ತು ಯುಎಸ್ಎ ಕ್ರಿಕೆಟ್ ಅಧ್ಯಕ್ಷ ಪರಾಗ್ ಮರಾಠೆ ಈ ಸಮಿತಿಯಲ್ಲಿದ್ದಾರೆ. 2028ರಲ್ಲಿ ಲಾಸ್ ಏಂಜಲೀಸ್ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿದ್ದು, ಹೀಗಾಗಿ ಯುಎಸ್ಎ ಕ್ರಿಕೆಟ್ ಅಧ್ಯಕ್ಷ ಪರಾಗ್ ಮರಾಠೆ ಅವರನ್ನೂ ಕೂಡ ಸಮಿತಿಯ ಭಾಗವಹಿಸಿದ್ದಾರೆ.
“ಈ ಬಿಡ್‌ನ ಹಿಂದೆ ನಮ್ಮ ಕ್ರೀಡೆ ಒಗ್ಗಟ್ಟಾಗಿದೆ ಮತ್ತು ನಾವು ಒಲಿಂಪಿಕ್ಸ್ ಅನ್ನು ಕ್ರಿಕೆಟ್‌ನ ದೀರ್ಘಾವಧಿಯ ಭವಿಷ್ಯದ ಭಾಗವಾಗಿ ನೋಡುತ್ತೇವೆ. ನಾವು ಜಾಗತಿಕವಾಗಿ ಒಂದು ಶತಕೋಟಿ ಅಭಿಮಾನಿಗಳನ್ನು ಹೊಂದಿದ್ದೇವೆ. ಅವರಲ್ಲಿ 90 ಪ್ರತಿಶತದಷ್ಟು ಜನರು ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ನೋಡಲು ಬಯಸುತ್ತಾರೆ. ನಿಸ್ಸಂಶಯವಾಗಿ ಕ್ರಿಕೆಟ್ ಬಲವಾದ ಮತ್ತು ಭಾವೋದ್ರಿಕ್ತ ಅಭಿಮಾನಿಗಳನ್ನು ಹೊಂದಿದೆ. ವಿಶೇಷವಾಗಿ ದಕ್ಷಿಣ ಏಷ್ಯಾದಲ್ಲಿ 92% ಕ್ರಿಕೆಟ್ ಅಭಿಮಾನಿಗಳಿದ್ದಾರೆ. ಹಾಗೆಯೇ ಯುನೈಟೆಡ್ ಸ್ಟೇಟ್ಸ್ 30 ಮಿಲಿಯನ್ ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿದೆ. ಆ ಅಭಿಮಾನಿಗಳಿಗೆ, ಅವರ ನಾಯಕರು ಒಲಿಂಪಿಕ್ ಪದಕಕ್ಕಾಗಿ ಸ್ಪರ್ಧಿಸುವುದನ್ನು ನೋಡುವ ಅವಕಾಶವು ಆಕರ್ಷಕವಾಗಿರುತ್ತದೆ. ಹೀಗಾಗಿ ಒಲಿಂಪಿಕ್ ಕ್ರೀಡಾಕೂಟಕ್ಕೆ ಕ್ರಿಕೆಟ್ ಸೇರ್ಪಡೆಯಾಗಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೆ ತಿಳಿಸಿದ್ದಾರೆ.
ಇದನ್ನೂ ಓದಿ: IPL 2021: ಐಪಿಎಲ್ನ ಹೊಸ ನಿಯಮದಿಂದ ಯಾರಿಗೆ ಅನುಕೂಲ?
ಇದನ್ನೂ ಓದಿ: IPL 2021: ಐಪಿಎಲ್ ಅಭಿಮಾನಿಗಳಿಗೆ ಗುಡ್ ನ್ಯೂಸ್: 12 ಆಟಗಾರರು ಕಣಕ್ಕಿಳಿಯುವುದು ಖಚಿತ
(ICC to push for cricket’s inclusion in the Los Angeles Olympics 2028)