
ಕನಸುಗಳ ಬೆನ್ನಟ್ಟುವ ಹಾದಿಯಲ್ಲಿ ಭೌಗೋಳಿಕ ಗಡಿಗಳು ಕೇವಲ ನಕ್ಷೆಯ ಮೇಲಿನ ಗೆರೆಗಳಷ್ಟೇ ಎಂಬುದನ್ನು ಬಿಹಾರದ ಯುವಕ ಅಭಿಷೇಕ್ ಆನಂದ್ ಜಗತ್ತಿಗೆ ಸಾಬೀತುಪಡಿಸಿದ್ದಾರೆ. ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ಹುಟ್ಟಿ, ಭಾರತದ ಅತ್ಯುನ್ನತ ಶಿಕ್ಷಣ ಸಂಸ್ಥೆಯಾದ ಐಐಟಿಯಲ್ಲಿ ಪದವಿ ಪಡೆದು, ಇಂದು ಜಪಾನ್ ದೇಶದ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವ ಅವರ ಪಯಣ ಯಾವುದೇ ಸಿನಿಮಾ ಕಥೆಗೂ ಕಮ್ಮಿಯಿಲ್ಲ. ಇತ್ತೀಚೆಗೆ ಭಾರತ ಮತ್ತು ಜಪಾನ್ ನಡುವಿನ ಐತಿಹಾಸಿಕ ಟಿ20 ಪಂದ್ಯದ ಸಂದರ್ಭದಲ್ಲಿ ಜಾಗತಿಕವಾಗಿ ವೈರಲ್ ಆದ ಅಭಿಷೇಕ್, “ಬಿಹಾರಿಗಳು ಜಗತ್ತಿನಲ್ಲಿ ಎಲ್ಲಿಲ್ಲ ಹೇಳಿ ಭಾಯ್?” ಎಂದು ಹಾಸ್ಯಭರಿತವಾಗಿ ಉತ್ತರಿಸಿ ಎಲ್ಲರ ಗಮನ ಸೆಳೆದಿದ್ದರು.
ಬಿಹಾರದ ಬೀದಿಗಳಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಆಡುತ್ತಾ ಬೆಳೆದ ಅಭಿಷೇಕ್ ಅವರಿಗೆ ಕ್ರಿಕೆಟ್ ಎಂದರೆ ಪಂಚಪ್ರಾಣ. ಆದರೆ ಪೋಷಕರ ಆಸೆಯಂತೆ ಓದಿಗೆ ಮೊದಲ ಆದ್ಯತೆ ನೀಡಿದ ಅವರು, ಕಠಿಣ ಪರಿಶ್ರಮದಿಂದ ಐಐಟಿ ಕಾನ್ಪುರದಲ್ಲಿ ಕೆಮಿಸ್ಟ್ರಿ ವಿಭಾಗದಲ್ಲಿ ಬಿಎಸ್-ಎಮ್ಎಸ್ ಸಂಯೋಜಿತ ಪದವಿ ಪಡೆದರು. ಓದಿನ ಒತ್ತಡದ ನಡುವೆಯೂ ತಮ್ಮೊಳಗಿನ ಕ್ರಿಕೆಟಿಗನನ್ನು ಜೀವಂತವಾಗಿಟ್ಟಿದ್ದ ಅವರು, ಐಐಟಿ ಕಾನ್ಪುರ ಕ್ರಿಕೆಟ್ ತಂಡದ ನಾಯಕರಾಗಿ ಕ್ಯಾಂಪಸ್‌ನಲ್ಲಿ ಹೊಸ ಕ್ರಿಕೆಟ್ ಸಂಸ್ಕೃತಿಯನ್ನು ಬೆಳೆಸಿದರು.
2022ರಲ್ಲಿ ಪದವಿ ಮುಗಿಸುವಾಗ ಅಭಿಷೇಕ್ ಅವರಿಗೆ ‘ಅಕ್ಸೆಂಚರ್ ಜಪಾನ್’ ಸಂಸ್ಥೆಯಿಂದ ಉದ್ಯೋಗದ ಆಫರ್ ಬಂದಿತು. ಅದನ್ನು ಸ್ವೀಕರಿಸಲು ಕಂಪನಿಯು ಕೇವಲ ಎರಡು ಗಂಟೆಗಳ ಕಾಲಾವಕಾಶ ನೀಡಿತ್ತು. ಕಾರ್ಪೊರೇಟ್ ಕೆಲಸದ ಜೊತೆಗೆ ಭಾರತದಲ್ಲೇ ಉಳಿದು ಲೆದರ್ ಬಾಲ್ ಕ್ರಿಕೆಟ್ ಆಡಬೇಕೆಂಬ ಹಂಬಲ ಹೊಂದಿದ್ದ ಅಭಿಷೇಕ್ ಆರಂಭದಲ್ಲಿ ಗೊಂದಲಕ್ಕೊಳಗಾಗಿದ್ದರು.
ಆದರೆ ಅದೇ ಎರಡು ಗಂಟೆಗಳಲ್ಲಿ ಜಪಾನ್‌ನಲ್ಲಿ ಕ್ರಿಕೆಟ್‌ನ ಭವಿಷ್ಯದ ಬಗ್ಗೆ ಸಂಶೋಧನೆ ನಡೆಸಿದಾಗ, ಜಪಾನ್ ತಂಡವು ಇಸಿಸಿ ಈಸ್ಟ್ ಏಷ್ಯಾ-ಪೆಸಿಫಿಕ್ ವಿಶ್ವಕಪ್ ಅರ್ಹತಾ ಸುತ್ತಿಗೆ ತೇರ್ಗಡೆಯಾಗಿರುವುದು ತಿಳಿಯಿತು. ಅಲ್ಲಿ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆಯುವ ಅವಕಾಶವಿದೆ ಎಂದು ಅರಿತ ಅವರು ತಕ್ಷಣವೇ ಟೋಕಿಯೋಗೆ ಹಾರಲು ನಿರ್ಧರಿಸಿದರು.
ಟೋಕಿಯೋ ತಲುಪಿದ ನಂತರ ಅಭಿಷೇಕ್ ಅವರ ದಿನಚರಿ ಸುಲಭವಾಗಿರಲಿಲ್ಲ. ಬೆಳಿಗ್ಗೆ ಕಾರ್ಪೊರೇಟ್ ಕೆಲಸ, ಸಂಜೆ ಹಾಗೂ ವಾರಾಂತ್ಯದಲ್ಲಿ ಕಠಿಣ ಕ್ರಿಕೆಟ್ ಅಭ್ಯಾಸ. ಅಲ್ಲಿನ ‘ಟೋಕಿಯೋ ಫಾಲ್ಕನ್ಸ್ ಕ್ರಿಕೆಟ್ ಕ್ಲಬ್’ ಪರ ದೇಶಿ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಇವರ ಆಟ ಜಪಾನ್ ಕ್ರಿಕೆಟ್ ಅಸೋಸಿಯೇಷನ್ ನಾಯಕರ ಕಣ್ಣಿಗೆ ಬಿದ್ದಿತು.
ಐಸಿಸಿ ನಿಯಮಾವಳಿಗಳ ಪ್ರಕಾರ ಮೂರು ವರ್ಷಗಳ ಸತತ ವಾಸ್ತವ್ಯದ ನಂತರ, ಮೇ 2025 ರಲ್ಲಿ ಕುಕ್ ಐಲ್ಯಾಂಡ್ಸ್ ವಿರುದ್ಧ ಆಡುವ ಮೂಲಕ ಅಭಿಷೇಕ್ ಜಪಾನ್ ದೇಶವನ್ನು ಪ್ರತಿನಿಧಿಸಿದ 111ನೇ ಅಂತರರಾಷ್ಟ್ರೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಬಲಗೈ ಬ್ಯಾಟ್ಸ್‌ಮನ್ ಹಾಗೂ ಬಲಗೈ ಮಧ್ಯಮ ವೇಗದ ಬೌಲರ್ ಆಗಿರುವ ಅಭಿಷೇಕ್, ಇತ್ತೀಚೆಗೆ ಬಹ್ರೇನ್ ವಿರುದ್ಧದ ಪಂದ್ಯದಲ್ಲಿ ಕೇವಲ 17 ಎಸೆತಗಳಲ್ಲಿ 37 ರನ್ ಚಚ್ಚಿ ಟಿ20 ಕ್ರಿಕೆಟ್‌ನಲ್ಲಿ ತಾವೊಬ್ಬ ಸ್ಪೋಟಕ ಆಟಗಾರ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಇದನ್ನೂ ಓದಿ: ಮುಖ ಮುಚ್ಚಿಕೊಂಡು ಮನೆಗೆ ಹೋಗಿ: ವಾಸಿಂ ಅಕ್ರಮ್ ಗರಂ!
ಕೇವಲ ಐಟಿ ಕೆಲಸಕ್ಕಾಗಿ ವಿದೇಶಕ್ಕೆ ಹೋಗುವ ಯುವಕರ ನಡುವೆ, ತಮಗೆ ಸಿಕ್ಕ ಅವಕಾಶವನ್ನೇ ತಮ್ಮ ಕ್ರಿಕೆಟ್ ಕನಸಿನ ಸೇತುವೆಯನ್ನಾಗಿ ಮಾಡಿಕೊಂಡ ಅಭಿಷೇಕ್ ಆನಂದ್ ಅವರ ಕಥೆ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ. ಓದು ಮತ್ತು ಕ್ರೀಡೆ ಎರಡನ್ನೂ ಸಮಾನವಾಗಿ ಯಶಸ್ವಿಯಾಗಿ ನಿಭಾಯಿಸಬಹುದು ಎಂಬುದಕ್ಕೆ ಇವರೇ ಬದುಕುವ ಉದಾಹರಣೆ.
Published On - 8:34 am, Tue, 22 September 26