ಪೂರನ್ ಪವರ್… ಸೂಪರ್ ಓವರ್​ನ ಕೊನೆಯ ಎಸೆತದಲ್ಲಿ ಸಿಕ್ಸ್​!

ಕ್ರಿಕೆಟ್‌ನಲ್ಲಿ ಕೊನೆಯ ಎಸೆತದವರೆಗೂ ಏನು ಬೇಕಾದರೂ ನಡೆಯಬಹುದು ಎಂಬುದಕ್ಕೆ ಅಬುಧಾಬಿಯಲ್ಲಿ ನಡೆದ ಪಂದ್ಯ ಮತ್ತೊಮ್ಮೆ ಸಾಕ್ಷಿಯಾಗಿದೆ. ಹಾಲಿ ಚಾಂಪಿಯನ್ ಡೆಸರ್ಟ್ ವೈಪರ್ಸ್ ವಿರುದ್ಧ ಸೋಲಿನ ಸುಳಿಯಲ್ಲಿದ್ದ ಎಂಐ ಎಮಿರೇಟ್ಸ್ ತಂಡವನ್ನು, ನಿಕೋಲಸ್ ಪೂರನ್ ತಮ್ಮ ಅಜೇಯ 89 ರನ್ ಹಾಗೂ ಸೂಪರ್ ಓವರ್‌ನ ಕೊನೆಯ ಎಸೆತದ ಭರ್ಜರಿ ಸಿಕ್ಸರ್ ಮೂಲಕ ರೋಚಕವಾಗಿ ಗೆಲ್ಲಿಸಿಕೊಟ್ಟಿದ್ದಾರೆ.

ಪೂರನ್ ಪವರ್... ಸೂಪರ್ ಓವರ್​ನ ಕೊನೆಯ ಎಸೆತದಲ್ಲಿ ಸಿಕ್ಸ್​!
Nicholas Pooran
Image Credit source: ILT20

Updated on: Nov 29, 2026 | 7:59 AM

ಐಎಲ್‌ಟಿ20 ಟೂರ್ನಿಯ 9ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಡೆಸರ್ಟ್ ವೈಪರ್ಸ್ ವಿರುದ್ಧ ಎಂಐ ಎಮಿರೇಟ್ಸ್ ತಂಡ ಸೂಪರ್ ಓವರ್‌ನಲ್ಲಿ ರೋಚಕ ಜಯ ಸಾಧಿಸಿದೆ. ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಈ  ಪಂದ್ಯದಲ್ಲಿ ನಿಕೋಲಸ್ ಪೂರನ್ ಅವರ ಏಕಾಂಗಿ ಹೋರಾಟ ಮತ್ತು ಸೂಪರ್ ಓವರ್‌ನ ಕೊನೆಯ ಎಸೆತದ ಭರ್ಜರಿ ಸಿಕ್ಸರ್ ಪಂದ್ಯದ ದಿಕ್ಕನ್ನೇ ಬದಲಿಸಿತು.

ಪೂರನ್ – ಪೆರೇರಾ ಭರ್ಜರಿ ಜೊತೆಯಾಟ:

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಎಂಐ ಎಮಿರೇಟ್ಸ್ ಆರಂಭದಲ್ಲಿ ನಿಧಾನಗತಿಯ ಆಟವಾಡಿತು. ಪವರ್‌ಪ್ಲೇನಲ್ಲಿ ಮೊದಲ 11 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿ ಪರದಾಡುತ್ತಿದ್ದ ನಿಕೋಲಸ್ ಪೂರನ್, ನಂತರ ಕುಸಾಲ್ ಪೆರೇರಾ ಜೊತೆಗೂಡಿ ಅಬ್ಬರಿಸಲು ಶುರುಮಾಡಿದರು. ಈ ಜೋಡಿ 103 ರನ್‌ಗಳ ಅಮೂಲ್ಯ ಜೊತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತು.

Loading...

ಕುಸಾಲ್ ಪೆರೇರಾ 45 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 76 ರನ್ ಗಳಿಸಿ ಔಟಾದರು. ಈ ಹಂತದಲ್ಲಿ ಕಣಕ್ಕಿಳಿದ ನಾಯಕ ಕೀರನ್ ಪೊಲಾರ್ಡ್ 19ನೇ ಓವರ್‌ನಲ್ಲಿ ಸಿಂಗಲ್ ರನ್ ನಿರಾಕರಿಸಿ ಪೂರನ್‌ಗೆ ಸ್ಟ್ರೈಕ್ ಉಳಿಸಿಕೊಟ್ಟರು. ನಾಯಕನ ನಂಬಿಕೆಯನ್ನು ಉಳಿಸಿಕೊಂಡ ಪೂರನ್, ಡೇವಿಡ್ ಪೇನ್ ಎಸೆದ 20ನೇ ಓವರ್‌ನಲ್ಲಿ ಬರೋಬ್ಬರಿ 19 ರನ್ ಚಚ್ಚಿದರು.

ಅಂತಿಮವಾಗಿ ಪೂರನ್ 57 ಎಸೆತಗಳಲ್ಲಿ 3 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್‌ಗಳೊಂದಿಗೆ ಅಜೇಯ 89 ರನ್ ಗಳಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಎಂಐ ಎಮಿರೇಟ್ಸ್ ತಂಡವು 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 186 ರನ್ ಕಲೆಹಾಕಿತು.

ಮ್ಯಾಚ್ ಟೈ!

187 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಡೆಸರ್ಟ್ ವೈಪರ್ಸ್‌ಗೆ ಫಖರ್ ಝಮಾನ್ (42 ರನ್) ಮತ್ತು ಆಂಡ್ರೀಸ್ ಗೌಸ್ (35 ರನ್) ಉತ್ತಮ ಆರಂಭ ನೀಡಿದರು. 15ನೇ ಓವರ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿ ಸುಲಭ ಜಯದತ್ತ ಸಾಗುತ್ತಿದ್ದ ವೈಪರ್ಸ್‌ಗೆ ಕ್ರಿಸ್ ಜೋರ್ಡನ್ (3/21) ಆಘಾತ ನೀಡಿದರು.

ಒಂದೇ ಓವರ್‌ನಲ್ಲಿ ಗೌಸ್, ಶಾದಾಬ್ ಖಾನ್ ಮತ್ತು ಶಿಮ್ರಾನ್ ಹೆಟ್ಮೆಯರ್ ವಿಕೆಟ್ ಪಡೆದ ಜೋರ್ಡನ್ ಪಂದ್ಯಕ್ಕೆ ತಿರುವು ನೀಡಿದರು. ಬಳಿಕ ರಶೀದ್ ಖಾನ್ (3/25) ಮಾರಕ ದಾಳಿ ನಡೆಸಿ ವೈಪರ್ಸ್ ಮೊತ್ತವನ್ನು 142/7ಕ್ಕೆ ಕುಸಿಯುವಂತೆ ಮಾಡಿದರು.

ಕೊನೆಯ ಓವರ್‌ನಲ್ಲಿ ವೈಪರ್ಸ್ ಗೆಲುವಿಗೆ 21 ರನ್‌ಗಳ ಅಗತ್ಯವಿತ್ತು. ಅದರಂತೆ ಝಹೂರ್ ಖಾನ್ ಎಸೆದ ಅಂತಿಮ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಖುಝೈಮಾ ತನ್ವೀರ್ ಕ್ರಮವಾಗಿ ಒಂದು ಸಿಕ್ಸರ್ ಹಾಗೂ ಬೌಂಡರಿ ಬಾರಿಸುವ ಮೂಲಕ ಪಂದ್ಯವನ್ನು 186 ರನ್‌ಗಳಿಗೆ ಟೈ ಮಾಡುವಲ್ಲಿ ಯಶಸ್ವಿಯಾದರು.

ಸೂಪರ್ ಓವರ್‌ನಲ್ಲಿ ಸೂಪರ್ ಗೆಲುವು:

ಐಎಲ್‌ಟಿ20 ಇತಿಹಾಸದ ಎರಡನೇ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಸರ್ಟ್ ವೈಪರ್ಸ್ ಪರ ಕ್ರಿಸ್ ಜೋರ್ಡನ್ ಮೊದಲ ಎಸೆತದಲ್ಲೇ ಶಿಮ್ರಾನ್ ಹೆಟ್ಮೆಯರ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಅಂತಿಮವಾಗಿ ವೈಪರ್ಸ್ 1 ವಿಕೆಟ್ ನಷ್ಟಕ್ಕೆ ಕೇವಲ 7 ರನ್ ಗಳಿಸಿತು.

8 ರನ್‌ಗಳ ಗುರಿ ಬೆನ್ನತ್ತಿದ ಎಂಐ ಎಮಿರೇಟ್ಸ್, 5ನೇ ಎಸೆತದಲ್ಲಿ ಶೆರ್ಫೇನ್ ರುದರ್‌ಫೋರ್ಡ್ ವಿಕೆಟ್ ಕಳೆದುಕೊಂಡಾಗ ತಂಡದ ಮೊತ್ತ ಕೇವಲ 3 ರನ್ ಆಗಿತ್ತು. ಕೊನೆಯ 1 ಎಸೆತದಲ್ಲಿ ಗೆಲುವಿಗೆ 5 ರನ್ ಬೇಕಿದ್ದ ಒತ್ತಡದ ಸನ್ನಿವೇಶದಲ್ಲಿ ಕ್ರೀಸ್‌ಗೆ ಬಂದ ನಿಕೋಲಸ್ ಪೂರನ್, ಖುಝೈಮಾ ತನ್ವೀರ್ ಎಸೆದ ಫುಲ್ ಟಾಸ್ ಎಸೆತವನ್ನು ಡೀಪ್ ಮಿಡ್‌ವಿಕೆಟ್ ಮೇಲಿಂದ ಭರ್ಜರಿ ಸಿಕ್ಸರ್‌ಗೆ ಅಟ್ಟುವ ಮೂಲಕ ತಂಡಕ್ಕೆ ಅವಿಸ್ಮರಣೀಯ ಗೆಲುವು ತಂದುಕೊಟ್ಟರು.

ಈ ಗೆಲುವಿನೊಂದಿಗೆ ಎಂಐ ಎಮಿರೇಟ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಈ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ವಿರುದ್ಧ ಸತತ ಎರಡನೇ ಜಯ ದಾಖಲಿಸಿದೆ.

ಎಂಐ ಎಮಿರೇಟ್ಸ್ ಪ್ಲೇಯಿಂಗ್ 11: ಕುಸಾಲ್ ಪೆರೇರಾ, ಮುಹಮ್ಮದ್ ವಸೀಮ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ತಜಿಂದರ್ ಸಿಂಗ್, ಶೆರ್ಫೇನ್ ರುದರ್‌ಫೋರ್ಡ್, ಕೀರನ್ ಪೊಲಾರ್ಡ್ (ನಾಯಕ), ರಶೀದ್ ಖಾನ್, ಕ್ರಿಸ್ ಜೋರ್ಡನ್, ಝಹೂರ್ ಖಾನ್, ಅಲ್ಲಾ ಘಝನ್‌ಫರ್, ಫಝಲ್‌ಹಕ್ ಫಾರೂಕಿ, ಜೋರ್ಡನ್ ಥಾಂಪ್ಸನ್ (ಇಂಪ್ಯಾಕ್ಟ್ ಪ್ಲೇಯರ್).

ಇದನ್ನೂ ಓದಿ: ಜುರೆಲ್ ಕೆಚ್ಚೆದೆಯ ಹೋರಾಟ: ಹಿನ್ನಡೆಯೊಂದಿಗೆ ಭಾರತ ಆಲೌಟ್!

ಡೆಸರ್ಟ್ ವೈಪರ್ಸ್ ಪ್ಲೇಯಿಂಗ್ 11: ಬಾಬರ್ ಆಝಂ, ಆಂಡ್ರೀಸ್ ಗೌಸ್ (ವಿಕೆಟ್ ಕೀಪರ್), ಜೋ ಕ್ಲಾರ್ಕ್, ಶಿಮ್ರಾನ್ ಹೆಟ್ಮೆಯರ್, ವೃತ್ಯ ಅರವಿಂದ್, ಶಾದಾಬ್ ಖಾನ್ (ನಾಯಕ), ಟಾಮ್ ಕರನ್, ಮೊಹಮ್ಮದ್ ಸಲೀಮ್ ಸಫಿ, ಖುಝೈಮಾ ಬಿನ್ ತನ್ವೀರ್, ಮುಜೀಬ್ ಉರ್ ರೆಹಮಾನ್, ಡೇವಿಡ್ ಪೇನ್, ಫಖರ್ ಝಮಾನ್ (ಇಂಪ್ಯಾಕ್ಟ್​ ಪ್ಲೇಯರ್).

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us