ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಎರಡನೇ ಟಿ20 ಪಂದ್ಯವು ಜನವರಿ 14 ರಂದು ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ (Holkar Stadium in Indore) ನಡೆಯಲಿದೆ. 2024ರ ಟಿ20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾದ ಕೊನೆಯ ಟಿ20 ದ್ವಿಪಕ್ಷೀಯ ಸರಣಿ ಇದಾಗಿದೆ. ಈ ಕಾರಣಕ್ಕಾಗಿ, ಆಡಳಿತ ಮಂಡಳಿ ಸರಿಯಾದ ತಂಡದ ಸಂಯೋಜನೆಯನ್ನು ಕಂಡುಕೊಳ್ಳಲು ಬಯಸುತ್ತಿದೆ. ಹೀಗಾಗಿ ಎರಡನೇ ಟಿ20 ಪಂದ್ಯದಲ್ಲಿ ಬದಲಾವಣೆ ಖಚಿತವಾಗಿದೆ. ಇದಕ್ಕೆ ಪೂರಕವಾಗಿ ಮೊದಲ ಟಿ20 ಪಂದ್ಯದಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ (Virat Kohli), 2ನೇ ಪಂದ್ಯವನ್ನು ಆಡಲು ತಂಡ ಸೇರಿಕೊಂಡಿದ್ದಾರೆ. ಹಾಗೆಯೇ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವಂ ದುಬೆ (Shivam Dube) ಕೂಡ ಇದನ್ನು ಖಚಿತಪಡಿಸಿದ್ದಾರೆ.
ಸಾಮಾನ್ಯವಾಗಿ ಪಂದ್ಯಕ್ಕೂ ಮುನ್ನ ತಂಡದ ನಾಯಕ ಅಥವಾ ಕೋಚ್ ಪತ್ರಿಕಾಗೋಷ್ಠಿ ನಡೆಸುತ್ತಾರೆ. ಆದರೆ ಇಂದು ಭಾರತದ ಆಲ್ ರೌಂಡರ್ ಆಟಗಾರ ಶಿವಂ ದುಬೆ ಪತ್ರಿಕಾಗೋಷ್ಠಿ ನಡೆಸಿದರು. ಪತ್ರಿಕಾಗೋಷ್ಠಿ ಮಾತನಾಡಿದ ಅವರು ತಂಡದ ಪ್ಲೇಯಿಂಗ್ 11 ಬಗ್ಗೆ ಬಿಗ್ ಅಪ್ಡೇಟ್ ನೀಡಿದರು. ಈ ಬಗ್ಗೆ ಮಾತನಾಡಿದ ದುಬೆ, ಮುಂದಿನ ಪಂದ್ಯದಿಂದ ಒಬ್ಬ ಆಟಗಾರನನ್ನು ತಂಡದಿಂದ ತೆಗೆದುಹಾಕುವುದು ಖಚಿತ ಎಂಬುದನ್ನು ಸ್ಪಷ್ಟಪಡಿಸಿದರು. ಕೊಹ್ಲಿ ವಾಪಸಾತಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೊಹ್ಲಿ ತಂಡಕ್ಕೆ ಮರಳಿದ್ದಾರೆ ಎಂದರು. ಇದರೊಂದಿಗೆ ಅವರು 2ನೇ ಟಿ20 ಪಂದ್ಯದಲ್ಲಿ ಆಡುವುದು ಖಚಿತ ಎಂಬುದಂತೂ ಸ್ಪಷ್ಟವಾಗಿದೆ.
IND vs AFG: ಇಂದೋರ್‌ನಲ್ಲಿ ಮಳೆಯ ಮುನ್ಸೂಚನೆ; ರದ್ದಾಗುತ್ತಾ 2ನೇ ಟಿ20 ಪಂದ್ಯ?
ಕೊಹ್ಲಿ ಆಡಿದರೆ ಯಾವ ಆಟಗಾರನನ್ನು ತಂಡದಿಂದ ಕೈಬಿಡಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ದುಬೆ, ‘ಯಾರನ್ನು ಹೊರಹಾಕುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಯಾರನ್ನಾದರೂ ಹೊರಹಾಕುವುದು ಖಚಿತ ಎಂದು ಹೇಳಿದರು’. ಮೊದಲ ಟಿ20 ಪಂದ್ಯದಲ್ಲಿ ತಿಲಕ್ ವರ್ಮಾ ಮತ್ತು ಶುಭ್ಮನ್ ಗಿಲ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈ ಇಬ್ಬರು ಆಟಗಾರರಲ್ಲಿ ಯಾರಾದರೂ ಒಬ್ಬರು ಬೆಂಚ್ ಕಾಯಬಹುದು. ಆದರೆ ಕೊಹ್ಲಿ ಆಗಮನದ ನಂತರ ತಿಲಕ್ ವರ್ಮಾ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಹೆಚ್ಚಿದೆ. ಇದಲ್ಲದೇ ರವಿ ವಿಷ್ಣೋಯ್ ಅವರನ್ನೂ ತಂಡದಿಂದ ಕೈಬಿಡುವ ಸಾಧ್ಯತೆಗಳಿದ್ದು, ಅವರ ಬದಲಿಗೆ ಕುಲ್ದೀಪ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು.
ಗಾಯದ ಸಮಸ್ಯೆಯಿಂದಾಗಿ ಯಶಸ್ವಿ ಜೈಸ್ವಾಲ್ ಮೊದಲ ಟಿ20 ಪಂದ್ಯದಲ್ಲಿ ಆಡಿರಲಿಲ್ಲ. ಈ ಕಾರಣಕ್ಕಾಗಿ, ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಶುಭಮನ್ ಗಿಲ್ ಓಪನಿಂಗ್ ಮಾಡಿದರು. ಇಲ್ಲಿಯವರೆಗೆ ಜೈಸ್ವಾಲ್ ಎರಡನೇ ಟಿ20 ಪಂದ್ಯದಲ್ಲಿ ಆಡುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಗಿಲ್ ಅವರೇ ಎರಡನೇ ಟಿ20ಯಲ್ಲಿ ರೋಹಿತ್ ಜೊತೆ ಓಪನ್ ಮಾಡಬಹುದು. ಮೂರನೇ ಕ್ರಮಾಂಕದಲ್ಲಿ ಕೊಹ್ಲಿ ಆಡಿದರೆ, ನಾಲ್ಕನೇ ಕ್ರಮಾಂಕದಲ್ಲಿ ಶಿವಂ ದುಬೆಗೆ ಆಡುವುದು ಖಚಿತ. ಏಕೆಂದರೆ ಮೊದಲ ಟಿ20 ಪಂದ್ಯದಲ್ಲಿ ಅವರು 40 ಎಸೆತಗಳಲ್ಲಿ 60 ರನ್‌ಗಳ ಇನಿಂಗ್ಸ್ ಆಡಿದರು. ಉಳಿದಂತೆ ಜಿತೇಶ್ ಶರ್ಮಾ ವಿಕೆಟ್ ಕೀಪಿಂಗ್ ಜೊತೆಗೆ ಐದನೇ ಸ್ಥಾನದಲ್ಲಿ ಬ್ಯಾಟ್ ಬೀಸಲಿದ್ದಾರೆ. ರಿಂಕು ಸಿಂಗ್ ಗೇಮ್ ಫಿನಿಶರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ವೇಗದ ಬೌಲಿಂಗ್ ದಾಳಿಯ ಜವಾಬ್ದಾರಿಯನ್ನು ಅರ್ಷದೀಪ್ ಸಿಂಗ್ ಎಂದಿನಂತೆ ನಿರ್ವಹಿಸಲಿದ್ದಾರೆ. ಮುಖೇಶ್ ಕುಮಾರ್ಗೆ ಅವಕಾಶ ಸಿಗುವುದು ಪಕ್ಕಾ. ಮೊದಲ ಟಿ20 ಪಂದ್ಯದಲ್ಲಿ ರವಿ ಬಿಷ್ಣೋಯ್ ದುಬಾರಿ ಎನಿಸಿದ್ದರು. ಈ ಕಾರಣಕ್ಕಾಗಿ ಅವರನ್ನು ಆಡುವ ಹನ್ನೊಂದರಿಂದ ಕೈಬಿಡಬಹುದು. ಅವರ ಸ್ಥಾನದಲ್ಲಿ ಕುಲ್ದೀಪ್ ಯಾದವ್ ತಂಡದಲ್ಲಿ ಅವಕಾಶ ಪಡೆಯಬಹುದು. ವಾಷಿಂಗ್ಟನ್ ಸುಂದರ್‌ಗೆ ಆಲ್‌ರೌಂಡರ್ ಆಗಿ ಮತ್ತೊಂದು ಅವಕಾಶ ಸಿಗಬಹುದು. ಅಕ್ಷರ್ ಪಟೇಲ್ ಅವರನ್ನೂ ಆಡುವ ಹನ್ನೊಂದರಲ್ಲಿ ಸೇರಿಸಿಕೊಳ್ಳಬಹುದು.
ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶಿವಂ ದುಬೆ, ಜಿತೇಶ್ ಶರ್ಮಾ, ರಿಂಕು ಸಿಂಗ್, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮುಖೇಶ್ ಕುಮಾರ್, ವಾಷಿಂಗ್ಟನ್ ಸುಂದರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ