IND vs AFG: ಎರಡೆರಡು ಸೂಪರ್ ಓವರ್; ರೋಚಕ ಪಂದ್ಯದಲ್ಲಿ ಕೊನೆಗೂ ಗೆದ್ದ ಭಾರತ

IND vs AFG: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಮೂರನೇ ಹಾಗೂ ಅಂತಿಮ ಟಿ20 ಪಂದ್ಯವನ್ನು 10 ರನ್​ಗಳಿಂದ ಗೆದ್ದುಕೊಳ್ಳುವ ಮೂಲಕ ಟೀಂ ಇಂಡಿಯಾ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.

IND vs AFG: ಎರಡೆರಡು ಸೂಪರ್ ಓವರ್; ರೋಚಕ ಪಂದ್ಯದಲ್ಲಿ ಕೊನೆಗೂ ಗೆದ್ದ ಭಾರತ
ಟೀಂ ಇಂಡಿಯಾ
Follow us
|

Updated on:Jan 17, 2024 | 11:48 PM

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಅಫ್ಘಾನಿಸ್ತಾನ (India vs Afghanistan) ನಡುವಿನ ಮೂರನೇ ಹಾಗೂ ಅಂತಿಮ ಟಿ20 ಪಂದ್ಯವನ್ನು 10 ರನ್​ಗಳಿಂದ ಗೆದ್ದುಕೊಳ್ಳುವ ಮೂಲಕ ಟೀಂ ಇಂಡಿಯಾ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಬಹಳ ರೋಚಕತೆಯಿಂದ ಕೂಡಿದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅಫ್ಘಾನಿಸ್ತಾನಕ್ಕೆ 213 ರನ್ ಟಾರ್ಗೆಟ್ ನೀಡಿತ್ತು. ಉತ್ತರವಾಗಿ ಅಫ್ಘಾನಿಸ್ತಾನ ತಂಡ ಕೂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಹೀಗಾಗಿ ಪಂದ್ಯ ಟೈ ಆಯಿತು. ಮೊದಲ ಸೂಪರ್​ ಓವರ್​ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 6 ಎಸೆತಗಳಲ್ಲಿ 16 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಭಾರತ ಕೂಡ 6 ಎಸೆತಗಳಲ್ಲಿ 16 ರನ್ ಕಲೆಹಾಕಿತು. ಹೀಗಾಗಿ ಪಂದ್ಯ ಎರಡನೇ ಬಾರಿಯೂ ಟೈ ಆಯಿತು. ಆದ್ದರಿಂದ ಪಂದ್ಯ ಮತ್ತೊಮ್ಮೆ ಸೂಪರ್​ ಓವರ್​ಗೆ ಸಾಗಿತು. ಈ ವೇಳೆ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಮೊದಲ ಐದು ಎಸೆತಗಳಲ್ಲಿ 2 ವಿಕೆಟ್ ಕಳೆದುಕೊಂಡು 11 ರನ್ ಕಲೆಹಾಕಿತು. ಈ ಮೂಲಕ ಅಫ್ಘಾನಿಸ್ತಾನಕ್ಕೆ 12 ರನ್ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನಟ್ಟಿದ ಅಫ್ಘಾನ್ ಮೊದಲ ಮೂರು ಎಸೆತಗಳಲ್ಲಿ 1 ರನ್ ಬಾರಿಸಿ ಎರಡು ವಿಕೆಟ್ ಕಳೆದುಕೊಂಡಿತು.  ಅಂತಿಮವಾಗಿ ಭಾರತ 10 ರನ್​ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

ರೋಹಿತ್- ರಿಂಕು 190 ರನ್ ಜೊತೆಯಾಟ

ಇದಕ್ಕೂ ಮುನ್ನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್​ಗಳಲ್ಲಿ 213 ರನ್ ಕಲೆಹಾಕಿತು. ತಂಡದ ಪರ ದಾಖಲೆಯ ಐದನೇ ಟಿ20 ಶತಕ ಸಿಡಿಸಿದ ನಾಯಕ ರೋಹಿತ್ ಶರ್ಮಾ ಅಜೇಯ 121 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದರೆ, ರಿಂಕು ಸಿಂಗ್ ಕೂಡ 39 ಎಸೆತಗಳಲ್ಲಿ 69 ರನ್​ಗಳ ಅಜೇಯ ಕಾಣಿಕೆ ನೀಡಿದರು. ಅಲ್ಲದೆ ರೋಹಿತ್ ಮತ್ತು ರಿಂಕು ನಡುವೆ 190 ರನ್‌ಗಳ ದಾಖಲೆಯ ಜೊತೆಯಾಟ ಕೂಡ ನಡೆಯಿತು. ಹೀಗಾಗಿ ತಂಡ ಕೇವಲ 4 ವಿಕೆಟ್​ ಕಳೆದುಕೊಂಡು ಅಫ್ಘಾನಿಸ್ತಾನಕ್ಕೆ 213 ರನ್​ಗಳ ಬೃಹತ್ ಟಾರ್ಗೆಟ್ ನೀಡಿತು.

ಸೂಪರ್ ಓವರ್​ನಲ್ಲಿ ಅಫ್ಘಾನ್​ಗೆ ಸೋಲು

ಈ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡದ ಪರ ಆರಂಭಿಕರಾದ ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ಗುಲ್ಬದಿನ್ ನೈಬ್ ಕ್ರಮವಾಗಿ 50, 50, 55 ರನ್ ಕಲೆಹಾಕಿದರೆ, ಆಲ್​ರೌಂಡರ್ ಮೊಹಮ್ಮದ್ ನಬಿ 34 ರನ್​ಗಳ ಸ್ಫೋಟಕ ಇನ್ನಿಂಗ್ಸ್​ ಆಡಿದರು. ಹೀಗಾಗಿ ತಂಡ ಭಾರತದ ಬೃಹತ್ ಟಾರ್ಗೆಟ್ ಅನ್ನು ಬೆನ್ನಟ್ಟಿ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಆದರೆ ಆ ಬಳಿಕ ನಡೆದ ಎರಡೆರಡು ಸೂಪರ್​ ಓವರ್​ ಪಂದ್ಯದಲ್ಲಿ ಸೋಲನುಭವಿಸುವ ಮೂಲಕ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮುಖಭಂಗವನ್ನು ಎದುರಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:37 pm, Wed, 17 January 24