ಭಾರತ ಹಾಗೂ ಆಸ್ಟ್ರೇಲಿಯಾ (India Vs Australia) ನಡುವೆ ನಡೆದ ಮೊದಲ 3 ಟೆಸ್ಟ್ ಪಂದ್ಯಗಳು ಕೇವಲ ಎರಡು ಎರಡೂವರೆ ದಿನಗಳಿಗೆ ಅಂತ್ಯವಾಗಿದ್ದವು. ಹೀಗಾಗಿ ಅಂತಿಮ ಟೆಸ್ಟ್ ಕೂಡ ಇದೇ ರೀತಿಯ ಅಂತ್ಯ ಕಾಣುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸೀಸ್ ಪಡೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium in Ahmedabad) ಭರ್ಜರಿ ಪ್ರದರ್ಶನ ನೀಡಿದೆ. ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಹತ್ತಿರತ್ತಿರ 6 ಸೆಷನ್ಗಳ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಅಂತಿಮವಾಗಿ 480 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದೆ. ಮೊದಲ ದಿನ ಅದ್ಭುತ ಶತಕ ಸಿಡಿಸಿದ್ದ ಉಸ್ಮಾನ್ ಖವಾಜಾ (Usman Khawaja) ದ್ವಿಶತಕ ವಂಚಿತವಾದರೆ, ಕ್ಯಾಮರೂನ್ ಗ್ರೀನ್ (Cameron Green) ವೃತ್ತಿಜೀವನದ ಮೊದಲ ಶತಕ ಬಾರಿಸಿದರು.
4 ವಿಕೆಟ್‌ಗೆ 255 ರನ್ ಗಳಿಸಿ ಮೊದಲ ದಿನದಾಟ ಮುಗಿಸಿದ್ದ ಆಸೀಸ್ ಇಲ್ಲಿಂದ ತನ್ನ ಎರಡನೇ ದಿನದಾಟ ಆರಂಭಿಸಿತು. ಬಳಿಕ ಎರಡನೇ ದಿನದಾಟದ ಮೂರನೇ ಸೆಷನ್‌ನ ಒಂದೂವರೆ ಗಂಟೆಗಳ ಕಾಲ ಬ್ಯಾಟಿಂಗ್ ಮಾಡಿ 480 ರನ್‌ಗಳಿಗೆ ಇನ್ನಿಂಗ್ಸ್ ಅಂತ್ಯಗೊಳಿಸಿತು. ಮೊದಲ ಇನ್ನಿಂಗ್ಸ್ ಅಂತ್ಯಕ್ಕೆ ಉಳಿದ 6 ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ ತನ್ನ ಖಾತೆಗೆ ಒಟ್ಟು 225 ರನ್ ಸೇರಿಸಿತು. ಅದರಲ್ಲೂ ಆಸೀಸ್ ಕೆಳ ಕ್ರಮಾಂಕ 71 ರನ್ ಸೇರಿಸಿ ಟೀಂ ಇಂಡಿಯಾವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿತು. ಇಷ್ಟೆಲ್ಲಾ ಹೋರಾಟದ ನಡುವೆಯೂ ಟೀಂ ಇಂಡಿಯಾ ಪರ ಮಿಂಚಿದ ರವಿಚಂದ್ರನ್ ಅಶ್ವಿನ್ 6 ವಿಕೆಟ್ ಪಡೆದು ಮಿಂಚಿದರು.
BAN vs ENG: ಆಂಗ್ಲರಿಗೆ ಸೋಲು; ಮೊದಲ ಪಂದ್ಯದಲ್ಲೇ ವಿಶ್ವ ವಿಜೇತರನ್ನು ಬೇಟೆಯಾಡಿದ ಬಾಂಗ್ಲಾ..!
ಆಸೀಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಹೆಡ್ ಮತ್ತು ಖವಾಜಾ ಅರ್ಧಶತಕದ ಜೊತೆಯಾಟವಾಡುವುದರೊಂದಿಗೆ ತಂಡಕ್ಕೆ ಉತ್ತಮ ಆರಂಭ ನೀಡಿದರು. ಈ ನಡುವೆ 32 ರನ್ ಗಳಿಸಿದ್ದ ಹೆಡ್ ಅಶ್ವಿನ್ಗೆ ಬಲಿಯಾದರು. ಬಳಿಕ ಬಂದ ಲಬುಶೇನ್ 3 ರನ್‌ಗಳಿಗೆ ಬ್ಯಾಟ್ ಎತ್ತಿಟ್ಟರು. ಸ್ಟೀವ್ ಸ್ಮಿತ್ 38 ರನ್‌ಗಳಿಗೆ ಸುಸ್ತಾದರೆ, ಹ್ಯಾಂಡ್ಸ್ಕಾಬ್ 17 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಆದರೆ ಆ ಬಳಿಕ ಜೊತೆಯಾದ ಖವಾಜಾ ಹಾಗೂ ಗ್ರೀನ್ ದಾಖಲೆಯ ದ್ವಿಶತಕದ ಜೊತೆಯಾಟ ನಡೆಸಿ ಆಸೀಸ್ ತಂಡಕ್ಕೆ ನೆರವಾದರು. ಈ ವೇಳೆ ಖವಾಜಾ ಕೂಡ ಶತಕ ಸಿಡಿಸಿ ಮಿಂಚಿದರೆ, ಗ್ರೀನ್ ಅಧರ್ಶತಕ ಸಿಡಿಸಿ ಮೊದಲ ದಿನದಲ್ಲಿ ಅಜೇಯರಾಗಿ ಉಳಿದರು.
ಇನ್ನು ಎರಡನೇ ದಿನವೂ ಇನ್ನಿಂಗ್ಸ್ ಮುಂದುವರೆಸಿದ ಈ ಜೋಡಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಸಂಪೂರ್ಣ ಸೆಷನ್ ಆಡಿತು. ಎರಡನೇ ದಿನದ ಮೊದಲ ಸೆಷನ್‌ನಲ್ಲಿ ಕ್ಯಾಮರೂನ್ ಗ್ರೀನ್ ಮತ್ತು ಖವಾಜಾ ಯಾವುದೇ ವಿಕೆಟ್ ಕಳೆದುಕೊಳ್ಳದೆ 92 ರನ್ ಸೇರಿಸಿದರೆ, ಖವಾಜಾ 150 ರನ್ ಪೂರೈಸಿದರು. ಆ ಬಳಿಕ ಎರಡನೇ ಸೆಷನ್‌ನಲ್ಲಿ ಕ್ಯಾಮರೂನ್ ಗ್ರೀನ್ ತಮ್ಮ ಟೆಸ್ಟ್ ವೃತ್ತಿಜೀವನದ ಮೊದಲ ಶತಕವನ್ನು ಪೂರ್ಣಗೊಳಿಸಿದರು. ತಮ್ಮ ಶತಕದ ಇನ್ನಿಂಗ್ಸ್‌ನಲ್ಲಿ ಗ್ರೀನ್ 143 ಎಸೆತಗಳಲ್ಲಿ ಶತಕ ಪೂರೈಸಿದರೆ, ಗ್ರೀನ್ ಮತ್ತು ಖವಾಜಾ ನಡುವೆ 200 ರನ್‌ಗಳ ಜೊತೆಯಾಟವೂ ಪೂರ್ಣಗೊಂಡಿತು.
ಎರಡನೇ ಸೆಷನ್‌ನಲ್ಲಿ, ಅಶ್ವಿನ್ ಭಾರತದ ಪರ 3 ವಿಕೆಟ್ ಪಡೆದರು. ಇದರಲ್ಲಿ ಗ್ರೀನ್ ಮತ್ತು ಅಲೆಕ್ಸ್ ಕ್ಯಾರಿ ಅವರ ವಿಕೆಟ್ ಒಂದೇ ಓವರ್‌ನಲ್ಲಿ ಪತನಗೊಂಡವು. ಈ ವಿಕೆಟ್ ಪತನದ ನಂತರ ಬಂದ ಮಿಚೆಲ್ ಸ್ಟಾರ್ಕ್ ಕೂಡ ಬೇಗನೆ ವಿಕೆಟ್ ಒಪ್ಪಿಸಿದರು. ಮೂರನೇ ಸೆಷನ್‌ನ ಮೊದಲ ಎಸೆತದಲ್ಲಿ ಅಕ್ಷರ್ ಪಟೇಲ್ 180 ರನ್ ಗಳಿಸಿ ಭಾರತಕ್ಕೆ ಕಂಟಕವಾಗಿದ್ದ ಖವಾಜಾ ಅವರನ್ನು ಎಲ್ಬಿಡಬ್ಲ್ಯೂ ಬಲೆಗೆ ಬೀಳಿಸಿದರು.
ಆದಾಗ್ಯೂ, ಪ್ರಮುಖರು ಔಟಾದ ನಂತರವೂ ಆಸೀಸ್ಗೆ ನೆರವಾದ ಬಾಲಂಗೋಚಿಗಳಾದ ನಾಥನ್ ಲಿಯಾನ್ ಮತ್ತು ಟಾಡ್ ಮರ್ಫಿ 70 ರನ್ ಜೊತೆಯಾಟವನ್ನು ಹಂಚಿಕೊಂಡರು. ಆದರೆ ಅಶ್ವಿನ್ ಈ ಇಬ್ಬರ ವಿಕೆಟ್ ಕಬಳಿಸುವುದರೊಂದಿಗೆ 480 ರನ್ ಗಳಿಗೆ ಆಸೀಸ್ ಇನ್ನಿಂಗ್ಸ್ ಅಂತ್ಯಗೊಳಿಸಿದರು.
ಆದಾಗ್ಯೂ, ಭಾರತದಲ್ಲಿ ಇಲ್ಲಿಯವರೆಗೆ, ಮೊದಲ ಇನ್ನಿಂಗ್ಸ್‌ನಲ್ಲಿ 479 ಕ್ಕಿಂತ ಹೆಚ್ಚು ರನ್ ಗಳಿಸಿದ ತಂಡವು ಟೆಸ್ಟ್‌ನಲ್ಲಿ ಎಂದಿಗೂ ಸೋತಿಲ್ಲ. ಅಂದರೆ ದಾಖಲೆಯ ಪ್ರಕಾರ ಭಾರತದ ಗೆಲುವು ಅಸಾಧ್ಯವೆನಿಸಿದೆ. ಇನ್ನು ಟೀಂ ಇಂಡಿಯಾ ಪರ ಅಶ್ವಿನ್ 6 ವಿಕೆಟ್ ಪಡೆದು ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ವಿಕೆಟ್ (113) ಪಡೆದ ಭಾರತೀಯ ಬೌಲರ್ ಎನಿಸಿಕೊಂಡರು. ಇದರೊಂದಿಗೆ ಅನಿಲ್ ಕುಂಬ್ಳೆ ದಾಖಲೆಯನ್ನು ಮುರಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:31 pm, Fri, 10 March 23