IND vs AUS 4th Test: 444 ರನ್ಗಳ ಹಿನ್ನಡೆಯಲ್ಲಿ ಭಾರತ: ಕುತೂಹಲ ಕೆರಳಿಸಿದ ಮೂರನೇ ದಿನದಾಟ, ರೋಹಿತ್-ಗಿಲ್ ಮೇಲೆ ಎಲ್ಲರ ಕಣ್ಣು
India vs Australia 4th Test: ತನ್ನ ಮೊದಲ ಇನ್ನಿಂಗ್ಸ್ ಶುರು ಮಾಡಿರುವ ಟೀಮ್ ಇಂಡಿಯಾ ದ್ವಿತೀಯ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 36 ರನ್ ಕಲೆಹಾಕಿದ್ದು 444 ರನ್ಗಳ ಹಿನ್ನಡೆಯಲ್ಲಿದೆ. ಇಂದಿನ ಮೂರನೇ ದಿನದಾಟ ಭಾರತಕ್ಕೆ ಬಹುಮುಖ್ಯವಾಗಿದ್ದು ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಮೇಲೆ ಎಲ್ಲರ ಕಣ್ಣಿದೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾರ್ಡರ್- ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಅಂತಿಮ ನಾಲ್ಕನೇ ಟೆಸ್ಟ್ ಪಂದ್ಯ ಕುತೂಹಲ ಕೆರಳಿಸಿದೆ. ಉಸ್ಮಾನ್ ಖವಾಜಾ (Usman Khawaja) ಹಾಗೂ ಕ್ಯಾಮ್ರೋನ್ ಗ್ರೀನ್ ಅವರ ಆಕರ್ಷಕ ಶತಕದ ನೆರವಿನಿಂದ ಕಾಂಗರೂ ಪಡೆ 480 ರನ್ಗಳ ಬೃಹತ್ ಮೊತ್ತ ಕಲೆಹಾಕಿದೆ. ತನ್ನ ಮೊದಲ ಇನ್ನಿಂಗ್ಸ್ ಶುರು ಮಾಡಿರುವ ಟೀಮ್ ಇಂಡಿಯಾ ದ್ವಿತೀಯ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 36 ರನ್ ಕಲೆಹಾಕಿದ್ದು 444 ರನ್ಗಳ ಹಿನ್ನಡೆಯಲ್ಲಿದೆ. ಇಂದಿನ ಮೂರನೇ ದಿನದಾಟ ಭಾರತಕ್ಕೆ ಬಹುಮುಖ್ಯವಾಗಿದ್ದು ರೋಹಿತ್ ಶರ್ಮಾ (Rohit Sharma) ಹಾಗೂ ಶುಭ್ಮನ್ ಗಿಲ್ ಮೇಲೆ ಎಲ್ಲರ ಕಣ್ಣಿದೆ.
ಶುಕ್ರವಾರ ಎರಡನೇ ದಿನದಾಟ ಶುರು ಮಾಡಿದ ಆಸ್ಟ್ರೇಲಿಯಾ ಭರ್ಜರಿ ಆರಂಭ ಪಡೆದುಕೊಂಡಿತು. ಪಂದ್ಯ ಆರಂಭವಾಗುತ್ತಿದ್ದಂತೆ ಗ್ರೀನ್ ಅರ್ಧ ಶತಕ ಪೂರ್ಣಗೊಳಿಸಿದರು. ಭೋಜನ ವಿರಾಮದ ವೇಳೆಗೆ ಆಸಿಸ್ ಯಾವುದೇ ವಿಕೆಟ್ ಕಳೆದುಕೊಳ್ಳದೇ ಪ್ರಥಮ ಅವಧಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಭೋಜನದ ನಂತರ ಸ್ಪಿನ್ನರ್ಗಳಿಗೆ ನೆರವಾಗದ ಪಿಚ್ನಲ್ಲೂ ಅಶ್ವಿನ್ ಮ್ಯಾಜಿಕ್ ಮಾಡಿದರು. ಆಸೀಸ್ ತಂಡಕ್ಕೆ ಶತಕ ಸಿಡಿಸಿ ಆಧಾರವಾಗಿ ನಿಂತಿದ್ದ ಗ್ರೀನ್ರನ್ನು (114) ಪೆವಿಲಿಯನ್ಗೆ ಕಳಿಸಿದರು. ಅವರ ನಂತರ ಬಂದ ಅಲೆಕ್ಸ್ ಕ್ಯಾರಿ (0) ಮತ್ತು ಮಿಚೆಲ್ ಸ್ಟಾರ್ಕ್ (6) ಅವರನ್ನು ಆರ್ ಅಶ್ವಿನ್ ಔಟ್ ಮಾಡಿದರು.
IND vs AUS: ಭಾರತ ವಿರುದ್ಧ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ ಗ್ರೀನ್! ರೋಹಿತ್ ಪಡೆಗೆ ಸಂಕಷ್ಟ
ಟೀ ವಿರಾಮದ ನಂತರ 180 ರನ್ ಗಳಿಸಿ ಆಡುತ್ತಿದ್ದ ಉಸ್ಮಾನ್ ಖವಾಜಾರನ್ನು ಅಕ್ಷರ್ ಪಟೇಲ್ ಎಲ್ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ನಂತರ ನೇಥನ್ ಲಿಯಾನ್ (34) ಮತ್ತು ಟಾಡ್ ಮಾರ್ಫಿ (41) ಕೊಂಚ ರನ್ ಕಲೆ ಹಾಕಿದರು. ಅಂತಿಮವಾಗಿ ಆಸ್ಟ್ರೇಲಿಯಾ 167.2 ಓವರ್ಗಳಲ್ಲಿ 420 ರನ್ಗೆ ಆಲೌಟ್ ಆಯಿತು. ಬಳಿಕ ತನ್ನ ಮೊದಲ ಇನ್ನಿಂಗ್ಸ್ ಶುರು ಮಾಡಿದ ಭಾರತ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 36 ರನ್ ಗಳಿಸಿದೆ. ರೋಹಿತ್ 17 ಹಾಗೂ ಗಿಲ್ 18 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಅತಿ ಹೆಚ್ಚು ವಿಕೆಟ್ ಪಡೆದ ಅಶ್ವಿನ್:
ರವಿಚಂದ್ರನ್ ಅಶ್ವಿನ್ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. 47.2 ಓವರ್ ಮಾಡಿದ ಅಶ್ವಿನ್ 91 ರನ್ ಬಿಟ್ಟುಕೊಟ್ಟು 6 ವಿಕೆಟ್ ಗಳಿಸಿದರು. 22 ಪಂದ್ಯಗಳಲ್ಲಿ ಅಶ್ವಿನ್ 28.10 ರ ಸರಾಸರಿಯಲ್ಲಿ 2.71 ರ ಎಕಾನಮಿ ರೇಟ್‌ನಲ್ಲಿ 113 ವಿಕೆಟ್‌ಗಳನ್ನು ಪಡೆದಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 103ಕ್ಕೆ 7 ವಿಕೆಟ್ ಕಿತ್ತದ್ದು ಅವರ ಅತ್ಯುತ್ತಮ ಸಾಧನೆಯಾಗಿದೆ. ಆಸ್ಟ್ರೇಲಿಯಾದ ನೇಥನ್ ಲಿಯಾನ್ ಕೂಡಾ 113 ವಿಕೆಟ್ ಪಡೆದಿದ್ದಾರೆ. ಅಶ್ವಿನ್ ಅವರು ಲಿಯಾನ್ ದಾಖಲೆ ಸರಿಗಟ್ಟಿದ್ದಾರೆ. ಆದರೆ, ಲಿಯಾನ್ 113 ವಿಕೆಟ್ ಪಡೆಯಲು 26 ಪಂದ್ಯಗಳನ್ನು ತೆಗೆದುಕೊಂಡಿರುವ ಕಾರಣ ದ್ವಿತೀಯ ಸ್ಥಾನದಲ್ಲಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:50 am, Sat, 11 March 23