BAN vs ENG: ಆಂಗ್ಲರಿಗೆ ಸೋಲು; ಮೊದಲ ಪಂದ್ಯದಲ್ಲೇ ವಿಶ್ವ ವಿಜೇತರನ್ನು ಬೇಟೆಯಾಡಿದ ಬಾಂಗ್ಲಾ..!

BAN vs ENG: ಇಂಗ್ಲೆಂಡ್ ನೀಡಿದ157 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ 18 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ಸಾಧಿಸಿತು.

BAN vs ENG: ಆಂಗ್ಲರಿಗೆ ಸೋಲು; ಮೊದಲ ಪಂದ್ಯದಲ್ಲೇ ವಿಶ್ವ ವಿಜೇತರನ್ನು ಬೇಟೆಯಾಡಿದ ಬಾಂಗ್ಲಾ..!
ಇಂಗ್ಲೆಂಡ್- ಬಾಂಗ್ಲಾದೇಶ
Follow us
ಪೃಥ್ವಿಶಂಕರ
|

Updated on:Mar 10, 2023 | 4:02 PM

ಪ್ರಸ್ತುತ ಬಾಂಗ್ಲಾದೇಶ ಪ್ರವಾಸ ಮಾಡಿರುವ ಇಂಗ್ಲೆಂಡ್ (Bangladesh and England) ತಂಡ ಇಲ್ಲಿ ಟಿ20 ಸರಣಿಯನ್ನು ಆಡುತ್ತಿದ್ದು, ನಿನ್ನೆ ನಡೆದ ಮೊದಲ ಟಿ20 ಪಂದ್ಯದಲ್ಲಿ ವಿಶ್ವಚಾಂಪಿಯನ್ ಇಂಗ್ಲೆಂಡ್​ಗೆ ಮಣ್ಣುಮುಕ್ಕಿಸುವಲ್ಲಿ ಬಾಂಗ್ಲಾ ಹುಲಿಗಳು ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್ ತಂಡವನ್ನು ಬರೋಬ್ಬರಿ 6 ವಿಕೆಟ್​ಗಳಿಂದ ಮಣಿಸಿದ ಬಾಂಗ್ಲಾ ತಂಡ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ವಾಸ್ತವವಾಗಿ ಹೇಳಬೇಕೆಂದರೆ ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ತಂಡಗಳಿಗೆ ಈ ಸರಣಿ ಬಹಳ ವಿಶೇಷವಾಗಿದೆ. ಏಕೆಂದರೆ, 2005ರಿಂದ ಆರಂಭವಾದ ಟಿ20 ಕ್ರಿಕೆಟ್ (T20 cricket) ಇತಿಹಾಸದಲ್ಲಿ ಮೊದಲ ಬಾರಿಗೆ ಈ ಉಭಯ ತಂಡಗಳು ದ್ವಿಪಕ್ಷೀಯ ಟಿ20 ಸರಣಿಯಲ್ಲಿ (bilateral T20 series) ಮುಖಾಮುಖಿಯಾಗಿವೆ.

ಚಿತ್ತಗಾಂಗ್‌ನಲ್ಲಿ ನಡೆದ ಸರಣಿಯ ಈ ಮೊದಲ ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡಿದ ಬಾಂಗ್ಲಾದೇಶ ತಂಡ ಇಂಗ್ಲೆಂಡ್‌ ತಂಡದ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಅಲ್ಪ ರನ್​ಗಳಿಗೆ ಕಟ್ಟಿಹಾಕಿತು. ಚಿತ್ತಗಾಂಗ್‌ನ ನಿಧಾನಗತಿಯ ಪಿಚ್‌ನಲ್ಲಿ ಬಾಂಗ್ಲಾದೇಶದ ಸ್ಪಿನ್ ಮತ್ತು ಮಧ್ಯಮ ವೇಗದ ಬೌಲಿಂಗ್ ದಾಳಿಯ ಮುಂದೆ, ಇಂಗ್ಲೆಂಡ್ 20 ಓವರ್‌ಗಳಲ್ಲಿ ಕೇವಲ 156 ರನ್ ಗಳಿಸಲಷ್ಟೇ ಶಕ್ತವಾಯಿತು.

IND vs AUS: 43 ವರ್ಷಗಳ ನಂತರ ದಾಖಲೆ! ಭಾರತಕ್ಕೆ ದುಬಾರಿಯಾದ ದ್ವಿಶತಕದ ಜೊತೆಯಾಟ

ಶಾಂಟೊ-ಶಕೀಬ್ ಅಬ್ಬರ, ಬಾಂಗ್ಲಾಕ್ಕೆ ಐತಿಹಾಸಿಕ ಗೆಲುವು

ಇಂಗ್ಲೆಂಡ್ ನೀಡಿದ157 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ 18 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ಸಾಧಿಸಿತು. ತಂಡದ ಪರ ನಜ್ಮುಲ್ ಶಾಂಟೋ 30 ಎಸೆತಗಳಲ್ಲಿ 8 ಬೌಂಡರಿ ಒಳಗೊಂಡಂತೆ 51 ರನ್​ಗಳಿಸಿ ಬಿರುಸಿನ ಆಟವಾಡಿದರೆ, ತಂಡದ ನಾಯಕ ಶಕೀಬ್ ಕೂಡ ಉಪಯುಕ್ತ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನ ತಡ ಸೇರಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ ಕೇವಲ 24 ಎಸೆತಗಳನ್ನು ಎದುರಿಸಿದ ಶಕೀಬ್, ಎಂಟು ಬೌಂಡರಿಗಳ ನೆರವಿನಿಂದ ಅಜೇಯ 34 ರನ್ ಗಳಿಸಿದರು. ಅವರನ್ನು ಹೊರತುಪಡಿಸಿ ತೋಹಿದ್ 24 ಮತ್ತು ರೋನಿ ತಾಲುಕ್ದಾರ್ 21 ರನ್ ಕೊಡುಗೆ ನೀಡಿದರು. ಈ ಗೆಲುವಿನೊಂದಿಗೆ ಬಾಂಗ್ಲಾದೇಶ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಇಂಗ್ಲೆಂಡ್ ಬ್ಯಾಟಿಂಗ್ ವಿಫಲ

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 156 ರನ್ ಗಳಿಸಲಷ್ಟೇ ಶಕ್ತವಾಯಿತು. ಒಂದು ಹಂತದಲ್ಲಿ ಇಂಗ್ಲೆಂಡ್ ತಂಡ 15ನೇ ಓವರ್‌ನಲ್ಲಿ 126 ರನ್ ಗಳಿಸಿತ್ತು. ಆದರೆ ಕೊನೆಯ 5 ಓವರ್‌ಗಳಲ್ಲಿ ಕೇವಲ 30 ರನ್ ಮಾತ್ರ ಇಂಗ್ಲೆಂಡ್ ಖಾತೆಗೆ ಬಂದು ಸೇರಿತು. ತಂಡದ ಮೂವರು ಬ್ಯಾಟ್ಸ್‌ಮನ್‌ಗಳು ಮಾತ್ರ ಎರಡಂಕಿ ತಲುಪಿದರು. ಇಂಗ್ಲೆಂಡ್ ಪರ ನಾಯಕ ಜೋಸ್ ಬಟ್ಲರ್ 42 ಎಸೆತಗಳಲ್ಲಿ 67 ರನ್ ಗಳಿಸಿದರು. ಆದರೆ 16ನೇ ಓವರ್‌ನಲ್ಲಿ ಬಟ್ಲರ್ ಔಟಾದ ಪರಿಣಾಮ ಇಂಗ್ಲೆಂಡ್ ಸ್ಕೋರ್ ಮೇಲೆ ಪರಿಣಾಮ ಬೀರಿತು.

ಬಟ್ಲರ್ ಅವರ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿದ್ದವು. ಅದೇ ಸಮಯದಲ್ಲಿ, ಆರಂಭಿಕ ಫಿಲ್ ಸಾಲ್ಟ್ 38 ಮತ್ತು ಬೆನ್ ಡಕೆಟ್ 20 ರನ್ ಕೊಡುಗೆ ನೀಡಿದರು. ಬಾಂಗ್ಲಾದೇಶ ಪರ ಹಸನ್ ಮಹಮೂದ್ 26 ರನ್ ನೀಡಿ ಎರಡು ವಿಕೆಟ್ ಪಡೆದರೆ, ಶಕೀಬ್ 26 ರನ್ ನೀಡಿ ಒಂದು ವಿಕೆಟ್ ಪಡೆದರು. ಸರಣಿಯ ಎರಡನೇ ಪಂದ್ಯವು ಭಾನುವಾರ, ಮಾರ್ಚ್ 11 ರಂದು ಮೀರ್ಪುರದಲ್ಲಿ ನಡೆಯಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:02 pm, Fri, 10 March 23