ವಾಟ್ ಎ ಬಾಲ್… ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
Australia vs India, 4th Test: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ 4ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಆರಂಭದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಇದಾಗ್ಯೂ ಮೂರನೇ ಸೆಷನ್ನಲ್ಲಿ ಕಂಬ್ಯಾಕ್ ಮಾಡಿರುವ ಟೀಮ್ ಇಂಡಿಯಾ ಒಟ್ಟು 5 ವಿಕೆಟ್ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಭಾರತೀಯ ಬೌಲರ್ಗಳು ಜಿದ್ದಾಜಿದ್ದಿನ ಪೈಪೋಟಿಗಿಳಿದಿದ್ದಾರೆ.
ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಡೇಂಜರಸ್ ಬ್ಯಾಟರ್ ಟ್ರಾವಿಸ್ ಹೆಡ್ (0) ಶೂನ್ಯಕ್ಕೆ ಔಟಾಗಿದ್ದಾರೆ. ಮಾರ್ನಸ್ ಲಾಬುಶೇನ್ (72) ಔಟಾದ ಬಳಿಕ ಕ್ರೀಸ್ಗೆ ಆಗಮಿಸಿದ ಹೆಡ್ ಅವರನ್ನು 3ನೇ ಎಸೆತದಲ್ಲಿ ಬುಮ್ರಾ ಕ್ಲೀನ್ ಬೌಲ್ಡ್ ಮಾಡಿದರು.
ಜಸ್ಪ್ರೀತ್ ಬುಮ್ರಾ ಎಸೆದ 67ನೇ ಓವರ್ನ ಮೂರನೇ ಎಸೆತವನ್ನು ಆಫ್ ಸೈಡ್ ಆಫ್ ಸ್ಟಂಪ್ನಿಂದ ದೂರವಾಗಿ ಸಾಗಲಿದೆ ಎಂದು ಭಾವಿಸಿ ಹೆಡ್ ಬಿಟ್ಟಿದ್ದರು. ಆದರೆ ಚೆಂಡು ತುಸು ಸ್ವಿಂಗ್ ಪಡೆದು ಬೇಲ್ಸ್ ಅನ್ನು ಎಗರಿಸಿತು. ಇತ್ತ ಡೇಂಜರಸ್ ಟ್ರಾವಿಸ್ ಹೆಡ್ ವಿಕೆಟ್ ಸಿಗುತ್ತಿದ್ದಂತೆ ಟೀಮ್ ಇಂಡಿಯಾ ಆಟಗಾರರು ಸಂಭ್ರಮಿಸಿದರು.
ಇದಕ್ಕೂ ಮುನ್ನ ಅಡಿಲೇಡ್ ಹಾಗೂ ಬ್ರಿಸ್ಬೇನ್ನಲ್ಲಿ ನಡೆದ 2ನೇ ಮತ್ತು 3ನೇ ಟೆಸ್ಟ್ ಪಂದ್ಯಗಳಲ್ಲಿ ಟ್ರಾವಿಸ್ ಹೆಡ್ ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದರು. ಇದೇ ಫಾರ್ಮ್ನೊಂದಿಗೆ ಮೆಲ್ಬೋರ್ನ್ನಲ್ಲೂ ಕಣಕ್ಕಿಳಿದ ಹೆಡ್ ಮೊದಲ ಇನಿಂಗ್ಸ್ನಲ್ಲಿ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುತ್ತಿರುವ ಆಸ್ಟ್ರೇಲಿಯಾ ಪರ ಆರಂಭಿಕರಾದ ಸ್ಯಾಮ್ ಕೊನ್ಸ್ಟಾಸ್ (60) ಹಾಗೂ ಉಸ್ಮಾನ್ ಖ್ವಾಜಾ (57) ಅರ್ಧಶತಕ ಬಾರಿಸಿದರು. ಹಾಗೆಯೇ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಾರ್ನಸ್ ಲಾಬುಶೇನ್ 72 ರನ್ಗಳಿಸಿದರು. ಈ ಮೂಲಕ ಆಸ್ಟ್ರೇಲಿಯಾ ತಂಡವು 70 ಓವರ್ಗಳ ಮುಕ್ತಾಯದ ವೇಳೆಗೆ 5 ವಿಕೆಟ್ ಕಳೆದುಕೊಂಡು 248 ರನ್ ಕಲೆಹಾಕಿದೆ. ಸದ್ಯ ಕ್ರೀಸ್ನಲ್ಲಿ ಸ್ಟೀವ್ ಸ್ಮಿತ್ ಹಾಗೂ ಅಲೆಕ್ಸ್ ಕ್ಯಾರಿ ಬ್ಯಾಟಿಂಗ್ ಮುಂದುವರೆಸಿದ್ದಾರೆ.