IND vs BAN: ಭಾರತ vs ಬಾಂಗ್ಲಾದೇಶ್ ಟೆಸ್ಟ್ಗೆ ಮಳೆ ಭೀತಿ
India vs Bangladesh 2nd Test: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 280 ರನ್ಗಳ ಅಮೋಘ ಗೆಲುವು ದಾಖಲಿಸಿದೆ. ಅತ್ತ ಸರಣಿ ಸೋಲಿನಿಂದ ತಪ್ಪಿಸಿಕೊಳ್ಳಲು ಬಾಂಗ್ಲಾದೇಶ್ ತಂಡವು 2ನೇ ಪಂದ್ಯದಲ್ಲಿ ಗೆಲ್ಲಬೇಕು. ಆದರೀಗ ಎರಡನೇ ಪಂದ್ಯಕ್ಕೆ ವರುಣನ ಆತಂಕ ಎದುರಾಗಿದೆ.
ಭಾರತ ಮತ್ತು ಬಾಂಗ್ಲಾದೇಶ್ ನಡುವಣ 2ನೇ ಟೆಸ್ಟ್ ಪಂದ್ಯ ಸೆಪ್ಟೆಂಬರ್ 27 ರಿಂದ ಶುರುವಾಗಲಿದೆ. ಕಾನ್ಪುರ ಗ್ರೀನ್ ಪಾರ್ಕ್ ಮೈದಾನದಲ್ಲಿ ಜರುಗಲಿರುವ ಈ ಪಂದ್ಯಕ್ಕೆ ಇದೀಗ ಮಳೆ ಭೀತಿ ಎದುರಾಗಿದೆ. ಏಕೆಂದರೆ ಕಾನ್ಪುರದ ಸುತ್ತ-ಮುತ್ತ ಮುಂದಿನ ಮೂರು ದಿನಗಳ ಕಾಲ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ವರದಿಗಳು ತಿಳಿಸಿವೆ. ಹೀಗಾಗಿ ಎರಡನೇ ಟೆಸ್ಟ್ ಪಂದ್ಯದ ಮೊದಲ ಎರಡು ದಿನದಾಟಗಳು ಮಳೆಗೆ ಅಹುತಿಯಾಗುವ ಸಾಧ್ಯತೆ ಹೆಚ್ಚಿದೆ.
ಹವಾಮಾನ ಮುನ್ಸೂಚನೆ ಸಂಸ್ಥೆ ಅಕ್ಯುವೆದರ್ ವರದಿ ಪ್ರಕಾರ, ಸೆಪ್ಟೆಂಬರ್ 26 ರಂದು, ಅಂದರೆ ಟೆಸ್ಟ್ ಪಂದ್ಯದ ಮುನ್ನಾದಿನ ಶೇ.79 ರಷ್ಟು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ಸೆಪ್ಟೆಂಬರ್ 27 ರಂದು ಶೇ.92 ರಷ್ಟು ಮಳೆಯಾಗಲಿದೆ ಎಂದು ತಿಳಿಸಲಾಗಿದೆ. ಅಂದರೆ ಮೊದಲ ದಿನದಾಟವು ಮಳೆಯಿಂದ ರದ್ದಾಗುವ ಸಾಧ್ಯತೆ ಹೆಚ್ಚಿದೆ.
ಇನ್ನು ಮಳೆಯ ಸಂಭವನೀಯತೆಯು ಸೆಪ್ಟೆಂಬರ್ 28 ರಂದು (2ನೇ ದಿನದಾಟ) ಶೇ.80 ರಷ್ಟು ಇರಲಿದ್ದು, 3ನೇ ದಿನದಾಟದಂದು( ಸೆ.29) ಶೇ.59 ಕ್ಕೆ ಇಳಿಯಲಿದೆ. ಇನರನು 4ನೇ ದಿನದಾಟದ ವೇಳೆಗೆ ಮಳೆಯು ಸಂಪೂರ್ಣ ಕಡಿಮೆಯಾಗಲಿದ್ದು, ಅಕ್ಟೋಬರ್ 1 ರಂದು ಮಳೆ ಬರುವ ಸಾಧ್ಯತೆ ತುಂಬಾ ಕಡಿಮೆ ಎಂದು ತಿಳಿಸಲಾಗಿದೆ.
ಈ ವರದಿ ಪ್ರಕಾರ ಭಾರತ ಮತ್ತು ಬಾಂಗ್ಲಾದೇಶ್ ನಡುವಣ 2ನೇ ದಿನದಾಟದ ಮೊದಲ ಮೂರು ದಿನವು ಮಳೆಗೆ ಅಹುತಿಯಾಗುವ ಸಾಧ್ಯತೆ ಹೆಚ್ಚಿದೆ. ಇನ್ನು ಕೊನೆಯ ಎರಡು ದಿನದಾಟಗಳ ಪಂದ್ಯಗಳು ನಡೆದರೂ ಫಲಿತಾಂಶ ಹೊರಬರುವ ಸಾಧ್ಯತೆ ಕಡಿಮೆ. ಹೀಗಾಗಿ 2ನೇ ಟೆಸ್ಟ್ ಪಂದ್ಯವು ಡ್ರಾನಲ್ಲಿ ಕೊನೆಗೊಂಡರೆ ಅಥವಾ ಮಳೆಯಿಂದಾಗಿ ರದ್ದಾದರೆ ಅಚ್ಚರಿಪಡಬೇಕಿಲ್ಲ.
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಸರ್ಫರಾಝ್ ಖಾನ್, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ , ಆಕಾಶ್ ದೀಪ್ ಮತ್ತು ಯಶ್ ದಯಾಳ್.
ಇದನ್ನೂ ಓದಿ: IPL 2025: RCB ಉಳಿಸಿಕೊಳ್ಳುವ ಅನ್ಕ್ಯಾಪ್ಡ್ ಆಟಗಾರ ಯಾರು?
ಬಾಂಗ್ಲಾದೇಶ್ ಟೆಸ್ಟ್ ತಂಡ: ನಜ್ಮುಲ್ ಹೊಸೈನ್ ಶಾಂತೊ (ನಾಯಕ), ಮಹಮ್ಮದುಲ್ ಹಸನ್ ಜಾಯ್, ಝಾಕಿರ್ ಹಸನ್, ಶದ್ಮಾನ್ ಇಸ್ಲಾಂ, ಮೊಮಿನುಲ್ ಹಕ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್, ಲಿಟ್ಟನ್ ಕುಮಾರ್ ದಾಸ್, ಮೆಹಿದಿ ಹಸನ್ ಮಿರಾಝ್, ತೈಜುಲ್ ಇಸ್ಲಾಂ, ನಯೀಮ್ ಹಸನ್, ನಹಿದ್ ರಾಣಾ, ಹಸನ್ ಮಹಮ್ಮದ್, ತಸ್ಕಿನ್ ಅಹ್ಮದ್, ಸೈಯದ್ ಖಾಲಿದ್ ಅಹ್ಮದ್, ಜಾಕರ್ ಅಲಿ.