Breaking: ಬೌಲಿಂಗ್ ಮಾಡುವ ವೇಳೆ ಗಾಯಗೊಂಡು ಮೈದಾನದಿಂದ ಹೊರನಡೆದ ಹಾರ್ದಿಕ್ ಪಾಂಡ್ಯ..!

Hardik Pandya Injury: ವಿಶ್ವಕಪ್ 2023 ರ ತನ್ನ ನಾಲ್ಕನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸುತ್ತಿರುವ ಟೀಂ ಇಂಡಿಯಾಕ್ಕೆ ಆರಂಭದಲ್ಲೇ ಆಘಾತ ಎದುರಾಗಿದೆ. ಬೌಲಿಂಗ್ ಮಾಡುವ ವೇಳೆ ತಂಡದ ಸ್ಟಾರ್ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಇಂಜುರಿಗೆ ತುತ್ತಾಗಿ ತಮ್ಮ ಓವರ್​ ಅನ್ನು ಪೂರ್ಣಗೊಳಿಸಲು ಸಾಧ್ಯವಾಗದೆ ಪೆವಿಲಿಯನ್ ಸೇರಿಕೊಂಡಿದ್ದಾರೆ.

Breaking: ಬೌಲಿಂಗ್ ಮಾಡುವ ವೇಳೆ ಗಾಯಗೊಂಡು ಮೈದಾನದಿಂದ ಹೊರನಡೆದ ಹಾರ್ದಿಕ್ ಪಾಂಡ್ಯ..!
ಹಾರ್ದಿಕ್ ಪಾಂಡ್ಯ
Follow us
ಪೃಥ್ವಿಶಂಕರ
|

Updated on:Oct 19, 2023 | 4:12 PM

ವಿಶ್ವಕಪ್ 2023 (ICC World Cup 2023)ರ ತನ್ನ ನಾಲ್ಕನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸುತ್ತಿರುವ ಟೀಂ ಇಂಡಿಯಾಕ್ಕೆ ಆರಂಭದಲ್ಲೇ ಆಘಾತ ಎದುರಾಗಿದೆ. ಬೌಲಿಂಗ್ ಮಾಡುವ ವೇಳೆ ತಂಡದ ಸ್ಟಾರ್ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಇಂಜುರಿಗೆ ತುತ್ತಾಗಿ ತಮ್ಮ ಓವರ್​ ಅನ್ನು ಪೂರ್ಣಗೊಳಿಸಲು ಸಾಧ್ಯವಾಗದೆ ಪೆವಿಲಿಯನ್ ಸೇರಿಕೊಂಡಿದ್ದಾರೆ. ವಾಸ್ತವವಾಗಿ ಪುಣೆಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ (India vs Bangladesh) ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಬಾಂಗ್ಲಾ ತಂಡ ಉತ್ತಮ ಆರಂಭ ಪಡೆದುಕೊಂಡಿದೆ.

ಬೌಂಡರಿ ತಡೆಯುವ ಯತ್ನದಲ್ಲಿ ಗಾಯ

ವಾಸ್ತವವಾಗಿ ಬಾಂಗ್ಲಾದೇಶ ಇನ್ನಿಂಗ್ಸ್​ನ 9ನೇ ಓವರ್​ ಬೌಲ್ ಮಾಡಲು ಹಾರ್ದಿಕ್ ಪಾಂಡ್ಯ ಬಂದರು. ಓವರ್​ನ ಮೂರನೇ ಎಸೆತವನ್ನು ಎದುರಿಸಿದ ಲಿಟನ್ ದಾಸ್​ ಸ್ಟ್ರೇಟ್ ಹಿಟ್ ಮಾಡಿದರು. ಇದೇ ವೇಳೆ ಹಾರ್ದಿಕ್ ಪಾಂಡ್ಯ ತಮ್ಮ ಬಲಗಾಲಿನಿಂದ ಚೆಂಡನ್ನು ತಡೆಯಲು ಯತ್ನಿಸಿದರು. ಆದರೆ, ಆ ಪ್ರಕ್ರಿಯೆಯಲ್ಲಿ ಜಾರಿಬಿದ್ದು, ನೋವಿನಿಂದ ನರಳಲಾರಂಭಿಸಿದರು. ಕೂಡಲೇ ಮೈದಾನಕ್ಕೆ ಆಗಮಿಸಿದ ತಂಡದ ಪಿಸಿಯೋ, ಪಾಂಡ್ಯಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು. ಬಹಳ ಹೊತ್ತು ಮೈದಾನದಲ್ಲಿಯೇ ಮಲಗಿ ನರಳುತ್ತಿದ್ದ ಪಾಂಡ್ಯ ಆ ಬಳಿಕ ಎದ್ದು ಮತ್ತೆ ಬೌಲ್ ಮಾಡಲು ಪ್ರಯತ್ನಿಸಿದರೂ ಕುಂಟುತ್ತಾ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರನ್ನು ಪಿಸಿಯೋ ಮೈದಾನದಿಂದ ಹೊರಕೆ ಕರೆದೊಯ್ದರು.

ಓವರ್ ಮುಗಿಸಿದ ಕೊಹ್ಲಿ

ಚಿಕಿತ್ಸೆ ಪಡೆಯಲು ಮೈದಾನದಿಂದ ಹೊರನಡೆದ ಪಾಂಡ್ಯಗೆ ತಮ್ಮ ಓವರ್​ ಅನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಆ ಓವರ್​ ಅನ್ನು ವಿರಾಟ್ ಕೊಹ್ಲಿ ಪೂರ್ಣಗೊಳಿಸಿದರು. ಆ ಬಳಿಕ 10ನೇ ಓವರ್​ ಬೌಲ್ ಮಾಡಲು ಬಂದ ಶಾರ್ದೂಲ್ ಠಾಕೂರ್ ಒಂದೇ ಓವರ್​ನಲ್ಲಿ 16 ರನ್‌ ಬಿಟ್ಟುಕೊಟ್ಟು ದುಬಾರಿಯಾದರು. ಹೀಗಾಗಿ ಇದೀಗ ಪಾಂಡ್ಯ ಇಂಜುರಿಗೊಂಡಿರುವುದರ ನಡುವೆ ಶಾರ್ದೂಲ್ ದುಬಾರಿಯಾಗುತ್ತಿದ್ದು, ನಾಯಕ ರೋಹಿತ್ ಶರ್ಮಾ, ಪಾಂಡ್ಯರ ಅನುಪಸ್ಥಿತಿಯನ್ನು ಹೇಗೆ ತುಂಬುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಹೇಳಿಕೆ ಬಿಡುಗಡೆ ಮಾಡಿದ ಬಿಸಿಸಿಐ

ಇದೀಗ ಹಾರ್ದಿಕ್ ಪಾಂಡ್ಯ ಗಾಯದ ಬಗ್ಗೆ ಭಾರತ ತಂಡದ ಮ್ಯಾನೇಜ್‌ಮೆಂಟ್ ಅಪ್‌ಡೇಟ್ ಬಿಡುಗಡೆ ಮಾಡಿದ್ದು, ಇಂಜುರಿಯಿಂದಾಗಿ ಪಾಂಡ್ಯ, ಮೊದಲ ಇನ್ನಿಂಗ್ಸ್‌ಗೆ ಮೈದಾನಕ್ಕಿಳಿಯುವುದಿಲ್ಲ ಎಂದು ಹೇಳಿಕೆ ನೀಡಿದೆ. ಒಂದು ವೇಳೆ ಪಾಂಡ್ಯ ಈ ಪಂದ್ಯದಲ್ಲಿ ಮೈದಾನಕ್ಕಿಳಿಯಬೇಕೆಂದರೆ  ಟೀಂ ಇಂಡಿಯಾ ಬ್ಯಾಟಿಂಗ್ ಮಾಡುವ ವೇಳೆ ಐದು ವಿಕೆಟ್‌ಗಳನ್ನು ಕಳೆದುಕೊಂಡ ನಂತರ ಅಥವಾ ಭಾರತದ ಚೇಸ್‌ನಲ್ಲಿ 120 ನಿಮಿಷಗಳು ಕಳೆದ ನಂತರ ಮಾತ್ರ ಅವರು ಬ್ಯಾಟಿಂಗ್ ಮಾಡಬಹುದಾಗಿದೆ. ಹಾರ್ದಿಕ್ ಅವರನ್ನು ಸ್ಕ್ಯಾನ್‌ಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದೆ.

ಬಾಂಗ್ಲಾ ತಂಡಕ್ಕೆ ಉತ್ತಮ ಆರಂಭ

ಇನ್ನು ಈ ಪಂದ್ಯದ ಕುರಿತು ಹೇಳುವುದಾದರೆ, ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿರುವ ಬಾಂಗ್ಲಾದೇಶ ತಂಡ ಉತ್ತಮ ಆರಂಭ ಪಡೆದುಕೊಂಡಿದೆ. ಆರಂಭಿಕರಾದ ತನ್ಜಿದ್ ಮತ್ತು ಲಿಟ್ಟನ್ ದಾಸ್ 93 ರನ್​ಗಳ ಜೊತೆಯಾಟ ನಡೆಸಿದ್ದಾರೆ. ಇದೇ ವೇಳೆ ಅರ್ಧಶತಕ ಪೂರೈಸಿದ ತನ್ಜಿದ್, ಕುಲ್ದೀಪ್ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಸುದ್ದಿ ಬರೆಯುವ ವೇಳೆಗೆ ಬಾಂಗ್ಲಾ ತಂಡ 1 ವಿಕೆಟ್ ಕಳೆದುಕೊಂಡು 101 ರನ್ ಕಲೆಹಾಕಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:16 pm, Thu, 19 October 23