IND vs ENG: ಇಂದು ಭಾರತ-ಇಂಗ್ಲೆಂಡ್ ಫೈನಲ್ ಫೈಟ್: ವಿಶ್ರಾಂತಿಗೂ ಮುನ್ನ ಕೊಹ್ಲಿಗೆ ಕೊನೆಯ ಪಂದ್ಯ
ENG vs IND 3rd ODI: ಮೊದಲ ಪಂದ್ಯದಲ್ಲಿ ಕೇವಲ 110 ರನ್ಗೆ ಆಲೌಟ್ ಆಗಿ ಹೀನಾಯ ಸೋಲು ಕಂಡಿದ್ದ ಇಂಗ್ಲೆಂಡ್ ದ್ವಿತೀಯ ಪಂದ್ಯದಲ್ಲಿ ಭಾರತವನ್ನು 146 ರನ್ಗೆ ಕಟ್ಟಿ ಹಾಕುವ ಮೂಲಕ ಭರ್ಜರಿ ಕಮ್ಬ್ಯಾಕ್ ಮಾಡಿತ್ತು. ಹೀಗಾಗಿ ತೃತೀಯ ಏಕದಿನದ ಮೇಲೆ ಎಲ್ಲರ ಕಣ್ಣು ಬಿದ್ದಿದೆ.
ಬಾಕಿ ಉಳಿದಿದ್ದ ಒಂದು ಟೆಸ್ಟ್ ಜೊತೆಗೆ ಟಿ20 ಮತ್ತು ಏಕದಿನ ಸರಣಿಗಾಗಿ ಆಂಗ್ಲರ ನಾಡಿಗೆ ತೆರಳಿರುವ ಟೀಮ್ ಇಂಡಿಯಾ (Team India) ಇಂದು ತನ್ನ ಪ್ರವಾಸವನ್ನು ಅಂತ್ಯಗೊಳಿಸಲಿದೆ. ಟೆಸ್ಟ್ ಸಮಲಗೊಂಡರೆ, ಟಿ20 ಸರಣಿಯನ್ನು 2-1 ಅಂತರದಿಂದ ಭಾರತ ವಶಪಡಿಸಿಕೊಂಡಿತ್ತು. ಇದೀಗ ಆಡಿರುವ ಎರಡು ಏಕದಿನ ಪಂದ್ಯಗಳಲ್ಲಿ ಉಭಯ ತಂಡಗಳು 1-1ರ ಸಮಬಲ ಸಾಧಿಸಿದ್ದು, ಇಂದು ನಡೆಯಲಿರುವ ಅಂತಿಮ ಫೈನಲ್ ಪಂದ್ಯದ ಮೇಲೆ ಎಲ್ಲರ ಕಣ್ಣಿದೆ. ಮ್ಯಾಂಚೆಸ್ಟರ್ನ (Manchester) ಎಮಿರೇಟ್ಸ್ ಓಲ್ಡ್ ಟ್ರಾಫಾರ್ಡ್ ಕ್ರೀಡಾಂಗಣದಲ್ಲಿ ಮೂರನೇ ಏಕದಿನ ಆಯೋಜಿಸಲಾಗಿದ್ದು, ಇಲ್ಲಿ ಗೆದ್ದ ತಂಡ ಸರಣಿ ವಶಪಡಿಸಿಕೊಳ್ಳಲಿದೆ. ಮೊದಲ ಪಂದ್ಯದಲ್ಲಿ ಕೇವಲ 110 ರನ್ಗೆ ಆಲೌಟ್ ಆಗಿ ಹೀನಾಯ ಸೋಲು ಕಂಡಿದ್ದ ಇಂಗ್ಲೆಂಡ್ ದ್ವಿತೀಯ ಪಂದ್ಯದಲ್ಲಿ ಭಾರತವನ್ನು (India vs England) 146 ರನ್ಗೆ ಕಟ್ಟಿ ಹಾಕುವ ಮೂಲಕ ಭರ್ಜರಿ ಕಮ್ಬ್ಯಾಕ್ ಮಾಡಿತ್ತು. ಹೀಗಾಗಿ ತೃತೀಯ ಏಕದಿನದ ಮೇಲೆ ಎಲ್ಲರ ಕಣ್ಣು ಬಿದ್ದಿದೆ.
ಮುಖ್ಯವಾಗಿ ಕಳಪೆ ಫಾರ್ಮ್ನಿಂದ ತತ್ತರಿಸಿರುವ ವಿರಾಟ್ ಕೊಹ್ಲಿ ವಿಶ್ರಾಂತಿಯ ಮೊರೆ ಹೋಗುವ ಮುನ್ನ ಆಡಲಿರುವ ಕೊನೆಯ ಪಂದ್ಯ ಇದಾಗಿದೆ. ಈ ಪಂದ್ಯವನ್ನು ಮುಗಿಸಿದ ಬಳಿಕ ಭಾರತ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಇದರಿಂದ ಕೊಹ್ಲಿಗೆ ಬ್ರೇಕ್ ನೀಡಲಾಗಿದೆ. ಹೀಗಾಗಿ ಇಂದು ಇವರ ಪ್ರದರ್ಶನ ಯಾವರೀತಿ ಇರಲಿದೆ ಎಂಬುದು ನೋಡಬೇಕಿದೆ. ಕೊಹ್ಲಿ ಜೊತೆಗೆ ರೋಹಿತ್, ಪಂತ್, ಹಾರ್ದಿಕ್, ಬುಮ್ರಾ ಮತ್ತು ಶಮಿಗೂ ವಿಶ್ರಾಂತಿ ನೀಡಲಾಗಿದೆ.
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಆರಂಭಿಕ ಜೋಡಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಮೊದಲ ಪಂದ್ಯದಲ್ಲಿ ಮಿಂಚಿದ್ದರೆ ಎರಡನೇ ಪಂದ್ಯದಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದರು. ಅನುಭವಿ ವಿರಾಟ್ ಕೊಹ್ಲಿ ಕೂಡ ಬೇಗನೆ ಔಟ್ ಆಗಿದ್ದು ದುಬಾರಿಯಾಯಿತು. ಮಧ್ಯಮ ಕ್ರಮಾಂಕದಲ್ಲಿಯೂ ದೊಡ್ಡ ಜೊತೆಯಾಟ ದಾಖಲಾಗಲಿಲ್ಲ. ವಿರಾಟ್, ತಂಡಕ್ಕೆ ಗೆಲುವಿನ ಕಾಣಿಕೆ ನೀಡುವಂತಹ ಇನಿಂಗ್ಸ್ ಆಡುವಲ್ಲಿಯೂ ವಿಫಲರಾಗುತ್ತಿದ್ದಾರೆ. ಅವರು ಲಯಕ್ಕೆ ಮರಳಿದರೆ ಆತಿಥೇಯ ಬೌಲರ್ಗಳಿಗೆ ಒತ್ತಡ ಬೀಳಬಹುದು.
ಆಲ್ರೌಂಡರ್ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಕೂಡ ನಿತ್ತು ಆಡಲು ಕಲಿಯಬೇಕಿದ. ಭಾರತ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಬುಮ್ರಾ, ಶಮಿ ಜೋಡಿ ವಿಕೆಟ್ ತಂದುಕೊಡುತ್ತಿದ್ದಾರೆ, ಚಹಲ್ ಸ್ಪಿನ್ ಮೋಡಿಕೂಡ ಚೆನ್ನಾಗಿ ವರ್ಕೌಟ್ ಆಗುತ್ತಿದೆ. ಟೀಮ್ ಇಂಡಿಯಾದಲ್ಲಿ ಇಂದಿನ ಪಂದ್ಯಕ್ಕೆ ಬದಲಾವಣೆ ಅನುಮಾನ ಎನ್ನಲಾಗಿದೆ.
ಇತ್ತ ಇಂಗ್ಲೆಂಡ್ ತಂಡದ ಸಮಸ್ಯೆಯೂ ಇದೇ ಭಾರತದಂತಿದೆ. ಎರಡೂ ಪಂದ್ಯಗಳಲ್ಲಿ ಬ್ಯಾಟರ್ಗಳಿಂದ ನಿರೀಕ್ಷಿತ ಆಟ ಮೂಡಿಬಂದಿಲ್ಲ. ಸ್ವತಃ ನಾಯಕ ಜೋಸ್ ಬಟ್ಲರ್ ರನ್ ಗಳಿಸದಿರುವುದು ತಂಡಕ್ಕೆ ದೊಡ್ಡ ಹಿನ್ನಡೆ. ಸ್ಟಾರ್ ಬ್ಯಾಟರ್ಗಳಾದ ಜಾನಿ ಬೈರ್ಸ್ಟೋ, ಜೋ ರೂಟ್, ಬೆನ್ ಸ್ಟೋಕ್ಸ್ ಕೂಡ ವೈಫಲ್ಯ ಅನುಭವಿಸಿದ್ದಾರೆ. ಕಳೆದ ಪಂದ್ಯದಲ್ಲಿ ಭಾರತದ 6 ವಿಕೆಟ್ ಕಿತ್ತ ರೀಸ್ ಟಾಪ್ಲಿ ಮೇಲೆ ಎಲ್ಲರ ಕಣ್ಣಿದೆ.
ಓಲ್ಡ್ ಟ್ರಾಫಾರ್ಡ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಇಲ್ಲಿಯವರೆಗೂ ಒಟ್ಟು 8 ಏಕದಿನ ಪಂದ್ಯಗಳನ್ನಾಡಿದ್ದು, ಈ ಪೈಕಿ ಟೀಮ್ ಇಂಡಿಯಾ 2 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಇಂಗ್ಲೆಂಡ್ ಉಳಿದ 6 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ. ನೇರ ಪ್ರಸಾರವನ್ನು ಸೋನಿ ನೆಟ್ವರ್ಕ್ನ ಚಾನೆಲ್ನಲ್ಲಿ ವೀಕ್ಷಿಸಬಹುದು.