137 ವರ್ಷಗಳಲ್ಲಿ ಒಮ್ಮೆ ಮಾತ್ರ… ಭಾರತದ ಗೆಲುವು ಬಹುತೇಕ ಖಚಿತ
India vs England 3rd Test: ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಉಭಯ ತಂಡಗಳು 387 ರನ್ ಕಲೆಹಾಕಿತು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡವು 192 ರನ್ಗಳಿಗೆ ಆಲೌಟ್ ಆಗಿದೆ. ಅದರಂತೆ ಇದೀಗ 193 ರನ್‌ಗಳ ಗುರಿ ಪಡೆದಿರುವ ಟೀಮ್ ಇಂಡಿಯಾ ನಾಲ್ಕನೇ ದಿನದಾಟದ ಅಂತ್ಯಕ್ಕೆ 58 ರನ್ಗಳಿಸಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯವು ಐದನೇ ದಿನದಾಟಕ್ಕೆ ಕಾಲಿಟ್ಟಿದೆ. ಐದನೇ ದಿನದಾಟದಲ್ಲಿ ಟೀಮ್ ಇಂಢಿಯಾ ಮುಂದೆ 135 ರನ್‌ಗಳ ಗುರಿಯಿದ್ದರೆ, ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 6 ವಿಕೆಟ್ಗಳ ಅವಶ್ಯತೆಯಿದೆ. ಹೀಗಾಗಿ ಅಂತಿಮ ದಿನದಾಟದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು ಪ್ರಥಮ ಇನಿಂಗ್ಸ್ನಲ್ಲಿ 387 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಟೀಮ್ ಇಂಡಿಯಾ ಕೂಡ 387 ರನ್ಗಳಿಸಲು ಶಕ್ತರಾದರು.
ಇತ್ತ ಯಾವುದೇ ಮುನ್ನಡೆಯಿಲ್ಲದೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವನ್ನು 192 ರನ್ಗಳಿಗೆ ಆಲೌಟ್ ಮಾಡುವಲ್ಲಿ ಟೀಮ್ ಇಂಡಿಯಾ ಬೌಲರ್ಗಳು ಯಶಸ್ವಿಯಾಗಿದ್ದಾರೆ. ಅದರಲ್ಲೂ ವಾಷಿಂಗ್ಟನ್ ಸುಂದರ್ 12.1 ಓವರ್ಗಳಲ್ಲಿ ಕೇವಲ 22 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದರು. ಅದರಂತೆ ದ್ವಿತೀಯ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ 193 ರನ್‌ಗಳ ಗುರಿ ಪಡೆಯಿತು.
ಈ ಸಾಧಾರಣ ಸವಾಲನ್ನು ಬೆನ್ನತ್ತಲು ಶುರು ಮಾಡಿದ ಟೀಮ್ ಇಂಡಿಯಾ ನಾಲ್ಕನೇ ದಿನದಾಟದ ಅಂತ್ಯದ ವೇಳೆ 4 ವಿಕೆಟ್ ಕಳೆದುಕೊಂಡಿದೆ. ಯಶಸ್ವಿ ಜೈಸ್ವಾಲ್ (0), ಕರುಣ್ ನಾಯರ್ (14), ಶುಭ್ಮನ್ ಗಿಲ್ (6) ಹಾಗೂ ಆಕಾಶ್ ದೀಪ್ (1) ಈಗಾಗಲೇ ವಿಕೆಟ್ ಒಪ್ಪಿಸಿದ್ದು, ಭಾರತ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 4 ವಿಕೆಟ್ ನಷ್ಟಕ್ಕೆ 58 ರನ್ ಕಲೆಹಾಕಿದೆ.
135 ರನ್‌ಗಳ ಗುರಿ:
ಐದನೇ ದಿನದಾಟದಲ್ಲಿ ಟೀಮ್ ಇಂಡಿಯಾ ಮುಂದಿರುವುದು 135 ರನ್‌ಗಳ ಗುರಿ. ಈ ಗುರಿ ಬೆನ್ನತ್ತಲು ಕ್ರೀಸ್ನಲ್ಲಿ ಕೆಎಲ್ ರಾಹುಲ್ (33) ಇದ್ದು, ಅವರೊಂದಿಗೆ ರಿಷಭ್ ಪಂತ್, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ ಹಾಗೂ ವಾಷಿಂಗ್ಟನ್ ಸುಂದರ್ ಬ್ಯಾಟರ್ಗಳಾಗಿ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ಹೀಗಾಗಿ ಅಂತಿಮ ದಿನದಾಟದಲ್ಲಿ ಭಾರತದ ಪಾಲಿಗೆ 135 ರನ್ಗಳು ಗುರಿ ಕಷ್ಟವೇನಲ್ಲ.
137 ವರ್ಷಗಳ ಇತಿಹಾಸ:
ಲಾರ್ಡ್ಸ್ ಮೈದಾನದಲ್ಲಿ ಕೊನೆಯ ಇನಿಂಗ್ಸ್ನಲ್ಲಿ 150 ರನ್ಗಳಿಗಿಂತ ಕಡಿಮೆ ಸ್ಕೋರ್ಗಳಿಸಿ ಒಂದು ತಂಡ ಮಾತ್ರ ಗೆಲುವು ದಾಖಲಿಸಿದೆ. ಅದು ಆಸ್ಟ್ರೇಲಿಯಾ. ಈ ಗೆಲುವು ದಕ್ಕಿರುವುದು 1888 ರಲ್ಲಿ. ಅಂದರೆ 137 ವರ್ಷಗಳ ಹಿಂದೆ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ವಿರುದ್ಧ 124 ರನ್ಗಳನ್ನು ರಕ್ಷಿಸಿಕೊಂಡು, ಗೆಲುವು ದಾಖಲಿಸಿತ್ತು.
ಇದಾದ ಬಳಿಕ ಯಾವುದೇ ತಂಡ 150 ಕ್ಕಿಂತ ಕಡಿಮೆ ಸ್ಕೋರ್ ಅನ್ನು ನಿಯಂತ್ರಿಸಿ ಗೆಲುವು ದಕ್ಕಿಸಿಕೊಂಡಿಲ್ಲ. ಇದರ ನಡುವೆ 1955 ರಲ್ಲಿ ಇಂಗ್ಲೆಂಡ್ ತಂಡವು ಸೌತ್ ಆಫ್ರಿಕಾ ತಂಡವನ್ನು 183 ರನ್‌ಗಳ ಗುರಿ ಬೆನ್ನಟ್ಟದಂತೆ ತಡೆದು ಗೆಲುವು ದಾಖಲಿಸಿದ ಇತಿಹಾಸ ಇದೆ.
ಅಂದರೆ ಇಲ್ಲಿ 200 ಕ್ಕಿಂತ ಕಡಿಮೆ ಸ್ಕೋರ್ ಅನ್ನು ನಿಯಂತ್ರಿಸಿ ಗೆಲುವು ದಾಖಲಿಸಿರುವುದು ಕೇವಲ 2 ಬಾರಿ ಮಾತ್ರ. ಹೀಗಾಗಿ ನಾಲ್ಕನೇ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುವ ತಂಡಕ್ಕೆ ಗೆಲ್ಲಲು ಉತ್ತಮ ಅವಕಾಶವಿದೆ.
ಅದರಲ್ಲೂ ಈಗ ಟೀಮ್ ಇಂಡಿಯಾ ಮುಂದಿರುವುದು ಕೇವಲ 135 ರನ್‌ಗಳ ಗುರಿ ಮಾತ್ರ. ಇತ್ತ ಟೀಮ್ ಇಂಡಿಯಾ ಪರ ಐವರು ಬ್ಯಾಟರ್ಗಳು ಬ್ಯಾಟ್ ಬೀಸಲಿದ್ದಾರೆ. ಹೀಗಾಗಿ ಭಾರತ ತಂಡವು ಕೊನೆಯ ದಿನದಾಟದಲ್ಲಿ 135 ರನ್ಗಳನ್ನು ಚೇಸ್ ಮಾಡುವುದು ಬಹುತೇಕ ಖಚಿತ ಎನ್ನಬಹುದು.
ಕೆಲ್ ರಾಹುಲ್ ಇನಿಂಗ್ಸ್ ನಿರ್ಣಾಯಕ:
ಇನ್ನು ಭಾರತ ತಂಡವು 135 ರನ್‌ಗಳ ಗುರಿಯನ್ನು ಬೆನ್ನತ್ತುವಲ್ಲಿ ಕೆಎಲ್ ರಾಹುಲ್ ಅವರ ಇನಿಂಗ್ಸ್ ನಿರ್ಣಾಯಕ ಪಾತ್ರವಹಿಸಲಿದೆ. ಏಕೆಂದರೆ ಮೊದಲ ಇನಿಂಗ್ಸ್ನಲ್ಲಿ ಶತಕ ಸಿಡಿಸಿರುವ ರಾಹುಲ್, ಇದೀಗ 33 ರನ್ಗಳೊಂದಿಗೆ ಅಜೇಯರಾಗಿ ಉಳಿದಿದ್ದಾರೆ. ಹೀಗಾಗಿ ಐದನೇ ದಿನದಾಟದಲ್ಲಿ ಅವರ ಇನಿಂಗ್ಸ್ ಪಂದ್ಯದ ಫಲಿತಾಂಶದ ಮೇಲೆ ನಿರ್ನಾಯಕ ಪಾತ್ರವಹಿಸಲಿದೆ.
ಇದನ್ನೂ ಓದಿ: T20 World Cup 2026: ಟಿ20 ವಿಶ್ವಕಪ್ಗೆ 15 ತಂಡಗಳು ಎಂಟ್ರಿ
ಒಂದೆಡೆ ಕೆಎಲ್ ರಾಹುಲ್ ಕ್ರೀಸ್ ಕಚ್ಚಿ ನಿಂತರೆ, ಮತ್ತೊಂದೆಡೆ ರಿಷಭ್ ಪಂತ್ ಸ್ಪೋಟಕ ಬ್ಯಾಟಿಂಗ್ನೊಂದಿಗೆ ರನ್ ಗತಿ ಹೆಚ್ಚಿಸಲಿದ್ದಾರೆ. ಈ ಮೂಲಕ 135 ರನ್‌ಗಳ ಗುರಿಯ ಒತ್ತಡವನ್ನು ಟೀಮ್ ಇಂಡಿಯಾ ಐದನೇ ದಿನದಾಟದ ಮೊದಲ ಸೆಷನ್ನಲ್ಲೇ ತೊಡೆದು ಹಾಕಬಹುದು. ಹೀಗಾಗಿ ಅಂತಿಮ ದಿನದಾಟದಲ್ಲಿ ಕೆಎಲ್ ರಾಹುಲ್ ಕ್ರೀಸ್ ಕಚ್ಚಿ ನಿಲ್ಲಬೇಕಾದ ಅನಿವಾರ್ಯತೆ ಕೂಡ ಟೀಮ್ ಇಂಡಿಯಾ ಮುಂದಿದೆ.
