
ಭಾರತ ಮತ್ತು ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ಪಂದ್ಯವು ನಾಲ್ಕನೇ ದಿನದಾಟಕ್ಕೆ ಕಾಲಿಟ್ಟಿದೆ. ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 224 ರನ್ ಕಲೆಹಾಕಿದ್ದರು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಇಂಗ್ಲೆಂಡ್ 247 ರನ್ಗಳಿಸಿ ಆಲೌಟ್ ಆಗಿತ್ತು.
23 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ (118) ಭರ್ಜರಿ ಶತಕ ಸಿಡಿಸಿದರು. ಆ ಬಳಿಕ ರವೀಂದ್ರ ಜಡೇಜಾ (53) ಹಾಗೂ ವಾಷಿಂಗ್ಟನ್ ಸುಂದರ್ (53) ಹಾಫ್ ಸೆಂಚುರಿಗಳನ್ನು ಬಾರಿಸಿದ್ದಾರೆ. ಈ ಮೂಲಕ ಭಾರತ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ ಬರೋಬ್ಬರಿ 396 ರನ್ ಕಲೆಹಾಕಿದೆ.
ಅತ್ತ ಮೊದಲ ಇನಿಂಗ್ಸ್ನಲ್ಲಿ 23 ರನ್ಗಳ ಮುನ್ನಡೆ ಹೊಂದಿದ್ದ ಇಂಗ್ಲೆಂಡ್ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 374 ರನ್ಗಳ ಗುರಿ ಪಡೆದುಕೊಂಡಿದೆ. ಈ ಗುರಿಯನ್ನು ಬೆನ್ನತ್ತಲು ಆರಂಭಿಸಿರುವ ಇಂಗ್ಲೆಂಡ್ ತಂಡವು ಮೊದಲ ದಿನದಾಟದ ಮುಕ್ತಾಯದ ವೇಳೆಗೆ 1 ವಿಕೆಟ್ ಕಳೆದುಕೊಂಡು 50 ರನ್ ಕಲೆಹಾಕಿದೆ.
ಇನ್ನು ಎರಡು ದಿನದಾಟಗಳು ಬಾಕಿಯಿದ್ದು, ಇದರ ನಡುವೆ ಇಂಗ್ಲೆಂಡ್ 324 ರನ್ಗಳಿಸಿದರೆ ಪಂದ್ಯವನ್ನು ಗೆಲ್ಲಬಹುದು. ಅದರೊಳಗೆ ಟೀಮ್ ಇಂಡಿಯಾ ಕೇವಲ 8 ವಿಕೆಟ್ ಕಬಳಿಸಿದರೆ ಸಾಕು ಜಯಭೇರಿ ಬಾರಿಸಬಹುದು.
ಏಕೆಂದರೆ ಈ ಪಂದ್ಯದಿಂದ ಇಂಗ್ಲೆಂಡ್ ಆಲ್ರೌಂಡರ್ ಕ್ರಿಸ್ ವೋಕ್ಸ್ ಹೊರಗುಳಿದಿದ್ದಾರೆ. ದ್ವಿತೀಯ ದಿನದಾಟದಲ್ಲಿ ಫೀಲ್ಡಿಂಗ್ ವೇಳೆ ವೋಕ್ಸ್ ಅವರ ಭುಜಕ್ಕೆ ಗಂಭೀರವಾದ ಗಾಯವಾಗಿದ್ದು, ಹೀಗಾಗಿ ಅವರು ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇದೇ ಕಾರಣದಿಂದಾಗಿ ಅವರು ಮೊದಲ ಇನಿಂಗ್ಸ್ನಲ್ಲಿ ಬ್ಯಾಟ್ ಮಾಡಿರಲಿಲ್ಲ.
ಅಲ್ಲದೆ ಗಂಭೀರ ಗಾಯವಾಗಿರುವ ಕಾರಣ ಅವರು ದ್ವಿತೀಯ ಇನಿಂಗ್ಸ್ನಲ್ಲಿ ಬೌಲಿಂಗ್ ಸಹ ಮಾಡಿರಲಿಲ್ಲ. ಅತ್ತ ಐಸಿಸಿ ನಿಯಮದ ಪ್ರಕಾರ, ಕನ್ಕ್ಯುಶನ್ ಸಬ್ಸ್ಟಿಟ್ಯೂಟ್ ಆಯ್ಕೆ ಕೂಡ ಇಂಗ್ಲೆಂಡ್ ತಂಡದ ಮುಂದಿಲ್ಲ.
ಏಕೆಂದರೆ ಪಂದ್ಯದ ನಡುವೆ ಆಟಗಾರನ ತಲೆಯ ಭಾಗಕ್ಕೆ ಅಥವಾ ಕುತ್ತಿಗೆಯ ಭಾಗಕ್ಕೆ ಗಾಯವಾದರೆ ಕನ್ಕ್ಯುಶನ್ ಸಬ್ಸ್ಟಿಟ್ಯೂಟ್ ಆಯ್ಕೆ ಮೂಲಕ ಬದಲಿ ಆಟಗಾರನನ್ನು ಕಣಕ್ಕಿಳಿಸಬಹುದು. ಇದರ ಹೊರತಾಗಿ ಯಾವುದೇ ಗಾಯವಾದರೂ ಬದಲಿ ಆಟಗಾರನನ್ನು ಬೌಲಿಂಗ್ಗೆ ಅಥವಾ ಬ್ಯಾಟಿಂಗ್ಗೆ ಬಳಸಿಕೊಳ್ಳಲು ಐಸಿಸಿ ಅವಕಾಶ ನೀಡಿಲ್ಲ.
ಹೀಗಾಗಿ ದ್ವಿತೀಯ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡಕ್ಕೆ ಬದಲಿಯಾಗಿ 11ನೇ ಬ್ಯಾಟರ್ನನ್ನು ಬಳಸಿಕೊಳ್ಳಲು ಅವಕಾಶವಿಲ್ಲ. ಅದರಂತೆ ಇಂಗ್ಲೆಂಡ್ ತಂಡವು ಇನಿಂಗ್ಸ್ನಲ್ಲಿ 10 ಬ್ಯಾಟರ್ಗಳೊಂದಿಗೆ ಗುರಿ ಬೆನ್ನತ್ತಬೇಕಿದೆ.
ಇದನ್ನೂ ಓದಿ: 46 ವರ್ಷಗಳ ಬಳಿಕ ಟೀಮ್ ಇಂಡಿಯಾದ ಶತಕಗಳ ದಾಖಲೆ ಮುರಿದ ಯಂಗ್ ಇಂಡಿಯಾ
ಇತ್ತ ಮೊದಲ ವಿಕೆಟ್ ಪಡೆದಿರುವ ಟೀಮ್ ಇಂಡಿಯಾ ಇನ್ನು 8 ವಿಕೆಟ್ ಉರುಳಿಸಿದರೆ, ಒಟ್ಟು 9 ವಿಕೆಟ್ನೊಂದಿಗೆ ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡಬಹುದು. ಅದರಂತೆ ಇಂದಿನ ದಿನದಾಟದಲ್ಲಿ ಭಾರತೀಯ ಬೌಲರ್ಗಳು ಕೇವಲ 8 ವಿಕೆಟ್ ಕಬಳಿಸಿದರೆ ಸಾಕು ಪಂದ್ಯವನ್ನು ಗೆಲ್ಲಬಹುದು.