ಭಾರತ ಮತ್ತು ಇಂಗ್ಲೆಂಡ್ (India vs England) ನಡುವಣ 5ನೇ ಟೆಸ್ಟ್ ಪಂದ್ಯ ನಾಳೆಯಿಂದ (ಫೆ.7) ಶುರುವಾಗಲಿದೆ. ಧರ್ಮಶಾಲಾದ ಹೆಚ್ಪಿಸಿಎ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಆಟಗಾರ ರವಿಚಂದ್ರನ್ ಅಶ್ವಿನ್ ಹಾಗೂ ಇಂಗ್ಲೆಂಡ್ ಬ್ಯಾಟರ್ ಜಾನಿ ಬೈರ್ಸ್ಟೋವ್ ವಿಶೇಷ ಮೈಲುಗಲ್ಲು ದಾಟಲಿದ್ದಾರೆ.
ಹೌದು, ಈ ಪಂದ್ಯವು ಬೈರ್ಸ್ಟೋವ್ ಹಾಗೂ ಅಶ್ವಿನ್ ಅವರ 100ನೇ ಟೆಸ್ಟ್ ಪಂದ್ಯ. ಅಂದರೆ ಒಂದೇ ಪಂದ್ಯದ ಮೂಲಕ ಉಭಯ ತಂಡಗಳ ಆಟಗಾರರು ನೂರು ಟೆಸ್ಟ್ ಪಂದ್ಯಗಳನ್ನಾಡಿದ ವಿಶೇಷ ಸಾಧನೆ ಮಾಡಲಿದ್ದಾರೆ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಆಟಗಾರರು ಒಂದೇ ಪಂದ್ಯದ ಮೂಲಕ 100 ಮ್ಯಾಚ್ಗಳ ಸಾಧನೆ ಮಾಡಿದ್ದು ಕೇವಲ 3 ಬಾರಿ ಮಾತ್ರ. ಇದೀಗ ಈ ಸಾಧನೆ ಮಾಡಲಿರುವ ನಾಲ್ಕನೇ ಜೋಡಿಯಾಗಿ ಅಶ್ವಿನ್-ಬೈರ್ಸ್ಟೋವ್ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ: IPL 2024: 10 ತಂಡಗಳ ನಾಯಕರುಗಳ ಪಟ್ಟಿ ಇಲ್ಲಿದೆ
ಧರ್ಮಶಾಲಾದಲ್ಲಿ ನಡೆಯಲಿರುವ ಐದನೇ ಟೆಸ್ಟ್ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ಔಪಚಾರಿಕ ಪಂದ್ಯ. ಏಕೆಂದರೆ ಐದು ಪಂದ್ಯಗಳ ಈ ಸರಣಿಯಲ್ಲಿ ಭಾರತ ತಂಡವು 3 ಪಂದ್ಯಗಳನ್ನು ಗೆದ್ದುಕೊಂಡಿದೆ. ಇನ್ನು ಒಂದು ಪಂದ್ಯದಲ್ಲಿ ಇಂಗ್ಲೆಂಡ್ ಜಯ ಸಾಧಿಸಿದೆ. ಇದೀಗ 3-1 ಅಂತರದಿಂದ ಟೀಮ್ ಇಂಡಿಯಾ ಸರಣಿ ವಶಪಡಿಸಿಕೊಂಡಿದ್ದು, ಹೀಗಾಗಿ ಕೊನೆಯ ಪಂದ್ಯವು ಸರಣಿಯ ಫಲಿತಾಂಶವನ್ನು ಬದಲಿಸುವುದಿಲ್ಲ. ಅಲ್ಲದೆ ಸೋತರೂ, ಗೆದ್ದರೂ ಭಾರತ ತಂಡ ಟ್ರೋಫಿ ಎತ್ತಿ ಹಿಡಿಯಲಿದೆ. ಹೀಗಾಗಿ ಈ ಮ್ಯಾಚ್ ಭಾರತದ ಪಾಲಿಗೆ ಔಪಚಾರಿಕ ಪಂದ್ಯವಾಗಿದೆ.