ಬಾಝ್ ಬಾಲ್ಗೆ ಭಯ… ಹೊಸ ಪಿಚ್ಗೆ ಡಿಮ್ಯಾಂಡ್ ಮಾಡಿದ ಇಂಗ್ಲೆಂಡ್ ಕೋಚ್
England vs India Test: ಭಾರತದ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್ನಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ಭರ್ಜರಿ ಗೆಲುವು ದಾಖಲಿಸಿತ್ತು. ಇನ್ನು ಎಡ್ಜ್ಬಾಸ್ಟನ್ನಲ್ಲಿ ಜರುಗಿದ ದ್ವಿತೀಯ ಪಂದ್ಯದಲ್ಲಿ ಆಂಗ್ಲರನ್ನು ಬಗ್ಗು ಬಡಿಯುವ ಮೂಲಕ ಟೀಮ್ ಇಂಡಿಯಾ ಹೊಸ ಇತಿಹಾಸ ನಿರ್ಮಿಸಿದೆ. ಇದೀಗ ಉಭಯ ತಂಡಗಳು ಮೂರನೇ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಪಂದ್ಯಕ್ಕೆ ಬೌಲಿಂಗ್ ಪಿಚ್ ನಿರ್ಮಿಸುವಂತೆ ಆಂಗ್ಲ ತಂಡದ ಮುಖ್ಯ ಕೋಚ್ ಬ್ರೆಂಡನ್ ಮೆಕಲಂ ಮನವಿ ಮಾಡಿದ್ದಾರೆ. ಜುಲೈ 10 ರಿಂದ ಲಾರ್ಡ್ಸ್ ಮೈದಾನದಲ್ಲಿ ಶುರುವಾಗಲಿರುವ ಈ ಪಂದ್ಯಕ್ಕಾಗಿ ಸಂಪೂರ್ಣ ಬೌಲಿಂಗ್ಗೆ ಸಹಕಾರಿಯಾಗುವಂತೆ ಪಿಚ್ ಸಿದ್ಧಪಡಿಸಬೇಕೆಂದು ಮೆಕಲಂ, ಮೈದಾನ ಸಿಬ್ಬಂದಿ ಕಾರ್ಲ್ ಮೆಕ್‌ಡರ್ಮೊಟ್ ಅವರನ್ನು ಒತ್ತಾಯಿಸಿದ್ದಾರೆ. ಹೀಗಾಗಿ ಲಾರ್ಡ್ಸ್ ಮೈದಾನದಲ್ಲಿ ಬೌಲಿಂಗ್ ಪಿಚ್ ಕಾಣಿಸಿಕೊಳ್ಳುವುದು ಖಚಿತ.
ಇದಕ್ಕೂ ಮುನ್ನ ಹೆಡಿಂಗ್ಲೆ ಹಾಗೂ ಎಡ್ಜ್ಬಾಸ್ಟನ್ನಲ್ಲಿ ಫ್ಲಾಟ್ ಪಿಚ್ಗಳನ್ನು ನಿರ್ಮಿಸಲಾಗಿತ್ತು. ಇದರಿಂದ ಬ್ಯಾಟರ್ಗಳು ಅಬ್ಬರಿಸಿದ್ದರು. ಅದರಲ್ಲೂ ಭಾರತೀಯ ಬ್ಯಾಟರ್ಗಳ ಆರ್ಭಟಕ್ಕೆ ಇಂಗ್ಲೆಂಡ್ ತಂಡಕ್ಕೆ ಲೆಕ್ಕಾಚಾರಗಳು ತಲೆಕೆಳಗಾಗಿದ್ದವು. ಹೀಗಾಗಿ ಮೂರನೇ ಪಂದ್ಯಕ್ಕಾಗಿ ಬೌಲಿಂಗ್ ಪಿಚ್ ನಿರ್ಮಿಸುವಂತೆ ಇಂಗ್ಲೆಂಡ್ ಕೋಚ್ ಮನವಿ ಮಾಡಿದ್ದಾರೆ.
ಬ್ರೆಂಡನ್ ಮೆಕಲಂ, ವೇಗದ ಬೌಲಿಂಗ್ ಹಾಗೂ ಬೌನ್ಸ್ಗೆ ನೆರವಾಗುವಂತಹ ಪಿಚ್ ಅನ್ನು ಸಿದ್ಧಪಡಿಸಲು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಏಕೆಂದರೆ ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್ ಘಾತಕ ವೇಗಿ ಜೋಫ್ರಾ ಆರ್ಚರ್ ಅವರನ್ನು ಕಣಕ್ಕಿಳಿಸುವುದು ಖಚಿತ. ಇವರೊಂದಿಗೆ ಗಸ್ ಅಟ್ಕಿಸನ್ ಕೂಡ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಈ ಮೂಲಕ ವೇಗದ ಬೌಲರ್ಗಳೊಂದಿಗೆ ಭಾರತೀಯ ಬ್ಯಾಟರ್ಗಳನ್ನು ಕಟ್ಟಿ ಹಾಕಲು ಪ್ಲ್ಯಾನ್ ರೂಪಿಸಲಾಗುತ್ತಿದೆ.
ಬಾಝ್ ಬಾಲ್ಗೆ ಶುರುವಾಯಿತು ಭಯ:
ಹೆಡಿಂಗ್ಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಚೇಸಿಂಗ್ಗೆ ಅನುಕೂಲವಾಗುಂತೆ ಬ್ಯಾಟಿಂಗ್ ಸ್ನೇಹಿ ಪಿಚ್ ನಿರ್ಮಿಸಲಾಗಿತ್ತು. ಅದರಂತೆ ಆ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಇದೇ ತಂತ್ರದೊಂದಿಗೆ ಎಡ್ಜ್ಬಾಸ್ಟನ್ನಲ್ಲಿ ಫ್ಲಾಟ್ ಪಿಚ್ ನಿರ್ಮಿಸಲಾಗಿತ್ತು. ಆದರೆ ಈ ಬಾರಿ ಟೀಮ್ ಇಂಡಿಯಾ ಬ್ಯಾಟರ್ಗಳು ಆಂಗ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದರು.
ಆರಂಭದಲ್ಲಿ ಯಶಸ್ವಿ ಜೈಸ್ವಾಲ್ ಅಬ್ಬರಿಸಿದರೆ, ಆ ಬಳಿಕ ಶುಭ್ಮನ್ ಗಿಲ್, ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಮೂಲಕ ಭಾರತ ತಂಡವು ಆತಿಥೇಯರಿಗೆ ಕೊನೆಯ ಇನಿಂಗ್ಸ್ನಲ್ಲಿ 608 ರನ್ಗಳ ಗುರಿ ನೀಡಿದ್ದರು. ಟೀಮ್ ಇಂಡಿಯಾ ನೀಡಿದ ಈ ಕಠಿಣ ಗುರಿ ನೋಡಿಯೇ ಒತ್ತಡಕ್ಕೊಳಗಾಗಿದ್ದ ಆಂಗ್ಲರು ಕೇವಲ 271 ರನ್ಗಳಿಸಿ ಆಲೌಟ್ ಆಗಿದ್ದರು.
ಇತ್ತ ಬಾಝ್ ಬಾಲ್ ಹೆಸರಿನೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿರುವ ಇಂಗ್ಲೆಂಡ್ ತಂಡವು ಟೀಮ್ ಇಂಡಿಯಾ ಕಡೆಯಿಂದ ಕೊನೆಯ ಇನಿಂಗ್ಸ್ನಲ್ಲಿ ಇಂತಹದೊಂದು ಕಠಿಣ ಗುರಿಯನ್ನು ನಿರೀಕ್ಷಿಸಿರಲಿಲ್ಲ. ಇದೀಗ ಭಾರತ ತಂಡದ ರಣತಂತ್ರ ಯಶಸ್ವಿಯಾಗಿರುವ ಕಾರಣ, ಟೀಮ್ ಇಂಡಿಯಾ ಮುಂದಿನ ಮೂರು ಪಂದ್ಯಗಳಲ್ಲೂ ಇದೇ ಯೋಜನೆಯನ್ನು ಮುಂದುವರೆಸುವ ಸಾಧ್ಯತೆಯಿದೆ. ಅಂದರೆ ಬೃಹತ್ ಮೊತ್ತ ಪೇರಿಸಿ ಆಂಗ್ಲರನ್ನು ಇಕ್ಕಟಿಗೆ ಸಿಲುಕಿಸುವ ಹೊಸ ರಣತಂತ್ರ.
ಇಂತಹದೊಂದು ರಣತಂತ್ರ ಕಾರ್ಯರೂಪಕ್ಕೆ ಬರುವ ಸೂಚನೆ ಸಿಗುತ್ತಿದ್ದಂತೆ ಇಂಗ್ಲೆಂಡ್ ಬೌಲಿಂಗ್ ಪಿಚ್ನತ್ತ ಮುಖ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿಯೇ ಲಾರ್ಡ್ಸ್ ಮೈದಾನದಲ್ಲಿ ವೇಗಿಗಳಿಗೆ ಸಹಕಾರಿಯಾಗುವಂತೆ ಬೌನ್ಸಿ ಪಿಚ್ ನಿರ್ಮಿಸುವಂತೆ ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕಲಂ ಆಗ್ರಹಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಬ್ಯಾಟಿಂಗ್ ಬಲವನ್ನು ತಗ್ಗಿಸುವ ತಂತ್ರಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: CSK ತಂಡವನ್ನು ಹಿಂದಿಕ್ಕಿದ RCB
ಅತ್ತ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ ಕಣಕ್ಕಿಳಿಯುತ್ತಿದ್ದರೆ, ಇತ್ತ ಟೀಮ್ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ ಆಡಲಿದ್ದಾರೆ. ಹೀಗಾಗಿ ಕ್ರಿಕೆಟ್ ಕಾಶಿಯಲ್ಲಿ ಬೌಲರ್ಗಳ ಪರಾಕ್ರಮವನ್ನು ನಿರೀಕ್ಷಿಸಬಹುದು.
