T20 Blast: 6 ಎಸೆತಗಳಲ್ಲಿ 6 ವಿಕೆಟ್..!
T20 Blast 2025: ಇಂಗ್ಲೆಂಡ್ನಲ್ಲಿ ಒಂದೆಡೆ ಟೆಸ್ಟ್ ಕ್ರಿಕೆಟ್ ನಡೆಯುತ್ತಿದ್ದರೆ, ಮತ್ತೊಂದೆಡೆ ಟಿ20 ಟೂರ್ನಿ ಜರುಗುತ್ತಿದೆ. ಇತ್ತ ಟೆಸ್ಟ್ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿಯಾದರೆ, ಅತ್ತ ಕೌಂಟಿ ಕ್ರಿಕೆಟ್ನಲ್ಲಿ ಹಲವು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಇದರ ನಡುವೆ ಟಿ20 ಬ್ಲಾಸ್ಟ್ ಟೂರ್ನಿಯಲ್ಲೂ ಭರ್ಜರಿ ಪ್ರದರ್ಶನ ಕಂಡು ಬರುತ್ತಿದೆ.

ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್ ಟೂರ್ನಿಯಲ್ಲಿ ಲಂಕಾಶೈರ್ ತಂಡವು ವಿಶೇಷ ದಾಖಲೆ ನಿರ್ಮಿಸಿದೆ. ಅದು ಕೂಡ 6 ಎಸೆತಗಳಲ್ಲಿ 6 ವಿಕೆಟ್ ಕಬಳಿಸುವ ಮೂಲಕ. ಆದರೆ ಹೀಗೆ ಆರು ವಿಕೆಟ್ಗಳನ್ನು ಪಡೆದಿರುವುದು 2 ಮ್ಯಾಚ್ಗಳಲ್ಲಿ ಎಂಬುದು ವಿಶೇಷ. ನಾರ್ಥಂಪ್ಟನ್ನ ಕೌಂಟಿ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ನಾರ್ಥಾಂಪ್ಟನ್‌ಶೈರ್ ಮತ್ತು ಲಂಕಾಶೈರ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನಾರ್ಥಾಂಪ್ಟನ್‌ಶೈರ್ 19 ಓವರ್ಗಳಲ್ಲಿ 177 ರನ್ ಕಲೆಹಾಕಿದ್ದರು. ಆದರೆ ಕೊನೆಯ ಓವರ್ನ ಅಂತಿಮ 4 ಎಸೆತಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಳ್ಳುವ ಮೂಲಕ ಆಲೌಟ್ ಆದರು. 20ನೇ ಓವರ್ನ 3ನೇ ಎಸೆತದಲ್ಲಿ ಸೈಫ್ ಝೈಬ್ ಅವರನ್ನು ಜೋಸ್ ಬಟ್ಲರ್ ರನೌಟ್ ಮಾಡಿದರು. ಸಾಕಿಬ್ ಮಹಮೂದ್ ಎಸೆದ 4ನೇ ಎಸೆತದಲ್ಲಿ ಸಂಡರ್ಸನ್ (0) ಬೌಲ್ಡ್ ಆದರು. ಇನ್ನು 5ನೇ ಎಸೆತದಲ್ಲಿ ಲೌಯ್ಡ್ ಪೋಪ್ (0) ಕೂಡ ಕ್ಲೀನ್ ಬೌಲ್ಡ್ ಆದರು. 6ನೇ ಎಸೆತದಲ್ಲಿ ಸ್ಕ್ರೀಮ್ಶೌ (0) ಕ್ಯಾಚ್ ನೀಡಿದರು. ಸಾಕಿಬ್ ಮಹಮೂದ್ ಅವರ ಈ ಹ್ಯಾಟ್ರಿಕ್ನೊಂದಿಗೆ ಲಂಕಾಶೈರ್ ತಂಡವು ಅಂತಿಮ ಓವರ್ನಲ್ಲಿ 4 ವಿಕೆಟ್ ಕಬಳಿಸಿ ಮಿಂಚಿದರು.
ಇದಾದ ಬಳಿಕ ಮರುದಿನ ನಡೆದ ಮತ್ತೊಂದು ಪಂದ್ಯದಲ್ಲಿ ಲಂಕಾಶೈರ್ ಹಾಗೂ ಡರ್ಬಿಶೈರ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದ ದ್ವಿತೀಯ ಇನಿಂಗ್ಸ್ ಮೊದಲ ಓವರ್ನ ಮೊದಲ ಎಸೆತದಲ್ಲೇ ಲ್ಯೂಕ್ ವುಡ್, ಕಲೆಬ್ ಜುವೆಲ್ (0) ಅವರ ವಿಕೆಟ್ ಕಬಳಿಸಿದರು. ಎರಡನೇ ಎಸೆತದಲ್ಲಿ ಮಾರ್ಟಿನ್ ಅ್ಯಂಡರ್ಸನ್ (0) ಕ್ಲೀನ್ ಬೌಲ್ಡ್ ಆದರು.
ಈ ಎರಡು ವಿಕೆಟ್ಗಳೊಂದಿಗೆ ಟಿ20 ಬ್ಲಾಸ್ಟ್ ಟೂರ್ನಿಯಲ್ಲಿ 6 ಎಸೆತಗಳಲ್ಲಿ 6 ವಿಕೆಟ್ ಕಬಳಿಸಿದ ಮೊದಲ ತಂಡವೆಂಬ ಕೀರ್ತಿಯನ್ನು ಲಂಕಾಶೈರ್ ತನ್ನದಾಗಿಸಿಕೊಂಡಿತು. ಅಂದರೆ ನಾರ್ಥಾಂಪ್ಟನ್‌ಶೈರ್ ವಿರುದ್ಧದ ಪಂದ್ಯ ಕೊನೆಯ ಓವರ್ನಲ್ಲಿ 4 ವಿಕೆಟ್ ಕಬಳಿಸಿದ ಲಂಕಾಶೈರ್, ಡರ್ಬಿಶೈರ್ ವಿರುದ್ಧದ ಪಂದ್ಯದ ಮೊದಲ ಎರಡು ಎಸೆತಗಳಲ್ಲಿ 2 ವಿಕೆಟ್ ಕಬಳಿಸಿ ಈ ಸಾಧನೆ ಮಾಡಿದ್ದಾರೆ.
ಲಂಕಾಶೈರ್ ಬೌಲರ್ಗಳ ಪರಾಕ್ರಮ:
ಇನ್ನು ಈ ಎರಡೂ ಪಂದ್ಯಗಳಲ್ಲೂ ಲಂಕಾ ಶೈರ್ ತಂಡವು ಭರ್ಜರಿ ಜಯ ಸಾಧಿಸಿದೆ. ನಾರ್ಥಂಪ್ಟನ್ ತಂಡ ನೀಡಿದ 178 ರನ್ಗಳ ಗುರಿಯನ್ನು ಲಂಕಾಶೈರ್ ತಂಡವು 19.3 ಓವರ್ಗಳಲ್ಲಿ ಚೇಸ್ ಮಾಡಿ 5 ವಿಕೆಟ್ಗಳ ಗೆಲುವು ದಾಖಲಿಸಿದೆ. ಹಾಗೆಯೇ ಡರ್ಬಿಶೈರ್ ವಿರುದ್ಧದ ಮ್ಯಾಚ್ನಲ್ಲಿ 42 ರನ್ಗಳ ಗೆಲುವು ಸಾಧಿಸುವಲ್ಲಿ ಲಂಕಾಶೈರ್ ಪಡೆ ಯಶಸ್ವಿಯಾಗಿದೆ.
ಇದನ್ನೂ ಓದಿ: CSK ತಂಡವನ್ನು ಹಿಂದಿಕ್ಕಿದ RCB
ಲಂಕಾಶೈರ್ ಪ್ಲೇಯಿಂಗ್ ಇಲೆವೆನ್: ಫಿಲಿಪ್ ಸಾಲ್ಟ್ , ಕೀಟನ್ ಜೆನ್ನಿಂಗ್ಸ್ (ನಾಯಕ) , ಜೋಸ್ ಬಟ್ಲರ್ (ವಿಕೆಟ್ ಕೀಪರ್) , ಲಿಯಾಮ್ ಲಿವಿಂಗ್‌ಸ್ಟೋನ್ , ಲ್ಯೂಕ್ ವೆಲ್ಸ್ , ಆಷ್ಟನ್ ಟರ್ನರ್ , ಮೈಕೆಲ್ ಜೋನ್ಸ್ , ಕ್ರಿಸ್ ಗ್ರೀನ್ , ಜ್ಯಾಕ್ ಬ್ಲೇಥರ್‌ವಿಕ್ , ಸಾಕಿಬ್ ಮಹಮೂದ್ , ಲ್ಯೂಕ್ ವುಡ್
Published On - 7:58 am, Wed, 9 July 25
