
ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟಿ20 ಪಂದ್ಯವು ಮಳೆಗೆ ಆಹುತಿಯಾಗಿದೆ. ಚೆಸ್ಟರ್-ಲೆ-ಸ್ಟ್ರೀಟ್ನ ರಿವರ್ಸೈಡ್ ಮೈದಾನದಲ್ಲಿ ನಡೆಯಬೇಕಿದ್ದ ಈ ಪಂದ್ಯವು ಮೊದಲ ಇನಿಂಗ್ಸ್ಗೆ ಮಾತ್ರ ಸೀಮಿವಾಯಿತು. ಇದರೊಂದಿಗೆ ಈ ಮೈದಾನದಲ್ಲಿ ಭಾರತ ಹಾಗೂ ಇಂಗ್ಲೆಂಡ್ ಮುಖಾಮುಖಿಯಾದ ಎಲ್ಲಾ ಮೂರೂ ಸೀಮಿತ ಓವರ್‌ಗಳ ಪಂದ್ಯಗಳು ಮಳೆಗೆ ಆಹುತಿಯಾದ ಅಪರೂಪದ ಹ್ಯಾಟ್ರಿಕ್ ನಿರ್ಮಾಣವಾಗಿದೆ.
ಭಾರತ ತಂಡವು ಚೆಸ್ಟರ್-ಲೆ-ಸ್ಟ್ರೀಟ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ಹಿಂದಿನ ಇತಿಹಾಸವನ್ನು ಗಮನಿಸಿದರೆ, ಈ ಮೈದಾನ ಸದಾ ನಿರಾಸೆಯನ್ನೇ ನೀಡಿದೆ. ಅಂದರೆ ಭಾರತ ತಂಡವು ಇಲ್ಲಿ ಆಡಿದಾಗ ಪ್ರತಿ ಮ್ಯಾಚ್ ಕೂಡ ಮಳೆಯಿಂದ ರದ್ದಾಗಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಆರಂಭದಲ್ಲೇ 6 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಆ ನಂತರ ಟೀಮ್ ಇಂಡಿಯಾ ಬ್ಯಾಟರ್ಗಳು ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿ ಆರ್ಭಟ ಶುರು ಮಾಡಿದರು.
ಈ ಮೂಲಕ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 189 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ಭಾರತದ ಇನ್ನಿಂಗ್ಸ್ ಮುಗಿಯುತ್ತಿದ್ದಂತೆ ಭಾರಿ ಮಳೆ ಆರಂಭವಾಯಿತು. ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಆರಂಭವಾಗಲು ಸಾಧ್ಯವೇ ಆಗದಷ್ಟು ಮಳೆ ಸುರಿದಿದ್ದರಿಂದ, ಸ್ಥಳೀಯ ಕಾಲಮಾನ ರಾತ್ರಿ 8:15 ಕ್ಕೆ ಅಂಪೈರ್‌ಗಳು ಪಂದ್ಯವನ್ನು ಅಧಿಕೃತವಾಗಿ ರದ್ದುಗೊಳಿಸಿದರು. ಇದರಿಂದಾಗಿ 5 ಪಂದ್ಯಗಳ ಟಿ20 ಸರಣಿಯು ಸದ್ಯಕ್ಕೆ 0-0 ಯಿಂದ ಸಮಬಲದಲ್ಲಿದೆ.
ಸರಣಿಯ ಎರಡನೇ ಟಿ20 ಪಂದ್ಯವು ಶನಿವಾರ (ಜು.4) ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದ್ದು, ಅಲ್ಲಿಯಾದರೂ ಮಳೆಯ ಅಡ್ಡಿಯಿಲ್ಲದೆ ಪೂರ್ಣ ಪಂದ್ಯ ವೀಕ್ಷಿಸಲು ಸಿಗಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.
ಭಾರತ ಪ್ಲೇಯಿಂಗ್ 11: ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.
ಇದನ್ನೂ ಓದಿ: ‘ಕಾರ್ಟೂನ್’ ಕಟ್ಟಿದ ಫುಟ್ಬಾಲ್ ತಂಡ: ಇದು ಜಪಾನಿನ ಕಾಲ್ಚೆಂಡು ಕಥೆ!
ಇಂಗ್ಲೆಂಡ್ ಪ್ಲೇಯಿಂಗ್ 11: ಫಿಲ್ ಸಾಲ್ಟ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಹ್ಯಾರಿ ಬ್ರೂಕ್ (ನಾಯಕ), ಜೇಕಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಲಿಯಾಮ್ ಡಾಸನ್, ಆದಿಲ್ ರಶೀದ್, ಲ್ಯೂಕ್ ವುಡ್, ಸಾಕಿಬ್ ಮಹಮೂದ್.