‘ಕಾರ್ಟೂನ್’ ಕಟ್ಟಿದ ಫುಟ್‌ಬಾಲ್ ತಂಡ: ಇದು ಜಪಾನಿನ ಕಾಲ್ಚೆಂಡು ಕಥೆ!
FIFA World Cup 2026: 2026ರ ಫಿಫಾ ವಿಶ್ವಕಪ್‌ನಲ್ಲಿ ಏಷ್ಯಾದಿಂದ 8 ರಾಷ್ಟ್ರಗಳು ಕಣಕ್ಕಿಳಿದಿದ್ದವು. ಇವುಗಳಲ್ಲಿ ಸೌತ್ ಕೊರಿಯಾ, ಇರಾನ್, ಸೌದಿ ಅರೇಬಿಯಾ, ಖತಾರ್, ಇರಾಕ್, ಜೋರ್ಡನ್ ಮತ್ತು ಉಜ್ಬೇಕಿಸ್ತಾನ್ ತಂಡಗಳು ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದವು. ಇದರ ನಡುವೆ ನಾಕೌಟ್ ಹಂತಕ್ಕೆ ಪ್ರವೇಶಿಸಿದ ಏಕೈಕ ಏಷ್ಯನ್ ರಾಷ್ಟ್ರ ಜಪಾನ್.

ಜಪಾನ್ ಎಂದ ತಕ್ಷಣ ನಮಗೆ ನೆನಪಾಗುವುದು ಅಲ್ಲಿನ ಶಿಸ್ತು, ತಂತ್ರಜ್ಞಾನ ಮತ್ತು ಜಗತ್ತನ್ನೇ ಆಕರ್ಷಿಸಿರುವ ಅನಿಮೆ ಕಾರ್ಟೂನ್‌ಗಳು. ಆದರೆ, ಇದೇ ಅನಿಮೆ ಜಪಾನ್ ದೇಶದ ಕ್ರೀಡಾ ಇತಿಹಾಸವನ್ನೇ ಬದಲಾಯಿಸಿದೆ ಎಂದರೆ ನೀವು ನಂಬುತ್ತೀರಾ? ಹೌದು, ಒಂದು ಕಾಲದಲ್ಲಿ ಬೇಸ್‌ಬಾಲ್ ಹುಚ್ಚಿನಲ್ಲಿದ್ದ ಜಪಾನ್, ಇಂದು ಜಾಗತಿಕ ಫುಟ್‌ಬಾಲ್ ನಕ್ಷೆಯಲ್ಲಿ ದೈತ್ಯ ಶಕ್ತಿಯಾಗಿ ಹೊರಹೊಮ್ಮಲು ಈ ಕಾರ್ಟೂನ್‌ಗಳೇ ಪ್ರೇರಣೆ! ಫುಟ್‌ಬಾಲ್ ಮೈದಾನದ ಹಸಿರು ಹುಲ್ಲುಗಾವಲು ಮತ್ತು ಅನಿಮೆ ಕಲಾವಿದರ ವರ್ಣರಂಜಿತ ಕುಂಚ ಹೇಗೆ ಒಂದಾಗಿ ಇತಿಹಾಸ ಸೃಷ್ಟಿಸಿದವು ಎಂಬುದರ ರೋಚಕ ಕಥೆ ಇಲ್ಲಿದೆ.
ಕಾಮಿಕ್ಸ್ನಿಂದ ಶುರುವಾದ ಕಿಚ್ಚು:
80ರ ದಶಕದಲ್ಲಿ ಜಪಾನ್ ದೇಶದ ಅತ್ಯಂತ ಜನಪ್ರಿಯ ಕ್ರೀಡೆ ಬೇಸ್‌ಬಾಲ್. ಇದು ಅಲ್ಲಿನ ಅಧಿಕೃತ ರಾಷ್ಟ್ರೀಯ ಕ್ರೀಡೆ ಅಲ್ಲದಿದ್ದರೂ, ಬೇಸ್‌ಬಾಲ್ ಇಡೀ ದೇಶವನ್ನು ಆವರಿಸಿಕೊಂಡಿತ್ತು. ಜಪಾನಿನ ಪ್ರೊಫೆಷನಲ್ ಬೇಸ್‌ಬಾಲ್ ಲೀಗ್ ಪಂದ್ಯಗಳನ್ನು ನೋಡಲು ಮತ್ತು ತಮಗೆ ಇಷ್ಟವಾದ ತಂಡಗಳನ್ನು ಬೆಂಬಲಿಸಲು ಲಕ್ಷಾಂತರ ಜನರು ಸ್ಟೇಡಿಯಂಗೆ ಮುಗಿಬೀಳುತ್ತಿದ್ದರು.
ಅಲ್ಲದೆ ಪ್ರೌಢಶಾಲಾ ಮಟ್ಟದ ಬೇಸ್‌ಬಾಲ್ ಟೂರ್ನಮೆಂಟ್ ಆದ ‘ಕೋಶಿಯನ್’ ಪಂದ್ಯಾವಳಿಯನ್ನು ಇಡೀ ದೇಶವೇ ಹಬ್ಬದಂತೆ ಸಂಭ್ರಮದಿಂದ ಟಿವಿಯಲ್ಲಿ ವೀಕ್ಷಿಸುತ್ತಿದ್ದರು.
ಇಂತಹ ಜಪಾನ್‌ನಲ್ಲಿ 1981 ರಲ್ಲಿ ‘ಕ್ಯಾಪ್ಟನ್ ತ್ಸುಬಾಸಾ’ ಎಂಟ್ರಿ ಕೊಟ್ಟಿದ್ದರು. ಯೋಯಿಚಿ ತಕಹಾಶಿ ಎಂಬ ಕಲಾವಿದ ‘ಕ್ಯಾಪ್ಟನ್ ತ್ಸುಬಾಸಾ’ ಎಂಬ ಮಂಗಾ (ಕಾಮಿಕ್ಸ್) ಪುಸ್ತಕವನ್ನು ಹೊರ ತಂದಿದ್ದರು. ಕಾಮಿಕ್ಸ್ ಬುಕ್ನ ಹೀರೋ ತ್ಸುಬಾಸಾ ಒಜೋರಾ ಎಂಬ ಪುಟ್ಟ ಬಾಲಕ. ಈ ಬಾಲಕನ ಅತೀ ದೊಡ್ಡ ಕಸನು ಜಪಾನ್ ದೇಶಕ್ಕೆ ಫುಟ್‌ಬಾಲ್ ವಿಶ್ವಕಪ್ ಗೆದ್ದುಕೊಡುವುದು.
ಈ ಕಥೆಯ ನಾಯಕ ತ್ಸುಬಾಸಾ ಒಜೋರಾ, “ಫುಟ್‌ಬಾಲ್ ನನ್ನ ಗೆಳೆಯ” ಎಂದು ನಂಬಿದ್ದ. ಅವನು ಮೈದಾನದಲ್ಲಿ ತೋರುತ್ತಿದ್ದ ಅದ್ಭುತ ಕೌಶಲ್ಯಗಳು ಮತ್ತು ಜಪಾನ್‌ಗೆ ಫಿಫಾ ವಿಶ್ವಕಪ್ ಗೆದ್ದುಕೊಡಬೇಕೆಂಬ ಅವನ ಹಠ, ಅಂದಿನ ಜಪಾನಿ ಬಾಲಕರಲ್ಲಿ ಹೊಸ ಆಕರ್ಷಣೆಯನ್ನು ಮೂಡಿಸಿತು.
ಈ ಕಾಮಿಕ್ಸ್ ಪುಸ್ತಕ ಭಾರಿ ಜನಪ್ರಿಯತೆ ಗಳಿಸಿದ ನಂತರ, 1983 ರಲ್ಲಿ ಇದನ್ನು ಟಿವಿ ಕಾರ್ಟೂನ್ ಸರಣಿಯಾಗಿ ಪರಿವರ್ತಿಸಲಾಯಿತು. ಇದು ಟಿವಿ ಟೋಕಿಯೋ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದ ಕ್ಯಾಪ್ಟನ್ ತ್ಸುಬಾಸಾ ಜಪಾನ್ ಬಾಲಕರು ಫಿದಾ ಆದರು. ಎಷ್ಟರ ಮಟ್ಟಿಗೆ ಎಂದರೆ ನಾವು ಕೂಡ ಕ್ಯಾಪ್ಟನ್ ತ್ಸುಬಾಸಾನಂತೆ ಫುಟ್‌ಬಾಲ್ ಆಡಿ ವಿಶ್ವಕಪ್ ಗೆದ್ದುಕೊಡಬೇಕೆಂಬ ಆಸೆ ಚಿಗುರುವಷ್ಟರ ಮಟ್ಟಿಗೆ.
ಕ್ಯಾಪ್ಟನ್ ತ್ಸುಬಾಸಾ ಸೃಷ್ಟಿಸಿದ ಕ್ರಾಂತಿ:
ಕ್ಯಾಪ್ಟನ್ ತ್ಸುಬಾಸಾ ಕಾರ್ಟೂನ್ ಪ್ರಸಾರವಾದ ಕೆಲವೇ ವರ್ಷಗಳಲ್ಲಿ, ಜಪಾನ್‌ನಲ್ಲಿ ಫುಟ್‌ಬಾಲ್ ಆಡುವ ಮಕ್ಕಳ ಸಂಖ್ಯೆ ಕೇವಲ 1 ಲಕ್ಷದಿಂದ ಬರೋಬ್ಬರಿ 2.5 ಲಕ್ಷಕ್ಕೆ ಏರಿತು ಎಂದರೆ ನಂಬಲೇಬೇಕು.
ಇತ್ತ ಕೇವಲ ಬೇಸ್‌ಬಾಲ್ ಆಡುತ್ತಿದ್ದ ಜಪಾನಿನ ಬಹುತೇಕ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಫುಟ್‌ಬಾಲ್ ಕೂಡ ಕಡ್ಡಾಯವಾಯಿತು. ಮಕ್ಕಳು ಸಂಜೆ ಮನೆಗೆ ಹೋಗುವ ಮುನ್ನ ‘ಕ್ಯಾಪ್ಟನ್ ತ್ಸುಬಾಸಾ’ ಸ್ಟೈಲ್‌ನಲ್ಲಿ ಕಿಕ್ ಹೊಡೆಯಲು ಗಂಟೆಗಟ್ಟಲೆ ಮೈದಾನದಲ್ಲಿ ಕಳೆಯಲು ತೊಡಗಿದರು.
ಒಂದಾರ್ಥದಲ್ಲಿ ಕ್ಯಾಪ್ಟನ್ ತ್ಸುಬಾಸಾ ಕಾರ್ಟೂನ್ ಜಪಾನಿನಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿತು. ಈ ಕ್ರಾಂತಿಗೆ ಕಿಚ್ಚು ಹಚ್ಚುವಂತೆ ಅಲ್ಲಲ್ಲಿ ಫುಟ್‌ಬಾಲ್ ಅಕಾಡೆಮಿಗಳು ತಲೆ ಎತ್ತಿ ನಿಂತವು. ಇದರೊಂದಿಗೆ ಸೂರ್ಯ ಉದಯಿಸುವ ನಾಡಿನಲ್ಲಿ ಫುಟ್‌ಬಾಲ್ ಕಲ್ಚರ್ ಕೂಡ ಶುರುವಾಯಿತು.
ಫುಟ್‌ಬಾಲ್ ಫೀವರ್ ಶುರುವಾಗುತ್ತಿದ್ದಂತೆ ಜಪಾನ್ 1992ರಲ್ಲಿ ತನ್ನ ಮೊದಲ ವೃತ್ತಿಪರ ಫುಟ್‌ಬಾಲ್ ಲೀಗ್ (J-League) ಅನ್ನು ಕೂಡ ಆರಂಭಿಸಿತು. ಇದರ ಬೆನ್ನಲ್ಲೇ ಜಪಾನೀಸ್ ಪಡೆ ಏಷ್ಯನ್ ಅಧಿಪತಿಯಾದರು.
ಏಷ್ಯನ್ ಅಧಿಪತಿ:
1981 ರಲ್ಲಿ ಕ್ಯಾಪ್ಟನ್ ತ್ಸುಬಾಸಾ ಸೃಷ್ಟಿಸಿದ ಕ್ರಾಂತಿಯ ಪ್ರಭಾವ ಹೇಗಿತ್ತೆಂದರೆ ಹತ್ತೇ ವರ್ಷಗಳಲ್ಲಿ ಜಪಾನ್ ಏಷ್ಯನ್ ಕಪ್ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದರು. 1992 ರಲ್ಲ ನಡೆದ ‘ಎಎಫ್‌ಸಿ ಏಷ್ಯನ್ ಕಪ್’ ಟೂರ್ನಮೆಂಟ್‌ನಲ್ಲಿ ಸೌದಿ ಅರೇಬಿಯಾವನ್ನು 1-0 ಗೋಲಿನಿಂದ ಮಣಿಸಿ ಜಪಾನ್ ಪ್ರಥಮ ಬಾರಿಗೆ ಏಷ್ಯಾದ ಫುಟ್‌ಬಾಲ್ ಚಾಂಪಿಯನ್ ಎನಿಸಿಕೊಂಡರು.
ಈ ಚಾಂಪಿಯನ್ ಪಟ್ಟವು ಜಪಾನಿನನಲ್ಲಿ ಫುಟ್‌ಬಾಲ್ ಕ್ರೇಝ್ ಅನ್ನು ಮುಗಿಲೆತ್ತರಕ್ಕೇರಿಸಿತು. ಅಲ್ಲಿಂದಲೇ ಶುರುವಾಗಿದ್ದು ಫಿಫಾ ವಿಶ್ವಕಪ್ ಕನಸು.
ವಿಶ್ವಕಪ್ಗೆ ಎಂಟ್ರಿ:
ಏಷ್ಯನ್ ರಾಷ್ಟ್ರಗಳ ವಿರುದ್ಧ ತನ್ನ ಪರಾಕ್ರಮ ತೋರಿಸಿದ ಜಪಾನ್ ಪಡೆಯು 1998 ರಲ್ಲಿ ಮೊದಲ ಬಾರಿಗೆ ಫಿಫಾ ವಿಶ್ವಕಪ್ಗೆ ಅರ್ಹತೆ ಪಡೆಯಿತು. ಅಂದರೆ ಜಪಾನ್‌ನಲ್ಲಿ ಫುಟ್‌ಬಾಲ್ ಕಲ್ಚರ್ ಶುರುವಾಗಿ 17 ವರ್ಷಗಳಾಗುವಷ್ಟರಲ್ಲಿ ಜಪಾನೀಸ್ ಪಡೆ ವಿಶ್ವಕಪ್ ಅಂಗಳದಲ್ಲಿದ್ದರು.
ಆದರೆ ಚೊಚ್ಚಲ ವಿಶ್ವಕಪ್ ಟೂರ್ನಿಯಲ್ಲಿ ಜಪಾನ್ ತಂಡದಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಆಡಿದ ಮೂರು ಪಂದ್ಯಗಳಲ್ಲೂ ಸೋತರೂ, ಜಮೈಕಾ ವಿರುದ್ಧದ ಪಂದ್ಯದಲ್ಲಿ ಜಪಾನ್ ಆಟಗಾರ ಮಸಾಶಿ ನಕಯಾಮಾ ಅವರು ಹೊಡೆದ ಏಕೈಕ ಗೋಲು, ಜಪಾನ್ ದೇಶದ ವಿಶ್ವಕಪ್ ಇತಿಹಾಸದ ‘ಮೊದಲ ಚಾರಿತ್ರಿಕ ಗೋಲು’ ಆಗಿ ದಾಖಲಾಯಿತು.
ಬದಲಾದ ರಣತಂತ್ರ:
ಕ್ಯಾಪ್ಟನ್ ತ್ಸುಬಾಸಾ ಸೃಷ್ಟಿಸಿದ ಕ್ರಾಂತಿಯಿಂದ ಶುರುವಾದ ಫುಟ್‌ಬಾಲ್ ರಣತಂತ್ರಗಳು ನಿಧಾನಕ್ಕೆ ಬದಲಾಯಿತು. ಅದರಲ್ಲೂ ನ್ಯೂ ಜೆನ್ ಹುಡುಗರು ಆಟದಲ್ಲಿ ಬದಲಾವಣೆ ತರಲಾರಂಭಿಸಿದ್ದರು. ಯುರೋಪಿಯನ್ ಹಾಗೂ ಲ್ಯಾಟಿನ್ ಅಮೆರಿಕನ್ ಶೈಲಿಯಂತೆ ತಮ್ಮದೇಯಾದ ಒಂದು ರಣತಂತ್ರ ಇರಬೇಕೆಂದು ಬಯಸುತ್ತಿದ್ದರು. ಇಂತಹ ಸಂದರ್ಭದಲ್ಲೇ ಬಂದಿದ್ದೇ ಬ್ಲೂ ಲಾಕ್.
ಬ್ಲೂ ಲಾಕ್ ಎಂಬ ಮೈಂಡ್ ಗೇಮ್:
2018 ರಲ್ಲಿ ಜಪಾನ್‌ನಲ್ಲಿ ಮಂಗಾ ಕಾಮಿಕ್ಸ್ ಪುಸ್ತಕ ಬಿಡುಗಡೆಯಾಯಿತು. ಈ ಕಾಮಿಕ್ಸ್ ಬುಕ್ನಲ್ಲಿ ಫುಟ್‌ಬಾಲ್ ಎಂಬುದು ಕೇವಲ ದೈಹಿಕ ಆಟವಲ್ಲ. ಇದು ಆಟಗಾರರ ಮನಸ್ಥಿತಿಯ ಆಟ ಎಂದು ಒತ್ತಿ ಹೇಳಲಾಯಿತು.
ಸಾಮಾನ್ಯವಾಗಿ ಕ್ರೀಡೆಗಳಲ್ಲಿ ಟೀಮ್ ವರ್ಕ್ ಮತ್ತು ತ್ಯಾಗಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಆದರೆ ಬ್ಲೂ ಲಾಕ್ ಕಥೆಯು ಇದನ್ನು ಸಂಪೂರ್ಣವಾಗಿ ತಿರಸ್ಕರಿಸಿತ್ತು.
ಬದಲಿಗೆ ಜಪಾನ್‌ಗೆ ಒಳ್ಳೆಯ ಸ್ನೇಹಿತರ ತಂಡ ಬೇಡ, ಜಗತ್ತನ್ನೇ ನಡುಗಿಸುವ ಅತ್ಯಂತ ಸ್ವಾರ್ಥಿ, ಅಹಂಕಾರಿ ಮತ್ತು ಡೇಂಜರಸ್ ಸ್ಟ್ರೈಕರ್ಗಳ ತಂಡ ಬೇಕು ಎಂಬ ಹೊಸ ರಣತಂತ್ರವನ್ನು ಪರಿಚಯಿಸಿತು. ಈ ಕಥೆಯು ಮುಂದೆ ಕಾರ್ಟೂನ್ ಆಗಿ ಪ್ರಸಾರವಾಗ ತೊಡಗಿತು. ಇದನ್ನು ವೀಕ್ಷಿಸಿದ ನ್ಯೂ ಜೆನ್ ಜಪಾನ್ ಫುಟ್‌ಬಾಲ್ ಪ್ರಿಯರ ಮನಸ್ಥಿತಿ ಬದಲಾಯಿತು.
ಸಾಂಪ್ರದಾಯಿಕವಾಗಿ ಜಪಾನಿ ಆಟಗಾರರು ಮೈದಾನದಲ್ಲಿ ತುಂಬಾ ಸೌಮ್ಯವಾಗಿರುತ್ತಿದ್ದರು ಮತ್ತು ಗೋಲು ಹೊಡೆಯುವ ಅವಕಾಶವಿದ್ದರೂ ಬೇರೆಯವರಿಗೆ ಪಾಸ್ ನೀಡುತ್ತಿದ್ದರು. ಆದರೆ ‘ಬ್ಲೂ ಲಾಕ್’ ಬಂದ ಮೇಲೆ ಜಪಾನಿ ಯುವ ಆಟಗಾರರಲ್ಲಿ “ನಾನೇ ಗೋಲು ಹೊಡೆಯಬೇಕು” ಎಂಬ ಆಕ್ರಮಣಕಾರಿ ಮತ್ತು ಧೈರ್ಯಶಾಲಿ ಮನಸ್ಥಿತಿ ಬೆಳೆಯಿತು. ಮೈದಾನದಲ್ಲಿ ಎದುರಾಳಿ ಯಾರೇ ಇರಲಿ, ಹೆದರದೆ ನುಗ್ಗುವ ಗುಣವನ್ನು ಮೈಗೂಡಿಸಿಕೊಂಡರು.
ಪರಿಣಾಮ 2022ರ ಫಿಫಾ ವಿಶ್ವಕಪ್‌ನಲ್ಲಿ ಜಪಾನ್ ತಂಡವು ಮಾಜಿ ವಿಶ್ವ ಚಾಂಪಿಯನ್ನರಾದ ಜರ್ಮನಿ ಮತ್ತು ಸ್ಪೇನ್ ತಂಡಗಳನ್ನು ಸೋಲಿಸಿ ಇಡೀ ಜಗತ್ತನ್ನೇ ಚಕಿತಗೊಳಿಸಿತು. ಆ ಪಂದ್ಯಗಳಲ್ಲಿ ಜಪಾನ್ ಆಟಗಾರರು ಹೊಡೆದ ಅದ್ಭುತ ಗೋಲುಗಳು ಮತ್ತು ಕೌಂಟರ್-ಅಟ್ಯಾಕ್ ತಂತ್ರಗಳು, ಬ್ಲೂ ಲಾಕ್ ಅನಿಮೆಯ ದೃಶ್ಯಗಳಂತೆಯೇ ಇದ್ದವು. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಇಂದಿಗೂ ಇದನ್ನು “ನೈಜ ಜಗತ್ತಿನ ಬ್ಲೂ ಲಾಕ್ ಪವಾಡ” ಎಂದೇ ಕರೆಯುತ್ತಾರೆ.
ಜಪಾನ್ ಮಿಂಚಿನಾಟ:
ಬ್ಲೂ ಲಾಕ್ ನೀಡಿದ ಆಕ್ರಮಣಕಾರಿ ‘ಈಗೋಯಿಸ್ಟ್’ ಮನಸ್ಥಿತಿಯೊಂದಿಗೆ 2026ರ ಫಿಫಾ ವಿಶ್ವಕಪ್‌ನಲ್ಲಿ ಜಪಾನ್ ಪಡೆ ಕಣಕ್ಕಿಳಿದಿತ್ತು. ಜಗತ್ತಿನ ಬಲಿಷ್ಠ 48 ತಂಡಗಳಲ್ಲಿ ಒಂದಾಗಿ ಬಂದಿದ್ದ ಸಮುರಾಯ್ ಬ್ಲೂ ಪಡೆ, ಲೀಗ್ ಹಂತದಲ್ಲಿ ನೆದರ್ಲೆಂಡ್ಸ್ ಮತ್ತು ಸ್ವೀಡನ್ ತಂಡಗಳಿಗೆ ನಡುಕ ಹುಟ್ಟಿಸಿ, ಟುನೀಶಿಯಾವನ್ನು 4-0 ಗೋಲುಗಳಿಂದ ಧೂಳೀಪಟ ಮಾಡಿತು. ಅಲ್ಲದೆ ಎಫ್ ಗ್ರೂಪ್ನಿಂದ ‘ರೌಂಡ್ ಆಫ್ 32’ ಹಂತಕ್ಕೆ ಪ್ರವೇಶಿಸಿತ್ತು.
ನಾಕೌಟ್ ಹಂತದಲ್ಲಿ ಜಪಾನ್ ಪಡೆಗೆ ಎದುರಾಗಿದ್ದು ಫುಟ್‌ಬಾಲ್ ಜಗತ್ತಿನ ಸರ್ವಕಾಲಿಕ ದೈತ್ಯ ತಂಡ, 5 ಬಾರಿಯ ವಿಶ್ವ ಚಾಂಪಿಯನ್ ಬ್ರೆಝಿಲ್! ಹೂಸ್ಟನ್ ಕ್ರೀಡಾಂಗಣದಲ್ಲಿ ನಡೆದ ಆ ಮಹಾಸಮರದಲ್ಲಿ ಜಪಾನ್ ಕೇವಲ ರಕ್ಷಣಾತ್ಮಕವಾಗಿ ಆಡಲಿಲ್ಲ.
ಬ್ಲೂ ಲಾಕ್ ಅನಿಮೆಯ ಕಥೆಯನ್ನೇ ನೆನಪಿಸುವಂತೆ ಪ್ರತಿ ಕ್ಷಣದಲ್ಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಪಂದ್ಯದ 29ನೇ ನಿಮಿಷದಲ್ಲೇ ಜಪಾನಿನ ಕೌಶು ಸಾನೊ ಹೊಡೆದ ಆ ಅದ್ಭುತ ಗೋಲು ಇಡೀ ಜಗತ್ತನ್ನೇ ಸ್ತಬ್ಧಗೊಳಿಸಿತ್ತು. ಬ್ರೆಝಿಲ್‌ನಂತಹ ಮಹಾಶಕ್ತಿ ವಿರುದ್ಧ ಮೊದಲಾರ್ಧದಲ್ಲಿ 1-0 ಮುನ್ನಡೆ ಕಾಯ್ದುಕೊಂಡು ಜಪಾನ್ ದೃಢವಾಗಿ ಸವಾಲು ಒಡ್ಡಿತು.
ಇದನ್ನೂ ಓದಿ: FIFA World Cup 2026: ಪೆನಾಲ್ಟಿ ಶೂಟೌಟ್‌ನಲ್ಲಿ 2 ಬಲಿಷ್ಠ ತಂಡಗಳು ಕಿಕ್ ಔಟ್..!
ಆದರೆ ದ್ವಿತೀಯಾರ್ಧದಲ್ಲಿ ಬ್ರೆಝಿಲ್‌ನ ಸಾಂಬಾ ಶೈಲಿಯ ಮಾಂತ್ರಿಕ ಆಟದಿಂದಾಗಿ ಜಪಾನ್ ತಂಡವು 2-1 ಅಂತರದಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿತು. ಮೈದಾನದಲ್ಲಿ ರೆಫ್ರಿ ಕೊನೆಯ ಸೀಟಿ ಊದಿದಾಗ ಜಪಾನಿ ಆಟಗಾರರು ಕಣ್ಣೀರು ಹಾಕುತ್ತಾ ಮೈದಾನದಲ್ಲೇ ಕುಸಿದು ಬಿದ್ದರು. ಕಣ್ಣೆದುರೇ ಜಾರಿದ ಆ ಒಂದು ಗೆಲುವು ಇಡೀ ಜಪಾನ್ ದೇಶದ ಹೃದಯವನ್ನೇ ಛಿದ್ರ ಮಾಡಿತು.
ಆದರೆ ಈ ಸೋಲಿನ ಹೊರತಾಗಿಯೂ… ಜಪಾನ್ ಸೋತಿದ್ದು ಕೇವಲ ಸ್ಕೋರ್ ಬೋರ್ಡ್‌ನಲ್ಲಿ ಮಾತ್ರ, ಕೋಟ್ಯಂತರ ಫುಟ್‌ಬಾಲ್ ಪ್ರೇಮಿಗಳ ಹೃದಯದಲ್ಲಲ್ಲ!
ಒಂದು ಕಾಲದಲ್ಲಿ ಫುಟ್‌ಬಾಲ್ ಎಂದರೇನು ಎಂದು ತಿಳಿಯದ ದೇಶದಲ್ಲಿ, ಕೇವಲ ಒಂದು ಕಾರ್ಟೂನ್ (ಅನಿಮೆ) ಹಚ್ಚಿದ ಕಿಡಿ ಇಂದು ವಿಶ್ವದ ಅತಿ ದೊಡ್ಡ ವೇದಿಕೆಯಲ್ಲಿ ದೈತ್ಯ ತಂಡಗಳಿಗೇ ನಡುಕ ಹುಟ್ಟಿಸುವ ಮಟ್ಟಿಗೆ ಬೆಳೆದು ನಿಂತಿದೆ.
ಈ ಬಾರಿ ಟ್ರೋಫಿ ಬ್ರೆಝಿಲ್, ಅರ್ಜೆಂಟೀನಾ, ಫ್ರಾನ್ಸ್ ಅಥವಾ ಇನ್ನಾವುದೋ ತಂಡದ ಪಾಲಾಗಬಹುದು. ಆದರೆ ಕಣಕಣದಲ್ಲೂ ವೀರಾವೇಶದಿಂದ ಹೋರಾಡಿದ ಜಪಾನ್ ಪಡೆ “ಮುಂದೊಂದು ದಿನ ಜಗತ್ತನ್ನು ಆಳಲು ನಾವು ಬರುತ್ತಿದ್ದೇವೆ” ಎಂಬ ಸಂದೇಶ ರವಾನಿಸಿ ತೆರಳಿದ್ದಾರೆ.
ಹೀಗಾಗಿ ಮುಂದಿನ ವಿಶ್ವಕಪ್‌ನಲ್ಲಿ ಅವರು ಹೊಸ ರಣತಂತ್ರದೊಂದಿಗೆ ಬಂದೇ ಬರುತ್ತಾರೆ. ಮುಂದೊಂದು ದಿನ ಸಮುರಾಯ್ ಪಡೆ ವಿಶ್ವಕಪ್ ಗೆದ್ದೇ ಗೆಲ್ತಾರೆ! ಏಕೆಂದರೆ ಅವರು ಬಂದಿರುವುದು ಜಪಾನ್ನಿಂದ… ಸೂರ್ಯ ಉದಯಿಸುವ ನಾಡು ಜಪಾನ್ನಿಂದ!
Published On - 3:03 pm, Wed, 1 July 26




