IND vs ENG: ಐಪಿಎಲ್ ಮಧ್ಯದಲ್ಲಿ ಇಂಗ್ಲೆಂಡ್ ತಲುಪಿದ ಟೀಂ ಇಂಡಿಯಾ ಆಟಗಾರರು

IND vs ENG: ಐಪಿಎಲ್ 2025 ರ ಲೀಗ್ ಹಂತದ ಕೊನೆಯ ಹಂತದಲ್ಲಿ, ಭಾರತ 'ಎ' ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದೆ. ಅಭಿಮನ್ಯು ಈಶ್ವರನ್ ನಾಯಕತ್ವದಲ್ಲಿ, ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್ ಸೇರಿದಂತೆ ಹಲವು ಐಪಿಎಲ್ ಆಟಗಾರರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಇಂಗ್ಲೆಂಡ್ ಲಯನ್ಸ್ ವಿರುದ್ಧ ಎರಡು ಪ್ರಥಮ ದರ್ಜೆ ಪಂದ್ಯಗಳು ಮತ್ತು ಭಾರತ ತಂಡದೊಂದಿಗೆ ಅಭ್ಯಾಸ ಪಂದ್ಯವನ್ನು ಆಡಲಿದ್ದಾರೆ. ಈ ಪ್ರವಾಸವು ಭಾರತದ ಟೆಸ್ಟ್ ಸರಣಿಗೆ ತಯಾರಿಯಾಗಿದೆ.

IND vs ENG: ಐಪಿಎಲ್ ಮಧ್ಯದಲ್ಲಿ ಇಂಗ್ಲೆಂಡ್ ತಲುಪಿದ ಟೀಂ ಇಂಡಿಯಾ ಆಟಗಾರರು
Team India

Updated on: May 25, 2025 | 6:38 PM

ಐಪಿಎಲ್ 2025 (IPL 2025) ರ ಲೀಗ್ ಹಂತದಲ್ಲಿ ಕೆಲವೇ ಪಂದ್ಯಗಳು ಉಳಿದಿವೆ. ಇದರ ನಂತರ, ಪ್ಲೇಆಫ್ ಪಂದ್ಯಗಳು ನಡೆದರೆ ಕೊನೆಯದಾಗಿ ಫೈನಲ್ ಪಂದ್ಯ ಜೂನ್ 3 ರಂದು ನಡೆಯಲಿದೆ. ಈ ನಡುವೆ ಭಾರತ ಯುವ ಪಡೆ ಇಂಗ್ಲೆಂಡ್​ಗೆ ವಿಮಾನ ಹತ್ತಿದೆ. ವಾಸ್ತವವಾಗಿ ಭಾರತ ಎ ತಂಡವು (India A team) ಇಂಗ್ಲೆಂಡ್ ಲಯನ್ಸ್ ವಿರುದ್ಧ ಎರಡು ಪ್ರಥಮ ದರ್ಜೆ ಪಂದ್ಯಗಳನ್ನು ಆಡಬೇಕಾಗಿದೆ. ಆ ಬಳಿಕ ಇದೇ ತಂಡ ಹಿರಿಯ ಭಾರತೀಯ ತಂಡದೊಂದಿಗೆ ಅಭ್ಯಾಸ ಪಂದ್ಯವನ್ನು ಸಹ ಆಡಬೇಕಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಭಾರತ ಎ ತಂಡದ ಕೆಲವು ಆಟಗಾರರು ಐಪಿಎಲ್ ಮಧ್ಯದಲ್ಲಿ ಇಂಗ್ಲೆಂಡ್ ತಲುಪಿದ್ದಾರೆ.

ಇಂಗ್ಲೆಂಡ್ ತಲುಪಿದ ಟೀಂ ಇಂಡಿಯಾ

ಭಾರತ ಎ ತಂಡ ಇಂದು ಇಂಗ್ಲೆಂಡ್ ತಲುಪಿದೆ. ಈ ಪ್ರವಾಸ ಆರಂಭವಾಗುವ ಮುನ್ನ, ವೇಗಿ ತುಷಾರ್ ಪಾಂಡೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ಫೋಟೋ ಹಂಚಿಕೊಂಡಿದ್ದು, ಅದರಲ್ಲಿ ಅವರು ತಂಡದ ಅನೇಕ ಸ್ಟಾರ್ ಆಟಗಾರರೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ ಸರ್ಫರಾಜ್ ಖಾನ್, ಅಭಿಮನ್ಯು ಈಶ್ವರನ್, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್, ತನುಷ್ ಕೋಟ್ಯಾನ್ ಮತ್ತು ರುತುರಾಜ್ ಗಾಯಕ್ವಾಡ್ ಇರುವುದನ್ನು ಕಾಣಬಹುದು. ಈ ಫೋಟೋ ಹಂಚಿಕೊಳ್ಳುವುದರ ಜೊತೆಗೆ ತುಷಾರ್ ಪಾಂಡೆ, ಈ ಎಲ್ಲಾ ಆಟಗಾರರು ಇಂಗ್ಲೆಂಡ್ ತಲುಪಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಭಾರತ ಎ ತಂಡದ ಈ ಪ್ರವಾಸವು ಮೇ 30 ರಿಂದ ಪ್ರಾರಂಭವಾಗಲಿದ್ದು, ಇದರಲ್ಲಿ ಮೊದಲ ಪ್ರಥಮ ದರ್ಜೆ ಪಂದ್ಯವು ಕ್ಯಾಂಟರ್ಬರಿಯಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ ನಡೆಯಲಿದೆ. ಎರಡನೇ ಪಂದ್ಯ ಜೂನ್ 6 ರಂದು ನಾರ್ಥಾಂಪ್ಟನ್‌ನಲ್ಲಿ ನಡೆಯಲಿದ್ದು, ಜೂನ್ 13 ರಂದು ಬೆಕೆನ್‌ಹ್ಯಾಮ್‌ನಲ್ಲಿ ಹಿರಿಯ ಭಾರತೀಯ ತಂಡದ ವಿರುದ್ಧದ ಇಂಟ್ರಾ-ಸ್ಕ್ವಾಡ್ ಪಂದ್ಯದೊಂದಿಗೆ ಪ್ರವಾಸವು ಕೊನೆಗೊಳ್ಳಲಿದೆ. ಜೂನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಸರಣಿಯನ್ನು ಆಡಲಿರುವ ಭಾರತೀಯ ಟೆಸ್ಟ್ ತಂಡಕ್ಕೆ ಈ ಪ್ರವಾಸವು ಪ್ರಮುಖ ತಯಾರಿಯಾಗಿದೆ.

IND vs ENG: ಇಂಗ್ಲೆಂಡ್‌ ವಿರುದ್ಧ ಹೇಗಿರಲಿದೆ ಭಾರತದ ಪ್ಲೇಯಿಂಗ್ 11? ಇಲ್ಲಿದೆ ಸಂಭಾವ್ಯ ತಂಡ

ಅಭಿಮನ್ಯು ಈಶ್ವರ್​ಗೆ ತಂಡದ ನಾಯಕತ್ವ

ಫೋಟೋದಲ್ಲಿ ಕಾಣುತ್ತಿರುವ ಆಟಗಾರರು ಈ ಪ್ರವಾಸಕ್ಕೆ ಆಯ್ಕೆಯಾದ ತಂಡದ ಭಾಗವಾಗಿದ್ದಾರೆ. ಅಭಿಮನ್ಯು ಈಶ್ವರನ್ ಅವರನ್ನು ತಂಡದ ನಾಯಕರನ್ನಾಗಿ ಮಾಡಲಾಗಿದ್ದು, ಧ್ರುವ್ ಜುರೆಲ್ ಉಪನಾಯಕನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಭಾರತೀಯ ಟೆಸ್ಟ್ ತಂಡದ ನಿಯಮಿತ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ಈ ಪ್ರವಾಸದಲ್ಲಿ ಇಂಗ್ಲಿಷ್ ಪರಿಸ್ಥಿತಿಗಳಲ್ಲಿ ಅಭ್ಯಾಸ ಮಾಡಲು ಅವಕಾಶ ಪಡೆಯಲಿದ್ದಾರೆ. ಇತ್ತೀಚಿನ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಗಾಯಗೊಂಡಿದ್ದ ಸರ್ಫರಾಜ್ ಖಾನ್ ಈಗ ಫಿಟ್ ಆಗಿದ್ದು, ತಂಡಕ್ಕೆ ಮರಳುತ್ತಿದ್ದಾರೆ.

ಗಾಯದಿಂದಾಗಿ ಐಪಿಎಲ್​ನಿಂದ ಹೊರಬಿದ್ದಿದ್ದ ರುತುರಾಜ್ ಗಾಯಕ್ವಾಡ್ ಕೂಡ ಈ ಪ್ರವಾಸದಲ್ಲಿ ತಂಡದಲ್ಲಿದ್ದಾರೆ. ಪ್ರತಿಭಾನ್ವಿತ ಆಲ್‌ರೌಂಡರ್ ಆಗಿರುವ ತನುಷ್ ಕೋಟ್ಯಾನ್ ಮತ್ತು ತುಷಾರ್ ಪಾಂಡೆಯಂತಹ ಯುವ ವೇಗದ ಬೌಲರ್‌ಗಳು ಈ ಪ್ರವಾಸದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ಸುಕರಾಗಿದ್ದಾರೆ. ಉಳಿದಂತೆ ಐಪಿಎಲ್ ನಡೆಯುತ್ತಿರುವ ಕಾರಣದಿಂದಾಗಿ ಶುಭ್​ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರಂತಹ ಕೆಲವು ಆಟಗಾರರು ಮೊದಲ ಪಂದ್ಯದ ನಂತರವೇ ತಂಡವನ್ನು ಸೇರಿಕೊಳ್ಳುತ್ತಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ