IND vs ENG: ‘ನನ್ನದೇ ತಪ್ಪು’; ಸರ್ಫರಾಜ್ ಬಳಿ ಕ್ಷಮೆಯಾಚಿಸಿದ ರವೀಂದ್ರ ಜಡೇಜಾ..!
IND vs ENG: ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದ್ದ ಸರ್ಫರಾಜ್ ಖಾನ್ ದಿನದ ಕೊನೆಯ ಸೆಷನ್‌ನಲ್ಲಿ ರವೀಂದ್ರ ಜಡೇಜಾ ಮಾಡಿದ ತಪ್ಪಿನಿಂದಾಗಿ ರನೌಟ್ ಆಗಿ ಪೆವಿಲಿಯನ್‌ಗೆ ಮರಳಬೇಕಾಯಿತು. ಇದೀಗ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿರುವ ಜಡೇಜಾ, ಸಹ ಆಟಗಾರ ಸರ್ಫರಾಜ್ ಖಾನ್ ಬಳಿ ಕ್ಷಮೆ ಯಾಚಿಸಿದ್ದಾರೆ.
ಭಾರತ ತಂಡ ಪ್ರಸ್ತುತ ರಾಜ್‌ಕೋಟ್ (Rajkot) ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧದ (India vs England) 5 ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯವನ್ನು ಆಡುತ್ತಿದೆ. ಈಗಾಗಲೇ ಮೊದಲ ದಿನದಾಟ ಮುಕ್ತಾಯಗೊಂಡಿದ್ದು, ಟಾಸ್ ಗೆದ್ದು ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತ 5 ವಿಕೆಟ್ ಕಳೆದುಕೊಂಡು 365 ರನ್ ಕಲೆಹಾಕಿದೆ. ತಂಡದ ಪರ ನಾಯಕ ರೋಹಿತ್ ಶರ್ಮಾ131 ರನ್ ಸಿಡಿಸಿದರೆ, ರವೀಂದ್ರ ಜಡೇಜಾ (Ravindra Jadeja) ಅಜೇಯ 110 ರನ್ ಕಲೆಹಾಕಿದ್ದಾರೆ. ಇವರಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಸರ್ಫರಾಜ್ ಖಾನ್ (Sarfaraz Khan) ಕೂಡ 62 ರನ್‌ಗಳ ಅಮೋಘ ಇನ್ನಿಂಗ್ಸ್ ಆಡಿದ್ದರು. ಆದರೆ ದಿನದ ಕೊನೆಯ ಸೆಷನ್‌ನಲ್ಲಿ ರವೀಂದ್ರ ಜಡೇಜಾ ಮಾಡಿದ ತಪ್ಪಿನಿಂದಾಗಿ ಸರ್ಫರಾಜ್ ಖಾನ್ ರನೌಟ್ ಆಗಿ ಪೆವಿಲಿಯನ್‌ಗೆ ಮರಳಬೇಕಾಯಿತು. ಇದೀಗ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿರು ಜಡೇಜಾ, ಸಹ ಆಟಗಾರ ಸರ್ಫರಾಜ್ ಖಾನ್ ಬಳಿ ಕ್ಷಮೆ ಯಾಚಿಸಿದ್ದಾರೆ.
ನನಗೆ ಬೇಸರವಾಗಿದೆ- ಜಡೇಜಾ
ರಾಜ್‌ಕೋಟ್ ಟೆಸ್ಟ್ ಪಂದ್ಯದ ಮೊದಲ ದಿನದ ಅಂತ್ಯದ ನಂತರ, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿರುವ ರವೀಂದ್ರ ಜಡೇಜಾ, ಸರ್ಫರಾಜ್ ಬಳಿ ಕ್ಷಮೆಯಾಚಿಸಿದ್ದಾರೆ ಮತ್ತು ಸರ್ಫರಾಜ್ ಖಾನ್ ಬಗ್ಗೆ ನನಗೆ ಬೇಸರವಾಗಿದೆ. ಇದು ನನ್ನ ತಪ್ಪು ಕರೆ, ನೀವು ಚೆನ್ನಾಗಿ ಆಡಿದ್ದೀರಿ ಎಂದು ಬರೆದುಕೊಂಡಿದ್ದಾರೆ. ವಾಸ್ತವವಾಗಿ ಸರ್ಫರಾಜ್ ಖಾನ್ ರನೌಟ್ ಆದಾಗ ರವೀಂದ್ರ ಜಡೇಜಾ 99 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಆ ನಂತರ ತಾಳ್ಮೆಯ ಬ್ಯಾಟಿಂಗ್ ಮುಂದುವರೆಸಿದ ಜಡೇಜಾ ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ಕನೇ ಶತಕವನ್ನು ಪೂರೈಸಿದರು.
Ravindra Jadeja’s Instagram story. pic.twitter.com/IPbammFJic
— Johns. (@CricCrazyJohns) February 15, 2024
ಇತ್ತ ತನ್ನದಲ್ಲದ ತಪ್ಪಿಗೆ ರನೌಟ್ಗೆ ಬಲಿಯಾದ ಸರ್ಫರಾಜ್ ತಮ್ಮ ಚೊಚ್ಚಲ ಪಂದ್ಯದಲ್ಲಿ 66 ಎಸೆತಗಳನ್ನು ಎದುರಿಸಿ 9 ಬೌಂಡರಿ ಮತ್ತು ಒಂದು ಸಿಕ್ಸರ್‌ಗಳ ಸಹಿತ 62 ರನ್ ಕಲೆಹಾಕಿದರು. ಇದಲ್ಲದೆ ಐದನೇ ವಿಕೆಟ್‌ಗೆ ಜಡೇಜಾ ಜೊತೆ 77 ರನ್‌ಗಳ ಅದ್ಭುತ ಜೊತೆಯಾಟವನ್ನೂ ಮಾಡಿದರು.
ಶತಕದೊಂದಿಗೆ ವಿಶೇಷ ದಾಖಲೆ ಬರೆದ ಜಡೇಜಾ
ರಾಜ್‌ಕೋಟ್ ಟೆಸ್ಟ್ ಪಂದ್ಯದ ಮೊದಲ ದಿನ, ರವೀಂದ್ರ ಜಡೇಜಾ 110 ರನ್‌ಗಳ ಅಜೇಯ ಇನ್ನಿಂಗ್ಸ್‌ನೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ 3000 ರನ್‌ಗಳನ್ನು ಪೂರೈಸಿದರು. ಇದರೊಂದಿಗೆ ಈ ಮಾದರಿಯಲ್ಲಿ 250 ವಿಕೆಟ್ ಹಾಗೂ 3000ಕ್ಕೂ ಹೆಚ್ಚು ರನ್ ಗಳಿಸಿದ ಭಾರತದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಕಪಿಲ್ ದೇವ್ ಮತ್ತು ರವಿಚಂದ್ರನ್ ಅಶ್ವಿನ್ ಈ ಸಾಧನೆ ಮಾಡಿದ್ದರು. ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವ ಕ್ರಿಕೆಟ್‌ನಲ್ಲಿ ಜಡೇಜಾ 12 ನೇ ಆಟಗಾರ ಎನಿಸಿಕೊಂಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ