ಶತಕದಂಚಿನಲ್ಲಿ ವಿವಾದಾತ್ಮಕ ತೀರ್ಪಿಗೆ ಬಲಿಯಾದ ಜಡೇಜಾ; ಅಂಪೈರ್ ವಿರುದ್ಧ ನೆಟ್ಟಿಗರ ಆಕ್ರೋಶ

IND vs ENG: ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ ಶತಕ ಸಿಡಿಸುತ್ತಾರೆ ಎಂದು ಎಲ್ಲರು ನಿರೀಕ್ಷಿಸಿದ್ದರು. ಆದರೆ ವಿವಾದಾತ್ಮಕ ತೀರ್ಪಿಗೆ ಬಲಿಯಾದ ಜಡೇಜಾ 13 ರನ್​ಗಳಿಂದ ಶತಕ ವಂಚಿತರಾದರು. ಇದೀಗ ಜಡೇಜಾ ವಿರುದ್ಧ ನೀಡಿದ ಎಲ್​ಬಿಡಬ್ಲ್ಯೂ ತೀರ್ಪು ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದ್ದು, ಕ್ರಿಕೆಟ್ ಪ್ರಿಯರು ಐಸಿಸಿಯ ಡಿಆರ್​ಎಸ್​ ನಿಯಮದ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ.

ಶತಕದಂಚಿನಲ್ಲಿ ವಿವಾದಾತ್ಮಕ ತೀರ್ಪಿಗೆ ಬಲಿಯಾದ ಜಡೇಜಾ; ಅಂಪೈರ್ ವಿರುದ್ಧ ನೆಟ್ಟಿಗರ ಆಕ್ರೋಶ
ರವೀಂದ್ರ ಜಡೇಜಾ

Updated on: Jan 27, 2024 | 4:09 PM

ಹೈದರಾಬಾದ್​ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ ಮೊದಲ ಟೆಸ್ಟ್​ನ ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ 436 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ಈ ಮೂಲಕ 195 ರನ್​ಗಳ ಮುನ್ನಡೆ ಕಾಯ್ದುಕೊಂಡಿತ್ತು. ಇದೀಗ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್, ಭಾರತದ ಮುನ್ನಡೆಯನ್ನು ದಾಟುವಲ್ಲಿ ಯಶಸ್ವಿಯಾಗಿದೆ. ಇನ್ನು ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ (Ravindra Jadeja) ಶತಕ ಸಿಡಿಸುತ್ತಾರೆ ಎಂದು ಎಲ್ಲರು ನಿರೀಕ್ಷಿಸಿದ್ದರು. ಆದರೆ ವಿವಾದಾತ್ಮಕ ತೀರ್ಪಿಗೆ ಬಲಿಯಾದ ಜಡೇಜಾ 13 ರನ್​ಗಳಿಂದ ಶತಕ ವಂಚಿತರಾದರು. ಇದೀಗ ಜಡೇಜಾ ವಿರುದ್ಧ ನೀಡಿದ ಎಲ್​ಬಿಡಬ್ಲ್ಯೂ ತೀರ್ಪು ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದ್ದು, ಕ್ರಿಕೆಟ್ ಪ್ರಿಯರು ಐಸಿಸಿಯ (ICC) ಡಿಆರ್​ಎಸ್​ ನಿಯಮದ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ.

ಔಟ್ ಅಥವಾ ನೌಟೌಟ್?

180 ಎಸೆತಗಳಲ್ಲಿ 87 ರನ್ ಕಲೆಹಾಕಿ ಸ್ಟ್ರೈಕ್​ನಲ್ಲಿದ್ದ ರವೀಂದ್ರ ಜಡೇಜಾ, ಜೋ ರೂಟ್ ಬೌಲ್ ಮಾಡಿದ ಚೆಂಡನ್ ಡಿಫೆಂಡ್ ಮಾಡಲು ಯತ್ನಿಸಿದರು. ಆದರೆ ಚೆಂಡು ಪ್ಯಾಡ್​ಗೆ ಬಡಿಯಿತು. ಕೂಡಲೇ ಆಟಗಾರರು ಔಟ್​ಗೆ ಮನವಿ ಮಾಡಿದರು. ಇಂಗ್ಲೆಂಡ್‌ ಆಟಗಾರರ ಮನವಿಯನ್ನು ಪುರಸ್ಕರಿಸಿದ ಅಂಪೈರ್ ಜಡೇಜಾ ಔಟೆಂದು ತೀರ್ಪು ನೀಡಿದರು. ಇದಾದ ಬಳಿಕ ಜಡೇಜಾ ತಡಮಾಡದೆ ಡಿಆರ್​ಎಸ್ ತೆಗೆದುಕೊಂಡರು. ಎಲ್ಲಾ ಆಯಾಮಗಳಲ್ಲೂ ಮೂರನೇ ಅಂಪೈರ್ ಪರೀಕ್ಷಿಸಿದರು. ಈ ವೇಳೆ ಅಲ್ಟ್ರಾಎಡ್ಜ್ ಕೂಡ ಸ್ಪೈಕ್ ಅನ್ನು ತೋರಿಸಿತು. ಆದರೆ ಚೆಂಡು ಮೊದಲು ಬ್ಯಾಟ್‌ಗೆ ತಾಗಿತೋ ಅಥವಾ ಪ್ಯಾಡ್‌ಗೆ ತಗುಲಿತೋ ಎಂಬುದು ಸ್ಪಷ್ಟವಾಗಿಲ್ಲ.

ಕಾಂಕ್ರೀಟ್ ಪುರಾವೆಗಳಿರಲಿಲ್ಲ

ಹೀಗಾಗಿ ಮೂರನೇ ಅಂಪೈರ್ ಆನ್ ಫೀಲ್ಡ್ ಅಂಪೈರ್ ನಿರ್ಧಾರವನ್ನು ಎತ್ತಿ ಹಿಡಿದರು. ಯಾವಾಗಲೂ ಬೆನಿಫಿಟ್ ಆಫ್ ಡೌಟ್ ಲಾಭ ಬ್ಯಾಟ್ಸ್‌ಮನ್‌ಗೆ ಹೋಗುತ್ತದೆ. ಆದರೆ ಜಡೇಜಾ ಪ್ರಕರಣದಲ್ಲಿ ಮೂರನೇ ಅಂಪೈರ್‌ಗೆ ಆನ್-ಫೀಲ್ಡ್ ಅಂಪೈರ್ ನಿರ್ಧಾರವನ್ನು ಬದಲಾಯಿಸಲು ಯಾವುದೇ ಕಾಂಕ್ರೀಟ್ ಪುರಾವೆಗಳಿರಲಿಲ್ಲ. ಈ ಕಾರಣಕ್ಕಾಗಿ, ಅವರು ಆನ್-ಫೀಲ್ಡ್ ಅಂಪೈರ್ ನಿರ್ಧಾರವನ್ನು ಬದಲಾಯಿಸಲಿಲ್ಲ. ಹೀಗಾಗಿ ಜಡೇಜಾ ಅವರ ಅತ್ಯುತ್ತಮ ಇನ್ನಿಂಗ್ಸ್ ಶತಕವಿಲ್ಲದೆ ಅಂತ್ಯಗೊಂಡಿತು.

ನೆಟ್ಟಿಗರ ಆಕ್ರೋಶ

ರವೀಂದ್ರ ಜಡೇಜಾ ಔಟಾದ ನಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ವನ್ನುಹೊರಹಾಕಿದ್ದಾರೆ. ಚೆಂಡು ಮೊದಲು ಜಡೇಜಾ ಅವರ ಬ್ಯಾಟ್‌ಗೆ ಬಡಿದಿದ್ದು ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ ಅಂಪೈರ್‌ಗಳು ಮಲಗಿದ್ದರು ಎಂದು ಕಾಣಿಸುತ್ತದೆ. ಹೀಗಾಗಿ ಕೆಟ್ಟ ತೀರ್ಪು ನೀಡಿದ್ದಾರೆ ಎಂದು ಮೂರನೇ ಅಂಪೈರ್​ ಹಾಗೂ ಐಸಿಸಿ ನಿಯಮದ ಬಗ್ಗೆ ಕಿಡಿಕಾರಿದ್ದಾರೆ.

ಅದ್ಭುತ ಇನ್ನಿಂಗ್ಸ್ ಆಡಿದ ಜಡೇಜಾ

ರವೀಂದ್ರ ಜಡೇಜಾ 180 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡಂತೆ 87 ರನ್ ಕಲೆ ಹಾಕಿದರು. ಇವರಿಂದಾಗಿಯೇ ಟೀಂ ಇಂಡಿಯಾ 436 ರನ್‌ಗಳ ಬೆಟ್ಟದಂತಹ ಸ್ಕೋರ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಇದಕ್ಕೂ ಮುನ್ನ ಜಡೇಜಾ ತಮ್ಮ ಬೌಲಿಂಗ್ ಸಾಮರ್ಥ್ಯ ತೋರಿ ಮೂರು ವಿಕೆಟ್ ಕೂಡ ಪಡೆದರು. ಭಾರತ ತಂಡದ ಪರ ಕೆಎಲ್ ರಾಹುಲ್ 86 ರನ್ ಹಾಗೂ ಯಶಸ್ವಿ ಜೈಸ್ವಾಲ್ 80 ರನ್ ಗಳಿಸಿದರು. ಇವರಲ್ಲದೇ ಅಕ್ಷರ್ ಪಟೇಲ್ ಕೂಡ 44 ರನ್ ಗಳಿಸಿ ಮಿಂಚಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:06 pm, Sat, 27 January 24