IND vs ENG: ಕೊನೆಗೂ ಭಾರತದ ವೀಸಾ ಪಡೆದ ಇಂಗ್ಲೆಂಡ್ ಯುವ ಸ್ಪಿನ್ನರ್
IND vs ENG: ವೀಸಾ ಸಮಸ್ಯೆಯಿಂದ ಭಾರತಕ್ಕೆ ಬರಲಾಗದೆ, ಇಂಗ್ಲೆಂಡ್ಗೆ ವಾಪಸ್ಸಾಗಿದ್ದ ಇಂಗ್ಲೆಂಡ್ ತಂಡದ ಯುವ ಸ್ಪಿನ್ನರ್ ಶೋಯಬ್ ಬಶೀರ್ಗೆ ಕೊನೆಗೂ ಭಾರತದ ವೀಸಾ ಸಿಕ್ಕಿದೆ. ಈ ಮಾಹಿತಿಯನ್ನು ಸ್ವತಃ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯೇ ನೀಡಿದೆ.
ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದ ಇದೇ ಜನವರಿ 25 ರಿಂದ ಪ್ರಾರಂಭವಾಗಲಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲ್ಲಿದ್ದು, ಈ ಪಂದ್ಯಕ್ಕಾಗಿ ಇಂಗ್ಲೆಂಡ್ ಕೂಡ ತನ್ನ ತಂಡವನ್ನು ಪ್ರಕಟಿಸಿದೆ. ಈ ನಡುವೆ ಇಂಗ್ಲೆಂಡ್ ಪಾಳಯಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿದ್ದು, ವೀಸಾ ಸಮಸ್ಯೆಯಿಂದ ಭಾರತಕ್ಕೆ ಬರಲಾಗದೆ, ಇಂಗ್ಲೆಂಡ್ಗೆ ವಾಪಸ್ಸಾಗಿದ್ದ ಇಂಗ್ಲೆಂಡ್ ತಂಡದ ಯುವ ಸ್ಪಿನ್ನರ್ ಶೋಯಬ್ ಬಶೀರ್ಗೆ (Shoaib Bashir) ಕೊನೆಗೂ ಭಾರತದ ವೀಸಾ (Visa) ಸಿಕ್ಕಿದೆ. ಈ ಮಾಹಿತಿಯನ್ನು ಸ್ವತಃ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯೇ ನೀಡಿದೆ. ಆದರೆ ಈಗಾಗಲೇ ಮೊದಲ ಟೆಸ್ಟ್ ಪಂದ್ಯಕ್ಕೆ ತಂಡವನ್ನು ಪ್ರಕಟಿಸುವ ಕಾರಣ ಶೋಯಬ್ ಬಶೀರ್ ಮೊದಲ ಟೆಸ್ಟ್ ಪಂದ್ಯವನ್ನು ಆಡಲು ಸಾಧ್ಯವಿಲ್ಲ.
ವೀಸಾ ಸಮಸ್ಯೆ ಪರಿಹಾರ
ವಾಸ್ತವವಾಗಿ ಇಂಗ್ಲೆಂಡ್ ತಂಡ ಭಾರತಕ್ಕೆ ಬರುವ ಮುನ್ನೆ ಅಬುಧಾಬಿಗೆ ತೆರಳಿತ್ತು. ಅಲ್ಲಿ ಕೆಲವು ದಿನಗಳ ಕಾಲ ಅಭ್ಯಾಸ ನಡೆಸಿತ್ತು. ಆ ಬಳಿಕ ತಂಡ ಕಳೆದ ಭಾನುವಾರ ಅಬುಧಾಬಿಯಿಂದ ಮೊದಲ ಟೆಸ್ಟ್ ನಡೆಯುವ ಹೈದರಾಬಾದ್ಗೆ ವಿಮಾನ ಹತ್ತಿತ್ತು. ಆದರೆ ಇಂಗ್ಲೆಂಡ್ ತಂಡದಲ್ಲಿ ಆಯ್ಕೆಯಾಗಿದ್ದ ಪಾಕಿಸ್ತಾನ ಮೂಲದ ಯುವ ಸ್ಪಿನ್ನರ್ ಶೋಯಬ್ ಬಶೀರ್ಗೆ ಭಾರತಕ್ಕೆ ಬರಲು ವೀಸಾ ಅನುಮತಿ ಸಿಕ್ಕಿರಲಿಲ್ಲ. ಆದರೆ ಮೊದಲ ಟೆಸ್ಟ್ ಪಂದ್ಯದ ವೇಳೆಗೆ ಅವರು ತಂಡವನ್ನು ಸೇರಿಕೊಳ್ಳುವ ಭರವಸೆಯನ್ನು ತಂಡದ ನಾಯಕ ಬೆನ್ ಸ್ಟೋಕ್ಸ್ ವ್ಯಕ್ತಪಡಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ.
IND vs ENG: ಪಾಕ್ ಮೂಲದ ಇಂಗ್ಲೆಂಡ್ ಆಟಗಾರನಿಗೆ ಸಿಗದ ವೀಸಾ; ಬ್ರಿಟನ್ ಸರ್ಕಾರ ಅಸಮಾಧಾನ
ಇಂದು ತಂಡವನ್ನು ಪ್ರಕಟಿಸಿದ ಬಳಿಕ ಮಾತನಾಡಿದ್ದ ಸ್ಟೋಕ್ಸ್, ಶೋಯಬ್ ಬಶೀರ್ಗೆ ವೀಸಾ ಸಿಕ್ಕಿಲ್ಲ. ಹೀಗಾಗಿ ಅವರು ಮೊದಲ ಟೆಸ್ಟ್ ಪಂದ್ಯವನ್ನು ಆಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಅವರು ದುಬೈನಿಂದ ಸೀದಾ ಮನೆಗೆ ವಾಪಸ್ಸಾಗಿದ್ದಾರೆ ಎಂಬ ಮಾಹಿತಿ ನೀಡಿದರು. ಆ ಬಳಿಕ ಬ್ರಿಟನ್ ಸರ್ಕಾರ ಕೂಡ ಈ ಬಗ್ಗೆ ಬೇಗನೆ ನಿರ್ಧಾರಕ್ಕೆ ಬರುವಂತೆ ಭಾರತ ಸರ್ಕಾರವನ್ನು ಕೇಳಿಕೊಂಡಿತ್ತು. ಅದರಂತೆ ಈಗ ಭಾರತದ ವೀಸಾ ಪಡೆದಿರುವ ಶೋಯಬ್ ಬಶೀರ್ ಇಷ್ಟರಲ್ಲೇ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಶೋಯೆಬ್ ಬಶೀರ್ ಮೂಲ ಪಾಕಿಸ್ತಾನ
ಅಷ್ಟಕ್ಕೂ ಶೋಯಬ್ ಬಶೀರ್ಗೆ ವೀಸಾ ಸಮಸ್ಯೆಯಾಗಲು ಪ್ರಮುಖ ಕಾರಣ ಅವರು ಪಾಕ್ ಮೂಲದವರಾಗಿರುವುದರಿಂದ. ಭಾರತ ಹಾಗೂ ಪಾಕ್ ನಡುವಿನ ಅಳಸಿದ ಸಂಬಂಧದಿಂದಾಗಿ ಪಾಕ್ ಮೂಲದ ಯಾವುದೇ ಕ್ರಿಕೆಟಿಗನಿಗೂ ಈ ವೀಸಾ ಸಮಸ್ಯೆ ಎದುರಾಗುವಂತದ್ದೆ. ಈ ಹಿಂದೆ ಆಸ್ಟ್ರೇಲಿಯಾದ ಕ್ರಿಕೆಟಿಗ ಪಾಕಿಸ್ತಾನ ಮೂಲಕ ಉಸ್ಮಾನ್ ಖವಾಜಾ ಕೂಡ ಇದೇ ಸಮಸ್ಯೆಯನ್ನು ಎದುರಿಸಿದ್ದರು.
ಇದೀಗ ಭಾರತದ ವೀಸಾ ಪಡೆದುಕೊಂಡಿರುವ ಶೋಯಬ್ ಬಶೀರ್ ಕೌಂಟಿ ಕ್ರಿಕೆಟ್ ಕ್ಲಬ್ ಸೋಮರ್‌ಸೆಟ್ ಪರ ಆಡುತ್ತಿದ್ದಾರೆ. ಅವರು ಇದುವರೆಗೆ ಇಂಗ್ಲೆಂಡ್ ಪರ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ. ಶೋಯೆಬ್ ಬಶೀರ್ ಇಂಗ್ಲೆಂಡ್‌ನಲ್ಲಿ ಜನಿಸಿದ್ದರೂ, ಅವರ ಪೋಷಕರು ಪಾಕಿಸ್ತಾನಿ ಮೂಲದವರು ಹೀಗಾಗಿ ವೀಸಾ ನೀಡುವಲ್ಲಿ ವಿಳಂಬವಾಗಿತ್ತು.
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ವೇಳಾಪಟ್ಟಿ
- ಮೊದಲ ಟೆಸ್ಟ್: 25-29 ಜನವರಿ, ಹೈದರಾಬಾದ್
- ಎರಡನೇ ಟೆಸ್ಟ್: 2-6 ಫೆಬ್ರವರಿ, ವಿಶಾಖಪಟ್ಟಣ
- ಮೂರನೇ ಟೆಸ್ಟ್: 15-19 ಫೆಬ್ರವರಿ, ರಾಜ್ಕೋಟ್
- ನಾಲ್ಕನೇ ಟೆಸ್ಟ್: 23-27 ಫೆಬ್ರವರಿ, ರಾಂಚಿ
- 5 ನೇ ಟೆಸ್ಟ್: 7-11 ಮಾರ್ಚ್, ಧರ್ಮಶಾಲಾ
ಮೊದಲ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡ: ಝಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫಾಕ್ಸ್, ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಮಾರ್ಕ್ ವುಡ್, ಜ್ಯಾಕ್ ಲೀಚ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ