ಏಕದಿನ ವಿಶ್ವಕಪ್ನ ನಾಕೌಟ್ ಪಂದ್ಯಕ್ಕೆ ಅಖಾಡ ಸಿದ್ಧವಾಗಿದೆ. ಬುಧವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ-ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇಲ್ಲಿ ಉಭಯ ತಂಡಗಳು ಸಮಬಲ ಹೊಂದಿದ್ದರೂ, ಗೆಲುವಿನಲ್ಲಿ ಟಾಸ್ ನಿರ್ಣಾಯಕ ಪಾತ್ರವಹಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಏಕೆಂದರೆ ಈ ಬಾರಿಯ ವಿಶ್ವಕಪ್ನಲ್ಲಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಒಟ್ಟು 4 ಪಂದ್ಯಗಳನ್ನಾಡಲಾಗಿದೆ. ಈ 4 ಪಂದ್ಯಗಳಲ್ಲಿ 3 ರಲ್ಲಿ ಜಯ ಸಾಧಿಸಿದ್ದು ಮೊದಲು ಬ್ಯಾಟ್ ಮಾಡಿದ ತಂಡ ಎಂಬುದು ವಿಶೇಷ. ಅದರಲ್ಲೂ ಈ ನಾಲ್ಕು ಪಂದ್ಯಗಳಲ್ಲಿ ಮೂರು ಮ್ಯಾಚ್ಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 300 ಕ್ಕೂ ಅಧಿಕ ರನ್ ಕಲೆಹಾಕಿದೆ.
ಇನ್ನು 4ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ್ 291 ರನ್ ಕಲೆಹಾಕಿತ್ತು. ಅಂದರೆ ಇಲ್ಲಿ ಮೊದಲು ಬ್ಯಾಟ್ ಮಾಡುವ ತಂಡವು ಪಿಚ್ನ ಸಂಪೂರ್ಣ ನೆರವು ಪಡೆಯಬಹುದು. ಏಕೆಂದರೆ ಮೊದಲು ಬ್ಯಾಟ್ ಮಾಡಿದ ತಂಡದ ಇಲ್ಲಿನ ಸರಾಸರಿ ಸ್ಕೋರ್ 357 ರನ್ಗಳು.
ಇದಾಗ್ಯೂ ದ್ವಿತೀಯ ಇನಿಂಗ್ಸ್ ಆಡುವ ತಂಡಕ್ಕೂ ಗೆಲ್ಲುವ ಅವಕಾಶವಿದೆ. ಇದಕ್ಕೆ ಸಾಕ್ಷಿಯೇ 91 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಆಸ್ಟ್ರೇಲಿಯಾ ತಂಡ ಅಫ್ಘಾನಿಸ್ತಾನ್ ವಿರುದ್ಧ 3 ವಿಕೆಟ್ಗಳ ರೋಚಕ ಜಯ ಸಾಧಿಸಿರುವುದು.
ಆದರೆ ದ್ವಿತೀಯ ಇನಿಂಗ್ಸ್ನಲ್ಲಿ ಬ್ಯಾಟ್ ಬೀಸುವ ತಂಡಗಳು ಗೆಲ್ಲಬೇಕಿದ್ದರೆ ತನ್ನ ರಣತಂತ್ರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿರುವುದು ಅನಿವಾರ್ಯ. ಏಕೆಂದರೆ ಈ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ತಂಡವು ಪವರ್ಪ್ಲೇನಲ್ಲಿ ಒಟ್ಟು 209 ರನ್ಸ್ ಕಲೆಹಾಕಿದೆ. ಈ ವೇಳೆ 5 ವಿಕೆಟ್ಗಳನ್ನು ಕಬಳಿಸಲಷ್ಟೇ ಬೌಲರ್ಗಳು ಯಶಸ್ವಿಯಾಗಿದ್ದಾರೆ.
ಇದೇ ವೇಳೆ ದ್ವಿತೀಯ ಇನಿಂಗ್ಸ್ನಲ್ಲಿ ಬ್ಯಾಟ್ ಮಾಡಿದ ತಂಡಗಳು ಪವರ್ಪ್ಲೇನಲ್ಲಿ ಕಲೆಹಾಕಿದ್ದು 168 ರನ್ಗಳು ಮಾತ್ರ. ಈ ವೇಳೆ 17 ವಿಕೆಟ್ ಉರುಳಿಸುವಲ್ಲಿ ಬೌಲರ್ಗಳು ಯಶಸ್ವಿಯಾಗಿದ್ದಾರೆ. ಅಂದರೆ ದ್ವಿತೀಯ ಇನಿಂಗ್ಸ್ನ ಆರಂಭದಲ್ಲಿ ಸೀಮ್ ಬೌಲಿಂಗ್ ಚೆನ್ನಾಗಿ ನಡೆಯುತ್ತದೆ. ಹಾಗೆಯೇ ಹೆಚ್ಚು ಸ್ವಿಂಗ್ ಪಡೆಯುತ್ತದೆ. ಇದನ್ನೇ ಬಳಸಿಕೊಂಡು ದ್ವಿತೀಯ ಇನಿಂಗ್ಸ್ನಲ್ಲಿ ಬೌಲರ್ಗಳು ಯಶಸ್ಸು ಸಾಧಿಸಿದ್ದಾರೆ.
ಆದರೆ ದ್ವಿತೀಯ ಇನಿಂಗ್ಸ್ನ 15 ಓವರ್ಗಳ ಬಳಿಕ ಇದೇ ಪಿಚ್ನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭ. ಹೀಗಾಗಿಯೇ ವಾಂಖೆಡೆಯಲ್ಲಿ ಸೆಕೆಂಡ್ ಇನಿಂಗ್ಸ್ ಆಡುವ ತಂಡವು ಆರಂಭದಲ್ಲಿ ಟೆಸ್ಟ್ ಕ್ರಿಕೆಟ್ ಆಡುವುದು ಸೂಕ್ತ. ಒಂದು ಹಂತದವರೆಗೆ ವಿಕೆಟ್ ಬೀಳದಂತೆ ಕ್ರೀಸ್ ಕಚ್ಚಿ ನಿಂತರೆ ಆ ಬಳಿಕ ಪಂದ್ಯದ ಚಿತ್ರಣವನ್ನೇ ಬದಲಿಸಬಹುದು.
ಇದನ್ನೂ ಓದಿ: ಏಕದಿನ ವಿಶ್ವಕಪ್ನಲ್ಲಿ ಹೊಸ ಇತಿಹಾಸ ಬರೆದ ರಚಿನ್ ರವೀಂದ್ರ
ಹೀಗಾಗಿ ವಾಂಖೆಡೆ ಮೈದಾನದಲ್ಲಿ ಟಾಸ್ ಸೋತರೂ ಗೆಲ್ಲುವ ಅವಕಾಶವಂತು ಎದುರಾಳಿ ತಂಡಕ್ಕಿದೆ. ಆದರೆ ಅದಕ್ಕಾಗಿ ಆರಂಭಿಕ ಓವರ್ಗಳ ವೇಳೆ ತಾಳ್ಮೆಯುತ ಬ್ಯಾಟಿಂಗ್ ಪ್ರದರ್ಶಿಸಬೇಕಷ್ಟೇ. ಹೀಗೆ ತಾಳ್ಮೆಯುತ ಬ್ಯಾಟಿಂಗ್ನೊಂದಿಗೆ 2011 ರಲ್ಲಿ ಇದೇ ಮೈದಾನದಲ್ಲಿ ಶ್ರೀಲಂಕಾ ನೀಡಿದ 275 ರನ್ಗಳ ಗುರಿಯನ್ನು ಬೆನ್ನತ್ತಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿತ್ತು ಎಂಬುದು ಮರೆಯುವಂತಿಲ್ಲ.