IND vs NZ: ರೋ-ಕೊ ಕ್ರೇಜ್.. 480 ಸೆಕೆಂಡ್​ಗಳಲ್ಲಿ ಎಲ್ಲಾ ಟಿಕೆಟ್ಸ್ ಸೋಲ್ಡ್ ಔಟ್

India vs New Zealand ODI: ಭಾರತ-ನ್ಯೂಜಿಲೆಂಡ್ ಏಕದಿನ ಸರಣಿ ಜನವರಿ 11 ರಿಂದ ಆರಂಭವಾಗಲಿದೆ. ಬರೋಡಾದಲ್ಲಿ ನಡೆಯುವ ಮೊದಲ ಪಂದ್ಯದ ಟಿಕೆಟ್‌ಗಳು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಟದ ಪ್ರಭಾವದಿಂದ ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿವೆ. 2027ರ ಏಕದಿನ ವಿಶ್ವಕಪ್ ಕೊನೆಯ ಟೂರ್ನಿಯಾಗಬಹುದೆಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಈ ದಿಗ್ಗಜರ ಆಟ ನೋಡಲು ಕಾತರರಾಗಿದ್ದಾರೆ. ಇವರ ಅದ್ಭುತ ಫಾರ್ಮ್ ಸಹ ಟಿಕೆಟ್ ಮಾರಾಟಕ್ಕೆ ಪ್ರಮುಖ ಕಾರಣ.

IND vs NZ: ರೋ-ಕೊ ಕ್ರೇಜ್.. 480 ಸೆಕೆಂಡ್​ಗಳಲ್ಲಿ ಎಲ್ಲಾ ಟಿಕೆಟ್ಸ್ ಸೋಲ್ಡ್ ಔಟ್
Rohit, Kohli

Updated on: Jan 02, 2026 | 5:39 PM

ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಜನವರಿ 11 ರಂದು ಆರಂಭವಾಗಲಿದೆ. ಈ ಸರಣಿಯ ಮೊದಲ ಪಂದ್ಯ ಜನವರಿ 11 ರಂದು ಬರೋಡಾದಲ್ಲಿ ನಡೆಯಲಿದೆ. ಈ ಸರಣಿಗಾಗಿ ಇನ್ನು ಟೀಂ ಇಂಡಿಯಾವನ್ನು ಪ್ರಕಟಿಸಿಲ್ಲ. ಆದಾಗ್ಯೂ ಈ ತಂಡದಲ್ಲಿ ಯಾರೆಲ್ಲ ಇರಬಹುದು ಎಂಬುದು ಈಗಾಗಲೇ ಖಚಿತವಾಗಿದೆ. ಹಾಗೆಯೇ ತಂಡದಲ್ಲಿ ಏನೆಲ್ಲ ಬದಲಾವಣೆಗಳಾದರೂ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಆಡುವುದಂತೂ ಖಚಿತ. ಹೀಗಾಗಿ ಇವರಿಬ್ಬರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ. ಇದಕ್ಕೆ ಪೂರಕವಾಗಿ ಇವರಿಬ್ಬರು ದೇಶಿ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದಾರೆ. ಹೀಗಾಗಿ ಬರೋಡಾದಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದ ಟಿಕೆಟ್​ಗಳು ಕ್ಷಣ ಮಾತ್ರದಲ್ಲಿ ಸೋಲ್ಡ್ ಔಟ್ ಆಗಿವೆ.

8 ನಿಮಿಷಗಳಲ್ಲಿ ಮಾರಾಟ

ಬರೋಡಾದಲ್ಲಿ ಸರಣಿಯ ಮೊದಲ ಪಂದ್ಯದ ಟಿಕೆಟ್‌ಗಳು ಕೇವಲ 8 ನಿಮಿಷಗಳಲ್ಲಿ ಮಾರಾಟವಾಗಿವೆ. ಇದಕ್ಕೆ ಕಾರಣ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ. ಇವರಿಬ್ಬರು ಟಿ20 ಹಾಗೂ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಕಾರಣ ಏಕದಿನದಲ್ಲಿ ಮಾತ್ರ ಆಡುತ್ತಿದ್ದಾರೆ. 2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಇವರಿಬ್ಬರ ಪಾಲಿನ ಕೊನೆಯ ಟೂರ್ನಿ ಆಗಿದೆ. ಹೀಗಾಗಿ ಇವರಿಬ್ಬರನ್ನು ಕ್ರೀಡಾಂಗಣದಲ್ಲಿ ಕೊನೆಯ ಬಾರಿಗೆ ನೋಡುವ ಅವಕಾಶವನ್ನು ಅಭಿಮಾನಿಗಳು ತಪ್ಪಿಸಿಕೊಳ್ಳಲು ಬಯಸುವುದಿಲ್ಲ. ಆದ್ದರಿಂದ ಏಕದಿನ ಪಂದ್ಯದ ಟಿಕೆಟ್​ಗಳು ಮಾರಾಟ ಶುರುವಾದ ಕೆಲವೇ ನಿಮಿಷಗಳಲ್ಲಿ ಬಿಕರಿಯಾಗುತ್ತಿವೆ.

ಟಿಕೆಟ್​ಗಳು ಈ ರೀತಿಯಾಗಿ ಸೋಲ್ಡ್ ಆಗಿರುವುದು ಇದೇ ಮೊದಲಲ್ಲ. ಈ ಹಿಂದೆ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿಯೂ ಇದೇ ನಡೆದಿತ್ತು. ಈಗ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲೂ ಅದೇ ಮುಂದುವರೆದಿದೆ. ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಎರಡು ಪಂದ್ಯಗಳಲ್ಲಿ ಶತಕ ಮತ್ತು ಮೂರನೇ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದರು. ಇತ್ತ ರೋಹಿತ್ ಶರ್ಮಾ ಅವರ ಬ್ಯಾಟ್ ಕೂಡ ಅಬ್ಬರಿಸಿತ್ತು. ಹೀಗಾಗಿ ಫಾರ್ಮ್​ನಲ್ಲಿರುವ ಇವರಿಬ್ಬರ ಆಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ.

IND vs NZ: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಆಯ್ಕೆ ಯಾವಾಗ?

ಭಾರತ- ನ್ಯೂಜಿಲೆಂಡ್ ಏಕದಿನ ಸರಣಿ ವೇಳಾಪಟ್ಟಿ

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಜನವರಿ 11 ರಿಂದ ಆರಂಭವಾಗಲಿದೆ. ಈ ಸರಣಿಯ ಮೊದಲ ಪಂದ್ಯ ಬರೋಡಾದ ಬಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡನೇ ಪಂದ್ಯ ಜನವರಿ 14 ರಂದು ರಾಜ್‌ಕೋಟ್‌ನಲ್ಲಿ ಮತ್ತು ಮೂರನೇ ಪಂದ್ಯ ಇಂದೋರ್‌ನ ಹೋಳ್ಕರ್ ಮೈದಾನದಲ್ಲಿ ನಡೆಯಲಿದೆ. ಈ ಟೂರ್ನಿಗೆ ಶುಭಮನ್ ಗಿಲ್ ನೇತೃತ್ವದ ತಂಡವನ್ನು ಇನ್ನೇರಡು ದಿನಗಳಲ್ಲಿ ಪ್ರಕಟಿಸಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ