IND vs NZ, ICC World Cup: ಭಾರತ-ನ್ಯೂಝಿಲೆಂಡ್ ಸೆಮಿಫೈನಲ್ ನೋಡಲು ಸ್ಟೇಡಿಯಂ ಹೋಗುವ ಮುನ್ನ ಎಚ್ಚರ: ಈ ವಸ್ತುಗಳು ನಿಷೇಧ
India vs New Zealand, ICC ODI World Cup Semi Final 1: ಭಾರತ-ನ್ಯೂಝಿಲೆಂಡ್ ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕಾಗಿ ಒಟ್ಟು ಏಳು ಉಪ ಪೊಲೀಸ್ ಆಯುಕ್ತರು, 200 ಅಧಿಕಾರಿಗಳು ಮತ್ತು 500 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಾಂಖೆಡೆ ಸ್ಟೇಡಿಯಂ ಪ್ರವೇಶಿಸುವಾಗ ಫ್ಯಾನ್ಸ್ ಕೆಲವು ವಸ್ತುಗಳನ್ನು ತರಬಾರದು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
2023ರ ಏಕದಿನ ವಿಶ್ವಕಪ್‌ನಲ್ಲಿ ಇಂದು ಭಾರತ ಮತ್ತು ನ್ಯೂಝಿಲೆಂಡ್ (India vs New Zealand) ನಡುವೆ ಮೊದಲ ಸೆಮಿಫೈನಲ್ ಪಂದ್ಯ ಆಯೋಜಿಸಲಾಗಿದೆ. ಮಧ್ಯಾಹ್ನ 2 ಗಂಟೆಗೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಫೈನಲ್‌ಗೆ ಟಿಕೆಟ್ ಪಡೆಯಲು ಈ ಮ್ಯಾಚ್ ಉಭಯ ತಂಡಗಳಿಗೆ ಮಹತ್ವದ್ದಾಗಿದ್ದು, ಇಂದು ಗೆದ್ದ ತಂಡ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದರೆ, ಸೋತ ತಂಡ ಟೂರ್ನಿಯಿಂದ ಔಟ್ ಆಗಲಿದೆ. ಹೀಗಾಗಿ ಇದು ಹೈವೋಲ್ಟೇಜ್ ಪಂದ್ಯ ಆಗುವುದು ಖಚಿತ. ಇದಕ್ಕಾಗಿಯೆ ಮುಂಬೈ ಪೊಲೀಸರು ಕಠಿಣ ಕ್ರಮಕೈಗೊಂಡು, ಯಾವುದೇ ಅಡಚಣೆಯಾಗದಂತೆ ಪ್ರೇಕ್ಷಕರಿಗೆ ಉತ್ತಮ ಸೌಲಭ್ಯ ಕಲ್ಪಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಕೆಲವು ಷರತ್ತುಗಳನ್ನು ಕೂಡ ವಿಧಿಸಿದ್ದಾರೆ.
ವಾಂಖೆಡೆ ಸ್ಟೇಡಿಯಂ ಪ್ರವೇಶಿಸುವಾಗ ಫ್ಯಾನ್ಸ್ ಕೆಲವು ವಸ್ತುಗಳನ್ನು ತರಬಾರದು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಈ ಪಂದ್ಯಕ್ಕಾಗಿ ಒಟ್ಟು ಏಳು ಉಪ ಪೊಲೀಸ್ ಆಯುಕ್ತರು, 200 ಅಧಿಕಾರಿಗಳು ಮತ್ತು 500 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಾಂಖೆಡೆ ಸ್ಟೇಡಿಯಂನ ಎಲ್ಲಾ ಹತ್ತು ಗೇಟ್‌ಗಳ ಮುಂಭಾಗದ ರಸ್ತೆಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಪೊಲೀಸರು ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಬಾರಿಯ ವಿಶ್ವಕಪ್‌ನಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿನ ಫಲಿತಾಂಶ ಯಾರ ಪರವಿತ್ತು? ಇಲ್ಲಿದೆ ಮಾಹಿತಿ
ಇನ್ನು ಭದ್ರತಾ ದೃಷ್ಟಿಯಿಂದ ಅಭಿಮಾನಿಗಳು ಸ್ಟೇಡಿಯಂ ಒಳಗೆ ಪೆನ್ನು, ಪೆನ್ಸಿಲ್, ಮಾರ್ಕರ್, ಖಾಲಿ ಪೇಪರ್, ಬ್ಯಾನರ್, ಪೋಸ್ಟರ್, ಬ್ಯಾಗ್, ಪವರ್ ಬ್ಯಾಂಕ್, ನಾಣ್ಯ, ಸುಡುವ ವಸ್ತುಗಳು, ತಂಬಾಕು ಉತ್ಪನ್ನಗಳನ್ನು ತರದಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಕಳೆದ 3 ದಿನಗಳಿಂದ ಈ ಪಂದ್ಯ ವೀಕ್ಷಿಸಲು ದೇಶ ವಿದೇಶಗಳಿಂದ ಕ್ರಿಕೆಟ್ ಪ್ರೇಮಿಗಳು ಮುಂಬೈಗೆ ಆಗಮಿಸಿದ್ದರು. ಕೆಲವು ಕ್ರಿಕೆಟ್ ಪ್ರೇಮಿಗಳು ವಿಶ್ವಕಪ್‌ನ ಪ್ರತಿಕೃತಿ ಮತ್ತು ದೊಡ್ಡ ಬ್ಯಾಟ್‌ನೊಂದಿಗೆ ಪಂದ್ಯವನ್ನು ವೀಕ್ಷಿಸಲು ಬಂದಿದ್ದಾರೆ.
ಸೆಮಿಫೈನಲ್ ಪಂದ್ಯಕ್ಕೆ ಉಗ್ರರ ಸಂಚು?
ಮುಂಬೈ ಪೊಲೀಸರ ಕಟ್ಟುನಿಟ್ಟಿನ ಕ್ರಮದ ನಡುವೆಯೂ ಭಾರತ-ನ್ಯೂಝಿಲೆಂಡ್ ಸೆಮಿಫೈನಲ್ ಪಂದ್ಯಕ್ಕೆ ಉಗ್ರರು ಸಂಚು ರೂಪಿಸಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ. ಯಾಕೆಂದರೆ, ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಪಂದ್ಯದ ನಡುವೆ ಅಮಾನವೀಯ ಘಟನೆಯನ್ನು ನಡೆಸಲಾಗುವುದು ಎಂದು ಅಪರಿಚಿತ ವ್ಯಕ್ತಿಯೊಬ್ಬರು ಮುಂಬೈ ಪೊಲೀಸರಿಗೆ X (ಹಿಂದಿನ ಟ್ವಿಟ್ಟರ್) ನಲ್ಲಿ ಬೆದರಿಕೆ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ವಾಂಖೆಡೆ ಸ್ಟೇಡಿಯಂ ಬಳಿ ಇರುವ ಕೆಲ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದ್ದಾರಂತೆ. ವ್ಯಕ್ತಿ ತಾನು ಹಂಚಿಕೊಂಡಿರುವ ಫೋಟೋದಲ್ಲಿ ಗನ್, ಹ್ಯಾಂಡ್ ಗ್ರೆನೇಡ್ ಮತ್ತು ಬುಲೆಟ್‌ಗಳನ್ನು ತೋರಿಸಿ, ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.
ಸದ್ಯ ಪೊಲೀಸರು ಮುಂಬೈ ನಗರದಾದ್ಯಂತ ಕಟ್ಟೆಚ್ಚರ ವಹಿಸಿದ್ದಾರೆ. ಬೆದರಿಕೆ ಸಂದೇಶ ಕಳುಹಿಸದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪಂದ್ಯಕ್ಕೆ ಹಾಜರಾಗುವ ಪ್ರೇಕ್ಷಕರನ್ನು ಸಂಪೂರ್ಣವಾಗಿ ಪರಿಶೀಲಿಸಿ ನಂತರವೇ ಸ್ಟೇಡಿಯಂ ಒಳಗೆ ಬಿಡಲಿದ್ದಾರೆ. ವಾಂಖೆಡೆ ಸ್ಟೇಡಿಯಂ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ