IND vs NZ: ಸೂರ್ಯ ಸ್ಫೋಟಕ ಶತಕ; ಕಿವೀಸ್ ನಾಡಲ್ಲಿ 2ನೇ ಟಿ20 ಪಂದ್ಯ ಗೆದ್ದ ಯುವ ಟೀಂ ಇಂಡಿಯಾ..!
IND vs NZ: ಮೌಂಟ್ ಮೌಂಗನು ಬೇ ಓವಲ್ ಮೈದಾನದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಎರಡನೇ ಟಿ20 ಪಂದ್ಯದಲ್ಲಿ ಯುವ ಟೀಂ ಇಂಡಿಯಾ ಕೇನ್ ಪಡೆಯನ್ನು ಬಗ್ಗುಬಡಿಯುವಲ್ಲಿ ಯಶಸ್ವಿಯಾಗಿದೆ.
ಮೌಂಟ್ ಮೌಂಗನು ಬೇ ಓವಲ್ ಮೈದಾನದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ (India Vs New Zealand) ನಡುವಣ ಎರಡನೇ ಟಿ20 ಪಂದ್ಯದಲ್ಲಿ ಯುವ ಟೀಂ ಇಂಡಿಯಾ ಕೇನ್ ಪಡೆಯನ್ನು ಬಗ್ಗುಬಡಿಯುವಲ್ಲಿ ಯಶಸ್ವಿಯಾಗಿದೆ. 10 ದಿನಗಳ ಟಿ20 ವಿಶ್ವಕಪ್ ನಿರಾಸೆಯ ನಂತರ, ಅಂತಿಮವಾಗಿ ಭಾರತ ತಂಡ ಮತ್ತೆ ಮೈದಾನಕ್ಕೆ ಬಂದು ಅಮೋಘ ಗೆಲುವಿನೊಂದಿಗೆ ಹೊಸ ಯುಗವನ್ನು ಪ್ರಾರಂಭಿಸಿದೆ. ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದ ಭಾರತ ತಂಡ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 65 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿತು. ವರ್ಷವಿಡೀ ವಿಶ್ವದ ವಿವಿಧ ಮೈದಾನಗಳಲ್ಲಿ ಬೌಲರ್‌ಗಳನ್ನು ಧ್ವಂಸ ಮಾಡುತ್ತಿದ್ದ ಸೂರ್ಯಕುಮಾರ್ ಯಾದವ್ (Suryakumar Yadav) ತಮ್ಮ ಮೊದಲ ನ್ಯೂಜಿಲೆಂಡ್ ಪ್ರವಾಸದಲ್ಲೂ ಅಬ್ಬರದ ಬ್ಯಾಟಿಂಗ್ ಮಾಡಿ ಅಮೋಘ ಶತಕ ಬಾರಿಸುವ ಮೂಲಕ ತಂಡದ ಗೆಲುವಿಗೆ ಅಡಿಪಾಯ ಹಾಕಿದರು. ಯುಜ್ವೇಂದ್ರ ಚಹಾಲ್ ಮತ್ತು ದೀಪಕ್ ಹೂಡಾ ಅವರ ಸ್ಪಿನ್ ಈ ಅಡಿಪಾಯದ ಮೇಲೆ ಯಶಸ್ವಿ ಕಟ್ಟಡವನ್ನು ನಿರ್ಮಿಸಿತು.
ಮೂರು ಪಂದ್ಯಗಳ ಟಿ20 ಸರಣಿ ಪೈಕಿ ಮೊದಲ ಕದನ ಸಂಪೂರ್ಣವಾಗಿ ಮಳೆಗೆ ಆಹುತಿಯಾಗಿತ್ತು. ವೆಲ್ಲಿಂಗ್ಟನ್ನಲ್ಲಿ (Wellington) ಎಡೆಬಿಡದೆ ಮಳೆ ಸುರಿದು ಮೈದಾನದಲ್ಲಿ ಹೆಜ್ಜೆ ಇಡಲೂ ಸಾಧ್ಯವಾಗಲಿಲ್ಲ. ಬಳಿಕ ಒಂದೂ ಎಸೆತವಿಲ್ಲದೆ ಪಂದ್ಯವನ್ನು ರದ್ದುಗೊಳಿಸಲಾಯಿತು. ಹೀಗಾಗಿ ಸರಣಿ ಕೈವಶ ಮಾಡಿಕೊಳ್ಳಬೇಕಾದರೆ ಉಳಿದಿರುವ ಎರಡು ಪಂದ್ಯಗಳಲ್ಲಿ ಎರಡನ್ನೂ ಗೆಲ್ಲಬೇಕಾದ ಒತ್ತಡದಲ್ಲಿ ಉಭಯ ತಂಡಗಳಿದ್ದವು.
ಪಂತ್ ಮತ್ತೆ ವಿಫಲ
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಗದಿದ್ದರೂ, ಆರಂಭಿಕರಿಬ್ಬರು ಬೇಗನೇ ವಿಕೆಟ್ ಕಳೆದುಕೊಳ್ಳಲಿಲ್ಲ. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಪಂತ್ ಹಾಗೂ ಕಿಶನ್ ಮೊದಲ ವಿಕೆಟ್ಗೆ 36 ರನ್‌ಗಳ ಜೊತೆಯಾಟ ಹಂಚಿಕೊಂಡರು. ಹಲವು ದಿನಗಳಿಂದ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಪಂತ್ ಅವರ ಬ್ಯಾಟಿಂಗ್ ಕ್ರಮಾಂಕ ಬದಲಾದರೂ ಅವರ ಆಟ ಬದಲಾಗಲಿಲ್ಲ. ಈ ಪಂದ್ಯದಲ್ಲಿ 13 ಎಸೆತಗಳನ್ನು ಎದುರಿಸಿದ ಪಂತ್ ಕೇವಲ 6 ರನ್ಗಳಿಗೆ ಸುಸ್ತಾದರು. ಆ ಬಳಿಕ ಜೊತೆಯಾದ ಕಿಶನ್ ಹಾಗೂ ಸೂರ್ಯ ರನ್‌ಗಳ ಮಳೆಗರೆದರು. ಈ ಜೋಡಿ ಎರಡನೇ ವಿಕೆಟ್ಗೆ ತಂಡಕ್ಕೆ 69 ರನ್‌ಗಳ ಕೊಡುಗೆ ನೀಡಿತು. ಈ ವೇಳೆ 31 ಎಸೆತಗಳಲ್ಲಿ 36 ರನ್ ಗಳಿಸಿದ್ದ ಕಿಶನ್ ಸೋಧಿಗೆ ಬಲಿಯಾದರು.
ಆದರೆ ತಮ್ಮ ಎಂದಿನ ಆಟವನ್ನು ಮುಂದುವರೆಸಿದ ಸೂರ್ಯ ಬೇ ಓವೆಲ್ನ ಅಷ್ಟ ದಿಕ್ಕುಗಳಿಗು ಚೆಂಡಿನ ದರ್ಶನ ಮಾಡಿಸಿದರು. ತಮ್ಮ ಆರಂಭಿಕ 50 ರನ್‌ಗಳನ್ನು 32 ಎಸೆತಗಳಲ್ಲಿ ಪೂರ್ಣಗೊಳಿಸಿದ ಸೂರ್ಯ ಮುಂದಿನ 50 ರನ್‌ಗಳನ್ನು ಕೇವಲ 17 ಎಸೆತಗಳಲ್ಲಿ ಹೊಡೆಯುವ ಮೂಲಕ ಶತಕವನ್ನು ಪೂರ್ಣಗೊಳಿಸಿದರು. ಈ ಸ್ಫೋಟಕ ಶತಕದ ಆದಾರದ ಮೇಲೆ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 192 ರನ್ ಕಲೆಹಾಕಿತು. ಕಿವೀಸ್ ಪರ ವೇಗಿ ಟೀಮ್ ಸೌದಿ ಕೊನೆಯ ಓವರ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ದಾಖಲೆ ಬರೆದರೆ, ಪಗ್ರ್ಯುಸನ್ 2, ಸೋಧಿ 1 ವಿಕೆಟ್ ಪಡೆದು ಮಿಂಚಿದರು.
ಸೂರ್ಯ ಸೂಪರ್ ಶೋ
ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಟಿ20 ಕ್ರಿಕೆಟ್‌ನಲ್ಲಿ ಛಾಪು ಮೂಡಿಸಿರುವ ಸೂರ್ಯ, ಈ ಪಂದ್ಯದಲ್ಲಿಯೂ ಅದೇ ಶೈಲಿಯನ್ನು ಮುಂದುವರೆಸಿದರು. ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್‌ನಲ್ಲಿ ಪ್ರಬಲ ರನ್ ಗಳಿಸಿದ್ದ ಸೂರ್ಯ ಕೇವಲ 51 ಎಸೆತಗಳಲ್ಲಿ 111 ರನ್‌ಗಳ ಅಜೇಯ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು 191 ರನ್‌ಗೆ ಕೊಂಡೊಯ್ದರು.
ಕೊನೆಯ 5 ಓವರ್‌ಗಳಲ್ಲಿ ಕಿವೀಸ್ ಬೌಲರ್‌ಗಳನ್ನು ಬೆಂಡೆತ್ತಿದ ಸೂರ್ಯ ಕೇವಲ 49 ಎಸೆತಗಳಲ್ಲಿ ಶತಕ ಪೂರೈಸಿದರು. ಇದರಲ್ಲಿ ಲಾಕಿ ಫರ್ಗುಸನ್ ಅವರ ಓವರ್‌ನಲ್ಲಿ 22 ರನ್‌ಗಳು ಬಂದವು. ಆದರೆ, ಕೊನೆಯ ಓವರ್‌ನಲ್ಲಿ ಸೂರ್ಯನಿಗೆ ಒಂದೇ ಒಂದು ಚೆಂಡನ್ನು ಆಡಲು ಸಾಧ್ಯವಾಗಲಿಲ್ಲ ಹಾಗಾಗಿ ಭಾರತಕ್ಕೆ 200 ರ ಗಡಿ ತಲುಪಲು ಸಾಧ್ಯವಾಗಲಿಲ್ಲ.
ಕಿವೀಸ್ ಕಳಪೆ ಆರಂಭ
192 ರನ್‌ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಕಿವೀಸ್ಗೆ ಮೊದಲ ಓವರ್ ಎರಡನೇ ಎಸೆತದಲ್ಲಿಯೇ ಭುವನೇಶ್ವರ್ ಕುಮಾರ್ ಶಾಕ್ ನೀಡಿದರು. ಓವರ್ನ ಎರಡನೇ ಎಸೆದಲ್ಲಿಯೇ ಸ್ಫೋಟಕ ಬ್ಯಾಟರ್ ಫಿನ್ ಅಲೆನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಜೊತೆಯಾದ ಕಾನ್ವೇ ಹಾಗೂ ನಾಯಕ ವಿಲಿಯಮ್ಸನ್ ಅರ್ಧಶತಕದ ಜೊತೆಯಾಟ ಆಡಿದರಾದರೂ ತ್ವರಿತವಾಗಿ ರನ್ಗಳಿಸಲಿಲ್ಲ. ಹೀಗಾಗಿ ತಂಡ ಒತ್ತಡಕ್ಕೆ ಸಿಲುಕಿತು. ಈ ವೇಳೆ ಹೊಡಿಬಡಿ ಆಟಕ್ಕೆ ಮುಂದಾದ ಕಾನ್ವೇ 25 ರನ್ಗಳಿಸಿದ್ದಾಗ ಸುಂದರ್ ಬೌಲಿಂಗ್ನಲ್ಲಿ ಕ್ಯಾಚಿತ್ತು ಔಟಾದರು.
ಈ ವಿಕೆಟ್ ಬಳಿಕ ಬಂದ ಯಾವ ಬ್ಯಾಟ್ಸ್ಮನ್ ಕೂಡ ನಾಯಕ ಕೇನ್ಗೆ ಸಾಥ್ ನೀಡಲಿಲ್ಲ. ಬಂದ ಬಂದವರೆಲ್ಲ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ನಾಯಕ ಕೇನ್ 52 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 61 ರನ್ಗಳಿಸಿ ಸಿರಾಜ್ಗೆ ಬಲಿಯಾದರು. ಅಂತಿಮವಾಗಿ ಕಿವೀಸ್ ತಂಡ ಪೂರ್ಣ 20 ಓವರ್ಗಳನ್ನು ಸಹ ಆಡಲಾಗದೆ 19ನೇ ಓವರ್‌ನಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 126 ರನ್ಗಳಿಗೆ ಆಲೌಟ್ ಆಯಿತು. ಭಾರತದ ಪರ ಹೂಡಾ 4 ವಿಕೆಟ್ ಪಡೆದು ಮಿಂಚಿದರೆ, ಚಾಹಲ್ ಹಾಗೂ ಸಿರಾಜ್ ತಲಾ 2 ವಿಕೆಟ್ ಪಡೆದರು. ಸುಂದರ್ ಹಾಗೂ ಭುವಿ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
Published On - 4:01 pm, Sun, 20 November 22