
ಸೆಪ್ಟೆಂಬರ್ 2 ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲ್ಲಿರುವ ಭಾರತ ವಿರುದ್ಧದ ಏಷ್ಯಾಕಪ್ (Asia Cup 2023) ಪಂದ್ಯಕ್ಕೆ ಒಂದು ದಿನ ಮುನ್ನವೇ ಪಾಕಿಸ್ತಾನ (India vs Pakistan) ತನ್ನ ಪ್ಲೇಯಿಂಗ್ ಇಲೆವೆನ್ ಅನ್ನು ಪ್ರಕಟಿಸಿದೆ. ಏಷ್ಯಾಕಪ್ನ ಉದ್ಘಾಟನಾ ಪಂದ್ಯದಲ್ಲಿ ನೇಪಾಳ ವಿರುದ್ಧ ಕಣಕ್ಕಿಳಿದಿದ್ದ ಅದೇ ತಂಡವನ್ನು ಕಣಕ್ಕಿಳಿಸಲು ಪಾಕ್ ಮಂಡಳಿ ಮುಂದಾಗಿದೆ. ಏಷ್ಯಾಕಪ್ನ ಹೈವೋಲ್ಟೇಜ್ ಪಂದ್ಯಕ್ಕೆ ಇನ್ನೊಂದು ದಿನ ಬಾಕಿ ಇರುವಾಗಲೇ ಪಾಕಿಸ್ತಾನ ತನ್ನ ಆಡುವ ಹನ್ನೊಂದರ ಬಳಗವನ್ನು (Pakistan Cricket team) ಘೋಷಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದೆ. ಇಂದು ಅಂದರೆ ಶುಕ್ರವಾರ, ಸೆಪ್ಟೆಂಬರ್ 1 ರಂದು ನಡೆದ ಕ್ಯಾಪ್ಟನ್ ಬಾಬರ್ ಆಝಂ (Babar Azam) ಅವರ ಪತ್ರಿಕಾಗೋಷ್ಠಿಯ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ.
ವಾಸ್ತವವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ತಂಡವನ್ನು ಪಂದ್ಯ ನಡೆಯುವ ಒಂದು ದಿನ ಮೊದಲು ಪ್ರಕಟಿಸುವ ಸಂಪ್ರದಾಯ ಹೊಂದಿಲ್ಲ. ಆದರೆ ಈ ಬಾರಿಯ ಏಷ್ಯಾಕಪ್ನಲ್ಲಿ ಪಾಕ್ ಮಂಡಳಿ ಆ ರೀತಿಯ ವಿನೂತನ ಪ್ರಯತ್ನಕ್ಕೆ ಕೈಹಾಕಿದೆ. ಈ ಹಿಂದೆ ಅಂದರೆ ಆಗಸ್ಟ್ 30 ರಂದು ನಡೆದ ಪಂದ್ಯಾವಳಿಯ ಮೊದಲ ಪಂದ್ಯ ನಡೆಯುವ ಒಂದು ದಿನಕ್ಕೂ ಮುನ್ನ ಪಾಕ್ ಮಂಡಳಿ ತನ್ನ ತಂಡವನ್ನು ಪ್ರಕಟಿಸಿತ್ತು. ಇನ್ನು ಆ ಪಂದ್ಯದಲ್ಲಿ ನೇಪಾಳ ತಂಡವನ್ನು ಪಾಕಿಸ್ತಾನ 238 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿತ್ತು. ಆ ಪಂದ್ಯದಲ್ಲಿ ಪಾಕ್ ಪರ ನಾಯಕ ಬಾಬರ್ ಆಝಂ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಇಫ್ತಿಕರ್ ಅಹ್ಮದ್ ಅದ್ಭುತ ಶತಕ ಸಿಡಿಸಿ ಮಿಂಚಿದ್ದರಯ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಎರಡು ಶತಕಗಳ ನೆರವಿನಿಂದ 342 ರನ್‌ಗಳ ಟಾರ್ಗೆಟ್ ಸೆಟ್ ಮಾಡಿತ್ತು. ಈ ಗುರಿ ಬೆನ್ನಟ್ಟಿದ ನೇಪಾಳ ಶಾಹೀನ್ ಶಾ ಆಫ್ರಿದಿ, ಹ್ಯಾರಿಸ್ ರೌಫ್ ಮತ್ತು ಶಾದಾಬ್ ಖಾನ್ ದಾಳಿಗೆ ತತ್ತರಿಸಿ ಕೇವಲ 104 ರನ್‌ಗಳಿಗೆ ಆಲೌಟ್ ಆಗಿತ್ತು.
ಪಾಕ್ ಎದುರು ಭಾರತ ಮೊದಲು ಬ್ಯಾಟ್ ಮಾಡಬೇಕೇ ಅಥವಾ ಬೌಲಿಂಗ್ ಮಾಡಬೇಕೇ? ಇಲ್ಲಿದೆ ಕ್ಯಾಂಡಿ ಪಿಚ್ ವರದಿ
ಹೀಗಾಗಿ ಭಾರತ ವಿರುದ್ಧದ ಪಂದ್ಯಕ್ಕೂ ತನ್ನ ಗೆಲುವಿನ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಮಾಡದಿರಲು ಪಾಕಿಸ್ತಾನ ನಿರ್ಧರಿಸಿದೆ. ಆದಾಗ್ಯೂ, ಪಂದ್ಯದ ಮೊದಲು ಪಾಕಿಸ್ತಾನಿ ತಂಡವು ಆಡುವ ಹನ್ನೊಂದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಇದರ ಅರ್ಥವಲ್ಲ. ನಿಯಮಗಳ ಪ್ರಕಾರ, ಟಾಸ್ ಮೊದಲು ಪಾಕಿಸ್ತಾನಿ ತಂಡ ಪ್ಲೇಯಿಂಗ್ ಇಲೆವೆನ್ ಅನ್ನು ಬದಲಾಯಿಸಬಹುದಾಗಿದೆ. ಆದರೆ ಹಾಗೆ ಆಗುವ ಸಾಧ್ಯತೆಗಳು ತೀರ ಕಡಿಮೆ ಇವೆ.
Pakistan to field same playing XI tomorrow 🇵🇰#PAKvIND | #AsiaCup2023 pic.twitter.com/qe18Ad6pF4
— Pakistan Cricket (@TheRealPCB) September 1, 2023
ಆದಾಗ್ಯೂ, ನೇಪಾಳ ವಿರುದ್ಧ ಜಯಗಳಿಸಿದರೂ, ಪಾಕಿಸ್ತಾನದ ಕೆಲವು ಮಾಜಿ ಅನುಭವಿಗಳು ತಂಡದಲ್ಲಿ ಬದಲಾವಣೆಗೆ ಒತ್ತಾಯಿಸಿದ್ದರು. ವಿಶೇಷವಾಗಿ ತಂಡದಲ್ಲಿ ಆರಂಭಿಕ ಆಟಗಾರ ಫಖರ್ ಜಮಾನ್ ಅವರ ಸ್ಥಾನದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಅವರು ಕಳೆದ ಕೆಲವು ತಿಂಗಳುಗಳಿಂದ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. ಅಲ್ಲದೆ ನೇಪಾಳ ವಿರುದ್ಧವೂ ಅವರ ಬ್ಯಾಟ್ ಸದ್ದು ಮಾಡಿರಲಿಲ್ಲ. ಇವರೊಂದಿಗೆ ಮಧ್ಯಮ ಕ್ರಮಾಂಕದಲ್ಲಿ ಹೆಚ್ಚಿನ ಅನುಭವ ಹೊಂದಿಲ್ಲದ ಅಘಾ ಸಲ್ಮಾನ್ ಉಪಸ್ಥಿತಿಯ ಬಗ್ಗೆಯೂ ಪ್ರಶ್ನೆ ಮಾಡಲಾಗಿತ್ತು. ಇದರ ಹೊರತಾಗಿಯೂ ನೇಪಾಳದ ವಿರುದ್ಧ ಪಾಕಿಸ್ತಾನ ಜಯಭೇರಿ ಬಾರಿಸಿತ್ತು. ಆದರೆ ಪಾಕ್ ತಂಡದ ನಿಜವಾದ ಪರೀಕ್ಷೆ ಈಗ ಭಾರತದ ವಿರುದ್ಧ ನಡೆಯಲಿದ್ದು, ಪಾಕಿಸ್ತಾನದ ನಿರ್ಧಾರ ಸರಿಯೋ ತಪ್ಪೋ ಎಂಬುದು ಶನಿವಾರವಷ್ಟೇ ತಿಳಿಯಲಿದೆ.
ಪಾಕಿಸ್ತಾನ ತಂಡ: ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಆಝಮ್ (ನಾಯಕ), ಮೊಹಮ್ಮದ್ ರಿಜ್ವಾನ್, ಸಲ್ಮಾನ್ ಅಘಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:52 pm, Fri, 1 September 23