ಪಾಕ್ ಎದುರು ಭಾರತ ಮೊದಲು ಬ್ಯಾಟ್ ಮಾಡಬೇಕೇ ಅಥವಾ ಬೌಲಿಂಗ್ ಮಾಡಬೇಕೇ? ಇಲ್ಲಿದೆ ಕ್ಯಾಂಡಿ ಪಿಚ್‌ ವರದಿ

IND Vs PAK, Asia Cup 2023: ಶ್ರೀಲಂಕಾ-ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿದ್ದ ಇದೇ ಮೈದಾನದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡ ಮುಖಾಮುಖಿಯಾಗಲಿವೆ. ಆದರೆ ಈ ಪಂದ್ಯಕ್ಕೂ ಅದೇ ಪಿಚ್ ಬಳಸುತ್ತಾರೆಯೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ? ಒಂದು ವೇಳೆ ಅದೇ ಹಳೆಯ ಪಿಚ್ ಬಳಸಿದರೆ, ಈ ಪಂದ್ಯವೂ ಕೂಡ ಅಲ್ಪ ಸ್ಕೋರ್​ನ ಪಂದ್ಯವಾಗುವುದು ಖಚಿತ. ಇದು ನಿಧಾನಗತಿಯ ಪಿಚ್ ಆಗಿರುವುದರಿಂದ ಬ್ಯಾಟ್ಸ್​ಮನ್​ಗಳು ರನ್ ಕದಿಯಲು ಪರದಾಡುವುದನ್ನು ಕಾಣಬಹುದಾಗಿದೆ.

ಪಾಕ್ ಎದುರು ಭಾರತ ಮೊದಲು ಬ್ಯಾಟ್ ಮಾಡಬೇಕೇ ಅಥವಾ ಬೌಲಿಂಗ್ ಮಾಡಬೇಕೇ? ಇಲ್ಲಿದೆ ಕ್ಯಾಂಡಿ ಪಿಚ್‌ ವರದಿ
ರೋಹಿತ್ ಶರ್ಮಾ

Updated on: Sep 01, 2023 | 6:08 PM

ಹತ್ತು ತಿಂಗಳ ಕಾಯುವಿಕೆಯ ನಂತರ ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನ (India vs Pakistan) ತಂಡಗಳು ಮುಖಾಮುಖಿಯಾಗಿವೆ. ಶನಿವಾರ, ಆಗಸ್ಟ್ 2 ರಂದು, ಎರಡೂ ತಂಡಗಳು ಶ್ರೀಲಂಕಾದ ಕ್ಯಾಂಡಿಯಲ್ಲಿ ಏಷ್ಯಾಕಪ್ (Asia Cup 2023) ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಅಭಿಮಾನಿಗಳು ಈ ಪಂದ್ಯಕ್ಕಾಗಿ ಈಗಾಗಲೇ ಕಾದುಕುಳಿತ್ತಿದ್ದಾರೆ. ಆದರೆ ಕ್ಯಾಂಡಿಯಲ್ಲಿನ ಹವಾಮಾನ ವರದಿ ಈ ಹೈವೋಲ್ಟೇಜ್ ಪಂದ್ಯಕ್ಕೆ ಅಡ್ಡಿಯನ್ನುಂಟು ಮಾಡುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಇದೆಲ್ಲದರ ಹೊರತಾಗಿ ಪಂದ್ಯ ನಡೆಯಲು ಸಾಧ್ಯವಾದರೆ, ಟೀಂ ಇಂಡಿಯಾ (Team India) ಈ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಬೇಕೆ ಅಥವಾ ಬೌಲಿಂಗ್ ಮಾಡಬೇಕೆ ಎಂಬ ಪ್ರಶ್ನೆ ಕಾಡಲಾರಂಭಿಸಿದೆ?. ಈ ಪ್ರಶ್ನೆಗೆ ಈ ಹಿಂದೆ ನಡೆದ ಪಂದ್ಯಗಳು ಉತ್ತರ ನೀಡುತ್ತಿದ್ದು, ಇದರೊಂದಿಗೆ ನಿನ್ನೆ ನಡೆದ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯವೂ ಪರಿಸ್ಥಿತಿಯನ್ನು ವಿವರವಾಗಿ ತಿಳಿಸಿದೆ.

ಏಷ್ಯಾಕಪ್‌ನ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಇದೇ ಮೈದಾನದಲ್ಲಿ ಗುರುವಾರ, ಆಗಸ್ಟ್ 31 ರಂದು ಮುಖಾಮುಖಿಯಾಗಿದ್ದವು . ಈ ಪಂದ್ಯದಲ್ಲಿ ಯಾವುದೇ ತಂಡ ಪೂರ್ಣ 50 ಓವರ್‌ಗಳನ್ನು ಆಡಲಿಲ್ಲ. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 43 ಓವರ್‌ಗಳನ್ನು ಮಾತ್ರ ಆಡಿ 164 ರನ್​ಗಳಿಗೆ ಆಲೌಟ್ ಆಗಿತ್ತು. ಆದರೆ ಬಾಂಗ್ಲಾ ನೀಡಿದ ಅಲ್ಪ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ 39 ಓವರ್​ವರೆಗೆ ಬ್ಯಾಟ್ ಬೀಸಿ ಗುರಿ ತಲುಪ್ಪಿತ್ತು. ಆದರೆ ಎರಡೂ ಇನ್ನಿಂಗ್ಸ್‌ಗಳಿಂದ ಹೊರಬಂದ ಒಟ್ಟು ರನ್‌ಗಳು ಕೇವಲ 329. ನಿಸ್ಸಂಶಯವಾಗಿ, ಇದರಿಂದ ತಿಳಿಯುವುದೇನೆಂದರೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವು ಕಡಿಮೆ ಸ್ಕೋರ್‌ನ ಪಂದ್ಯವಾಗಲಿದೆ ಎಂಬುದು ಸ್ಪಷ್ಟವಾಗಿದೆ.

IND Vs PAK: 4ನೇ ಕ್ರಮಾಂಕಕ್ಕೆ ಈ ಬ್ಯಾಟರ್ ಫಿಕ್ಸ್; ಅಚ್ಚರಿಯ ನಿರ್ಧಾರ ತೆಗೆದುಕೊಂಡ ರೋಹಿತ್..!

ನಿಧಾನಗತಿಯ ಪಿಚ್, ಸ್ಪಿನ್ನರ್‌ಗಳಿಗೆ ಸಹಾಯಕ

ಶ್ರೀಲಂಕಾ-ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿದ್ದ ಇದೇ ಮೈದಾನದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡ ಮುಖಾಮುಖಿಯಾಗಲಿವೆ. ಆದರೆ ಈ ಪಂದ್ಯಕ್ಕೂ ಅದೇ ಪಿಚ್ ಬಳಸುತ್ತಾರೆಯೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ? ಒಂದು ವೇಳೆ ಅದೇ ಹಳೆಯ ಪಿಚ್ ಬಳಸಿದರೆ, ಈ ಪಂದ್ಯವೂ ಕೂಡ ಅಲ್ಪ ಸ್ಕೋರ್​ನ ಪಂದ್ಯವಾಗುವುದು ಖಚಿತ. ಇದು ನಿಧಾನಗತಿಯ ಪಿಚ್ ಆಗಿರುವುದರಿಂದ ಬ್ಯಾಟ್ಸ್​ಮನ್​ಗಳು ರನ್ ಕದಿಯಲು ಪರದಾಡುವುದನ್ನು ಕಾಣಬಹುದಾಗಿದೆ.

ಇದಕ್ಕೆ ಪೂರಕವಾಗಿ ತಂಡದ ಸೋಲಿನ ನಂತರ ಮಾತನಾಡಿದ ಬಾಂಗ್ಲಾದೇಶದ ನಾಯಕ ಶಕೀಬ್, ತಮ್ಮ ತಂಡದ ಬ್ಯಾಟಿಂಗ್ ಉತ್ತಮವಾಗಿಲ್ಲ ಎಂದು ಒಪ್ಪಿಕೊಂಡರು. ಆದರೆ ಈ ಪಿಚ್ 300 ರನ್ ಕಲೆಹಾಕುವಂತಹ ಪಿಚ್​ ಆಗಿರಲಿಲ್ಲ. ಇದು ಕೇವಲ 220 ರಿಂದ 230 ರನ್​ ಕಲೆಹಾಕಬಹುದಾದ ಪಿಚ್ ಆಗಿದೆ ಎಂದರು. ಇವರಲ್ಲದೆ ಶ್ರೀಲಂಕಾ ಪರ ಅರ್ಧಶತಕ ಗಳಿಸಿದ ಚರಿತ್ ಅಸಲಂಕಾ, ಸಮರವಿಕ್ರಮ ಕೂಡ ಈ ಪಿಚ್​ನಲ್ಲಿ ಬ್ಯಾಟಿಂಗ್‌ ಅಷ್ಟೇನೂ ಸುಲಭವಲ್ಲ ಎಂದಿದ್ದಾರೆ. ಇವರ ಮಾತಿಗೆ ಸಾಕ್ಷಿಯಾಗಿ ಈ ಪಂದ್ಯದಲ್ಲಿ ವೇಗಿಗಳಿಗಿಂತ ಸ್ಪಿನ್ನರ್​ಗಳೇ ಹೆಚ್ಚು ಮಿಂಚಿದರು. ಶ್ರೀಲಂಕಾ ಪರ 3 ಸ್ಪಿನ್ನರ್​ಗಳು ಒಟ್ಟಾಗಿ 25.4 ಓವರ್ ಬೌಲ್ ಮಾಡಿ ಕೇವಲ 84 ರನ್ ನೀಡಿ 4 ವಿಕೆಟ್ ಕಬಳಿಸಿದರು. ಅದೇ ಸಮಯದಲ್ಲಿ, ಬಾಂಗ್ಲಾದೇಶದ ಪರವಾಗಿ, 3 ಸ್ಪಿನ್ನರ್‌ಗಳು 25 ಓವರ್‌ಗಳಲ್ಲಿ ಕೇವಲ 90 ರನ್ ನೀಡಿ, 5 ರಲ್ಲಿ 3 ವಿಕೆಟ್ ಪಡೆದರು.

ರನ್ಚೇಸ್ ಅಥವಾ ಮೊದಲು ಬ್ಯಾಟಿಂಗ್ – ಯಾವುದು ಉತ್ತಮ?

ಇನ್ನು ಈ ಮೈದಾನದಲ್ಲಿ ಟಾಸ್ ಗೆದ್ದ ತಂಡ ಮೊದಲು ಏನು ಮಾಡಿದರೆ ಉತ್ತಮ ಎಂಬುದನ್ನು ಈ ಹಿಂದಿನ ದಾಖಲೆಯನ್ನು ಅವಲೋಕಿಸಿ ನೋಡಿದರೆ, ಈ ಮೈದಾನದಲ್ಲಿ ರನ್ ಚೇಸ್​ನ ದಾಖಲೆಯು ಅತ್ಯುತ್ತಮವಾಗಿದೆ. ಅಂಕಿಅಂಶಗಳ ಪ್ರಕಾರ, ಮೊದಲು ಬ್ಯಾಟಿಂಗ್ ಮಾಡಿದ ತಂಡವು 34 ಪಂದ್ಯಗಳಲ್ಲಿ 14 ರಲ್ಲಿ ಮಾತ್ರ ಗೆದ್ದಿದ್ದರೆ, 19 ಪಂದ್ಯಗಳಲ್ಲಿ ಮೊದಲು ಫೀಲ್ಡಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ.

ಒಟ್ಟಾರೆ ದಾಖಲೆಗಳ ಪ್ರಕಾರ ಇಲ್ಲಿ ಮೊದಲು ಬೌಲಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಪ್ರಯೋಜನಕಾರಿ ಎಂಬುದು ಸಾಭೀತಾಗಿದೆ. ಆದರೆ ಮೊದಲು ಬ್ಯಾಟ್ ಮಾಡುವ ತಂಡ 300ರ ಗಡಿ ದಾಟಿದರೆ ಗೆಲುವು ಬಹುತೇಕ ಖಚಿತ. ಈ ಮೈದಾನದಲ್ಲಿ ಒಟ್ಟು 12 ಬಾರಿ 300ಕ್ಕೂ ಹೆಚ್ಚು ಸ್ಕೋರ್ ಮಾಡಲಾಗಿದ್ದು, ಕೇವಲ 3 ಬಾರಿ ಮಾತ್ರ ಗುರಿ ಬೆನ್ನಟ್ಟಿರುವ ತಂಡ ಗೆಲುವು ಸಾಧಿಸಿದೆ. ಈ ಪೈಕಿ 2022ರ ನವೆಂಬರ್‌ನಲ್ಲಿ ಒಮ್ಮೆ ಮಾತ್ರ ಶ್ರೀಲಂಕಾ, ಅಫ್ಘಾನಿಸ್ತಾನ ವಿರುದ್ಧ 314 ರನ್‌ಗಳ ಗುರಿ ಬೆನ್ನಟ್ಟಿ ಗೆಲುವು ಸಾಧಿಸಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:06 pm, Fri, 1 September 23