
2026 ರ ಟಿ20 ವಿಶ್ವಕಪ್‌ನಲ್ಲಿ (T20 World Cup 2026) ಪಾಕಿಸ್ತಾನ ವಿರುದ್ಧದ ನಿರ್ಣಾಯಕ ಹಣಾಹಣಿಗೆ ಭಾರತ ತಂಡ (India vs Pakistan) ಸಿದ್ಧವಾಗಿದೆ. ಈ ಪಂದ್ಯ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಈ ಮೈದಾನದ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗಲಿದೆ. ಹೀಗಾಗಿ ಟೀಂ ಇಂಡಿಯಾದ ಪ್ಲೇಯಿಂಗ್ 11 ನಲ್ಲಿ ಬದಲಾವಣೆಯಾಗುವುದು ಖಚಿತ. ಇದಕ್ಕೆ ಪೂರಕವಾಗಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲೂ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಭಾರತ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಏನೆಲ್ಲ ಬದಲಾವಣೆಯಾಗಲಿದೆ? ಯಾರಿಗೆ ಆಡುವ ಅವಕಾಶ ಸಿಗುತ್ತದೆ ಮತ್ತು ಯಾರು ಈ ಪಂದ್ಯದಿಂದ ಹೊರಗುಳಿಯಬಹುದು ಎಂಬುದರ ಸುಳಿವು ನೀಡಿದ್ದಾರೆ.
ಸೂರ್ಯಕುಮಾರ್ ಹೇಳಿರುವುದನ್ನು ಗಮನಿಸಿದರೆ, ಭಾರತ ತಂಡದಲ್ಲಿ ನಾಲ್ವರು ಸ್ಪಿನ್ನರ್‌ಗಳು ಆಡುವುದನ್ನು ಕಾಣಬಹುದು. ಇತ್ತ ಪಾಕಿಸ್ತಾನ ಕೂಡ ಕಳೆದೆರಡು ಪಂದ್ಯಗಳಲ್ಲಿ ನಾಲ್ವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿತ್ತು. ಮೇಲೆ ಹೇಳಿದಂತೆ ಕೊಲಂಬೊ ಪಿಚ್ ಸ್ಪಿನ್ನರ್‌ಗಳಿಗೆ ನೆರವು ನೀಡುವುದರಿಂದ ಅದರ ಲಾಭ ಪಡೆಯಲು ಟೀಂ ಇಂಡಿಯಾ ನಾಲ್ವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಬಹುದು. ಇದರಲ್ಲಿ ಇಬ್ಬರು ಸ್ಪಿನ್ ಆಲ್ರೌಂಡರ್ಗಳಿದ್ದರೆ, ಇನ್ನಿಬ್ಬರು ಪೂರ್ಣ ಪ್ರಮಾಣದ ಸ್ಪಿನ್ನರ್‌ಗಳು ಇರಲಿದ್ದಾರೆ. ಆ ಪ್ರಕಾರ ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ ಹಾಗೂ ವರುಣ್ ಚಕ್ರವರ್ತಿ ಪಾಕ್ ವಿರುದ್ಧ ಆಡಬಹುದು.
ಬ್ಯಾಟಿಂಗ್ ವಿಭಾಗದ ವಿಚಾರಕ್ಕೆ ಬರುವುದಾದರೆ, ಅಭಿಷೇಕ್ ಶರ್ಮಾ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಕಳೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ತಂಡದಲ್ಲಿ ಆಡುವ ಅವಕಾಶ ಪಡೆದಿದ್ದರು. ಆದರೀಗ ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಅಭಿಷೇಕ್ ಗುಣಮುಖರಾಗಿದ್ದು, ಅವರು ತಂಡದಲ್ಲಿ ಆಡಲಿದ್ದಾರೆ. ನಾಯಕ ಸೂರ್ಯಕುಮಾರ್ ಕೂಡ ಪತ್ರಿಕಾಗೋಷ್ಠಿಯಲ್ಲಿ ಇದನ್ನು ಖಚಿತಪಡಿಸಿದ್ದಾರೆ. ಆ ಪ್ರಕಾರ, ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಮೂರನೇ ಕ್ರಮಾಂಕದಲ್ಲಿ ಎಂದಿನಂತೆ ತಿಲಕ್ ವರ್ಮಾ ಬ್ಯಾಟ್ ಬೀಸಿದರೆ, ನಾಯಕ ಸೂರ್ಯಕುಮಾರ್ ಯಾದವ್ 4ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 5ನೇ ಕ್ರಮಾಂಕದಲ್ಲಿ ಬರಲಿದ್ದು, ಮತ್ತೊಬ್ಬ ಆಲ್‌ರೌಂಡರ್ ಶಿವಂ ದುಬೆ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಇನ್ನು ಕಳೆದೆರಡು ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವ ರಿಂಕು ಸಿಂಗ್ ಈ ಪಂದ್ಯದಿಂದ ಹೊರಗುಳಿಯಬಹುದು. ಅವರ ಸ್ಥಾನದಲ್ಲಿ ವಾಷಿಂಗ್ಟನ್ ಸುಂದರ್ ಆಡಲಿದ್ದಾರೆ. ಹಾಗೆಯೇ ವೇಗಿ ಅರ್ಷದೀಪ್ ಸಿಂಗ್ ಬದಲಿಗೆ ಕುಲ್ದೀಪ್ ಯಾದವ್ ಆಡುವ ಸಾಧ್ಯತೆಗಳಿವೆ.
IND vs PAK: ಭಾರತ- ಪಾಕ್ ಕದನಕ್ಕೆ ಕೆಲವೇ ಗಂಟೆಗಳು ಬಾಕಿ; ಪಂದ್ಯವನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ?
ಭಾರತದ ಸಂಭಾವ್ಯ ಪ್ಲೇಯಿಂಗ್ 11: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ