IND vs SA 1st ODI: ಆಫ್ರಿಕಾ ವಿರುದ್ಧ ಯಾರಿಗೆಲ್ಲ ಸಿಗಲಿದೆ ಅವಕಾಶ? ಇಲ್ಲಿದೆ ಭಾರತ ಸಂಭಾವ್ಯ ತಂಡ
IND vs SA 1st ODI: ಸುಮಾರು 23 ತಿಂಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಏಕದಿನ ಸರಣಿಯಲ್ಲಿ ಕೆಎಲ್ ರಾಹುಲ್ ಮೊದಲ ಬಾರಿಗೆ ಟೀಂ ಇಂಡಿಯಾ ನಾಯಕರಾಗಿದ್ದರು. ಆದರೆ ಆ ಸರಣಿಯಲ್ಲಿ ಟೀಂ ಇಂಡಿಯಾ ವೈಟ್ ವಾಶ್ ಮುಖಭಂಗವನ್ನು ಎದುರಿಸಬೇಕಾಯಿತು.
ಟಿ20 ಸರಣಿ ಮುಗಿದ ಬಳಿಕ ಇದೀಗ ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವಿನ ಏಕದಿನ ಸರಣಿಯ ಆಕ್ಷನ್ ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯ ಡಿಸೆಂಬರ್ 17 ಭಾನುವಾರ ಜೋಹಾನ್ಸ್‌ಬರ್ಗ್‌ನಲ್ಲಿ (New Wanderers in Johannesburg) ನಡೆಯಲಿದೆ. ಈ ಸರಣಿಗಾಗಿ ಟೀಂ ಇಂಡಿಯಾ ನಾಯಕತ್ವ ಮತ್ತು ತಂಡದಲ್ಲಿ ಕೆಲವು ಬದಲಾವಣೆಗಳಿವೆ. ಟಿ20 ಸರಣಿಯಲ್ಲಿ ತಂಡವನ್ನು ಮುನ್ನಡಿಸಿದ್ದ ಸೂರ್ಯಕುಮಾರ್ ಯಾದವ್ ಅವರನ್ನು ಏಕದಿನ ಸರಣಿಗೆ ಆಯ್ಕೆ ಮಾಡಲಾಗಿಲ್ಲ. ಹೀಗಾಗಿ ಕೆಎಲ್ ರಾಹುಲ್ (KL Rahul) ಈ ಸರಣಿಯಲ್ಲಿ ನಾಯಕತ್ವ ವಹಿಸಿಕೊಂಡಿದ್ದಾರೆ. ಇನ್ನು ಯುವ ಆಟಗಾರರೇ ಇರುವ ತಂಡದಲ್ಲಿ ಮೊದಲ ಪಂದ್ಯದಲ್ಲಿ ಯಾವ ಆಟಗಾರರೊಂದಿಗೆ ರಾಹುಲ್ ಕಣಕ್ಕಿಳಿಯಲ್ಲಿದ್ದಾರೆ ಎಂಬುದರ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.
ಸುಮಾರು 23 ತಿಂಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಏಕದಿನ ಸರಣಿಯಲ್ಲಿ ಕೆಎಲ್ ರಾಹುಲ್ ಮೊದಲ ಬಾರಿಗೆ ಟೀಂ ಇಂಡಿಯಾ ನಾಯಕರಾಗಿದ್ದರು. ಆದರೆ ಆ ಸರಣಿಯಲ್ಲಿ ಟೀಂ ಇಂಡಿಯಾ ವೈಟ್ ವಾಶ್ ಮುಖಭಂಗವನ್ನು ಎದುರಿಸಬೇಕಾಯಿತು. ಇದೀಗ ಯುವ ಪಡೆಯನ್ನು ಕಟ್ಟಿಕೊಂಡು ಅಖಾಡಕ್ಕಿಳಿಯುತ್ತಿರುವ ರಾಹುಲ್ ಹಿಂದಿನ ಸರಣಿ ಸೋಲಿಗೆ ಯಾವ ರೀತಿಯ ಎದುರೇಟು ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
IND vs SA: ಏಕದಿನದಲ್ಲಿ ನಾಯಕನಾಗಿ ಕೆಎಲ್ ರಾಹುಲ್ ಸಾಧನೆ ಹೇಗಿದೆ?
ತಂಡದಲ್ಲಿ ಯಾರಿಗೆಲ್ಲ ಅವಕಾಶ?
ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಅವರಂತಹ ಅನುಭವಿ ಆಟಗಾರರು ಆಡುತ್ತಿಲ್ಲ. ಆದ್ದರಿಂದ ಬಲಿಷ್ಠ ಹರಿಣಗಳ ವಿರುದ್ಧ ಸರಣಿ ಗೆಲ್ಲುವುದು ರಾಹುಲ್ಗೆ ಸವಾಲಿನ ಕೆಲಸವಾಗಿದೆ. ಪಂದ್ಯಕ್ಕೆ ಒಂದು ದಿನ ಮೊದಲು ರಾಹುಲ್ ಕೂಡ ಈ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ.
ಸ್ಫೋಟಕ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್‌ಗೆ ಸರಣಿಯಲ್ಲಿ ಅವಕಾಶ ಸಿಗಲಿದೆ ಮತ್ತು ಅವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ ಎಂದು ರಾಹುಲ್ ಡಿಸೆಂಬರ್ 16 ಶನಿವಾರದಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ. ಆದರೆ, ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಾನೇ ವಹಿಸಿಕೊಳ್ಳುತ್ತೇನೆ ಎಂದೂ ರಾಹುಲ್ ಸ್ಪಷ್ಟಪಡಿಸಿದ್ದಾರೆ. ಈ ಸರಣಿಯಲ್ಲಿ ರಿಂಕು ಸಿಂಗ್‌ಗೂ ಅವಕಾಶ ಸಿಗಲಿದೆ ಎಂದು ರಾಹುಲ್ ಹೇಳಿದ್ದಾರೆ. ಆದರೆ, ಮೊದಲ ಪಂದ್ಯದಲ್ಲೇ ಅವರು ಆಯ್ಕೆಯಾಗುವ ಸಾಧ್ಯತೆ ಇಲ್ಲದಂತಾಗಿದೆ. ಹಾಗಾದರೆ ರಾಹುಲ್ ಯಾವ ಆಟಗಾರರಿಗೆ ಅವಕಾಶ ನೀಡಬಹುದು? ಎಂಬುದನ್ನು ನೋಡುವುದಾದರೆ..
ಆರಂಭಿಕ ಮತ್ತು ಸ್ಪಿನ್ ವಿಭಾಗದಲ್ಲಿ ಗೊಂದಲ
ತಂಡದಲ್ಲಿ ಆರಂಭಿಕ ಜೋಡಿಯ ಬಗ್ಗೆ ದೊಡ್ಡ ಪ್ರಶ್ನೆ ಉದ್ಭವಿಸಿದೆ. ರುತುರಾಜ್ ಗಾಯಕ್ವಾಡ್ ಆಡುವುದು ಖಚಿತ ಆದರೆ ಅವರೊಂದಿಗೆ ಯಾರು ಓಪನರ್ ಆಗುತ್ತಾರೆ ಎಂಬುದು ನಾಳೆಯಷ್ಟೇ ತಿಳಿಯಲಿದೆ. ಏಕೆಂದರೆ ಈಗಾಗಲೇ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡುವುದಾಗಿ ಹೇಳಿಕೊಂಡಿದ್ದಾರೆ. ಹೀಗಿರುವಾಗ ಯುವ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್‌ಗೆ ಅಂತರಾಷ್ಟ್ರೀಯ ಪದಾರ್ಪಣೆಗೆ ಅವಕಾಶ ಸಿಗುವುದು ಖಚಿತವಾಗಿದೆ. ತಿಲಕ್ ವರ್ಮಾ ಮೂರನೇ ಸ್ಥಾನದಲ್ಲಿ ಆಡಬಹುದಾಗಿದ್ದು, ಶ್ರೇಯಸ್ ಅಯ್ಯರ್, ರಾಹುಲ್ ಮತ್ತು ಸ್ಯಾಮ್ಸನ್ ಕ್ರಮವಾಗಿ ನಾಲ್ಕನೇ, ಐದನೇ ಮತ್ತು ಆರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ.
ಬೌಲಿಂಗ್‌ಗೆ ಸಂಬಂಧಿಸಿದಂತೆ, ಯುಜ್ವೇಂದ್ರ ಚಹಲ್ ಏಕದಿನ ತಂಡಕ್ಕೆ ಮರಳುವುದು ಖಚಿತವಾಗಿದ್ದು, ಅಕ್ಷರ್ ಪಟೇಲ್ ಎರಡನೇ ಸ್ಪಿನ್ನರ್ ಆಗಿ ಕಣಕ್ಕಿಳಿಯಬಹುದು. ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕುಲ್ದೀಪ್ ಯಾದವ್ ಅವರಿಗೆ ಮೊದಲ ಪಂದ್ಯದಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆಗಳಿವೆ. ಉಳಿದಂತೆ ಅವೇಶ್ ಖಾನ್, ಮುಖೇಶ್ ಕುಮಾರ್ ಮತ್ತು ಅರ್ಷದೀಪ್ ಸಿಂಗ್ ವೇಗದ ಬೌಲಿಂಗ್ ವಿಭಾಗದಲ್ಲಿ ಕಾಣಿಸಿಕೊಳ್ಳಬಹುದಾಗಿದೆ.
ಮೊದಲ ಏಕದಿನಕ್ಕೆ ಭಾರತ ಸಂಭಾವ್ಯ ತಂಡ
ಕೆಎಲ್ ರಾಹುಲ್ (ನಾಯಕ-ವಿಕೆಟ್ ಕೀಪರ್), ಸಾಯಿ ಸುದರ್ಶನ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಅಕ್ಸರ್ ಪಟೇಲ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಯುಜ್ವೇಂದ್ರ ಚಹಲ್ ಮತ್ತು ಮುಖೇಶ್ ಕುಮಾರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ