IND vs SA Final: ಟೀಮ್ ಇಂಡಿಯಾಗೆ ಎಚ್ಚರಿಕೆ ರವಾನಿಸಿದ ಸೌತ್ ಆಫ್ರಿಕಾ ತಂಡದ ನಾಯಕ
India vs South Africa 2024: ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಟಿ20 ಕ್ರಿಕೆಟ್ನಲ್ಲಿ ಈವರೆಗೆ 26 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಸೌತ್ ಆಫ್ರಿಕಾ ತಂಡ 11 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಟೀಮ್ ಇಂಡಿಯಾ 13 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು ಒಂದು ಪಂದ್ಯವು ಕಾರಣಾಂತರಗಳಿಂದ ರದ್ದಾಗಿದೆ. ಈ ಅಂಕಿ ಅಂಶಗಳ ಪ್ರಕಾರ ಉಭಯ ತಂಡಗಳು ಸಮಬಲ ಹೊಂದಿದೆ ಎನ್ನಬಹುದು.
ಚುಟುಕು ಕ್ರಿಕೆಟ್ ಮಹಾಸಮರಕ್ಕೆ ವೇದಿಕೆ ಸಿದ್ಧವಾಗಿದೆ. ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಇಂದು (ಜೂ.29) ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ (IND vs SA) ತಂಡಗಳು ಕಣಕ್ಕಿಳಿಯಲಿದೆ. ಆದರೆ ಈ ಪಂದ್ಯದಲ್ಲೂ ಗೆಲ್ಲುವುದು ನಾವೇ ಎಂದು ಸೌತ್ ಆಫ್ರಿಕಾ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಪೂರ್ಣ ಆತ್ಮ ವಿಶ್ವಾಸದಲ್ಲೇ ಹೇಳಿದ್ದಾರೆ.
ಫೈನಲ್ ಪಂದ್ಯ ಪೂರ್ವ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಐಡೆನ್ ಮಾರ್ಕ್ರಾಮ್, ಭಾರತ ಉತ್ತಮ ತಂಡ ನಿಜ. ಆದರೆ ಕಳೆದೆರಡು ವರ್ಷಗಳಿಂದ ಸೌತ್ ಆಫ್ರಿಕಾ ಸರಿಯಾದ ದಿಕ್ಕಿನಲ್ಲಿ ಮುನ್ನಡೆಯುತ್ತಿದೆ. ಈ ಬಾರಿಯ ಫೈನಲ್ ನಮಗೆ ಸಿಕ್ಕಿರುವ ದೊಡ್ಡ ಅವಕಾಶ. ಹೀಗಾಗಿ ಗೆಲ್ಲಲೇಬೇಕೆಂಬ ಹಸಿವು ನಮ್ಮಲ್ಲಿದೆ. ಹೀಗಾಗಿ ಈ ಸಲ ಪ್ರಶಸ್ತಿ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದು ಐಡೆನ್ ಮಾರ್ಕ್ರಾಮ್ ಹೇಳಿದ್ದಾರೆ.
ಇನ್ನು ಸೌತ್ ಆಫ್ರಿಕಾ ತಂಡವು ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದೆ. ಹೀಗಾಗಿ ಯಾವುದೇ ಹಂತದಲ್ಲೂ ನಾವು ಪಂದ್ಯವನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದು ಮಾರ್ಕ್ರಾಮ್ ಹೇಳಿದ್ದಾರೆ. ಹಾಗೆಯೇ ಸೌತ್ ಆಫ್ರಿಕಾ ತಂಡ ಕಳೆದ ಕೆಲ ವರ್ಷಗಳಿಂದ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಹೀಗಾಗಿಯೇ ಇಂದು
ನಾವು ಫೈನಲ್ನಲ್ಲಿದ್ದೇವೆ. ನಮ್ಮ ಆಟಗಾರರಿಗೆ ಅವರ ಪಾತ್ರವೇನು ಎಂಬುದರ ಸಂಪೂರ್ಣ ಅರಿವಿದೆ. ಹೀಗಾಗಿ ಫೈನಲ್ ಪಂದ್ಯದಲ್ಲಿ ಹೇಗೆ ಆಡಬೇಕೆಂಬುದು ಅವರಿಗೆ ಗೊತ್ತಿದೆ. ಈ ಮೂಲಕ ಟೀಮ್ ಇಂಡಿಯಾ ವಿರುದ್ಧ ನಾವು ಪ್ರತಿ ಹಂತದಲ್ಲೂ ಉತ್ತಮ ಪ್ರದರ್ಶನ ನೀಡಲಿದ್ದೇವೆ. ಅಲ್ಲದೆ ಭಾರತದ ವಿರುದ್ಧ ಗೆದ್ದು ವಿಶ್ವಕಪ್ ಮುಡಿಗೇರಿಸಿಕೊಳ್ಳುತ್ತೇವೆ ಎಂದು ಐಡೆನ್ ಮಾರ್ಕ್ರಾಮ್ ಹೇಳಿದ್ದಾರೆ.
ವಿಶ್ವಕಪ್ ಗೆಲ್ಲದ ಸೌತ್ ಆಫ್ರಿಕಾ:
ಸೌತ್ ಆಫ್ರಿಕಾ ತಂಡವು ಈವರೆಗೆ ಒಂದೇ ಒಂದು ವಿಶ್ವಕಪ್ ಗೆದ್ದಿಲ್ಲ. 1992 ರಿಂದ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿರುವ ಆಫ್ರಿಕನ್ನರು ಈವರೆಗೆ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಅದರಲ್ಲೂ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿರುವುದು ಇದೇ ಮೊದಲ ಬಾರಿ ಎಂಬುದು ವಿಶೇಷ. ಹೀಗಾಗಿಯೇ ಚೊಚ್ಚಲ ಅವಕಾಶದಲ್ಲೇ ಸೌತ್ ಆಫ್ರಿಕಾ ತಂಡವು ಟ್ರೋಫಿ ಮುಡಿಗೇರಿಸಿಕೊಳ್ಳುವ ವಿಶ್ವಾಸದಲ್ಲಿದೆ.
ಇದನ್ನೂ ಓದಿ: ಭಾರತ ತಂಡ ಮೋಸದಿಂದ ಗೆದ್ದಿದೆ: ಪಾಕ್ ಮಾಜಿ ನಾಯಕನ ಗಂಭೀರ ಆರೋಪ
ಸೌತ್ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಝ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟನ್ ಸ್ಟಬ್ಸ್, ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಅನ್ರಿಕ್ ನೋಕಿಯಾ, ತಬ್ರೇಝ್ ಶಮ್ಸಿ, ಒಟ್ನೀಲ್ ಬಾರ್ಟ್‌ಮನ್, ಗೆರಾಲ್ಡ್ ಕೋಯಟ್ಝಿ, ಜಾರ್ನ್ ಫಾರ್ಚುಯಿನ್, ರಯಾನ್ ರಿಕೆಲ್ಟನ್.