IND vs SA: ಕೇಪ್ ಟೌನ್ ಟೆಸ್ಟ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತ; ಸರಣಿ ಡ್ರಾದಲ್ಲಿ ಅಂತ್ಯ
IND vs SA: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಕೇಪ್ ಟೌನ್ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಹಾಗೂ ಎರಡನೇ ಟೆಸ್ಟ್ನಲ್ಲಿ ಟೀಂ ಇಂಡಿಯಾ ಆಫ್ರಿಕಾ ತಂಡವನ್ನು 7 ವಿಕೆಟ್ಗಳಿಂದ ಮಣಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವೆ ಕೇಪ್ ಟೌನ್ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಹಾಗೂ ಎರಡನೇ ಟೆಸ್ಟ್ನಲ್ಲಿ ಟೀಂ ಇಂಡಿಯಾ ಆಫ್ರಿಕಾ ತಂಡವನ್ನು 7 ವಿಕೆಟ್ಗಳಿಂದ ಮಣಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ. ಆಫ್ರಿಕಾ ನೀಡಿದ 79 ರನ್ಗಳ ಗೆಲುವಿನ ಗುರಿಯನ್ನು ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು 11.5 ಓವರ್ಗಳಲ್ಲಿ ಸಾಧಿಸಿತು. ಟೀಂ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ (Yashasvi Jaiswal) 28 ರನ್ ಸಿಡಿಸಿದರೆ ನಾಯಕ ರೋಹಿತ್ ಶರ್ಮಾ (Rohit Sharma) ಅಜೇಯ 17 ರನ್ಗಳ ಕೊಡುಗೆ ನೀಡಿದರು. ಉಳಿದಂತೆ ಶುಭ್ಮನ್ ಗಿಲ್ 10 ರನ್ ಹಾಗೂ ವಿರಾಟ್ ಕೊಹ್ಲಿ 12 ರನ್ ಬಾರಿಸಿದರೆ, ಬೌಂಡರಿ ಬಾರಿಸುವ ಮೂಲಕ ಶ್ರೇಯಸ್ ಅಯ್ಯರ್ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಇಡೀ ಪಂದ್ಯದಲ್ಲಿ ಬೌಲರ್ಗಳ ಪ್ರಾಬಲ್ಯ
ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಎದುರಿಸಬೇಕಾಯಿತು. ಆದರೆ ಈ ಪಂದ್ಯದಲ್ಲಿ ಭಾರತದ ಆಟಗಾರರು ಅದ್ಭುತ ಪುನರಾಗಮನ ಮಾಡಿ ಎರಡನೇ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿಯನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೇಪ್ ಟೌನ್ ಟೆಸ್ಟ್ ಅತ್ಯಂತ ಕಡಿಮೆ ಸ್ಕೋರಿಂಗ್ ಪಂದ್ಯವಾಗಿದ್ದು, ಇಡೀ ಪಂದ್ಯದಲ್ಲಿ ಬೌಲರ್ಗಳ ಪ್ರಾಬಲ್ಯ ಕಂಡು ಬಂದಿತು. ಹೀಗಾಗಿ 5 ದಿನಗಳ ಟೆಸ್ಟ್ ಪಂದ್ಯದಲ್ಲಿ ಎರಡೂ ತಂಡಗಳಿಗೂ ಪೂರ್ಣ ಎರಡು ದಿನ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಕೇವಲ ಎರಡೇ ದಿನಗಳಲ್ಲಿ ಟೆಸ್ಟ್ ಪಂದ್ಯದ ಫಲಿತಾಂಶ ಹೊರಬಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ಹೀರೋಗಳೆಂದರೆ ವೇಗದ ಬೌಲರ್‌ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್. ಈ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ 8 ಮತ್ತು ಮೊಹಮ್ಮದ್ ಸಿರಾಜ್ 7 ವಿಕೆಟ್ ಪಡೆದರು.
𝘼 𝙘𝙧𝙖𝙘𝙠𝙚𝙧 𝙤𝙛 𝙖 𝙬𝙞𝙣! ⚡️ ⚡️#TeamIndia beat South Africa by 7⃣ wickets in the second #SAvIND Test to register their first Test win at Newlands, Cape Town. 👏 👏
Scorecard ▶️ https://t.co/PVJRWPfGBE pic.twitter.com/vSMQadKxu8
— BCCI (@BCCI) January 4, 2024
ಪಂದ್ಯದ ಮೊದಲ ದಿನವೇ 23 ವಿಕೆಟ್ ಪತನ
ಈ ಪಂದ್ಯದಲ್ಲಿ ಟಾಸ್ ಗೆದ್ದ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ ಕೇಪ್ ಟೌನ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾವನ್ನು 55 ರನ್ ಗಳಿಗೆ ಆಲೌಟ್ ಮಾಡಿತು. ಭಾರತದ ಪರ ಸಿರಾಜ್ 9 ಓವರ್ಗಳಲ್ಲಿ 15 ರನ್ ನೀಡಿ 6 ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ ಮತ್ತು ಮುಖೇಶ್ ಕುಮಾರ್ ತಲಾ 2 ವಿಕೆಟ್ ಪಡೆದರು. ಇದಕ್ಕೆ ಉತ್ತರವಾಗಿ ಟೀಂ ಇಂಡಿಯಾ ಕೂಡ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗದೆ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 153 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ದಿನದಾಟದ ಅಂತ್ಯಕ್ಕೆ ಆಫ್ರಿಕಾ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟ್ ಕಳೆದುಕೊಂಡು 62 ರನ್ ಕಲೆಹಾಕಿತ್ತು.
ಎರಡನೇ ದಿನವೇ ಹೊರಬಿತ್ತು ಫಲಿತಾಂಶ
ಎರಡನೇ ದಿನದಾಟ ಆರಂಭವಾದಾಗ ದಕ್ಷಿಣ ಆಫ್ರಿಕಾ ತಂಡ 36 ರನ್‌ಗಳಿಂದ ಹಿನ್ನಡೆಯಲ್ಲಿತ್ತು. ಇದಾದ ಬಳಿಕ ತಂಡದ ಇನ್ನಿಂಗ್ಸ್ ಕೈಗೆತ್ತಿಕೊಂಡ ಏಡನ್ ಮಾರ್ಕ್ರಾಮ್ ಭರ್ಜರಿ ಶತಕ ಬಾರಿಸಿದರು. ಆದರೆ ಇನ್ನೊಂದು ತುದಿಯಿಂದ ವಿಕೆಟ್ ಬೀಳುವ ಪ್ರಕ್ರಿಯೆ ಮುಂದುವರಿಯಿತು. ಎರಡನೇ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ 176 ರನ್ ಗಳಿಸಿ ಆಲೌಟ್ ಆಯಿತು. ಅಂತಿಮವಾಗಿ ಟೀಂ ಇಂಡಿಯಾ ಈ ಪಂದ್ಯವನ್ನು ಗೆಲ್ಲಲು 79 ರನ್ಗಳ ಗೆಲುವಿನ ಗುರಿ ಪಡೆಯಿತು. ಈ ಅಲ್ಪ ಮೊತ್ತದ ಗುರಿಯನ್ನು ಭಾರತ ತಂಡ 3 ವಿಕೆಟ್ ಕಳೆದುಕೊಂಡು ಸುಲಭವಾಗಿ ಸಾಧಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:14 pm, Thu, 4 January 24
