IND vs SA: ದಿನೇಶ್ ಕಾರ್ತಿಕ್ಗೂ ಮೊದಲ ಅಕ್ಷರ್ ಬ್ಯಾಟಿಂಗ್; ಪಂತ್ ನಾಯಕತ್ವದ ಮೇಲೆ ಪ್ರಶ್ನೆ ಎತ್ತಿದ ಫ್ಯಾನ್ಸ್
IND vs SA: ಕಾರ್ತಿಕ್ ಅವರನ್ನು ಮೊದಲೇ ಕಳುಹಿಸಿದ್ದರೆ, ಭಾರತ 160 ರನ್‌ಗಳಿಗಿಂತ ಹೆಚ್ಚು ಟಾರ್ಗೆಟ್ ನೀಡಬಹುದಿತ್ತು. ಆದರೆ ಕೊನೆಯಲ್ಲಿ ಸುಮಾರು 12 ರನ್‌ಗಳ ಕೊರತೆಯಾಯ್ತು ಎಂಬುದನ್ನು ಶ್ರೇಯಸ್ ಸಹ ಒಪ್ಪಿಕೊಂಡರು.
ಕಟಕ್ನಲ್ಲಿ ನಡೆದ ಎರಡನೇ ಟಿ20ಯಲ್ಲಿ ಟೀಂ ಇಂಡಿಯಾ (Team India in Cuttack T20) 4 ವಿಕೆಟ್‌ಗಳ ಸೋಲು ಕಂಡಿದ್ದು, ಆ ಬಳಿಕ ಈ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ (Dinesh Karthik) ಬ್ಯಾಟಿಂಗ್ ಪೊಸಿಷನ್ ಅಷ್ಟೊಂದು ಕೆಳಮಟ್ಟಕ್ಕಿಳಿಯಲು ಕಾರಣವೇನು ಎಂಬ ಪ್ರಶ್ನೆ ಎದ್ದಿದೆ. ಕಟಕ್ ಟಿ 20 ಯಲ್ಲಿ ಅಕ್ಷರ್ ಪಟೇಲ್ (Axar Patel) ನಂತರ ದಿನೇಶ್ ಕಾರ್ತಿಕ್ ಅವರನ್ನು 7 ನೇ ಸ್ಥಾನದಲ್ಲಿ ಕಳುಹಿಸಲಾಗಿತ್ತು. ಇದನ್ನು ಕಂಡ ವೀಕ್ಷಕರು ಈಗ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರಿಷಬ್ ಪಂತ್ ಅವರನ್ನು ಪ್ರಶ್ನಿಸಲು ಪ್ರಾರಂಭಿಸಿದ್ದಾರೆ. ದಿನೇಶ್ ಕಾರ್ತಿಕ್ ಉತ್ತಮ ಲಯದಲ್ಲಿದ್ದರೂ ಅವರನ್ನು 7 ನೇ ಸ್ಥಾನದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಲಾಯಿತು. ನಿರ್ಣಾಯಕ ಸಂದರ್ಭದಲ್ಲಿ 21 ಎಸೆತಗಳಲ್ಲಿ ಔಟಾಗದೆ 30 ರನ್ ಗಳಿಸಿದರು. ಈ ಇನ್ನಿಂಗ್ಸ್ ನಂತರ, ಕಾರ್ತಿಕ್ ಅವರ ಬ್ಯಾಟಿಂಗ್ ಕ್ರಮಾಂಕದಲ್ಲಿ ಕಳುಹಿಸಿದ್ದರೆ, ಅವರು ತಂಡದ ಸ್ಕೋರ್ ಅನ್ನು ಮತ್ತಷ್ಟು ಮೇಲಕ್ಕೆ ಕೊಂಡೊಯ್ಯಬಹುದಿತ್ತು ಎಂಬ ಪ್ರಶ್ನೆ ಉದ್ಭವಿಸಿದೆ. ಆದರೆ, ಈ ಪ್ರಶ್ನೆಗೆ ಶ್ರೇಯಸ್ ಅಯ್ಯರ್ ಪತ್ರಿಕಾಗೋಷ್ಠಿಯಲ್ಲಿ ಉತ್ತರ ನೀಡಿದ್ದಾರೆ.
ಕಾರ್ತಿಕ್ರನ್ನು ಅಕ್ಷರ್ ಪಟೇಲ್ ನಂತರ ಕಳುಹಿಸಿದ್ದು ಏಕೆ?
ದಿನೇಶ್ ಕಾರ್ತಿಕ್ ಅವರಿಗಿಂತ ಮುಂಚಿತವಾಗಿ ಬ್ಯಾಟಿಂಗ್ ಮಾಡಲು ಅಕ್ಷರ್ ಪಟೇಲ್ ಅವರನ್ನು ಕಳುಹಿಸುವುದು ವಿಚಿತ್ರವೆನಿಸಬಹುದು. ಆದರೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ 20 ನಲ್ಲಿ ತೆಗೆದುಕೊಂಡ ನಿರ್ಧಾರವನ್ನು ಸಮರ್ಥಿಸಿಕೊಂಡರು. ಈ ಬಗ್ಗೆ ಮಾತನಾಡಿದ ಅವರು, ಸಂದರ್ಭಗಳನ್ನು ನೋಡಿ ಈ ತೀರ್ಮಾನವನ್ನು ಮಾಡಲಾಗಿದೆ. ಆದರೆ ಈ ತಂತ್ರ ಫಲಿಸದೇ ಅಕ್ಷರ್ ರನ್ ಗಳಿಸಲು ಪರದಾಡಿದರು. 17ನೇ ಓವರ್‌ನಲ್ಲಿ ಅವರು ಔಟಾಗುವ ವೇಳೆಗೆ ಭಾರತದ ಸ್ಕೋರ್ ಆರು ವಿಕೆಟ್‌ಗೆ 112ಕ್ಕೆ ಇಳಿದಿತ್ತು. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಕಾರ್ತಿಕ್ ಅವರ ಅಜೇಯ 30 ರನ್‌ಗಳ ನೆರವಿನಿಂದ ಭಾರತ ಆರು ವಿಕೆಟ್‌ಗೆ 148 ರನ್ ಗಳಿಸಿತು.
ಇದನ್ನೂ ಓದಿ:Indian Captainship: ವರ್ಷಕ್ಕೆ ಆರು ನಾಯಕರು; ಟೀಂ ಇಂಡಿಯಾವನ್ನು ಮುನ್ನಡೆಸಿದ ಆಟಗಾರರಿವರು
ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೇಯಸ್, ನಾವು ಈ ಹಿಂದೆಯೂ ಇಂತಹ ತಂತ್ರವನ್ನು ಅಳವಡಿಸಿಕೊಂಡಿದ್ದೇವೆ. ಅಕ್ಷರ್ ಕ್ರೀಸ್‌ಗೆ ಇಳಿದಾಗ ನಮಗೆ ಏಳು ಓವರ್‌ಗಳು ಉಳಿದಿದ್ದವು. ಹೀಗಾಗಿ ಅವರು ಸಿಂಗಲ್ ತೆಗೆದುಕೊಂಡು ಸ್ಟ್ರೈಕ್ ರೋಟೆಟ್ ಮಾಡಲೆಂದು ನಾವು ಅವರನ್ನು ಆ ಕ್ರಮಾಂಕದಲ್ಲಿ ಕಳುಹಿಸಿದೇವು. ಇದಲ್ಲದೇ, ಆಗ ಕ್ರೀಸ್‌ಗೆ ಇಳಿದು ಮೊದಲ ಎಸೆತವನ್ನೇ ಹೊಡೆಯುವ ಅಗತ್ಯವಿರಲಿಲ್ಲ. ಡಿಕೆ ಈ ಕೆಲಸ ಮಾಡುವಲ್ಲಿ ನಿಸ್ಸೀಮಾರಾಗಿದ್ದಾರೆ, ಆದರೆ ಅವರು 15 ಓವರ್‌ಗಳ ನಂತರ ನಮಗೆ ಹೆಚ್ಚು ಪ್ರಯೋಜನಕಾರಿಯಾಗಿದ್ದಾರೆ. ಅಲ್ಲಿ ಅವರು ಕ್ರೀಸ್‌ಗೆ ಬಂದ ತಕ್ಷಣ ಲಾಂಗ್ ಶಾಟ್‌ಗಳನ್ನು ಆಡಬಹುದು. ಆದರೆ ಕಾರ್ತಿಕ್ ಕೂಡ ಈ ವಿಕೆಟ್‌ನಲ್ಲಿ ರನ್ ಗಳಿಸಲು ಕಷ್ಟಪಡಬೇಕಾಯಿತು ಎಂದು ಶ್ರೇಯಸ್ ವಾದಿಸಿದರು. ಆರಂಭದಲ್ಲಿಯೂ ಕಾರ್ತಿಕ್ ಕೂಡ ರನ್ ಗಳಿಸಲು ಸ್ವಲ್ಪ ಕಷ್ಟಪಟ್ಟರು. ಈ ಪಂದ್ಯದಲ್ಲಿ ವಿಕೆಟ್ ಪ್ರಮುಖ ಪಾತ್ರ ವಹಿಸಿತ್ತು. ಈ ತಂತ್ರಕ್ಕೆ ಸಂಬಂಧಿಸಿದಂತೆ, ನಾವು ಭವಿಷ್ಯದಲ್ಲಿಯೂ ಇದನ್ನು ಅನುಸರಿಸುತ್ತೇವೆ ಎಂದು ಶ್ರೇಯಸ್ ಹೇಳಿದ್ದಾರೆ.
ಟೀಂ ಇಂಡಿಯಾಗೆ 12 ರನ್ ಕಡಿಮೆ!
ಕಾರ್ತಿಕ್ ಅವರನ್ನು ಮೊದಲೇ ಕಳುಹಿಸಿದ್ದರೆ, ಭಾರತ 160 ರನ್‌ಗಳಿಗಿಂತ ಹೆಚ್ಚು ಟಾರ್ಗೆಟ್ ನೀಡಬಹುದಿತ್ತು. ಆದರೆ ಕೊನೆಯಲ್ಲಿ ಸುಮಾರು 12 ರನ್‌ಗಳ ಕೊರತೆಯಾಯ್ತು ಎಂಬುದನ್ನು ಶ್ರೇಯಸ್ ಸಹ ಒಪ್ಪಿಕೊಂಡರು. ನೀವು ಪಂದ್ಯವನ್ನು ನೋಡಿದರೆ, ಸ್ವಲ್ಪ ಒತ್ತಡವನ್ನು ಹಾಕಲು ಈ ವಿಕೆಟ್‌ನಲ್ಲಿ 160 ರನ್‌ಗಳು ನಿಜವಾಗಿಯೂ ಚೆನ್ನಾಗಿರುತ್ತವೆ ಎಂದು ನಾನು ಭಾವಿಸುತ್ತೇನೆ. ಆದರೆ ನಾವು ಅದಕ್ಕಿಂತ 12 ರನ್‌ಗಳ ಕೊರತೆಯನ್ನು ಹೊಂದಿದ್ದೇವು ಎಂದು ಶ್ರೇಯಸ್ ಹೇಳಿದ್ದಾರೆ. ಹೆನ್ರಿಕ್ ಕ್ಲಾಸೆನ್ ಅವರ 81 ರನ್‌ಗಳ ನೆರವಿನಿಂದ ನಾಲ್ಕು ವಿಕೆಟ್‌ಗಳ ಜಯ ದಾಖಲಿಸಿದ ದಕ್ಷಿಣ ಆಫ್ರಿಕಾ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು.
Published On - 3:21 pm, Mon, 13 June 22