IND vs SA: ಆಫ್ರಿಕಾ ವಿರುದ್ಧ ಆರ್​ಸಿಬಿ ಬೌಲರ್​ನತ್ತ ಕೊಹ್ಲಿ ಚಿತ್ತ; ಈ ಸ್ಟಾರ್ ಬೌಲರ್​ಗೆ ಅವಕಾಶ ಅನುಮಾನ?

IND vs SA: ಇಶಾಂತ್ ದಕ್ಷಿಣ ಆಫ್ರಿಕಾದಲ್ಲಿ 7 ಟೆಸ್ಟ್ ಪಂದ್ಯಗಳಲ್ಲಿ 20 ವಿಕೆಟ್ ಪಡೆದಿದ್ದಾರೆ. ಇಶಾಂತ್ ಅವರಿಗೂ ಅನುಭವವಿದೆ ಆದರೆ ನಾಯಕ ವಿರಾಟ್ ಕೊಹ್ಲಿ ಈ ವೇಗದ ಬೌಲರ್ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ.

IND vs SA: ಆಫ್ರಿಕಾ ವಿರುದ್ಧ ಆರ್​ಸಿಬಿ ಬೌಲರ್​ನತ್ತ ಕೊಹ್ಲಿ ಚಿತ್ತ; ಈ ಸ್ಟಾರ್ ಬೌಲರ್​ಗೆ ಅವಕಾಶ ಅನುಮಾನ?
ದ್ರಾವಿಡ್, ಕೊಹ್ಲಿ
Updated By: ಪೃಥ್ವಿಶಂಕರ

Updated on: Dec 20, 2021 | 6:31 PM

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಡಿಸೆಂಬರ್ 26 ರಂದು ಸೆಂಚುರಿಯನ್​ನಲ್ಲಿ ಆರಂಭವಾಗಲಿದೆ. ಜೊತೆಗೆ ಭಾರತ ತಂಡ ಈ ಟೆಸ್ಟ್ ಸರಣಿ ಗೆಲ್ಲಲು ಶ್ರಮಿಸುತ್ತಿದೆ. ರಾಹುಲ್ ದ್ರಾವಿಡ್ ಕಳೆದ ಮೂರು ದಿನಗಳಿಂದ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳಿಗೆ ತರಬೇತಿ ನೀಡುತ್ತಿದ್ದಾರೆ. ಟೀಂ ಇಂಡಿಯಾ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿಲ್ಲವಾದ್ದರಿಂದ ಈ ಅಭ್ಯಾಸ ಅಗತ್ಯವಾಗಿದೆ ಮತ್ತು ಇತಿಹಾಸವನ್ನು ರಚಿಸಬೇಕಾದರೆ, ಅದಕ್ಕಾಗಿ ತಯಾರಿ ಕೂಡ ಗಟ್ಟಿಯಾಗಿರಬೇಕು. ಅಂದಹಾಗೆ, ಉತ್ತಮ ತಯಾರಿಯ ಜೊತೆಗೆ ಪಂದ್ಯ ಗೆಲ್ಲಲು ಸರಿಯಾದ ತಂತ್ರಗಾರಿಕೆಯೂ ಅಗತ್ಯವಾಗಿದ್ದು, ಸೆಂಚುರಿಯನ್ ಟೆಸ್ಟ್‌ಗಾಗಿ ಟೀಂ ಇಂಡಿಯಾ ಪಾಳಯದಿಂದ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಮಾಧ್ಯಮ ವರದಿಗಳ ಪ್ರಕಾರ, ಮೊದಲ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಅತ್ಯಂತ ಯಶಸ್ವಿ ಬೌಲರ್‌ಗೆ ಅವಕಾಶ ನೀಡುವುದಿಲ್ಲ ಎಂದು ವರದಿಯಾಗಿದೆ.

ಇನ್ ಸೈಡ್ ಸ್ಪೋರ್ಟ್​ನ ವರದಿ ಪ್ರಕಾರ, ಸೆಂಚುರಿಯನ್ ಟೆಸ್ಟ್​ನಲ್ಲಿ ಮೊಹಮ್ಮದ್ ಸಿರಾಜ್​ಗೆ ಅವಕಾಶ ನೀಡಲು ವಿರಾಟ್ ಕೊಹ್ಲಿ ಮನಸ್ಸು ಮಾಡಿದ್ದಾರೆ. ಒಂದು ವೇಳೆ ಸಿರಾಜ್ ಆಡುವ ಇಲೆವೆನ್ ಸೇರಿಕೊಂಡರೆ ಇಶಾಂತ್ ಶರ್ಮಾ ಬೆಂಚ್ ಕಾಯಬೇಕಾಗುತ್ತದೆ. ಇಶಾಂತ್ ಶರ್ಮಾ ಬಹಳ ಸಮಯದಿಂದ ಫಾರ್ಮ್‌ನಲ್ಲಿ ಇಲ್ಲದೆ ಇರುವುದು ಕೂಡ ಇದಕ್ಕೆ ಕಾರಣವಾಗಬಹುದು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ವಿರಾಟ್ ಕೊಹ್ಲಿ ಇಶಾಂತ್‌ಗಿಂತ ಸಿರಾಜ್‌ಗೆ ಆದ್ಯತೆ ನೀಡಿದ್ದರು.

ಇಶಾಂತ್ ಫಾರ್ಮ್ ಕಳಪೆಯಾಗಿದೆ
ಕಳೆದ ಎರಡು ಟೆಸ್ಟ್ ಪಂದ್ಯಗಳ ಬಗ್ಗೆ ಮಾತನಾಡುವುದಾದರೆ, ಇಶಾಂತ್ ಶರ್ಮಾ ಒಂದು ವಿಕೆಟ್ ಪಡೆದಿಲ್ಲ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ, ಇಶಾಂತ್ ಶರ್ಮಾ ವೇಗದ ಬೌಲಿಂಗ್‌ನ ನಾಯಕರಾದರು ಆದರೆ ಕಳಪೆ ಫಿಟ್‌ನೆಸ್ ಮತ್ತು ನಂತರ ಕಳಪೆ ಫಾರ್ಮ್ ಅವರ ತೊಂದರೆಗಳನ್ನು ಹೆಚ್ಚಿಸಿತು. ಅಂದಹಾಗೆ, ಪ್ರಸ್ತುತ ಬೌಲಿಂಗ್ ವಿಭಾಗದಲ್ಲಿ ಇಶಾಂತ್ ಶರ್ಮಾ ದಕ್ಷಿಣ ಆಫ್ರಿಕಾದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಇಶಾಂತ್ ದಕ್ಷಿಣ ಆಫ್ರಿಕಾದಲ್ಲಿ 7 ಟೆಸ್ಟ್ ಪಂದ್ಯಗಳಲ್ಲಿ 20 ವಿಕೆಟ್ ಪಡೆದಿದ್ದಾರೆ. ಇಶಾಂತ್ ಅವರಿಗೂ ಅನುಭವವಿದೆ ಆದರೆ ನಾಯಕ ವಿರಾಟ್ ಕೊಹ್ಲಿ ಈ ವೇಗದ ಬೌಲರ್ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಆಕ್ರಮಣಕಾರಿ ಬೌಲಿಂಗ್ ಮಾಡುತ್ತಿರುವ ಸಿರಾಜ್ಗೆ ಅವಕಾಶ ನೀಡುವ ಉತ್ಸಾಹದಲ್ಲಿ ವಿರಾಟ್ ಕೊಹ್ಲಿ ಇದ್ದಾರೆ.

ಟೀಮ್ ಇಂಡಿಯಾದ ಬೌಲಿಂಗ್ ಲೈನ್ ಅಪ್ ಹೇಗಿರಲಿದೆ?
ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಅವರಲ್ಲದೆ, ಸೆಂಚುರಿಯನ್ ಟೆಸ್ಟ್‌ನಲ್ಲಿ ಶಾರ್ದೂಲ್ ಠಾಕೂರ್‌ಗೆ ಟೀಮ್ ಇಂಡಿಯಾ ಅವಕಾಶ ನೀಡಬಹುದು. ಬೌಲಿಂಗ್​ ಜೊತೆಗೆ ಅವರು ಕೆಳ ಕ್ರಮಾಂಕದಲ್ಲಿಯೂ ಉತ್ತಮವಾಗಿ ಬ್ಯಾಟ್ ಮಾಡುತ್ತಾರೆ. ಅಂತಿಮವಾಗಿ, ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಸಿರಾಜ್‌ಗೆ ಅವಕಾಶ ನೀಡುವ ಪ್ರಶ್ನೆಯಿದ್ದು, ವಿರಾಟ್ ಕೊಹ್ಲಿಗೆ ಬಹುಶಃ ಉತ್ತರ ತಿಳಿದಿದೆ.