IND vs SL: ರೋಹಿತ್, ಕೊಹ್ಲಿ ಸ್ಥಾನದಲ್ಲಿ ಕಣಕ್ಕಿಳಿಯುವವರು ಯಾರು?
India vs Sri Lanka: ಈ ಬಾರಿಯ ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಮೂವರು ಆಟಗಾರರು ನಿವೃತ್ತಿ ಘೋಷಿಸಿದ್ದರು. ಅದರಂತೆ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಕಾಣಿಸಿಕೊಳ್ಳುವುದಿಲ್ಲ. ಅಲ್ಲದೆ ಅವರ ಬದಲಿಯಾಗಿ ಕಣಕ್ಕಿಳಿಯುವವರು ಯಾರು ಎಂಬುದಕ್ಕೆ ಇಂದು ಸ್ಪಷ್ಟ ಉತ್ತರ ಸಿಗಲಿದೆ.
ಭಾರತ ಮತ್ತು ಶ್ರೀಲಂಕಾ ನಡುವಣ 3 ಪಂದ್ಯಗಳ ಟಿ20 ಸರಣಿಯು ಇಂದಿನಿಂದ (ಜುಲೈ 27) ಶುರುವಾಗಲಿದೆ. ಪಲ್ಲೆಕೆಲೆಯ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಸೂರ್ಯಕುಮಾರ್ ಯಾದವ್ ಭಾರತ ತಂಡದ ಖಾಯಂ ನಾಯಕರಾಗಿ ಪಾದಾರ್ಪಣೆ ಮಾಡಲಿದ್ದಾರೆ. ಹಾಗೆಯೇ ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಕೋಚ್ ಆಗಿ ಗೌತಮ್ ಗಂಭೀರ್ ಕೂಡ ಪದಗ್ರಹಣ ಮಾಡಲಿರುವುದು ವಿಶೇಷ. ಹೀಗಾಗಿಯೇ ಇಂದಿನ ಪಂದ್ಯವು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಅದರಲ್ಲೂ ಟಿ20 ವಿಶ್ವಕಪ್ ಬಳಿಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಸ್ಥಾನದಲ್ಲಿ ಕಣಕ್ಕಿಳಿಯುವವರು ಯಾರು ಎಂಬುದು ಸಹ ಇಂದು ನಿರ್ಧಾರವಾಗಲಿದೆ. ಏಕೆಂದರೆ ಇಬ್ಬರು ದಿಗ್ಗಜರಿಲ್ಲದೆ ನಡೆಯುತ್ತಿರುವ ಮೊದಲ ಪ್ರಮುಖ ಸರಣಿ ಇದಾಗಿದೆ. ಹೀಗಾಗಿ ಹಿಟ್ಮ್ಯಾನ್ ಹಾಗೂ ಕಿಂಗ್ ಕೊಹ್ಲಿ ಸ್ಥಾನಗಳನ್ನು ತುಂಬುವ ಆಟಗಾರರು ಯಾರು ಎಂಬುದಕ್ಕೆ ಇಂದು ಉತ್ತರ ಸಿಗುವ ಸಾಧ್ಯತೆಯಿದೆ.
ರೋಹಿತ್ ಶರ್ಮಾ = ಶುಭ್ಮನ್ ಗಿಲ್:
ಟಿ20 ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಆದರೆ ಇದೇ ವಿಶ್ವಕಪ್ನಲ್ಲಿ ಶುಭ್ಮನ್ ಗಿಲ್ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದರು. ಇದೀಗ ರೋಹಿತ್ ಶರ್ಮಾ ಹೊರಗುಳಿದಿರುವ ಕಾರಣ ಶುಭ್ಮನ್ ಗಿಲ್ ಅವರಿಗೆ ಆರಂಭಿಕನ ಸ್ಥಾನ ಸಿಗುವುದು ಬಹುತೇಕ ಖಚಿತ. ಅಲ್ಲದೆ ಯಶಸ್ವಿ ಜೈಸ್ವಾಲ್ ಹಾಗೂ ಗಿಲ್ ಟೀಮ್ ಇಂಡಿಯಾ ಪರ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚು.
ವಿರಾಟ್ ಕೊಹ್ಲಿ ಸ್ಥಾನದಲ್ಲಿ ಯಾರು?
ಟಿ20 ವಿಶ್ವಕಪ್ ಅನ್ನು ಹೊರತುಪಡಿಸಿದರೆ, ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಪರ 3ನೇ ಕ್ರಮಾಂಕದಲ್ಲಿ ಆಡಿದ್ದೇ ಹೆಚ್ಚು. ಇದೀಗ ಕೊಹ್ಲಿ ನಿವೃತ್ತಿ ಘೋಷಿಸಿರುವ ಕಾರಣ ಸೂರ್ಯಕುಮಾರ್ ಯಾದವ್ 3ನೇ ಸ್ಥಾನಕ್ಕೆ ಬಡ್ತಿ ಪಡೆಯುವ ಸಾಧ್ಯತೆಯಿದೆ.
ಹಾಗೆಯೇ ವಿರಾಟ್ ಕೊಹ್ಲಿ ಸ್ಥಾನದಲ್ಲಿ ರಿಂಕು ಸಿಂಗ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಸಿಗಲಿದೆ. ಈ ಹಿಂದೆ ಟಿ20 ವಿಶ್ವಕಪ್ನಲ್ಲಿ ರಿಂಕು ಮೀಸಲು ಆಟಗಾರನಾಗಿ ಕಾಣಿಸಿಕೊಂಡಿದ್ದರು. ಇದೀಗ ಕೊಹ್ಲಿಯ ಅನುಪಸ್ಥಿಯಲ್ಲಿ ಮ್ಯಾಚ್ ಫಿನಿಶರ್ ಸ್ಥಾನದಲ್ಲಿ ರಿಂಕು ಸಿಂಗ್ ಕಾಣಿಸಿಕೊಳ್ಳುವುದು ಖಚಿತ ಎನ್ನಬಹುದು.
ಇದನ್ನೂ ಓದಿ: Maharaja Trophy T20: ಕರ್ನಾಟಕ ಟಿ20 ಲೀಗ್ನ 6 ತಂಡಗಳು ಪ್ರಕಟ
ರವೀಂದ್ರ ಜಡೇಜಾ ಸ್ಥಾನ ತುಂಬುವವರು ಯಾರು?
ಟೀಮ್ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಕೂಡ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಅವರ ಜಾಗ ಕೂಡ ಖಾಲಿಯಿದೆ. ಅತ್ತ ಜಡೇಜಾ ಸ್ಪಿನ್ ಆಲ್ರೌಂಡರ್ ಆಗಿದ್ದ ಕಾರಣ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪರಿಪೂರ್ಣ ಸ್ಪಿನ್ನರ್ ಆಗಿ ರವಿ ಬಿಷ್ಣೋಯ್ಗೆ ಅವಕಾಶ ನೀಡಬಹುದು. ಅದರಂತೆ ಟೀಮ್ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…
- ಶುಭ್ಮನ್ ಗಿಲ್
- ಯಶಸ್ವಿ ಜೈಸ್ವಾಲ್
- ಸೂರ್ಯಕುಮಾರ್ ಯಾದವ್
- ರಿಷಭ್ ಪಂತ್
- ಹಾರ್ದಿಕ್ ಪಾಂಡ್ಯ
- ರಿಂಕು ಸಿಂಗ್
- ಶಿವಂ ದುಬೆ
- ಅಕ್ಷರ್ ಪಟೇಲ್
- ರವಿ ಬಿಷ್ಣೋಯ್
- ಅರ್ಷದೀಪ್ ಸಿಂಗ್
- ಮೊಹಮ್ಮದ್ ಸಿರಾಜ್