ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಶ್ರೀಲಂಕಾ ತಂಡ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಕೂಡ ಗೆಲುವಿನ ಸನಿಹಕ್ಕೆ ಬಂದು ಪಂದ್ಯ ಕೈಚೆಲ್ಲಿತು. ತಂಡದ ಗೆಲುವಿಗೆ 1 ರನ್ ಬೇಕಿದ್ದಾಗ ಸತತ ಎರಡು ವಿಕೆಟ್ ಕಳೆದುಕೊಳ್ಳುವ ಮೂಲಕ ಟೀಂ ಇಂಡಿಯಾ ಆಲೌಟ್ ಆಯಿತು. ಹೀಗಾಗಿ ಪಂದ್ಯ ಟೈನಲ್ಲಿ ಅಂತ್ಯಗೊಂಡಿತು. ಇದೀಗ ಉಭಯ ತಂಡಗಳು ತಮ್ಮ ಎರಡನೇ ಪಂದ್ಯವನ್ನು ಆಗಸ್ಟ್ 4 ರಂದು ಇದೇ ಕೊಲಂಬೊದಲ್ಲಿ ಆಡಲಿವೆ.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ 8 ವಿಕೆಟ್ ಕಳೆದುಕೊಂಡು 230 ರನ್ ಕಲೆಹಾಕಿತು. ತಂಡದ ಪರ ಯುವ ಆಲ್ ರೌಂಡರ್ ದುನಿತ್ ವೆಲ್ಲಾಲಗೆ ಅತ್ಯುತ್ತಮ ಇನ್ನಿಂಗ್ಸ್ ಆಡಿ 67 ರನ್‌ಗಳ ಅಮೋಘ ಕೊಡುಗೆ ನೀಡಿದರು. ಇವರಲ್ಲದೆ ಶ್ರೀಲಂಕಾದ ಆರಂಭಿಕ ಆಟಗಾರ ಪಾಥುಮ್ ನಿಸ್ಸಾಂಕಾ ಕೂಡ 56 ರನ್‌ಗಳ ಇನಿಂಗ್ಸ್ ಆಡಿದರು. ಕೆಳ ಕ್ರಮಾಂಕದಲ್ಲಿ ವನಿಂದು ಹಸರಂಗ ಕೂಡ 24 ರನ್‌ಗಳ ಕೊಡುಗೆ ನೀಡಿ ತಂಡವನ್ನು ಈ ಹಂತಕ್ಕೆ ಕೊಂಡೊಯ್ದರು. ಭಾರತದ ಪರ ಅಕ್ಷರ್ ಪಟೇಲ್ ಮತ್ತು ಅರ್ಷದೀಪ್ ಸಿಂಗ್ ತಲಾ 2 ವಿಕೆಟ್ ಪಡೆದರು.
A thrilling start to the #SLvIND ODI series.
The First ODI ends in a tie.
Scorecard ▶️ https://t.co/4fYsNEzggf#TeamIndia pic.twitter.com/ILQvB1FDyk
— BCCI (@BCCI) August 2, 2024
ಇದಾದ ಬಳಿಕ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಕ್ಕೆ ಈ ಗುರಿ ದೊಡ್ಡದೇನೂ ಆಗಿರಲಿಲ್ಲ. ಇದಕ್ಕೆ ಪೂರಕವಾಗಿ ಟಿ20 ವಿಶ್ವಕಪ್ ಗೆದ್ದು ಸುಮಾರು ಒಂದು ತಿಂಗಳ ಬಳಿಕ ತಂಡಕ್ಕೆ ವಾಪಸಾಗಿರುವ ನಾಯಕ ರೋಹಿತ್ ಶರ್ಮಾ ಕೇವಲ 33 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಆಕ್ರಮಣಕಾರಿ ಆರಂಭ ಮಾಡಿದರು. ಹೀಗಾಗಿ ಆರಂಭದಲ್ಲಿ ಈ ಪಂದ್ಯವನ್ನು ಟೀಮ್ ಇಂಡಿಯಾ ಸುಲಭವಾಗಿ ಗೆಲ್ಲುತ್ತದೆ ಎಂದು ತೋರುತ್ತಿತ್ತು. ಆದರೆ ಲಂಕಾ ಆಲ್ರೌಂಡರ್ ವೆಲ್ಲಾಲಗೆ ಒಬ್ಬರ ಹಿಂದೆ ಒಬ್ಬರಂತೆ ಶುಭ್‌ಮನ್ ಗಿಲ್ ಮತ್ತು ರೋಹಿತ್ ಅವರ ವಿಕೆಟ್‌ಗಳನ್ನು ಉರುಳಿಸಿದರು.
ನಂತರ ಬಂದ ವಿರಾಟ್ ಕೊಹ್ಲಿ, ವಾಷಿಂಗ್ಟನ್ ಸುಂದರ್, ಶ್ರೇಯಸ್ ಅಯ್ಯರ್ ಕೂಡ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗದೆ ಲಂಕಾ ಸ್ಪಿನ್ನರ್‌ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಕೊನೆಯಲ್ಲಿ ಕೆಎಲ್ ರಾಹುಲ್ ಮತ್ತು ಅಕ್ಷರ್ ಪಟೇಲ್ 57 ರನ್‌ಗಳ ಜೊತೆಯಾಟ ಆಡುವ ಮೂಲಕ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ ಹಸರಂಗ ಮತ್ತು ಅಸಲಂಕಾ ಈ ಇಬ್ಬರ ವಿಕೆಟ್‌ಗಳನ್ನು ಉರುಳಿಸಿ ಮತ್ತೆ ಪಂದ್ಯವನ್ನು ತಮ್ಮತ್ತ ವಾಲುವಂತೆ ಮಾಡಿದರು.
ಇಲ್ಲಿಂದ ಟೀಂ ಇಂಡಿಯಾದ ಇನ್ನಿಂಗ್ಸ್ ಕೈಗೆತ್ತಿಕೊಂಡ ಶಿವಂ ದುಬೆ ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಅಂತಿಮವಾಗಿ ತಂಡಕ್ಕೆ 15 ಎಸೆತಗಳಲ್ಲಿ 1 ರನ್ ಅಗತ್ಯವಿತ್ತು ಮತ್ತು 2 ವಿಕೆಟ್ಗಳು ಕೈಯಲ್ಲಿದ್ದವು. ಆದರೆ ಅಸಲಂಕಾ ಸತತ ಎಸೆತಗಳಲ್ಲಿ ಶಿವಂ ಮತ್ತು ಅರ್ಷದೀಪ್ ಸಿಂಗ್ ಅವರನ್ನು ಎಲ್‌ಬಿಡಬ್ಲ್ಯೂ ಔಟ್ ಮಾಡುವ ಮೂಲಕ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸುವುದರಲ್ಲಿ ಯಶಸ್ವಿಯಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:13 pm, Fri, 2 August 24