AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup: ಮೊದಲ ದಿನವೇ ಹ್ಯಾಟ್ರಿಕ್ ವಿಕೆಟ್; ವಿಂಡೀಸ್​ಗೆ ಜಯ

T20 World Cup: ಮೊದಲ ದಿನವೇ ಹ್ಯಾಟ್ರಿಕ್ ವಿಕೆಟ್; ವಿಂಡೀಸ್​ಗೆ ಜಯ

ಪೃಥ್ವಿಶಂಕರ
|

Updated on: Feb 07, 2026 | 8:38 PM

Share

T20 World Cup 2026: 2026ರ ಟಿ20 ವಿಶ್ವಕಪ್‌ನ ಮೊದಲ ದಿನ, ರೊಮಾರಿಯೊ ಶೆಫರ್ಡ್ ಐತಿಹಾಸಿಕ ಸಾಧನೆ ಮಾಡಿದರು. ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ಗಳಿಸಿದ ಅವರು, ಟೂರ್ನಿಯ ಮೊದಲ ಬೌಲರ್ ಹಾಗೂ ವೆಸ್ಟ್ ಇಂಡೀಸ್‌ನಿಂದ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡರು. ಒಟ್ಟು 5 ವಿಕೆಟ್ ಪಡೆದು ವಿಂಡೀಸ್ ತಂಡಕ್ಕೆ 35 ರನ್‌ಗಳ ಭರ್ಜರಿ ಜಯ ತಂದುಕೊಟ್ಟರು. ಇದು ಶೆಫರ್ಡ್‌ಗೆ ಎರಡನೇ T20 ಅಂತರರಾಷ್ಟ್ರೀಯ ಹ್ಯಾಟ್ರಿಕ್.

2026 ರ ಟಿ20 ವಿಶ್ವಕಪ್​ ಮೊದಲ ದಿನವೇ ಕೆಲವು ಅಚ್ಚರಿಯ ಘಟನೆಗಳಿಗೆ ಸಾಕ್ಷಿಯಾಗಿದೆ. ದಿನದ ಮೊದಲ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ನೆದರ್ಲ್ಯಾಂಡ್ಸ್ ಸೋಲಿನ ಭಯ ಹುಟ್ಟಿಸಿತು. ಆದರೆ ಕೊನೆಯಲ್ಲಿ ಪಾಕಿಸ್ತಾನಕ್ಕೆ ಗೆಲುವು ಸಿಕ್ಕಿತು. ಆ ನಂತರ ನಡೆದ ಎರಡನೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಅಮೋಘ ಪ್ರದರ್ಶನ ನೀಡಿತು. ಇದೇ ಪಂದ್ಯದಲ್ಲಿ ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್​ ಹ್ಯಾಟ್ರಿಕ್ ವಿಕೆಟ್ ಪಡೆಯುವುದರ ಜೊತೆಗೆ ಒಂದೇ ಓವರ್​ನಲ್ಲಿ 4 ವಿಕೆಟ್ ಉರುಳಿಸಿದರು. ಇದರ ಫಲವಾಗಿ ವಿಂಡೀಸ್ ತಂಡ 35 ರನ್​ಗಳ ಸುಲಭ ಜಯ ದಾಖಲಿಸಿತು.

ಇನ್ನು ಈ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಶೆಫರ್ಡ್​, 2026 ರ ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹಾಗೆಯೇ ಟಿ20 ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ ವೆಸ್ಟ್ ಇಂಡೀಸ್‌ನ ಮೊದಲ ಬೌಲರ್ ಎಂಬ ದಾಖಲೆಯನ್ನು ಬರೆದರು. ಇದು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಶೆಫರ್ಡ್ ಅವರ ಎರಡನೇ ಹ್ಯಾಟ್ರಿಕ್ ಆಗಿದ್ದು, ಇದಕ್ಕೂ ಮೊದಲು, ರೊಮಾರಿಯೊ ಶೆಫರ್ಡ್ ಬಾಂಗ್ಲಾದೇಶ ವಿರುದ್ಧ ಹ್ಯಾಟ್ರಿಕ್ ಪಡೆದಿದ್ದರು.

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಶೆಫರ್ಡ್​ ಹ್ಯಾಟ್ರಿಕ್ ಜೊತೆಗೆ ಒಟ್ಟು 5 ವಿಕೆಟ್‌ಗಳನ್ನು ಕಬಳಿಸಿ ಸ್ಕಾಟ್ಲೆಂಡ್ ತಂಡವನ್ನು ಮಣಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. 17 ನೇ ಓವರ್‌ನಲ್ಲಿ ಸತತ 3 ಎಸೆತಗಳಲ್ಲಿ ಮ್ಯಾಥ್ಯೂ ಕ್ರಾಸ್, ಮೈಕೆಲ್ ಲೀಸ್ಕ್ ಮತ್ತು ಆಲಿವರ್ ಡೇವಿಡ್ಸನ್ ಅವರನ್ನು ಔಟ್ ಮಾಡುವ ಮೂಲಕ ರೊಮಾರಿಯೊ ಶೆಫರ್ಡ್ 2026 ರ ಟಿ20 ವಿಶ್ವಕಪ್‌ನ ಮೊದಲ ಹ್ಯಾಟ್ರಿಕ್ ಪೂರ್ಣಗೊಳಿಸಿದರು. ಅದೇ ಓವರ್‌ನ ಕೊನೆಯ ಎಸೆತದಲ್ಲಿ ಅವರು ವಿಕೆಟ್ ಪಡೆದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 182 ರನ್ ಗಳಿಸಿತು. ತಂಡದ ಪರ ಶಿಮ್ರಾನ್ ಹೆಟ್ಮೆಯರ್ 36 ಎಸೆತಗಳಲ್ಲಿ 2 ಬೌಂಡರಿ ಮತ್ತು 6 ಸಿಕ್ಸರ್‌ಗಳ ಸಹಾಯದಿಂದ 64 ರನ್ ಗಳಿಸಿದರೆ, ಪೊವೆಲ್ ಮತ್ತು ರುದರ್ಫೋರ್ಡ್ ಕೂಡ ಕ್ರಮವಾಗಿ 24 ಮತ್ತು 26 ರನ್ ಗಳಿಸಿದರು. 183 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸ್ಕಾಟ್ಲೆಂಡ್ ಒಂದು ಹಂತದಲ್ಲಿ 3 ವಿಕೆಟ್‌ಗಳಿಗೆ 115 ರನ್‌ಗಳಿಸಿತ್ತು. ಅದಾದ ನಂತರ, ಸ್ಕಾಟ್ಲೆಂಡ್ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳಲು ಪ್ರಾರಂಭಿಸಿತು. ಹೀಗಾಗಿ ತಂಡ 19ನೇ ಓವರ್​ನಲ್ಲಿ 147 ರನ್​ಗಳಿಗೆ ಆಲೌಟ್ ಆಯಿತು.