IND vs SL: ದ್ವಿಶತಕ ಸಿಡಿಸಿ ಆರ್ಭಟಿಸಿದರೂ ಇಶಾನ್ ಕಿಶನ್ಗೆ ತಂಡದಲ್ಲಿಲ್ಲ ಚಾನ್ಸ್
India vs Sri Lanka 1st Odi: ಕಳೆದ ಕೆಲ ತಿಂಗಳಿಂದ ಶುಭ್ಮನ್ ಗಿಲ್ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಹೀಗಾಗಿ ನಾವು ಅವರಿಗೆ ಮಣೆಹಾಕಬೇಕಿದೆ. ಇಲ್ಲಿ ಇಶಾನ್ ಕಿಶನ್ ಕೆಟ್ಟ ಪ್ರದರ್ಶನ ನೀಡಿಲ್ಲ. ಆದರೆ ಕಿಶನ್ಗಿಂತ ಗಿಲ್ ಮುಂದಿದ್ದಾರೆ ಎಂದು ಹಿಟ್ಮ್ಯಾನ್ ತಿಳಿಸಿದರು.
India vs Sri Lanka 1st Odi: ಭಾರತ-ಶ್ರೀಲಂಕಾ ನಡುವಣ ಏಕದಿನ ಸರಣಿಯು ನಾಳೆಯಿಂದ ಶುರುವಾಗಲಿದೆ. ಮೂರು ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್ ಗೌಹಾಟಿಯಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಇಶಾನ್ ಕಿಶನ್ (Ishan Kishan) ಕಾಣಿಸಿಕೊಳ್ಳುವುದಿಲ್ಲ ಎಂಬುದು ಖಚಿತವಾಗಿದೆ. ಟೀಮ್ ಇಂಡಿಯಾ (Team India) ಪರ ಆರಂಭಿಕರಾಗಿ ಶುಭ್ಮನ್ ಗಿಲ್ (Shubhman Gill) ಹಾಗೂ ರೋಹಿತ್ ಶರ್ಮಾ (Rohit Sharma) ಕಣಕ್ಕಿಳಿಯಲಿದ್ದು, ಇದರಿಂದ ಯುವ ಆಟಗಾರ ಇಶಾನ್ ಕಿಶನ್ ಅವಕಾಶ ವಂಚಿತರಾಗಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ದುರದೃಷ್ಟವಶಾತ್ ನಾವು ಮೊದಲ ಪಂದ್ಯಕ್ಕೆ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಲು ಸಾಧ್ಯವಾಗುವುದಿಲ್ಲ. ಆರಂಭಿಕರಾಗಿ ಶುಭ್ಮನ್ ಗಿಲ್ಗೆ ಅವಕಾಶ ನೀಡಬೇಕಾಗಿದೆ. ದ್ವಿಶತಕ ಬಾರಿಸಿ ಮಿಂಚಿರುವ ಒಬ್ಬ ಆಟಗಾರನನ್ನು ತಂಡದಿಂದ ಹೊರಗಿಡುವುದು ಉತ್ತಮವಲ್ಲ ಎಂಬುದು ಗೊತ್ತಿದೆ. ಆದರೆ ನನಗೆ ಬೇರೆ ಆಯ್ಕೆಯಿಲ್ಲ. ಹೀಗಾಗಿ ಇಶಾನ್ ಕಿಶನ್ ಜೊತೆ ಕ್ಷಮೆಯಾಚಿಸುವುದಾಗಿ ರೋಹಿತ್ ಶರ್ಮಾ ತಿಳಿಸಿದ್ದಾರೆ.
ಏಕೆಂದರೆ ಕಳೆದ ಕೆಲ ತಿಂಗಳಿಂದ ಶುಭ್ಮನ್ ಗಿಲ್ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಹೀಗಾಗಿ ನಾವು ಅವರಿಗೆ ಮಣೆಹಾಕಬೇಕಿದೆ. ಇಲ್ಲಿ ಇಶಾನ್ ಕಿಶನ್ ಕೆಟ್ಟ ಪ್ರದರ್ಶನ ನೀಡಿಲ್ಲ. ಆದರೆ ಕಿಶನ್ಗಿಂತ ಗಿಲ್ ಮುಂದಿದ್ದಾರೆ ಎಂದು ಹಿಟ್ಮ್ಯಾನ್ ತಿಳಿಸಿದರು.
ಇನ್ನು ಕೊನೆಯ ಕೆಲ ಏಕದಿನ ಪಂದ್ಯಗಳ ಅಂಕಿ ಅಂಶಗಳನ್ನು ಗಮನಿಸಿದರೂ ಇಶಾನ್ ಕಿಶನ್ಗಿಂತ ಶುಭ್ಮನ್ ಗಿಲ್ ಅವರೇ ಮುಂದಿದ್ದಾರೆ. 2022 ರಲ್ಲಿ 12 ಏಕದಿನ ಪಂದ್ಯಗಳನ್ನು ಆಡಿರುವ ಗಿಲ್ ಒಟ್ಟು 638 ರನ್ ಗಳಿಸಿದ್ದಾರೆ. ಈ ವೇಳೆ 1 ಶತಕ ಮತ್ತು ನಾಲ್ಕು ಅರ್ಧ ಶತಕಗಳನ್ನು ಸಹ ಬಾರಿಸಿದ್ದಾರೆ.
ಮತ್ತೊಂದೆಡೆ ಕಳೆದ ವರ್ಷ 7 ಏಕದಿನ ಇನಿಂಗ್ಸ್ ಆಡಿರುವ ಇಶಾನ್ ಕಿಶನ್ ಕಲೆಹಾಕಿರುವುದು 417 ರನ್ಗಳು. ಇದರಲ್ಲಿ ಇತ್ತೀಚೆಗೆ ಬಾಂಗ್ಲಾದೇಶ್ ವಿರುದ್ಧ ಸಿಡಿಸಿದ ವಿಶ್ವ ದಾಖಲೆಯ ದ್ವಿಶತಕ ಕೂಡ ಸೇರಿದೆ. ಹೀಗಾಗಿಯೇ ಇಶಾನ್ ಕಿಶನ್ ಅವರನ್ನು ಹಿಂದಿಕ್ಕಿ ಶುಭ್ಮನ್ ಗಿಲ್ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: Ishan Kishan: ಕ್ರಿಕೆಟ್ ಇತಿಹಾಸದಲ್ಲೇ ಯಾರು ಮಾಡದ ವಿಶೇಷ ದಾಖಲೆ ಬರೆದ ಇಶಾನ್ ಕಿಶನ್
ಕೆಎಲ್ ರಾಹುಲ್ ಆಡುವುದು ಖಚಿತ:
ಇತ್ತ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ಅವಕಾಶ ವಂಚಿತರಾಗಿರುವ ಕಾರಣ ಕೆಎಲ್ ರಾಹುಲ್ ಅವರ ಸ್ಥಾನ ಕನ್ಫರ್ಮ್ ಆಗಿದೆ. ಏಕೆಂದರೆ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗಳಾಗಿ ಇಶಾನ್ ಕಿಶನ್ ಹಾಗೂ ರಾಹುಲ್ ಮಾತ್ರ ಸ್ಥಾನ ಪಡೆದಿದ್ದರು. ಇದೀಗ ಕಿಶನ್ ಹೊರಗುಳಿಯುತ್ತಿದ್ದಂತೆ, ಕೆಎಲ್ ರಾಹುಲ್ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳುವುದು ಖಚಿತವಾಗಿದೆ. ಅದರಂತೆ ಕೆಎಲ್ಆರ್ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಸಾಧ್ಯತೆಯಿದೆ.
ಟೀಮ್ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ:
- ರೋಹಿತ್ ಶರ್ಮಾ
- ಶುಭ್ಮನ್ ಗಿಲ್
- ವಿರಾಟ್ ಕೊಹ್ಲಿ
- ಶ್ರೇಯಸ್ ಅಯ್ಯರ್
- ಕೆಎಲ್ ರಾಹುಲ್
- ಹಾರ್ದಿಕ್ ಪಾಂಡ್ಯ
- ವಾಷಿಂಗ್ಟನ್ ಸುಂದರ್
- ಅಕ್ಷರ್ ಪಟೇಲ್
- ಮೊಹಮ್ಮದ್ ಶಮಿ
- ಅರ್ಷದೀಪ್ ಸಿಂಗ್
- ಮೊಹಮ್ಮದ್ ಸಿರಾಜ್
ಟೀಮ್ ಇಂಡಿಯಾ ಏಕದಿನ ತಂಡ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್.