IND vs SL: ಗೆಲ್ಲುವ ಪಂದ್ಯ… ನಿರಾಶೆ ವ್ಯಕ್ತಪಡಿಸಿದ ರೋಹಿತ್ ಶರ್ಮಾ

|

Updated on: Aug 03, 2024 | 8:31 AM

ಭಾರತ ಮತ್ತು ಶ್ರೀಲಂಕಾ ನಡುವಣ ಮೂರು ಪಂದ್ಯಗಳ ಸರಣಿಯ ಎರಡನೇ ಪಂದ್ಯವು ನಾಳೆ (ಆ.4) ನಡೆಯಲಿದೆ. ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕ. ಏಕೆಂದರೆ ಮೊದಲ ಪಂದ್ಯ ಟೈನಲ್ಲಿ ಅಂತ್ಯವಾಗಿರುವುದರಿಂದ ಸರಣಿ ಗೆಲ್ಲಲು 2ನೇ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅನಿವಾರ್ಯ. ಹೀಗಾಗಿ ಭಾನುವಾರ ನಡೆಯಲಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

IND vs SL: ಗೆಲ್ಲುವ ಪಂದ್ಯ... ನಿರಾಶೆ ವ್ಯಕ್ತಪಡಿಸಿದ ರೋಹಿತ್ ಶರ್ಮಾ
Rohit Sharma
Follow us on

ಭಾರತ ಮತ್ತು ಶ್ರೀಲಂಕಾ ನಡುವಣ ಮೊದಲ ಏಕದಿನ ಪಂದ್ಯವು ಟೈನಲ್ಲಿ ಅಂತ್ಯ ಕಂಡಿದೆ. ಕೊಲಂಬೊದ ಆರ್​. ಪ್ರೇಮದಾಸ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಲಂಕಾ ಪರ ಪಾತುಮ್ ನಿಸ್ಸಂಕಾ (56) ಅರ್ಧಶತಕ ಬಾರಿಸಿದರು. ಇನ್ನು ಕೆಳ ಕ್ರಮಾಂಕದಲ್ಲಿ ದುನಿತ್ ವೆಲ್ಲಲಾಗೆ ಅಜೇಯ 67 ರನ್ ಸಿಡುವ ಮೂಲಕ 50 ಓವರ್​ಗಳಲ್ಲಿ ತಂಡದ ಮೊತ್ತವನ್ನು 230 ಕ್ಕೆ ತಂದು ನಿಲ್ಲಿಸಿದರು.

ಈ ಸುಲಭ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ 47 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ 58 ರನ್ ಬಾರಿಸಿದ್ದರು. ಇದಾಗ್ಯೂ ಕೆಳ ಕ್ರಮಾಂಕದ ಕುಸಿತದಿಂದಾಗಿ ಟೀಮ್ ಇಂಡಿಯಾ 47.5 ಓವರ್​ಗಳಲ್ಲಿ 230 ರನ್​ಗಳಿಸಿ ಆಲೌಟ್ ಆಯಿತು. ಈ ಮೂಲಕ ಗೆಲ್ಲಬಹುದಾಗಿದ್ದ ಪಂದ್ಯವನ್ನು ಭಾರತ ತಂಡ ಕೈ ಚೆಲ್ಲಿಕೊಂಡಿತು.

ಈ ಪಂದ್ಯದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ತಂಡದ ಪ್ರದರ್ಶನದ ಬಗ್ಗೆ ನಿರಾಸೆ ವ್ಯಕ್ತಪಡಿಸಿದರು. 230 ರನ್​ಗಳು ಸುಲಭವಾಗಿ ಚೇಸಿಂಗ್ ಮಾಡಬಹುದಾಗಿದ್ದ ಸ್ಕೋರ್​. ನಮ್ಮ ಆರಂಭ ಉತ್ತಮವಾಗಿತ್ತು. ಆದರೆ 10 ಓವರ್​ಗಳ ಬಳಿಕ ಲಂಕಾ ಸ್ಪಿನ್ನರ್​ಗಳು ಮೇಲುಗೈ ಸಾಧಿಸಿದರು.

ಇದಾದ ಬಳಿಕ ಒಂದೆರಡು ವಿಕೆಟ್ ಕಳೆದುಕೊಂಡರೂ ಕೆಎಲ್ ರಾಹುಲ್ ಹಾಗೂ ಅಕ್ಷರ್ ಪಟೇಲ್ ಉತ್ತಮ ಜೊತೆಯಾಟ ಪ್ರದರ್ಶಿಸಿದ್ದರು. ಇದರೊಂದಿಗೆ ನಾವು ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದೆವು. ಆದರೆ ಕೊನೆಯಲ್ಲಿ ನಮ್ಮ ಆಟ ನಿರಾಶಾದಾಯಕವಾಗಿತ್ತು. ಏಕೆಂದರೆ 14 ಎಸೆತಗಳಲ್ಲಿ ಕೇವಲ 1 ರನ್​ ಬೇಕಿತ್ತು. ಆದರೆ ಇದನ್ನು ಕಲೆಹಾಕಲು ನಮ್ಮಿಂದ ಸಾಧ್ಯವಾಗದೇ ಇರುವುದಕ್ಕೆ ಬೇಸರವಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಇನ್ನು ಶ್ರೀಲಂಕಾ ತಂಡದ ಪ್ರದರ್ಶನವನ್ನು ಹೊಗಳಿದ ರೋಹಿತ್ ಶರ್ಮಾ, ನಾವು 25 ಓವರ್​ಗಳಲ್ಲಿ ಇಡೀ ಪಂದ್ಯದ ಮೇಲೆ ಹಿಡಿತ ಹೊಂದಿದ್ದೆವು. ಆದರೆ ಆ ಬಳಿಕ ಶ್ರೀಲಂಕಾ ಉತ್ತಮವಾಗಿ ಆಡಿದೆ. ಕೊನೆಯಲ್ಲಿ, ಇದು ನ್ಯಾಯಯುತ ಫಲಿತಾಂಶವಾಗಿದೆ. ಏಕೆಂದರೆ ಪಿಚ್ ಕೂಡ ಹಾಗೆಯೇ ಇತ್ತು.

ಇದನ್ನೂ ಓದಿ: Rohit Sharma: ರೋಹಿತ್ ಶರ್ಮಾ ಅಬ್ಬರಕ್ಕೆ ವಾರ್ನರ್ ದಾಖಲೆ ಧೂಳೀಪಟ

ನಾವು ಕೊನೆಯವರೆಗೂ ಹೋರಾಡಿದ ರೀತಿಗೆ ಹೆಮ್ಮೆ ಇದೆ. ಬೇರೆ ಬೇರೆ ಸಮಯಗಳಲ್ಲಿ ಎರಡೂ ತಂಡಗಳತ್ತ ಆಟ ಸಾಗಿತು. ಪಂದ್ಯವನ್ನು ಹಿಡಿದಿಟ್ಟುಕೊಳ್ಳುವುದು ಮತ್ತು ಆಟದಲ್ಲಿ ಉಳಿಯುವುದು ಮುಖ್ಯವಾಗಿತ್ತು. ಇದಾಗ್ಯೂ ಕೊನೆಯಲ್ಲಿ ನಾವು ಆ ಒಂದು ರನ್ ಗಳಿಸಬೇಕಿತ್ತು ಎಂಬುದೇ ನನ್ನ ಅಭಿಪ್ರಾಯ. ಕೆಲವೊಮ್ಮೆ ಇಂತಹ ಸಂಗತಿಗಳು ಜರುಗತ್ತವೆ. ಏನೂ ಮಾಡಲಾಗುವುದಿಲ್ಲ ಎಂದು ರೋಹಿತ್ ಶರ್ಮಾ ನಿರಾಶೆ ವ್ಯಕ್ತಪಡಿಸಿದ್ದಾರೆ.