Virat Kohli: ಶತಕದ ಟೆಸ್ಟ್ನಲ್ಲಿ ಶತಕದ ನಿರೀಕ್ಷೆ: ಮೊಹಾಲಿಯಲ್ಲಿ ಕೊಹ್ಲಿ ಬ್ಯಾಟಿಂಗ್ ಹೇಗಿದೆ?
Virat Kohli’s Test stats in Mohali: 2019 ರಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಡೇ ನೈಟ್ ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿ ತಮ್ಮ ಕೊನೆಯ ಶತಕ ಬಾರಿಸಿ ಸಂಭ್ರಮಿಸಿದ್ದರು.
ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) 100ನೇ ಟೆಸ್ಟ್ ಪಂದ್ಯವಾಡಲು ಸಜ್ಜಾಗಿದ್ದಾರೆ. ಮೊಹಾಲಿಯಲ್ಲಿ ಮಾರ್ಚ್ 4 ರಂದು ನಡೆಯಲಿರುವ ಶ್ರೀಲಂಕಾ ವಿರುದ್ದದ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಕಿಂಗ್ ಕೊಹ್ಲಿ 100 ಟೆಸ್ಟ್ ಪಂದ್ಯವಾಡಿದ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ. ಆದರೆ ಈ ಪಂದ್ಯದ ಮೂಲಕ ಕೊಹ್ಲಿ ತಮ್ಮ ಶತಕ ಬರವನ್ನು ನೀಗಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ ಕಿಂಗ್ ಕೊಹ್ಲಿ ಅಭಿಮಾನಿಗಳು. ಏಕೆಂದರೆ ವಿರಾಟ್ ಕೊಹ್ಲಿ ಕೊನೆಯ ಬಾರಿ ಶತಕ ಸಿಡಿಸಿದ್ದು 2019 ರಲ್ಲಿ. ಆ ಬಳಿಕ ಯಾವುದೇ ಸೆಂಚುರಿ ಸಿಡಿಸಿಲ್ಲ.
2019 ರಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಡೇ ನೈಟ್ ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿ ತಮ್ಮ ಕೊನೆಯ ಶತಕ ಬಾರಿಸಿ ಸಂಭ್ರಮಿಸಿದ್ದರು. 2008 ರಲ್ಲಿ ಕ್ರಿಕೆಟ್ಗೆ ಎಂಟ್ರಿ ಕೊಟ್ಟಿದ್ದ ಕೊಹ್ಲಿ, ಅಂದಿನಿಂದ ಪ್ರತಿವರ್ಷ ಶತಕ ಬಾರಿಸುತ್ತಾ ಬಂದಿದ್ದರು. ಆದರೆ ಇದೀಗ ಕೊಹ್ಲಿಯ ಬ್ಯಾಟ್ನಿಂದ ಶತಕ ಮೂಡಿಬಂದು 2 ವರ್ಷಗಳೇ ಕಳೆದಿವೆ. ಹೀಗಾಗಿಯೇ ಮೊಹಾಲಿ ಮೈದಾನದಲ್ಲಿ 100ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಕೊಹ್ಲಿ ಬ್ಯಾಟ್ನಿಂದ ಅಭಿಮಾನಿಗಳು ಶತಕವನ್ನು ನಿರೀಕ್ಷಿಸುತ್ತಿದ್ದಾರೆ. ಆದರೆ ಈ ಹಿಂದಿನ ಅಂಕಿ ಅಂಶಗಳನ್ನು ಗಮನಿಸಿದರೆ, ಮೊಹಾಲಿಯಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ನಿಂದ ಶತಕ ಮೂಡಿಬಂದರೂ ಅಚ್ಚರಿಪಡಬೇಕಿಲ್ಲ.
ಏಕೆಂದರೆ ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಮೊಹಾಲಿ ಮೈದಾನದಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅದರಂತೆ 6 ಇನಿಂಗ್ಸ್ಗಳನ್ನು ಆಡಿದ್ದರು. ಇದಾಗ್ಯೂ ಅವರ ಬ್ಯಾಟ್ನಿಂದ ಶತಕ ಮೂಡಿಬಂದಿಲ್ಲ. ಆದರೆ ಆರು ಇನ್ನಿಂಗ್ಸ್ಗಳಲ್ಲಿ ಕೊಹ್ಲಿ ಎರಡು ಬಾರಿ ಅರ್ಧಶತಕ ಬಾರಿಸಿ ಮಿಂಚಿದ್ದರು ಎಂಬುದು ವಿಶೇಷ. ಅಷ್ಟೇ ಅಲ್ಲದೆ 6 ಇನಿಂಗ್ಸ್ ಮೂಲಕ ಮೊಹಾಲಿಯಲ್ಲಿ ಒಟ್ಟು 199 ರನ್ ಗಳಿಸಿದ್ದಾರೆ.
ಹೀಗಾಗಿ ಈ ಬಾರಿ ಕೂಡ ಮೊಹಾಲಿಯಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ನಿಂದ ಉತ್ತಮ ಬ್ಯಾಟಿಂಗ್ ಅನ್ನು ನಿರೀಕ್ಷಿಸಲಾಗುತ್ತಿದೆ. ಇತ್ತ ಮೊಹಾಲಿಯಲ್ಲಿ ಶೇ.50 ರಷ್ಟು ಪ್ರೇಕ್ಷಕರಿಗೆ ಸ್ಟೇಡಿಯಂ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಇದರಿಂದ ಹೆಚ್ಚಿನ ವಿರಾಟ್ ಕೊಹ್ಲಿ ಅಭಿಮಾನಿಗಳು 100ನೇ ಟೆಸ್ಟ್ ಪಂದ್ಯದ ವೀಕ್ಷಣೆಗೆ ಬರಲಿದ್ದಾರೆ. ಇದೇ ವೇಳೆ ಶತಕ ಸಿಡಿಸಿ ಕೊಹ್ಲಿ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಲಿದ್ದಾರಾ ಕಾದು ನೋಡಬೇಕಿದೆ.
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?
(IND vs SL: Virat Kohli’s Test stats in Mohali)