Bridgetown Barbados Weather: ಭಾರತ-ವೆಸ್ಟ್ ಇಂಡೀಸ್ ದ್ವಿತೀಯ ಏಕದಿನ ಪಂದ್ಯಕ್ಕೆ ಇದೆಯಾ ಮಳೆಯ ಕಾಟ?: ಇಲ್ಲಿದೆ ಹವಾಮಾನ ವರದಿ
IND vs WI 2nd ODI: ಇಂದು ನಡೆಯಲಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಎರಡನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಇದೆ. ಇಲ್ಲಿದೆ ನೋಡಿ ಹವಾಮಾನ ವರದಿ.
ಇಂದು ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವೆ ದ್ವಿತೀಯ ಏಕದಿನ ನಡೆಯಲಿದೆ. ಬಾರ್ಬಡಸ್ನ (Barbados) ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಈ ಪಂದ್ಯವನ್ನು ಆಯೋಜಿಸಲಾಗಿದೆ. ಉಭಯ ತಂಡಗಳು ಈ ಮಹತ್ವದ ಪಂದ್ಯಕ್ಕೆ ಸಜ್ಜಾಗುತ್ತಿದೆ. ಈಗಾಗಲೇ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿರುವ ಟೀಮ್ ಇಂಡಿಯಾ (Team India) ಇಂದಿನ ಪಂದ್ಯ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ. ಅತ್ತ ತವರಿನಲ್ಲಿ ಭಾರೀ ಮುಖಭಂಗಕ್ಕೆ ಒಳಗಾಗಿರುವ ವಿಂಡೀಸ್ ಸರಣಿ ತನ್ನದಾಗಿಸಬೇಕು ಎಂದಾದರೆ ಉಳಿದಿರುವ ಎರಡೂ ಪಂದ್ಯವನ್ನು ಗೆಲ್ಲಲೇ ಬೇಕಿದೆ.
ಆದರೆ, ಇಂದು ನಡೆಯಲಿರುವ ಎರಡನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಇದೆ. ಹವಾಮಾನ ವರದಿಗಳ ಪ್ರಕಾರ, ಜುಲೈ 29 ರಂದು (ಶನಿವಾರ) ಬಾರ್ಬಡಸ್ನ ಬ್ರಿಡ್ಜ್‌ಟೌನ್ ನಗರದ ತಾಪಮಾನವು ಹಗಲಿನಲ್ಲಿ 30 ಸೆಲ್ಸಿಯಸ್ ಮತ್ತು ರಾತ್ರಿಯಲ್ಲಿ 26 ಸೆಲ್ಸಿಯಸ್‌ನಷ್ಟು ಇರಲಿದೆ. ಮೋಡಕವಿದ ವಾತಾವರಣ ಇರಲಿದ್ದು ತುಂತುರು ಮಳೆ ಆಗುವ ಸಾಧ್ಯತೆ ಇದೆಯಂತೆ. ಹಗಲಿನಲ್ಲಿ ಶೇ. 48 ರಷ್ಟು ಮತ್ತು ರಾತ್ರಿಯಲ್ಲಿ ಶೇ. 46 ರಷ್ಟು ಮಳೆ ಆಗಲಿದೆ ಎಂದು ಹೇಳಿದೆ.
IND vs WI 2nd ODI: ಇಂದು ಭಾರತ- ವೆಸ್ಟ್ ಇಂಡೀಸ್ ಎರಡನೇ ಏಕದಿನ: ಸಂಜು ಸ್ಯಾಮ್ಸನ್ಗೆ ಸಿಗುತ್ತಾ ಚಾನ್ಸ್?
ಸ್ಥಳೀಯ ಕಾಲಮಾನದ ಪ್ರಕಾರ ಎರಡನೇ ಏಕದಿನ ಪಂದ್ಯ ಬೆಳಗ್ಗೆ 9:30ಕ್ಕೆ ಶುರುವಾಗಲಿದೆ. ಆದರೆ, 10 ಗಂಟೆಯಿಂದ 12 ಗಂಟೆಯ ವರೆಗೆ ಮಳೆ ಆಗಲಿದೆ. ಅಂತೆಯೆ ಸಂಜೆ 4 ಗಂಟೆಯಿಂದ 5 ಗಂಟೆಯ ವರೆಗೆ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಹೀಗಾಗಿ ಪಂದ್ಯಕ್ಕೆ ವರುಣನ ಕಾಟ ಇದೆ.
ಕೆನ್ಸಿಂಗ್ಟನ್ ಓವಲ್ ಪಿಚ್ ಹೇಗಿದೆ?:
ಎರಡನೇ ಏಕದಿನ ಪಂದ್ಯ ನಡೆಯಲಿರುವ ಕೆನ್ಸಿಂಗ್ಟನ್ ಓವಲ್ ಪಿಚ್ ಕೂಡ ಅದ್ಭುತವಾಗಿದೆ. ಕೆನ್ಸಿಂಗ್ಟನ್ ಓವಲ್ನ ಮೇಲ್ಮೈ ಬೌಲಿಂಗ್ ಸ್ನೇಹಿಯಾಗಿದೆ. ಇದು ನಿಧಾನವಾದ ಪಿಚ್ ಆಗಿದ್ದು ವೇಗಿಗಳಿಗಿಂತ ಸ್ಪಿನ್ನರ್‌ಗಳಿಗೆ ಹೆಚ್ಚು ಸಹಾಯ ಮಾಡುತ್ತದೆ. ಇದು ಮೊದಲ ಏಕದಿನದಲ್ಲಿ ಸಾಭೀತಾಗಿತ್ತು. ಈ ಪಿಚ್ನಲ್ಲಿ ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ 229. ಒಟ್ಟು 50 ಪಂದ್ಯಗಳು ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆದಿವೆ. ಇದರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 22 ಪಂದ್ಯಗಳನ್ನು ಗೆದ್ದಿದ್ದರೆ, ಚೇಸಿಂಗ್ ತಂಡ 26 ಗೆದ್ದಿದೆ. ಆದರೆ, ಇಲ್ಲಿ ಆಡಿದ ಕಳೆದ 11 ಪಂದ್ಯಗಳ ಪೈಕಿ 8 ಪಂದ್ಯ ಚೇಸಿಂಗ್ ಮೂಲಕ ಗೆದ್ದಿದೆ.
ಇಲ್ಲಿ ದಾಖಲಾದ ಅತ್ಯಧಿಕ ಸ್ಕೋರ್ 364 ಆಗಿದೆ. ಇದು ಈ ಮೈದಾನದಲ್ಲಿ ದಾಖಲಾದ ಅತ್ಯಧಿಕ ಚೇಸ್ ಕೂಡ ಹೌದು. 2019 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ಈ ಸಾಧನೆ ಗೈದಿತ್ತು. 2007ರ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಐರ್ಲೆಂಡ್ ಗಳಿಸಿದ 91 ರನ್‌ಗಳು ಇಲ್ಲಿ ದಾಖಲಾದ ಲೋ ಸ್ಕೋರ್. ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗುವ ಈ ಪಿಚ್ನಲ್ಲಿ ಓರ್ವ ವೇಗಿಯನ್ನು ಕೈಬಿಡುವ ಸಾಧ್ಯತೆ ಇದೆ. ಮುಖೇಶ್ ಕುಮಾರ್ ಬದಲಿಗೆ ಯುಜ್ವೇಂದ್ರ ಚಹಲ್ ಕಣಕ್ಕಿಳಿಯಬಹುದು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ