ಟೀಮ್ ಇಂಡಿಯಾ ಸೋತರೆ, ಅತ್ಯಂತ ಹೀನಾಯ ದಾಖಲೆ ಪಾಂಡ್ಯ ಪಡೆಯ ಪಾಲು

| Updated By: ಝಾಹಿರ್ ಯೂಸುಫ್

Updated on: Aug 08, 2023 | 4:07 PM

India vs West Indies: ಗಯಾನಾದಲ್ಲಿ ನಡೆಯಲಿರುವ ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಶುರುವಾಗಲಿದೆ. ಹಾಗೆಯೇ ಟಾಸ್ ಪ್ರಕ್ರಿಯೆ 7.30 ಕ್ಕೆ ಜರುಗಲಿದೆ.

ಟೀಮ್ ಇಂಡಿಯಾ ಸೋತರೆ, ಅತ್ಯಂತ ಹೀನಾಯ ದಾಖಲೆ ಪಾಂಡ್ಯ ಪಡೆಯ ಪಾಲು
Team India
Follow us on

India vs West Indies 3rd T20: ಭಾರತ-ವೆಸ್ಟ್ ಇಂಡೀಸ್ ನಡುವಣ ಮೂರನೇ ಟಿ20 ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಗಯಾನಾದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಟೀಮ್ ಇಂಡಿಯಾ (Team India) ಪಾಲಿಗೆ ನಿರ್ಣಾಯಕ. ಏಕೆಂದರೆ ಐದು ಪಂದ್ಯಗಳ ಸರಣಿಯ ಮೊದಲೆರಡು ಮ್ಯಾಚ್​ಗಳಲ್ಲಿ ರೋವ್​ಮನ್ ಪೊವೆಲ್ ಪಡೆ ಜಯ ಸಾಧಿಸಿದೆ.

ಇದೀಗ ಮೂರನೇ ಟಿ20 ಪಂದ್ಯದಲ್ಲಿ ಗೆಲ್ಲುವ ಮೂಲಕ ಹಾರ್ದಿಕ್ ಪಾಂಡ್ಯ ಪಡೆ ಸರಣಿ ಗೆಲ್ಲುವ ಆಸೆಯನ್ನು ಜೀವಂತವಿರಿಸಿಕೊಳ್ಳಬೇಕಿದೆ. ಹೀಗಾಗಿಯೇ 3ನೇ ಟಿ20 ಪಂದ್ಯ ಭಾರತ ತಂಡದ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿ ಮಾರ್ಪಟ್ಟಿದೆ.

ಹೀನಾಯ ದಾಖಲೆ: ಒಂದು ವೇಳೆ ಈ ಪಂದ್ಯದಲ್ಲಿ ಭಾರತ ತಂಡವು ಸೋತರೆ ಸರಣಿ ವೆಸ್ಟ್ ಇಂಡೀಸ್ ಪಾಲಾಗಲಿದೆ. ಇದರ ಜೊತೆಗೆ ವಿಂಡೀಸ್ ವಿರುದ್ಧ ಅತ್ಯಧಿಕ ಟಿ20 ಪಂದ್ಯಗಳನ್ನು ಸೋತ ಏಷ್ಯಾದ ತಂಡ ಎಂಬ ಅಪಖ್ಯಾತಿಗೂ ಟೀಮ್ ಇಂಡಿಯಾ ಒಳಗಾಗಲಿದೆ.

  • ಈ ದಾಖಲೆ ಇದೀಗ ಭಾರತ ಹಾಗೂ ಬಾಂಗ್ಲಾದೇಶ್ ತಂಡಗಳ ಹೆಸರಿನಲ್ಲಿದೆ. ಉಭಯ ತಂಡಗಳು ವೆಸ್ಟ್ ಇಂಡೀಸ್ ವಿರುದ್ದ 9 ಟಿ20 ಪಂದ್ಯಗಳನ್ನು ಸೋತಿದೆ.
  • ಭಾರತದ ವಿರುದ್ಧದ 26 ಟಿ20 ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡ 9 ಬಾರಿ ಗೆಲುವು ದಾಖಲಿಸಿದೆ. ಹಾಗೆಯೇ ಬಾಂಗ್ಲಾದೇಶ್ ವಿರುದ್ಧದ 16 ಟಿ20 ಪಂದ್ಯಗಳಲ್ಲಿ ವಿಂಡೀಸ್ 9 ಬಾರಿ ಜಯಭೇರಿ ಬಾರಿಸಿದೆ.
  • ಇದೀಗ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತರೆ ಸರಣಿ ಸೋಲಿನೊಂದಿಗೆ ವೆಸ್ಟ್ ಇಂಡೀಸ್ ವಿರುದ್ಧ ಅತ್ಯಧಿಕ ಟಿ20 ಪಂದ್ಯಗಳನ್ನು ಸೋತ ಏಷ್ಯನ್ ತಂಡವೆಂಬ ಹೀನಾಯ ದಾಖಲೆ ಭಾರತ ತಂಡದ ಪಾಲಾಗಲಿದೆ.

ಎಷ್ಟು ಗಂಟೆಗೆ ಪಂದ್ಯ ಶುರು: ಗಯಾನಾದಲ್ಲಿ ನಡೆಯಲಿರುವ ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಶುರುವಾಗಲಿದೆ. ಹಾಗೆಯೇ ಟಾಸ್ ಪ್ರಕ್ರಿಯೆ 7.30 ಕ್ಕೆ ಜರುಗಲಿದೆ.

ಮಾಡು ಇಲ್ಲವೇ ಮಡಿ ಪಂದ್ಯ: ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆದ್ದರೆ 6 ವರ್ಷಗಳ ಬಳಿಕ ಟೀಮ್ ಇಂಡಿಯಾ ವಿರುದ್ಧ ಸರಣಿ ಜಯಿಸಿದ ಸಾಧನೆ ಮಾಡಲಿದೆ.

ವೆಸ್ಟ್ ಇಂಡೀಸ್ ಕೊನೆಯ ಬಾರಿ ಸರಣಿ ಗೆದ್ದಿದ್ದು ಯಾವಾಗ?

ಭಾರತ ವಿರುದ್ಧ ಕೊನೆಯ ಬಾರಿ ವೆಸ್ಟ್ ಇಂಡೀಸ್ ಟಿ20 ಸರಣಿ ಗೆದ್ದಿರುವುದು 2017 ರಲ್ಲಿ. ಏಕೈಕ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಸೋಲಿಸಿ ವಿಂಡೀಸ್ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಇದಾದ ಬಳಿಕ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಪಾರುಪತ್ಯ ಸಾಧಿಸುತ್ತಾ ಬಂದಿದೆ. ಇದೀಗ ಈ ನಾಗಾಲೋಟಕ್ಕೆ ಬ್ರೇಕ್​ ಹಾಕಲು ವಿಂಡೀಸ್ ಪಡೆ ಸಜ್ಜಾಗಿ ನಿಂತಿದೆ. ಹೀಗಾಗಿ ಈ ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಭಾರತ ಟಿ20 ತಂಡ:

ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ಉಪನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ನಾಯಕ), ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಅವೇಶ್ ಖಾನ್, ಮುಖೇಶ್ ಕುಮಾರ್.

ಇದನ್ನೂ ಓದಿ: ಪೂರನ್ ಪವರ್​ಗೆ ಹಳೆಯ ದಾಖಲೆ ಉಡೀಸ್​: ಟೀಮ್ ಇಂಡಿಯಾ ವಿರುದ್ದ ಹೊಸ ರೆಕಾರ್ಡ್

ವೆಸ್ಟ್ ಇಂಡೀಸ್ ಟಿ20 ತಂಡ:

ರೋವ್‌ಮನ್ ಪೊವೆಲ್ (ನಾಯಕ), ಕೈಲ್ ಮೇಯರ್ಸ್ (ಉಪ ನಾಯಕ), ಜಾನ್ಸನ್ ಚಾರ್ಲ್ಸ್, ರೋಸ್ಟನ್ ಚೇಸ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೇಲ್ ಹೊಸೈನ್, ಅಲ್ಝಾರಿ ಜೋಸೆಫ್, ಬ್ರಾಂಡನ್ ಕಿಂಗ್, ಓಬೆಡ್ ಮೆಕಾಯ್, ನಿಕೋಲಸ್ ಪೂರನ್, ರೊಮಾರಿಯೊ ಶೆಫರ್ಡ್, ಓಡಿಯನ್ ಸ್ಮಿತ್ , ಓಶಾನೆ ಥಾಮಸ್.