Ind A vs NZ A: ಮಿಂಚಿದ ರಜತ್, ಶಾರ್ದೂಲ್, ಕುಲ್ದೀಪ್; ನಾಯಕನಾಗಿ ಮೊದಲ ಪಂದ್ಯ ಗೆದ್ದ ಸಂಜು..!
Ind A vs NZ A: ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ, ಭಾರತ ಎ ತಂಡವು ನ್ಯೂಜಿಲೆಂಡ್ ಎ ತಂಡವನ್ನು ಯಾವುದೇ ತೊಂದರೆಯಿಲ್ಲದೆ 7 ವಿಕೆಟ್‌ಗಳಿಂದ ಸೋಲಿಸಿತು.
ಮುಂದಿನ ತಿಂಗಳಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್‌ಗೆ (T20 World Cup) ಎಲ್ಲಾ ದೇಶಗಳು ತಮ್ಮ ತಮ್ಮ ತಂಡಗಳನ್ನು ಪ್ರಕಟಿಸಿವೆ. ಟೀಂ ಇಂಡಿಯಾ ಕೂಡ ಈಗಾಗಲೇ 15 ಸದಸ್ಯರ ತಂಡವನ್ನು ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡಿದೆ. ಆದರೆ ಆಯ್ಕೆಯಾದ ಆ ತಂಡದಲ್ಲಿ ಆತನೊಬ್ಬನ ಹೆಸರಿರಬೇಕೆಂದು ಹೇಳಿದವರಲ್ಲಿ ಕೋಟ್ಯಾಂತರ ಜನರಿದ್ದಾರೆ. ವಾಸ್ತವವಾಗಿ ಸಂಜು ಸ್ಯಾಮ್ಸನ್‌ಗೆ (Sanju Samson) ಟಿ20 ತಂಡದಲ್ಲಿ ಸ್ಥಾನ ನೀಡಬೇಕಿತ್ತು ಎಂದು ಕ್ರಿಕೆಟ್ ಪಂಡಿತರು ವಾದಿಸಿದ್ದರು. ಆದರೆ ಸಂಜುಗೆ ಟಿ20 ವಿಶ್ವಕಪ್ನಲ್ಲಿ ಸ್ಥಾನ ನೀಡದ ಬಿಸಿಸಿಐ ಅವರನ್ನು ಕಿವೀಸ್ ಎ ವಿರುದ್ಧದ ಸರಣಿಗೆ ನಾಯಕನಾಗಿ ಮಾಡಿತ್ತು. ಈಗ ನಾಯಕನಾಗಿ ಉತ್ತಮ ಆರಂಬ ಮಾಡಿರುವ ಸಂಜು ಮೊದಲ ಪಂದ್ಯದಲ್ಲೇ ಸುಲಭ ಜಯ ಸಾಧಿಸಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಎ ತಂಡವು ನ್ಯೂಜಿಲೆಂಡ್ ಎ ತಂಡವನ್ನು 7 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿತು. ಸ್ಯಾಮ್ಸನ್ ಅವರ ನಾಯಕತ್ವದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಲ್ಲದೆ ಪ್ರಮುಖ ಇನ್ನಿಂಗ್ಸ್ ಕೂಡ ಆಡಿದರು.
ಈ ಸರಣಿಯು ಸ್ಯಾಮ್ಸನ್‌ಗೆ ಮಾತ್ರವಲ್ಲ, ಬೌಲಿಂಗ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರಿಗೂ ಮುಖ್ಯವಾಗಿದೆ. ಏಕೆಂದರೆ ಕೆಲವು ತಿಂಗಳ ಹಿಂದಿನವರೆಗೂ ಭಾರತ ತಂಡದ ಸಾಮಾನ್ಯ ಭಾಗವಾಗಿದ್ದ ಶಾರ್ದೂಲ್ ಈಗ ತಂಡದಿಂದ ಗೇಟ್ ಪಾಸ್ ಪಡೆದುಕೊಂಡಿದ್ದಾರೆ. ಹೀಗಾಗಿ ಅದ್ಭುತ ಪ್ರದರ್ಶನದ ಮೂಲಕ ಮತ್ತೆ ತಂಡ ಸೇರುವ ತವಕದಲ್ಲಿರುವ ಠಾಕೂರ್ಗೆ ಈ ಸರಣಿ ಬಹುಮುಖ್ಯವಾಗಿತ್ತು. ಶಾರ್ದೂಲ್ ಕೂಡ ಈ ಬಾರಿ ವಿಶ್ವಕಪ್ ತಂಡಕ್ಕೆ ಲಗ್ಗೆ ಇಡಲು ಸಾಧ್ಯವಾಗಲಿಲ್ಲ ಇಂತಹ ಪರಿಸ್ಥಿತಿಯಲ್ಲಿ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತು ಪಡಿಸಲು ಇದೊಂದು ಉತ್ತಮ ಅವಕಾಶವಾಗಿದ್ದು, ಮೊದಲ ಪಂದ್ಯದಲ್ಲೇ ಪರಿಣಾಮಕಾರಿ ಪ್ರದರ್ಶನ ನೀಡಿದರು.
ಶಾರ್ದೂಲ್-ಕುಲದೀಪ್ ಮಿಂಚಿಂಗ್
ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಶಾರ್ದೂಲ್ ಠಾಕೂರ್ ಭಾರತಕ್ಕೆ ಗೆಲುವಿನ ಅಡಿಪಾಯವನ್ನು ಸಿದ್ಧಪಡಿಸಿದರು. ಮಧ್ಯಪ್ರದೇಶದ ವೇಗದ ವೇಗಿ ಕುಲದೀಪ್ ಸೇನ್ ಜೊತೆಗೆ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಶಾರ್ದೂಲ್, ನ್ಯೂಜಿಲೆಂಡ್ ತಂಡದ ಅಗ್ರ ಮತ್ತು ಮಧ್ಯಮ ಕ್ರಮಾಂಕವನ್ನು ಸಂಪೂರ್ಣವಾಗಿ ನಾಶಪಡಿಸಿದರು. ಹೀಗಾಗಿ ನ್ಯೂಜಿಲೆಂಡ್‌ನ 8 ವಿಕೆಟ್‌ಗಳು ಕೇವಲ 74 ರನ್‌ಗಳಿಗೆ ಬಿದ್ದವು, ಅದರಲ್ಲಿ 7 ವಿಕೆಟ್‌ಗಳನ್ನು ಇಬ್ಬರೂ ಬೌಲರ್‌ಗಳು ಕಬಳಿಸಿದರು.
ಆದರೆ ಕೊನೆಯ ಹಂತದಲ್ಲಿ ಎದ್ದುನಿಂತ ನ್ಯೂಜಿಲೆಂಡ್ ಒಂಬತ್ತನೇ ವಿಕೆಟ್‌ಗೆ 89 ರನ್‌ಗಳ ಜೊತೆಯಾಟವನ್ನು ನೀಡಿತು. ಅದರ ಆಧಾರದ ಮೇಲೆ ತಂಡ 167 ರನ್‌ಗಳನ್ನು ತಲುಪುವಲ್ಲಿ ಯಶಸ್ವಿಯಾಯಿತು. ಶಾರ್ದೂಲ್ 4 ಹಾಗೂ ಕುಲದೀಪ್ 3 ವಿಕೆಟ್ ಪಡೆದರು.
ಪೃಥ್ವಿ ಫೇಲ್, ಸ್ಯಾಮ್ಸನ್-ಪಾಟಿದಾರ್ ಉತ್ತಮ ಆಟ
ಅದೇ ಸಮಯದಲ್ಲಿ, ಸ್ಯಾಮ್ಸನ್ ಹೊರತುಪಡಿಸಿ, ಬ್ಯಾಟಿಂಗ್ ವಿಷಯದಲ್ಲಿ ಮತ್ತೊಬ್ಬ ಬ್ಯಾಟ್ಸ್‌ಮನ್ ಪೃಥ್ವಿ ಶಾ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಇತ್ತೀಚೆಗಷ್ಟೇ ನಡೆದ ದುಲೀಪ್ ಟ್ರೋಫಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಶಾ ಈ ಸರಣಿಯಲ್ಲೂ ಅಬ್ಬರದ ಬ್ಯಾಟಿಂಗ್ ಮಾಡುವ ನಿರೀಕ್ಷೆ ಹೊಂದಿದ್ದರು. ಆದರೆ ಅಲ್ಪ ಮೊತ್ತದ ಮುಂದೆ ಮೊದಲ ಅವಕಾಶದಲ್ಲಿ ವಿಫಲರಾಗಿ ಕೇವಲ 17 ರನ್ ಗಳಿಸಲಷ್ಟೇ ಶಕ್ತರಾದರು. ಅದೇ ಸಮಯದಲ್ಲಿ ಟೀಂ ಇಂಡಿಯಾದಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ವಿಫಲರಾದ ರಿತುರಾಜ್ ಗಾಯಕ್ವಾಡ್, ಮೊದಲ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಗಾಯಕ್ವಾಡ್ ತಮ್ಮ ಉತ್ತಮ ಫಾರ್ಮ್ ಮುಂದುವರೆಸಿ 41 ರನ್‌ಗಳ ಇನ್ನಿಂಗ್ಸ್ ಆಡಿದರು.
ಅಂತಿಮವಾಗಿ ನಾಯಕ ಸ್ಯಾಮ್ಸನ್, ರಜತ್ ಪಾಟಿದಾರ್ ಜೊತೆ 69 ರನ್ಗಳ ಜೊತೆಯಾಟವಾಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಈ ವರ್ಷ ಪ್ರಥಮ ದರ್ಜೆ ಹಾಗೂ ಟಿ20ಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದ ಎಂಪಿ ಬ್ಯಾಟ್ಸ್‌ಮನ್ ಪಾಟಿದಾರ್, ಏಕದಿನ ಮಾದರಿಯಲ್ಲೂ ತಮ್ಮ ಆವೇಗವನ್ನು ಮುಂದುವರಿಸಿ 45 ರನ್ ಗಳಿಸಿದರು. ಅದೇ ಸಮಯದಲ್ಲಿ, ಸ್ಯಾಮ್ಸನ್ ಕೂಡ ಯಾವುದೇ ತೊಂದರೆಯಿಲ್ಲದೆ 29 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದರು. ಅದರಲ್ಲಿ 3 ಅತ್ಯುತ್ತಮ ಸಿಕ್ಸರ್ಗಳನ್ನು ಹೊಡೆದ ಸಂಜು, ಕೇವಲ 32 ಓವರ್ಗಳಲ್ಲಿ ತಂಡವನ್ನು ಜಯದ ದಡ ಸೇರಿಸಿದರು.
Published On - 6:53 pm, Thu, 22 September 22