
ಭಾರತ ಎ ಮತ್ತು ಆಸ್ಟ್ರೇಲಿಯಾ ಎ ನಡುವೆ ನಡೆಯುತ್ತಿರುವ ಅನಧಿಕೃತ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಮುಕ್ತಾಯಗೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡ ಎರಡನೇ ದಿನದಂದು 334 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಎರಡನೇ ದಿನದ ಅಂತ್ಯದ ವೇಳೆಗೆ 171 ರನ್‌ಗಳಿಗೆ ಆಲೌಟ್ ಆಯಿತು. ಭಾರತ ಎ ಪರ ಶಮ್ಸ್ ಮುಲಾನಿ 4 ವಿಕೆಟ್ ಪಡೆದರೆ, ತುಷಾರ್ ದೇಶಪಾಂಡೆ ಮತ್ತು ತನುಷ್ ಕೋಟ್ಯಾನ್ ತಲಾ ಎರಡು ವಿಕೆಟ್ ಪಡೆದರು.
ಮೊದಲ ದಿನದಂದು 5 ವಿಕೆಟ್‌ಗಳನ್ನು ಕಳೆದುಕೊಂಡು 257 ರನ್ ಕಲೆಹಾಕಿದ್ದ ಭಾರತ ಎ ತಂಡ, ಇಲ್ಲಿಂದ ಎರಡನೇ ದಿನದಾಟವನ್ನು ಮುಂದುವರೆಸಿತು. ಎರಡನೇ ದಿನದಂದು ಕುಮಾರ್ ಕುಶಾಗ್ರ ಶತಕ ಬಾರಿಸಿ ತಂಡವನ್ನು 300 ರನ್‌ಗಳ ಗಡಿ ದಾಟಿಸಿದರು. ಇವರನ್ನು ಹೊರತುಪಡಿಸಿ ತನುಷ್ ಕೋಟ್ಯಾನ್ 69 ಮತ್ತು ಸಾಯಿ ಸುದರ್ಶನ್ 57 ರನ್‌ಗಳ ಕಾಣಿಕೆ ನೀಡಿದರು. ನಾಯಕ ದೇವದತ್ ಪಡಿಕ್ಕಲ್ ಕೇವಲ ಮೂರು ರನ್ ಗಳಿಸಿದರು. ಆಸ್ಟ್ರೇಲಿಯಾ ಪರ ಕೋರಿ ರೊಚ್ಚಿಯೋಲಿ ನಾಲ್ಕು ವಿಕೆಟ್ ಮತ್ತು ಟಾಡ್ ಮರ್ಫಿ ಮೂರು ವಿಕೆಟ್ ಪಡೆದರು.
ಆಸ್ಟ್ರೇಲಿಯಾ ಎ ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 55.3 ಓವರ್‌ಗಳಲ್ಲಿ 171 ರನ್‌ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಪರ ಜೇಸನ್ ಸಂಘಾ 46 ರನ್ ಗಳಿಸಿದರೆ, ಉಳಿದಂತೆ ಕಾಂಗರೂ ತಂಡದ ಅರ್ಧದಷ್ಟು ಆಟಗಾರರು 85 ರನ್‌ಗಳಿಗೆ ಪೆವಿಲಿಯನ್ ಸೇರಿಕೊಂಡರು. ನಂತರ, ಕೆಳ ಕ್ರಮಾಂಕದಿಂದ ನೆರವಿನಿಂದ ತಂಡವು 171 ರನ್ ಕಲೆಹಾಕಿತು. ಹೀಗಾಗಿ ಮೊದಲ ಇನ್ನಿಂಗ್ಸ್ ಆಧಾರದ ಮೇಲೆ ಭಾರತ 163 ರನ್‌ಗಳ ಮುನ್ನಡೆ ಪಡೆದುಕೊಂಡಿತು.
ಆಸ್ಟ್ರೇಲಿಯಾ ಎ ವಿರುದ್ಧದ ಟೆಸ್ಟ್; ಮೊದಲ ದಿನ 257 ರನ್ ಕಲೆಹಾಕಿದ ಭಾರತ ಎ
ಭಾರತದ ಪರ ಅಮೋಘ ಪ್ರದರ್ಶನ ನೀಡಿದ ಸ್ಪಿನ್ನರ್ ಶಮ್ಸ್ ಮುಲಾನಿ 18 ಓವರ್‌ಗಳಲ್ಲಿ 67 ರನ್ ನೀಡಿ 4 ವಿಕೆಟ್‌ಗಳನ್ನು ಕಬಳಿಸಿದರು. ತನುಷ್ ಕೋಟ್ಯಾನ್ 31 ರನ್‌ಗಳಿಗೆ 2 ವಿಕೆಟ್‌ಗಳನ್ನು ಪಡೆದರೆ, ತುಷಾರ್ ದೇಶಪಾಂಡೆ 32 ರನ್‌ಗಳಿಗೆ 2 ವಿಕೆಟ್‌ಗಳನ್ನು ಪಡೆದರು. ಅನ್ಶುಲ್ ಕಾಂಬೋಜ್ ಮತ್ತು ಪ್ರಫುಲ್ ಹಿಂಗೆ ತಲಾ 1 ವಿಕೆಟ್ ಪಡೆದರು. ಭಾರತದ ಎರಡನೇ ಇನ್ನಿಂಗ್ಸ್ ಮೂರನೇ ದಿನ ಆರಂಭವಾಗಲಿದ್ದು, ಆಸ್ಟ್ರೇಲಿಯಾ ತಂಡಕ್ಕೆ ತಂಡ ಎಷ್ಟು ದೊಡ್ಡ ಗುರಿಯನ್ನು ನಿಗದಿಪಡಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
Published On - 8:09 pm, Wed, 23 September 26