IND vs SA: ಮಿಂಚಿದ ಪ್ರಸಿದ್ಧ್ ಕೃಷ್ಣ; ಆಫ್ರಿಕಾ ವಿರುದ್ಧ ಮುನ್ನಡೆ ಪಡೆದ ಭಾರತಕ್ಕೆ ಮತ್ತೆ ಆಘಾತ
India A vs South Africa A: ಬೆಂಗಳೂರಿನಲ್ಲಿ ನಡೆಯುತ್ತಿರುವ ಭಾರತ ಎ vs ದಕ್ಷಿಣ ಆಫ್ರಿಕಾ ಎ ಅನಧಿಕೃತ ಟೆಸ್ಟ್‌ನಲ್ಲಿ ಭಾರತ ಎ ಉತ್ತಮ ಪ್ರದರ್ಶನ ನೀಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 255 ರನ್‌ಗಳಿಗೆ ಆಲೌಟ್ ಆದ ಭಾರತ, ದಕ್ಷಿಣ ಆಫ್ರಿಕಾವನ್ನು 221 ರನ್‌ಗಳಿಗೆ ಕಟ್ಟಿಹಾಕಿತು. ಧ್ರುವ್ ಜುರೆಲ್ ಅಜೇಯ ಶತಕ ಹಾಗೂ ಪ್ರಸಿದ್ಧ್ ಕೃಷ್ಣರ ಮಾರಕ ಬೌಲಿಂಗ್ ನೆರವಿನಿಂದ ಭಾರತ 34 ರನ್‌ಗಳ ಮುನ್ನಡೆ ಸಾಧಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ 3 ವಿಕೆಟ್ ನಷ್ಟಕ್ಕೆ 78 ರನ್ ಗಳಿಸಿದೆ.

ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಎ ವಿರುದ್ಧದ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಎ (India A vs South Africa A) ತಂಡವು ಗಮನಾರ್ಹ ಪ್ರದರ್ಶನ ನೀಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 255 ರನ್‌ಗಳಿಗೆ ಆಲೌಟ್ ಆಗಿದ್ದ ಭಾರತ ತಂಡ, ದಕ್ಷಿಣ ಆಫ್ರಿಕಾವನ್ನು 221 ರನ್‌ಗಳಿಗೆ ಕಟ್ಟಿಹಾಕಿದೆ. 34 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ ತಂಡ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 78 ರನ್ ಕಲೆಹಾಕಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಪರ ಧ್ರುವ್ ಜುರೆಲ್ ಅಜೇಯ ಶತಕ ಬಾರಿಸಿದರೆ, ಇತ್ತ ಬೌಲಿಂಗ್ನಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ (Prasidh Krishna) ಮಾರಕ ದಾಳಿ ನಡೆಸಿ, ಆಫ್ರಿಕಾ ತಂಡವನ್ನು ಮುನ್ನಡೆ ಪಡೆಯದಂತೆ ತಡೆದರು.
ಪ್ರಸಿದ್ಧ್ ಕೃಷ್ಣ ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ಗಳನ್ನು ಕಬಳಿಸುವ ಮೂಲಕ ತಂಡದ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು. ದಕ್ಷಿಣ ಆಫ್ರಿಕಾ ಎ ಪರ ಮಾರ್ಕಸ್ ಅಕೆರ್ಮನ್ ಅತ್ಯಧಿಕ 134 ರನ್‌ಗಳನ್ನು ಗಳಿಸಿದರು. ಆದರೆ ನಾಯಕನನ್ನು ಹೊರತುಪಡಿಸಿ, ಬೇರೆ ಯಾವುದೇ ಬ್ಯಾಟ್ಸ್ಮನ್ಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ನಾಯಕ ಟೆಂಬಾ ಬವುಮಾ ಮೊದಲ ಎಸೆತದಲ್ಲೇ ಔಟಾಗಿ ತಮ್ಮ ಖಾತೆ ತೆರೆಯಲು ವಿಫಲರಾದರು.
ಆಫ್ರಿಕಾದ ಮೇಲೆ ಸವಾರಿ ಮಾಡಿದ ಕೃಷ್ಣ
ಭಾರತ ಎ ತಂಡದ ಮೊದಲ ಇನ್ನಿಂಗ್ಸ್ 255 ರನ್‌ಗಳಿಗೆ ಅಂತ್ಯಗೊಂಡಾಗ, ಪ್ರವಾಸಿ ತಂಡವು ದೊಡ್ಡ ಮುನ್ನಡೆ ಸಾಧಿಸುತ್ತದೆ ಎಂದು ತೋರುತ್ತಿತ್ತು, ಆದರೆ ಅದು ಸಾಧ್ಯವಾಗಲಿಲ್ಲ. ಭಾರತದ ಪರ ಆರಂಭಿಕ ದಾಳಿ ನಡೆಸಿದ ಆಕಾಶ್‌ದೀಪ್ ಮತ್ತು ಸಿರಾಜ್, ಜುಬೈರ್ ಹಮ್ಜಾ ಮತ್ತು ಲೆಸಿಗೊ ಸೆನೋಕ್ವಾನೆ ಅವರನ್ನು ಔಟ್ ಮಾಡಿದರು. ನಂತರ ಆಕಾಶ್, ಮೊದಲ ಎಸೆತದಲ್ಲೇ ತೆಂಬಾ ಬವುಮಾ ಅವರನ್ನು ಔಟ್ ಮಾಡಿದರು. ನಂತರ, ಮಧ್ಯದ ಓವರ್‌ಗಳಲ್ಲಿ, ಪ್ರಸಿದ್ಧ್ ಕೃಷ್ಣ 26 ರನ್‌ಗಳಿಗೆ ಜೋರ್ಡಾನ್ ಹರ್ಮನ್ ಅವರನ್ನು ಔಟ್ ಮಾಡಿದರೆ, ನಂತರ ವಿಕೆಟ್ ಕೀಪರ್ ಕಾನರ್ ಅವನರನ್ನು ಶೂನ್ಯಕ್ಕೆ ಪೆವಿಲಿಯನ್ಗೆ ಕಳುಹಿಸಿದರು. ಬಳಿಕ ಓಖುಲೆ ಸೆಲೆ ಅವರನ್ನು ಔಟ್ ಮಾಡಿ ದಕ್ಷಿಣ ಆಫ್ರಿಕಾ ಎ ತಂಡದ ಇನ್ನಿಂಗ್ಸ್ ಪೂರ್ಣಗೊಳಿಸಿದರು. ಕುತೂಹಲಕಾರಿಯಾಗಿ, ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಸಿದ್ಧ್ ಕೃಷ್ಣ ಅವರನ್ನು ತಂಡದಲ್ಲಿ ಸೇರಿಸಿಕೊಂಡಿಲ್ಲ.
IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ; ಕನ್ನಡಿಗನಿಗಿಲ್ಲ ಸ್ಥಾನ
ಭಾರತಕ್ಕೆ ಮತ್ತೆ ಆರಂಭಿಕ ಆಘಾತ
ಭಾರತ ಎ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದ್ದರೂ ಬ್ಯಾಟ್ಸ್ಮನ್ಗಳ ವೈಫಲ್ಯ ಮತ್ತೆ ಮುಂದುವರೆದಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಜುರೆಲ್ ಹೊರತುಪಡಿಸಿ ಮತ್ತ್ಯಾರು ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಆಡಿರಲಿಲ್ಲ. ಇದೀಗ ಎರಡನೇ ಇನ್ನಿಂಗ್ಸ್ನಲ್ಲೂ 100 ರನ್ ಗಡಿ ದಾಟುವುದಕ್ಕೂ ಮುನ್ನವೇ ತಂಡ ಪ್ರಮುಖ 3 ವಿಕೆಟ್ ಕಳೆದುಕೊಂಡಿದೆ. ಆರಂಭಿಕ ಅಭಿಮನ್ಯು ಈಶ್ವರನ್ ಶೂನ್ಯಕ್ಕೆ ಔಟಾದರೆ, ಸಾಯಿ ಸುದರ್ಶನ್ 23 ಹಾಗೂ ದೇವದತ್ ಪಡಿಕ್ಕಲ್ 24 ರನ್‌ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಕೆಎಲ್ ರಾಹುಲ್ (26 ರನ್) ಹಾಗೂ ನೈಟ್ ವಾಚ್ಮನ್ ಆಗಿ ಬಂದಿರುವ ಕುಲ್ದೀಪ್ ಯಾದವ್ ಅಜೇಯರಾಗಿ ಉಳಿದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
