ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಶುಕ್ರವಾರದಿಂದ ಅಂದರೆ ನವೆಂಬರ್ 22 ರಿಂದ ಪರ್ತ್ನಲ್ಲಿ ಆರಂಭವಾಗಿದೆ. ಈ ಸರಣಿ ಎರಡೂ ತಂಡಗಳಿಗೆ ಮಹತ್ವದ್ದಾಗಿದ್ದು, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಯಾವ ತಂಡ ಫೈನಲ್ ತಲುಪಲಿದೆ ಎಂಬುದು ಈ ಸರಣಿಯಿಂದ ಸ್ಪಷ್ಟವಾಗಲಿದೆ. ಹೀಗಾಗಿ ಗೆಲ್ಲಲೇಬೇಕಾದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಜಸ್ಪ್ರೀತ್ ಬುಮ್ರಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ ನಾಯಕನ ಆಯ್ಕೆಯನ್ನು ಸಮರ್ಥಿಸಿಕೊಳ್ಳದ ತಂಡದ ಟಾರ್ಪ್ ಆರ್ಡರ್, ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡಿದೆ. ಭೋಜನ ವಿರಾಮದ ವೇಳೆಗೆ ತಂಡದ 4 ಪ್ರಮುಖ ವಿಕೆಟ್ಗಳು ಪತನವಾಗಿದ್ದು, ಕೇವಲ 51 ರನ್ ಕಲೆಹಾಕಲಾಗಿದೆ. ಅನಾನುಭವಿಗಳ ಜೊತೆಗೆ ಅನುಭವಿಗಳು, ಬಿಗ್ ಇನ್ನಿಂಗ್ಸ್ ಆಡದಿರುವುದು ಟೀಂ ಇಂಡಿಯಾವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಇಲ್ಲದ ಕಾರಣ, ಯಶಸ್ವಿ ಜೈಸ್ವಾಲ್ ಅವರೊಂದಿಗೆ ಕನ್ನಡಿಗ ಕೆಎಲ್ ರಾಹುಲ್ ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶ ಪಡೆದರು. ಅದರಂತೆ ಆರಂಭದಲ್ಲಿ ಸಾಕಷ್ಟು ತಾಳ್ಮೆ ತೊರಿಸಿ ಕಾಂಗರೂ ಬೌಲರ್ಗಳಿಗೆ ತೊಂದರೆ ನೀಡಿದರು. ಇತ್ತ ರಾಹುಲ್ ಜೊತೆ ಆರಂಭಿಕನಾಗಿ ಕಣಕ್ಕಿಳಿದಿದ್ದ ಜೈಸ್ವಾಲ್, ಖಾತೆಯನ್ನು ತೆರೆಯದೆ ಶೂನ್ಯಕ್ಕೆ ಔಟಾದರು. ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಜೈಸ್ವಾಲ್, ಕ್ಸ್ವೀನಿಗೆ ಕ್ಯಾಚಿತ್ತು ಔಟಾದರು. ತಮ್ಮ ಇನ್ನಿಂಗ್ಸ್ನಲ್ಲಿ 8 ಎಸೆತಗಳನ್ನು ಆಡಿದ ಯಶಸ್ವಿ ಯಾವುದೇ ರನ್ ಗಳಿಸದೆ ಪೆವಿಲಿಯನ್ ಸೇರಿಕೊಂಡರು.
ಜೈಸ್ವಾಲ್ ವಿಕೆಟ್ ಪತನದ ಬಳಿಕ ಮೂರನೇ ಕ್ರಮಾಂಕದಲ್ಲಿ ಬಂದ ಮತ್ತೊಬ್ಬ ಕನ್ನಡಿಗ ದೇವದತ್ ಪಡಿಕ್ಕಲ್ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಡಲಾಗಿತ್ತು. ಏಕೆಂದರೆ ಶುಭ್ಮನ್ ಗಿಲ್ ಇಂಜುರಿಯಾದ್ದರಿಂದ ಅವರ ಸ್ಥಾನದಲ್ಲಿ ಪಡಿಕ್ಕಲ್ಗೆ ಅವಕಾಶ ನೀಡಲಾಗಿತ್ತು. ಇದಕ್ಕೆ ಕಾರಣವೂ ಇದ್ದು, ಆಸ್ಟ್ರೇಲಿಯಾ ಎ ವಿರುದ್ಧ ನಡೆದಿದ್ದ 2 ಅನಧಿಕೃತ ಟೆಸ್ಟ್ ಪಂದ್ಯಗಳಲ್ಲಿ ಪಡಿಕ್ಕಲ್ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿದಲ್ಲದೆ ಪ್ಲೇಯಿಂಗ್ 11ನಲ್ಲೂ ಅವಕಾಶ ನೀಡಲಾಗಿತ್ತು. ಹೀಗಾಗಿ ಸಿಕ್ಕ ಅವಕಾಶವನ್ನು ಪಡಿಕ್ಕಲ್ ಸದುಪಯೋಗ ಪಡಿಸಿಕೊಳ್ಳುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಜೈಸ್ವಾಲ್ರಂತೆ ಪಡಿಕ್ಕಲ್ಗೂ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ತಮ್ಮ ಇನ್ನಿಂಗ್ಸ್ನಲ್ಲಿ 23 ಎಸೆತಗಳನ್ನು ಎದುರಿಸಿದ ಪಡಿಕ್ಕಲ್, ಜೋಶ್ ಹೇಜಲ್ವುಡ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚಿತ್ತು, ಸೊನ್ನೆಗೆ ವಿಕೆಟ್ ಒಪ್ಪಿಸಿದರು.
ಇಬ್ಬರು ಅನಾನುಭವಿಗಳು ಶೂನ್ಯಕ್ಕೆ ಔಟಾದ ಕಾರಣ, ಟೀಂ ಇಂಡಿಯಾ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತ್ತು. ಹೀಗಾಗಿ ರಾಹುಲ್ ಅವರನ್ನು ಕೂಡಿಕೊಂಡ ಅನುಭವಿ ವಿರಾಟ್ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಕಳೆದ ಕೆಲವು ಪಂದ್ಯಗಳಲ್ಲಿ ಮೌನಕ್ಕೆ ಶರಣಾಗಿರುವ ವಿರಾಟ್ ಕೊಹ್ಲಿಯ ಬ್ಯಾಟ್, ಈ ಪಂದ್ಯದಲ್ಲಿ ಘರ್ಜಿಸಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಮತ್ತೊಮ್ಮೆ ತಮ್ಮ ಕಳಪೆ ಪ್ರದರ್ಶನವನ್ನು ಆಸ್ಟ್ರೇಲಿಯಾದಲ್ಲೂ ಮುಂದುವರೆಸಿದ ಕೊಹ್ಲಿ, 12 ಎಸೆತಗಳನ್ನು ಎದುರಿಸಿ ಕೇವಲ 5 ರನ್ ಗಳಿಸಿ ಹೇಜಲ್ವುಡ್ಗೆ ಬಲಿಯಾದರು.
ಇನ್ನು ರೋಹಿತ್ ಅನುಪಸ್ಥಿತಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಕನ್ನಡಿಗ ರಾಹುಲ್, ಖಂಡಿತವಾಗಿಯೂ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಆಸೀಸ್ ವೇಗಿಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ ರಾಹುಲ್, ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ನೆರವಾದರು. ಒಂದೆಡೆ ವಿಕೆಟ್ ಪತನದ ನಡುವೆಯೂ ತಂಡದ ಪರ ಬಿಗ್ ಇನ್ನಿಂಗ್ಸ್ ಕಟ್ಟುವ ಸುಳಿವು ನೀಡಿದ್ದ ರಾಹುಲ್, ಬರೋಬ್ಬರಿ 74 ಎಸೆತಗಳನ್ನು ಎದುರಿಸಿ 26 ರನ್ ಕಲೆಹಾಕಿದ್ದರು. ಆದರೆ ಇಲ್ಲಿ ಮತ್ತೊಮ್ಮೆ ದಾಳಿಗಿಳಿದ ಸ್ಟಾರ್ಕ್, ರಾಹುಲ್ರನ್ನು ಪೆವಿಲಿಯನ್ಗಟ್ಟುವಲ್ಲಿ ಯಶಸ್ವಿಯಾದರು. ಹೀಗಾಗಿ ಭೋಜನ ವಿರಾಮದ ವೇಳೆಗೆ ಭಾರತ 4 ವಿಕೆಟ್ ಕಳೆದುಕೊಂಡು 51 ರನ್ ಕಲೆಹಾಕಿದೆ. ಧ್ರುವ್ ಜುರೆಲ್ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದಿದ್ದು, ಅವರೀಗ ರಿಷಬ್ ಪಂತ್ಗೆ ಸಾಥ್ ನೀಡಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:09 am, Fri, 22 November 24