ಟೆಸ್ಟ್​​ ಇತಿಹಾಸದಲ್ಲಿ ಹಿಂದೆಂದೂ ಕಾಣದ ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ

ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲೆಗಳು ನಿರ್ಮಾಣವಾಗುವುದು ಸಹಜ, ಆದರೆ ಇತಿಹಾಸವನ್ನೇ ಬದಲಿಸುವಂತಹ ಸಾಧನೆಗಳು ಘಟಿಸುವುದು ತೀರಾ ಅಪರೂಪ. ಬರೋಬ್ಬರಿ 149 ವರ್ಷಗಳ ಟೆಸ್ಟ್ ಕ್ರಿಕೆಟ್ ಪಯಣದಲ್ಲಿ ಇದುವರೆಗೆ ಯಾವ ದಿಗ್ಗಜ ತಂಡಕ್ಕೂ ಸಾಧ್ಯವಾಗದ ಅಸಾಧಾರಣ ಮೈಲಿಗಲ್ಲೊಂದನ್ನು ಟೀಮ್ ಇಂಡಿಯಾ ತಲುಪಿದ್ದು, ಈ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಟೆಸ್ಟ್​​ ಇತಿಹಾಸದಲ್ಲಿ ಹಿಂದೆಂದೂ ಕಾಣದ ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ
Team India
Image Credit source: GettyImages

Updated on: Nov 22, 2026 | 10:06 AM

ಟೆಸ್ಟ್ ಕ್ರಿಕೆಟ್ ಶುರುವಾಗಿ ಬರೋಬ್ಬರಿ 149 ವರ್ಷಗಳ ಕಳೆದಿವೆ. ಈ ಒಂದೂವರೆ ಶತಮಾನದ ಪಯಣದಲ್ಲಿ ಎಷ್ಟೋ ದಿಗ್ಗಜ ತಂಡಗಳು ಬಂದು ಹೋಗಿವೆ, ಅದೆಷ್ಟೋ ದಾಖಲೆಗಳು ನಿರ್ಮಾಣವಾಗಿ ಮುರಿದುಬಿದ್ದಿವೆ. ಆದರೆ, ಇದುವರೆಗೆ ಕ್ರಿಕೆಟ್ ಲೋಕದ ಯಾವ ತಂಡಕ್ಕೂ ಸಾಧ್ಯವಾಗದ ಅಪರೂಪದ ವಿಶ್ವದಾಖಲೆಯೊಂದನ್ನು ಟೀಮ್ ಇಂಡಿಯಾ ಇದೀಗ ತನ್ನ ಹೆಸರಿಗೆ ಬರೆದುಕೊಂಡಿದೆ.

ವೆಲ್ಲಿಂಗ್ಟನ್‌ನಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶುಭ್​ಮನ್ ಗಿಲ್ ಪಡೆ ಬ್ಯಾಟಿಂಗ್‌ನಲ್ಲಿ ಅಕ್ಷರಶಃ ರನ್ ಹೊಳೆಯನ್ನೇ ಹರಿಸಿದ್ದಾರೆ. ಈ ರನ್​ ರಾಶಿಯೊಂದಿಗೆ ಒಂದೇ ಇನ್ನಿಂಗ್ಸ್‌ನ ಮೊದಲ ಏಳು ವಿಕೆಟ್‌ಗಳಿಗೆ ಸತತವಾಗಿ 50ಕ್ಕೂ ಹೆಚ್ಚು ರನ್‌ಗಳ ಜೊತೆಯಾಟವಾಡುವ ಮೂಲಕ ಹೊಸ ವಿಶ್ವ ದಾಖಲೆಯನ್ನು ಬರೆದಿದ್ದಾರೆ.

Loading...

ಏಳು 50+ ಜೊತೆಯಾಟ 720 ರನ್‌ಗಳು:

ನ್ಯೂಝಿಲೆಂಡ್ ತಂಡದ ಮೊದಲ ಇನ್ನಿಂಗ್ಸ್ ಮೊತ್ತವಾದ 368 ರನ್‌ಗಳಿಗೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಭಾರತ, ನಾಯಕ ಶುಭ್​ಮನ್ ಗಿಲ್ ಅವರ ನೇತೃತ್ವದಲ್ಲಿ 9 ವಿಕೆಟ್ ನಷ್ಟಕ್ಕೆ ಬರೋಬ್ಬರಿ 720 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 352 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ.

ಈ ಹಿಂದೆ 2007ರಲ್ಲಿ ಇಂಗ್ಲೆಂಡ್ ವಿರುದ್ಧ ಓವಲ್ ಮೈದಾನದಲ್ಲಿ ಭಾರತ ಒಂದೇ ಇನ್ನಿಂಗ್ಸ್‌ನಲ್ಲಿ ಎಂಟು ಬಾರಿ 50+ ಜೊತೆಯಾಟವಾಡಿತ್ತು. ಆದರೆ, ಮೊದಲ ವಿಕೆಟ್‌ನಿಂದ ಏಳನೇ ವಿಕೆಟ್‌ವರೆಗೆ ಒಂದೂ ತಪ್ಪದಂತೆ ಸತತವಾಗಿ ಅರ್ಧಶತಕದ ಜೊತೆಯಾಟ ಮೂಡಿಬಂದಿರುವುದು ಟೆಸ್ಟ್ ಇತಿಹಾಸದಲ್ಲೇ ಇದೇ ಮೊದಲು.

ವಿಕೆಟ್ ಜೊತೆಯಾಟವಾಡಿದ ಬ್ಯಾಟರ್‌ಗಳು ರನ್ (ಎಸೆತಗಳು) ವಿಕೆಟ್ ಪತನ
1ನೇ ವಿಕೆಟ್ ಯಶಸ್ವಿ ಜೈಸ್ವಾಲ್ & ಕೆ.ಎಲ್. ರಾಹುಲ್ 130 (167) 130/1 (ಜೈಸ್ವಾಲ್ – 85)
2ನೇ ವಿಕೆಟ್ ದೇವದತ್ ಪಡಿಕ್ಕಲ್ & ಕೆ.ಎಲ್. ರಾಹುಲ್ 165 (331) 295/2 (ಪಡಿಕ್ಕಲ್ – 80)
3ನೇ ವಿಕೆಟ್ ಕೆ.ಎಲ್. ರಾಹುಲ್ & ಶುಭಮನ್ ಗಿಲ್ 91 (123) 386/3 (ರಾಹುಲ್ – 136)
4ನೇ ವಿಕೆಟ್ ಶುಭಮನ್ ಗಿಲ್ & ರಿಷಭ್ ಪಂತ್ 100 (127) 486/4 (ಗಿಲ್ – 98)
5ನೇ ವಿಕೆಟ್ ಅನ್ಶುಲ್ ಕಂಬೋಜ್ & ರಿಷಭ್ ಪಂತ್ 68 (85) 554/5 (ಕಂಬೋಜ್ – 38)
6ನೇ ವಿಕೆಟ್ ರಿಷಭ್ ಪಂತ್ & ಧ್ರುವ್ ಜುರೆಲ್ 75 (84) 629/6 (ಪಂತ್ – 128)
7ನೇ ವಿಕೆಟ್ ವಾಷಿಂಗ್ಟನ್ ಸುಂದರ್ & ಧ್ರುವ್ ಜುರೆಲ್ 54 (59) 683/7 (ಸುಂದರ್ – 24)

ಈ ಏಳು ಅರ್ಧಶತಕದ ಜೊತೆಯಾಟಗಳೊಂದಿಗೆ ಟೀಮ್ ಇಂಡಿಯಾ 149 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ಅಂದರೆ, ಇನ್ನಿಂಗ್ಸ್‌ನ ಆರಂಭಿಕ ಜೋಡಿಯಿಂದ ಹಿಡಿದು 7ನೇ ವಿಕೆಟ್ ಪತನವಾಗುವವರೆಗೂ ಕ್ರೀಸ್‌ಗೆ ಬಂದ ಪ್ರತಿಯೊಂದು ಜೋಡಿಯು ಕನಿಷ್ಠ 50+ ರನ್‌ಗಳ ಜೊತೆಯಾಟವಾಡಿದೆ. ಹೀಗೆ 1 ರಿಂದ 7ನೇ ವಿಕೆಟ್‌ವರೆಗೆ ಸತತ ಏಳು ವಿಕೆಟ್‌ಗಳಿಗೆ ಅರ್ಧಶತಕದ ಜೊತೆಯಾಟ ಮೂಡಿಬಂದಿರುವುದು ಇದೇ ಮೊದಲು. 1877 ರಲ್ಲಿ ಟೆಸ್ಟ್ ಕ್ರಿಕೆಟ್ ಆರಂಭವಾದಾಗಿನಿಂದ ಇಲ್ಲಿಯವರೆಗೆ ವಿಶ್ವದ ಯಾವುದೇ ತಂಡವೂ ಇಂತಹದೊಂದು ಅಪರೂಪದ ಸಾಧನೆ ಮಾಡಿರಲಿಲ್ಲ. ಇದೀಗ ಟೀಮ್ ಇಂಡಿಯಾ ಬ್ಯಾಟರ್​ಗಳ ಅಪರೂಪದ ವಿಶ್ವ ದಾಖಲೆ ಬರೆದು ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇದನ್ನೂ ಓದಿ: ಬೆಂಡೆತ್ತಿದ ಭಾರತೀಯರು… ಜೇಕಬ್ ಡಫಿ ‘ಡಬಲ್ ಸೆಂಚುರಿ’!

352 ರನ್​​ಗಳ ಮುನ್ನಡೆ:

ನ್ಯೂಝಿಲೆಂಡ್ ಕಲೆಹಾಕಿದ 368 ರನ್‌ಗಳ ಮೊದಲ ಇನಿಂಗ್ಸ್‌ಗೆ ಉತ್ತರವಾಗಿ ಟೀಮ್ ಇಂಡಿಯಾ 9 ವಿಕೆಟ್ ನಷ್ಟಕ್ಕೆ 720 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಘೋಷಿಸಿದೆ. ಈ ಮೂಲಕ ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ ಬರೋಬ್ಬರಿ 352 ರನ್‌ಗಳ ಬೃಹತ್ ಮುನ್ನಡೆ ಪಡೆದುಕೊಂಡಿದೆ. ಇದೀಗ ಭಾರೀ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ನ್ಯೂಝಿಲೆಂಡ್ ತಂಡವು 60 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

Published On - 10:03 am, Sun, 22 November 26

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us